ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರಸ್ತುತ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಯಿಂದ ಬೆಳೆಗಾರರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂಬುದು ಪ್ರತಿಭಟನಾ ನಿರತರ ಪ್ರತಿಪಾದನೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು 2022-23ನೇ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ 3050 ರೂಪಾಯಿ ನಿಗದಿ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 150 ರೂಪಾಯಿ ಹೆಚ್ಚಳ ಮಾಡಿದೆ. ರೈತರ ಬೇಡಿಕೆ ಮತ್ತು ಸರ್ಕಾರ ನಿಗದಿ ಮಾಡಿರುವ ದರಗಳ ನಡುವೆ ಭಾರಿ ವ್ಯತ್ಯಾಸ ಇದೆ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ 2450 ರೂಪಾಯಿಗಳಷ್ಟು ಹೆಚ್ಚು ನೀಡುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ರೈತರ ಬೇಡಿಕೆಯು ಅವಾಸ್ತವಿಕವಾದುದೇನಲ್ಲ. ದಿನೇ ದಿನೇ ರಸಗೊಬ್ಬರ, ಕೂಲಿ, ಇಂಧನ ಮತ್ತಿತರ ಸರಕು ಸೇವೆಗಳ ಬೆಲೆ ತೀವ್ರವಾಗಿ ಏರುತ್ತಿವೆ. ಆದರೆ, ದರ ಏರಿಕೆಗೆ ಅನುಗುಣವಾಗಿ ರೈತರ ಉತ್ಪನ್ನಗಳಿಗೆ ದರ ನಿಗದಿ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ರೈತರು ಸರ್ಕಾರ ನಿಗದಿ ಮಾಡಿರುವ ಮೊತ್ತಕ್ಕಿಂತ 2450 ರೂಪಾಯಿ ಅಂದರೆ ಶೇ.80ರಷ್ಟು ಹೆಚ್ಚು ನಿಗದಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.
ಸರ್ಕಾರ ರೈತರು ಬೇಡಿಕೆ ಇಷ್ಟಷ್ಟೂ ನೆರವೇರಿಸಬೇಕೆಂದೇನೂ ಅಲ್ಲ. ವಾಸ್ತವಿಕವಾಗಿ ಬೆಳೆಗಾರರಿಗೆ ಆಗುತ್ತಿರುವ ಖರ್ಚುವೆಚ್ಚಗಳು ಮತ್ತು ನಿಗದಿತ ಲಾಭದ ಪ್ರಮಾಣವನ್ನು ಪಾರದರ್ಶಕವಾಗಿ ಲೆಕ್ಕ ಹಾಕಿ ಬೆಂಬಲ ಬೆಲೆ ನಿಗದಿ ಮಾಡಬೇಕಿದೆ. ಬೆಂಬಲ ಬಲೆ ನಿಗದಿಯನ್ನು ಆಯಾ ಬೆಳೆ ಹಂಗಾಮಿನ ಪೂರ್ವದಲ್ಲಿ ನಿಗದಿ ಮಾಡಲಾಗುತ್ತದೆ. ಬೆಳೆ ಬರುವ ಹೊತ್ತಿಗೆ ಖರ್ಚು ವೆಚ್ಚಗಳು ಮಿತಿ ಮೀರಿ ಏರಿರುತ್ತವೆ. ಅಂತಿಮವಾಗಿ ಇದರಿಂತ ರೈತರಿಗೆ ನಷ್ಟವಾಗುತ್ತದೆ.
ರೈತರ ಆರ್ಥಿಕ ಸ್ಥಿತಿ ಸುಧಾರಿಸಿದರೆ ಮಾತ್ರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಉಪಭೋಗ ಕಡಮೆ ಆದಂತೆ ಉತ್ಪಾದನಾ ವಲಯದಲ್ಲಿ ಹಿಂಜರಿಕೆ ಕಂಡು ಬರುತ್ತದೆ. ಕೃಷಿಕರು ಸಮೃದ್ಧವಾಗಿದ್ದರೆ, ಟ್ರಾಕ್ಟರ್, ಕೃಷಿ ಯಂತ್ರೋಪಕರಣಗಳು, ದ್ವಿಚಕ್ರವಾಹನಗಳು ಮತ್ತಿತರ ವಸ್ತುಗಳಿಗೆ ಬೇಡಿಕೆ ಬರುವುದು. ಕೃಷಿಕ ಬೆಳೆದ ನಂತರ ಖರ್ಚು ವೆಚ್ಚ ಸರಿದೂಗಿದರೆ, ಜೀವನ ಸಾಗಿಸುವುದಾದರೂ ಹೇಗೆ?
ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಾಗ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡಿರುವುದಾಗಿ ಪ್ರತಿಪಾದಿಸಿದರೂ ವಾಸ್ತವಿಕವಾಗಿ ರೈತರಿಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ. ಇದು ಅತ್ಯಂತ ಸರಳವಾದ ಗಣಿತ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ಶೇ.8 ಆಜುಬಾಜಿನಲ್ಲಿದೆ. ಸಗಟು ಹಣದುಬ್ಬರ ಎರಡಂಕಿ ದಾಟಿ ಹೋಗಿದೆ. ಹಣದುಬ್ಬರವು ದೇಶದಲ್ಲಿ ಸರಕು ಮತ್ತು ಸೇವೆಗಳ ದರ ಏರಿಕೆಯ ವೈಜ್ಞಾನಿಕ ಮಾನದಂಡವಾಗಿದೆ. ಹಣದುಬ್ಬರವನ್ನು ಸರ್ಕಾರದ ಅಧೀನಸಂಸ್ಥೆಗಳೆ ಲೆಕ್ಕಹಾಕುತ್ತವೆ. ಹಣದುಬ್ಬರದ ಆಧಾರದ ಮೇಲೆಯೇ ಸರ್ಕಾರಿ ನೌಕರರು, ಸಂಘಟಿತ ವಲಯದ ನೌಕರರಿಗೆ ತ್ರೈಮಾಸಿಕ ತುಟ್ಟಿಭತ್ಯೆ ನೀಡಲಾಗುತ್ತದೆ. ಇದರಿಂದ ಬೆಲೆ ಏರಿಕೆಯ ಬಿಸಿ ಇವರಿಗೆ ತಟ್ಟುವುದಿಲ್ಲ.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಕೃಷಿ ವೆಚ್ಚ ಮತ್ತು ದರ ಆಯೋಗ (ಸಿಎಸಿಪಿ) ಪೂರ್ವನಿರ್ಧಾರಿತ ಮಾನದಂಡಗಳನ್ನಾಧರಿಸಿ ಶಿಫಾರಸು ಮಾಡುತ್ತದೆ. ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಇದಕ್ಕೆ ಒಪ್ಪಿಗೆ ನೀಡಿದ ನಂತರ ಜಾರಿಗೆ ಬರುತ್ತದೆ. ಸಿಎಸಿಪಿ ನಿಗದಿ ಮಾಡಿದ ದರಕ್ಕೆ ಆಯಾ ವರ್ಷದಲ್ಲಿನ ಸರಾಸರಿ ಹಣದುಬ್ಬರ ಪ್ರಮಾಣದಷ್ಟು ಹೆಚ್ಚುವರಿ ಮೊತ್ತವನ್ನು ಬೆಂಬಲ ಬೆಲೆಗೆ ಸೇರ್ಪಡೆ ಮಾಡಿದರೆ ರೈತರಿಗೆ ಆಗುವ ಅನ್ಯಾಯ ತಪ್ಪುತ್ತದೆ.
ಕನಿಷ್ಠ ಬೆಂಬಲ ಬೆಲೆ ಹೆಚ್ಚು ಏಕಿರಬೇಕು ಎಂದರೆ, ಅದು ರೈತರ ಉತ್ಪನ್ನಗಳ ದರ ಕುಸಿಯುವುದನ್ನು ರಕ್ಷಿಸುತ್ತದೆ. ಕಾಳ ಸಂತೆಕೋರರು, ಅಕ್ರಮ ದಾಸ್ತಾನುಗಾರರು, ಕೃತಕ ಬೆಲೆ ಕುಸಿತ ಸೃಷ್ಟಿಸಿ ರೈತರಿಗೆ ಅನ್ಯಾಯ ಮಾಡುತ್ತಾರೆ. ಬೆಂಬಲ ಬೆಲೆ ಇಂತಹ ಅಪಾಯಗಳಿಂದ ರಕ್ಷಣೆ ನೀಡುತ್ತದೆ. ರೈತರಿಗೆ ಲಾಭವೇ ಸಿಗದಷ್ಟು ಬೆಂಬಲ ಬೆಲೆ ನಿಗದಿ ಮಾಡರೆ ಅದರ ಉದ್ದೇಶವೇ ಈಡೇರಿದಂತಾಗದು.
ಪ್ರಸಕ್ತ ಹಂಗಾಮಿಗೆ ಸಾಮಾನ್ಯ ಭತ್ತಕ್ಕೆ 2040 ರೂಪಾಯಿ ಮತ್ತು ಉತ್ತಮ ಗುಣಮಟ್ಟದ ಭತ್ತಕ್ಕೆ 2060 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.5ರಷ್ಟು ಹೆಚ್ಚಳ. ಆದರೆ, ಈ ಅವಧಿಯಲ್ಲಿ ಹಣದುಬ್ಬರ ಶೇ.8.ರ ಗಡಿದಾಟಿದೆ. 2040 ರೂಪಾಯಿಗೆ ಶೇ.8ರಷ್ಟು ಅಂದರೆ 163.50 ರೂಪಾಯಿಗಳಷ್ಟು ಹೆಚ್ಚುವರಿಯಾಗಿ ನಿಗದಿ ಮಾಡಿದರೆ, ರೈತರಿಗೆ ಬೆಲೆ ಏರಿಕೆಯಿಂದ ರಕ್ಷಣೆ ಸಿಗುತ್ತದೆ. ಮತ್ತು ಅಂತಿಮವಾಗಿ ನಷ್ಟ ಅನುಭವಿಸುವುದು ತಪ್ಪುತ್ತದೆ.
ಕನಿಷ್ಠ ಬೆಂಬಲ ಬೆಲೆ ಹೆಚ್ಚು ಮಾಡುವುದರಿಂದ ಹೊರೆಯಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಸರ್ಕಾರ ಹೊರಬರಬೇಕು. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದಾಗ ಮಾತ್ರ ನಮ್ಮ ಜಿಡಿಪಿ ನಿರೀಕ್ಷೆ ಮೀರಿ ಏರುತ್ತದೆ. ನಗರ ಕೇಂದ್ರೀತ, ಕಾರ್ಪೊರೆಟ್ ಪ್ರೇರಿತ ಚಿಂತನೆಗಳನ್ನು ಬಿಟ್ಟು ಕೃಷಿ ಕೇಂದ್ರಿತ ಚಿಂತನೆಗಳನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳಬೇಕಿದೆ. ಆಗ ಮಾತ್ರವೇ ಸರ್ಕಾರ ನೀಡುವ ಬೆಂಬಲ ಬೆಲೆಯಿಂದ ರೈತರಿಗೆ ಬಲ ಬರುತ್ತದೆ.