ರಾಜ್ಯ ರೈತ ನಾಯಕರೊಡನೆ ನನ್ನ ಒಡನಾಟವಿದೆ ಎಂದು ತಿಳಿದ ಜೋಡಿಗಟ್ಟೆ ಚನ್ನೇಗೌಡರು ಆಗಾಗ್ಗೆ ಠಾಣೆಗೆ ಬರ ತೊಡಗಿದರು. ಅವರಿಗೆ ಅದೇನೋ ವಿಶ್ವಾಸ. ಮಾರ್ಕೆಟ್ಟಿನಲ್ಲಾಗುವ ಅನ್ಯಾಯ, ಶೋಷಣೆಯ ಕತೆಗಳನ್ನು ಬಿಚ್ಚಿಡುತ್ತಿದ್ದರು. ಅವರೊಬ್ಬ ನಿವೃತ್ತ ಇಂಜಿನಿಯರ್. ವಾಲಂಟರಿ ರಿಟೈರ್‌ಮೆಂಟ್ ಪಡೆದಿದ್ದರು. ರಿಟೈರ್‌ಮೆಂಟ್ ಹಣವನ್ನು ಸಕಾಲದಲ್ಲಿ ಕೊಡಲಿಲ್ಲವೆಂದು ವಿಧಾನಸೌಧದ ಮುಂದೆ ಸೀಮೆಎಣ್ಣೆ ಕ್ಯಾನ್ ಇಟ್ಟುಕೊಂಡು ಏಕಾಂಗಿಯಾಗಿ ಧರಣಿ ನಡೆಸಿದ್ದರು. ತಾವಿದ್ದ ಜಾಗಕ್ಕೇ ಛೀಫ್ ಸೆಕ್ರೆಟರಿ ಓಡಿ ಬರುವಂತೆ ಮಾಡಿದ್ದ ಘಾಟಿ ಮನುಷ್ಯ. ಆ ಕಾಲಕ್ಕೆ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಆದರೆ ನನ್ನ ದೃಷ್ಟಿಯಲ್ಲಿ ಅವರೊಬ್ಬ ಕಿತಾಪತಿ ಮನುಷ್ಯ! ಅಂದರೆ ಹುಷಾರಾಗಿ ವ್ಯವಹರಿಸಬೇಕಾದ ಹುಟ್ಟು ತರ್ಲೆ. ಸಣ್ಣಪುಟ್ಟದಕ್ಕೆಲ್ಲಾ ರೈತರನ್ನು ಎತ್ತಿಕಟ್ಟಿ ಜಗಳ ಮಾಡಿಸುತ್ತಾನೆ ಎಂದು ಮಾರ್ಕೆಟ್ ಜನರು, ನಮ್ಮ ಪೊಲೀಸರು ದೂರುತ್ತಿದ್ದರು (1980).
ನಾನು ಚನ್ನರಾಯಪಟ್ಟಣದಿಂದ ರೈತ ಚಳವಳಿ ಕಾರಣಕ್ಕೆ ಅಕಾಲಿಕವಾಗಿ ವರ್ಗವಾದಾಗ ಜೋಡಿಗಟ್ಟೆ ಚನ್ನೇಗೌಡರ ಸಂಪರ್ಕ ಕಡಿಯಿತು. ಆದರೆ ಅವರ ಚಳವಳಿ ಚಟುವಟಿಕೆಗಳು ಸದಾ ಕಿವಿಗೆ ಬೀಳುತ್ತಿದ್ದವು. 1983ರ ವೇಳೆಗೆ ರೈತ ಚಳವಳಿ ಇನ್ನಿಲ್ಲದಷ್ಟು ಪ್ರಬಲವಾಗಿ ಬೆಳೆಯಿತು. ಯಾರೋ ರೈತನೊಬ್ಬ ಹಸಿರು ಶಾಲು ಹೊದ್ದು ಬಂದ ಎಂದರೆ ಸರ್ಕಾರಿ ನೌಕರರ ಎದೆ ಅದುರುತ್ತಿತ್ತು. ಹಿಂದೆಯೆಲ್ಲಾ ರೈತನೊಬ್ಬ ಸರ್ಕಾರಿ ಕಚೇರಿಗೆ ಕಾಲಿಡಬೇಕೆಂದರೆ ಲಂಚ ಕಕ್ಕದೆ ಒಳ ಬರುವಂತಿರಲಿಲ್ಲ. ಯಾವೊಬ್ಬ ಚಪ್ರಾಸಿಯೂ ಅವನನ್ನು ಮರ್ಯಾದೆಯಿಂದ ಮಾತಾಡಿಸುತ್ತಿರಲಿಲ್ಲ. ಯಾವನೋ ಗುಗ್ಗು ನನ್ಮಗ ಬಂದವ್ನೆ ಎಂಬ ತಾತ್ಸಾರದ, ತಿರಸ್ಕಾರದ ನೋಟಗಳು. ಬೆಂಚಿನ ಮೇಲೂ ಕೂರಿಸುತ್ತಿರಲಿಲ್ಲ. ಜೇಬಿಗೇ ಕೈಹಾಕಿ ಸಿಕ್ಕಷ್ಟನ್ನು ಪರಚಿಕೊಳ್ಳುತ್ತಿದ್ದರು. ಗಂಟೆಗಟ್ಟಲೆ ಭಿಕಾರಿಯಂತೆ ನಿಂತು ರೈತ ತನ್ನ ಅಹವಾಲು ಹೇಳಿಕೊಳ್ಳಬೇಕಿತ್ತು.
ಇದು ನಮ್ಮಪ್ಪ ನಿಮ್ಮಪ್ಪಂದಿರ ಸ್ಥಿತಿ. ನಮ್ಮ ಪೊಲೀಸ್ ಠಾಣೆಗಳೂ ಇದಕ್ಕಿಂತ ಹೊರತಾಗಿರಲಿಲ್ಲ. ಯಾರಾದರೂ ಹಳ್ಳಿಗ ದೂರು ತಂದನೆಂದರೆ ಅವನನ್ನು ಮಾತಾಡಿಸುವ ಗೋಜಿಗೇ ಯಾರೂ ಹೋಗುತ್ತಿರಲಿಲ್ಲ. ‘ಆಚೆ ಕೂತಿರು. ಸಾಹೇಬರು (ಸಬ್ ಇನ್ಸ್‌ಪೆಕ್ಟರ್) ಬಂದ ಮೇಲೆ ಕರೆಸ್ತೀನಿ’ ಎಂದು ದಫೇದಾರರು ಉಗಿದು ಓಡಿಸುತ್ತಿದ್ದರು. ನಾನಾದರೂ ಅಷ್ಟೇ. ಠಾಣೆಗೆ ಬಂದೊಡನೆ ಕೇಳುತ್ತಿದ್ದ ಮೊದಲ ಪ್ರಶ್ನೆ:
‘ಯಾರು ಬಂದಿದ್ದಾರ್ರೀ?’
‘ಮೂರು ಲ್ಯಾಂಡ್ ಡಿಸ್ಪೂಟು, ಎರಡು ಹೊಡೆದಾಟದ ಕೇಸು ಬಂದಿವೆ ಸಾರ್. ಯಾವುದೂ ಸೀರಿಯಸ್ಸಿಲ್ಲ. ಆಚೆ ಕುಕ್ಕರು ಬಡಿಸಿದ್ದೇನೆ’ ಎಂಬ ಉತ್ತರ ದಫೇದಾರರದು.
‘ಬಿದ್ದಿರ್ಲಿ ಬಿಡಿ. ಆಮೇಲೆ ಕರೆಸೋಣ’ ಎಂದು ಇತರ ಕೆಲಸಗಳಲ್ಲಿ ಮಗ್ನನಾಗುತ್ತಿದ್ದೆ. ಆಗಿನ ಠಾಣಾ ನಡಾವಳಿ ಇದ್ದದ್ದೇ ಹಾಗೆ. ರೈತರು ಬಂದ ತಕ್ಷಣ ಕೇಸು ತಗೊಂಡ್ರೆ ಸದರವಾಗಿಬಿಡುತ್ತೆ. ಅವರನ್ನು ಹೊರಗೆ ಕೂರಿಸಿ, ಕಾಯಿಸಿ, ಮೆತ್ತಗೆ ಮಾಡಿ ನಂತರ ವಿಚಾರಣೆ ಮಾಡಬೇಕು. ಅದು ನೋಡಿ ಜಬರ್ದಸ್ತಿ ಪೊಲೀಸಿಂಗ್! ಎಂಬುದು ಚಾಲ್ತಿಯಲ್ಲಿತ್ತು. ಇದನ್ನು ನಾನೂ ಮುಂದುವರಿಸಿದ್ದೆ. ಹೊಡೆದಾಟ ಎಂದು ಬಂದಿರುವ ಎರಡೂ ಪಾರ್ಟಿಗಳನ್ನೂ ಎದುರಾಬದರಾ ನಿಲ್ಲಿಸಿ ವಿಚಾರಣೆ ಮಾಡಿ, ಆ ಸಂದರ್ಭಕ್ಕೆ ಯಾರು ತಪ್ಪಿತಸ್ಥ ಎಂದು ಗೊತ್ತಾಗುತ್ತದೆಯೋ, ಅವನ ಗೂದೆ ಹರಿಯುವಂತೆ ಬಡಿದು, ‘ಇನ್ನೊಂದು ಸಾರಿ ಕಂಪ್ಲೇಂಟ್ ಬಂದರೆ ಮಗನೇ ನೇಣುಗಟ್ಟಿಸುತ್ತೇವೆ’ ಎಂದು ಹೆದರಿಸಿ ಓಡಿಸುತ್ತಿದ್ದೆವು.
ಇಬ್ಬರನ್ನೂ ಒಟ್ಟಿಗೆ ಕಳಿಸಿದರೆ, ರಸ್ತೆಯಲ್ಲಿ ಹೊಡೆದಾಡಿಕೊಂಡಾರೆಂದು ಅವರನ್ನು ಬೇರೆ ಬೇರೆ ಟೈಮಿಗೆ ಹೊರ ಕಳಿಸಬೇಕಿತ್ತು. ಒಂದು ಪಾರ್ಟಿಗೆ ಹೊಡೆದು, ಮತ್ತೊಬ್ಬನನ್ನು ಬಿಟ್ಟರೆ ಅದೂ ಸದರವಾಗುತ್ತದೆ.
‘ಟೇಷನ್ನಿನಲ್ಲಿ ಸರಿಯಾಗಿ ಗೂಸಾ ಕೊಡಿಸಿದೆ’ ಎಂದು ಇನ್ನೊಂದು ಪಾರ್ಟಿ ಮೀಸೆ ತಿರುವುತ್ತಾನೆ. ಆದ್ದರಿಂದ ತಪ್ಪು ಮಾಡಿದವನಿಗೆ ಆರು ಏಟು ಕೊಟ್ಟರೆ, ಎದುರು ಪಾರ್ಟಿಯವನದು ನ್ಯಾಯವಿದ್ದರೂ ಅವನಿಗೂ ಎರಡೇಟು ಕೊಟ್ಟು ಬ್ಯಾಲೆನ್ಸ್ ಮಾಡುತ್ತಿದ್ದೆವು.
‘ನಿನ್ನದು ನ್ಯಾಯವಿದ್ದರೇನು ಬಂತು? ಕಾಲುಕೆರೆದುಕೊಂಡು ಜಗಳಕ್ಕೆ ಹೋಗಿದ್ದೆಯಲ್ಲಾ? ತಗೋ ಏಟು’ ಎಂದು ಪೊಲೀಸರೇ ಜಗಳ ತೆಗೆದು ಖರ್ಚಿಗೆ ಕೊಡುತ್ತಿದ್ದರು. ಯಾವುದು ನ್ಯಾಯ, ಕಾನೂನುಬದ್ಧ ಎಂಬುದು ಅವರಿಗೇ ಸ್ಪಷ್ಟವಿರಲಿಲ್ಲ. ಯಾರದು ಸರಿ ಅಂತ ತೋರುತ್ತೋ ಅವರಿಗೇ ಜೈ! ಅದೇ ಕಾಡುನ್ಯಾಯ.
ಇದೆಲ್ಲವೂ ಎಷ್ಟು ಮೈಗೂಡಿತ್ತೆಂದರೆ, ಪೊಲೀಸರು ಕ್ರಮ ಜರುಗಿಸುತ್ತಿದ್ದ ರೀತಿಯೇ ಸರಿ ಎಂದು ನಾನೂ ನಂಬಿದ್ದೆ. ಅನುಸರಿಸುತ್ತಿದ್ದೆ. Practice? What is in practice!
ಯಾವಾಗ ರೈತ ಚಳವಳಿ ಜೋರಾಯಿತೋ ಸರ್ಕಾರಿ ನೌಕರರು ಸಿಕ್ಕಿದಂತೆ ಹಳ್ಳಿಗೆ ನುಗ್ಗುವಂತಿಲ್ಲ; ಜಫ್ತಿ ಮಾಡುವಂತಿಲ್ಲ; ದೌರ್ಜನ್ಯ ನಡೆಸುವಂತಿಲ್ಲ ಎಂಬುದು ನಿಧಾನವಾಗಿ ಚಾಲನೆಗೆ ಬರತೊಡಗಿತು. ಮೂಕ ರೈತ ಈಗ ಮಾತಾಡ ತೊಡಗಿದ್ದ. ತೆವಳುತ್ತಾ ನಡೆಯುತ್ತಿದ್ದ. ‘ನ್ಯಾಯ ಕೊಡ್ರೀ?’ ಎಂದು ದಬಾಯಿಸಿ ಕೇಳುವ ಮಟ್ಟಿಗೆ ದನಿ ಗಡಸು ಮಾಡಿಕೊಂಡಿದ್ದ.
ಎಲ್ಲೆಲ್ಲೂ ರೈತ ಚಳವಳಿ ಹೆಪ್ಪುಗಟ್ಟಿತು. ಗಂಟಲಿಗೆ ಗಂಡಸುತನ ಬಂತು. ರೈತರು ಸೋಮವಾರ ಆರು ಕಟ್ಟುವುದಿಲ್ಲ. ಆ ದಿನ ಅವರಿಗೆ ರಜಾದಿನ. ಅವತ್ತು ಬೇಕಾದರೆ ಸೊಸೈಟಿಯವರೋ, ಸರ್ಕಾರದವರೋ ಹಳ್ಳಿಗೆ ಬರಲಿ. ಉಳಿದ ದಿನ ಬಂದು ರೈತರಿಗೆ ತೊಂದರೆ ಮಾಡಕೂಡದು ಎಂದು ಕಟ್ಟು ಮಾಡಿದರು. ಸರ್ಕಾರಿ ನೌಕರರ ದರ್ಪ ದೌಲತ್ತು ಹಾಗೇ ಮುದುರಿಕೊಳ್ಳತೊಡಗಿತು. ದಬಾಯಿಸಿ ಕೇಳುತ್ತಿದ್ದ, ಅಲ್ಲ ಕೀಳುತ್ತಿದ್ದ ಲಂಚಕ್ಕೆ ಕಡಿವಾಣ ಬಿತ್ತು. ಹಲ್ಲು ಕಿರಿದು ಹಲುಬಿ ಕೇಳುವ ಸ್ಥಿತಿಗೆ ಸರ್ಕಾರಿ ನೌಕರ ಬಂದ. ಎಷ್ಟೋ ಕಡೆ ಸರ್ಕಾರಿ ನೌಕರನ ಬಟ್ಟೆ ಬಿಚ್ಚಿಸಿ, ತಗೊಂಡಿದ್ದ ಲಂಚವನ್ನು ಊರವರ ಮುಂದೆ ಕಕ್ಕುವಂತೆ ರೈತ ಸಂಘದವರು ಮಾಡಿದರು. ಮನೆಗೆ ರಾಕ್ಷಸರಂತೆ ನುಗ್ಗಿ ಜಫ್ತಿ ಮಾಡಿಕೊಂಡು ಹೋಗಿದ್ದ ವಸ್ತುಗಳನ್ನು ಮರು ಜಫ್ತಿ ಮಾಡಿ ಸಾಲಗಾರ ರೈತರಿಗೆ ವಾಪಸ್ ಕೊಡಿಸುವ ಮಟ್ಟಕ್ಕೆ ರೈತಶಕ್ತಿ ಬೆಳೆಯಿತು. ಜಫ್ತಿ ಮಾಡುವಾಗ ಎಲ್ಲೆಂದರಲ್ಲಿ ಬಿಸಾಡಿ ಹೋಗಿದ್ದ ಪಾತ್ರೆ ಪರಡಿ, ಸಾಮಾನು ಸರಂಜಾಮುಗಳನ್ನು ನೌಕರರೇ ವಾಪಸ್ ತೆಗೆದಿಡುವಂತೆ ಮಾಡಿದರು.
ಆಗಿನ ರೈತ ಯುವ ಮುಂದಾಳುಗಳಾಗಿದ್ದ ಮಂಜುನಾಥ ದತ್ತ, ಆರ್. ಪಿ.ವೆಂಕಟೇಶಮೂರ್ತಿ, ಸಕಲೇಶಪುರದ ವಿಶ್ವನಾಥ್ (ನಂತರ ಶಾಸಕ), ಗಂಡಸಿಯ ಡಾಕ್ಟರ್ ಹನುಮಂತೇಗೌಡ ಮುಂತಾದವರ ಗಟ್ಟಿ ನಾಯಕತ್ವ ರೈತರಲ್ಲಿ ಹೊಸ ಹುರುಪು ಮೂಡಿಸಿತು. ಹಳ್ಳಿ ಹಳ್ಳಿಗಳಲ್ಲಿ ಚಳವಳಿ ವ್ಯಾಪಿಸಿತು. 1982ರಿಂದ 1984ರವರೆಗೆ ಹಾಸನ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದ ಜಫ್ತಿ ಮರು ಜಫ್ತಿ ಚಳವಳಿ ಇತರ ಜಿಲ್ಲೆಗಳಿಗೂ ಹರಡಿತು. ಹಾಸನ ಜಿಲ್ಲೆಯ ರೈತ ನಾಯಕರು ಮಂಡ್ಯ, ತುಮಕೂರು, ಕೊಡಗು ಮುಂತಾದ ಜಿಲ್ಲೆಗಳಿಗೆ ಹೋಗಿ ಮರು ಜಫ್ತಿ ಕಾರ್ಯಕ್ಕೆ ಬೆಂಬಲವಾಗಿ ನಿಂತರು. ಸಂಘಟನೆ ಭಗ ಭಗ ಬೆಳೆಯಿತು.
ಈ ವೇಳೆಗೆ ರಾಜ್ಯವ್ಯಾಪಿ ಚಳವಳಿ ಹಬ್ಬಿತ್ತು. 1983ರಲ್ಲಿ ರಾಜ್ಯ ರೈತ ಸಮಾವೇಶ ಮಾಡಿದಾಗ ಹಳ್ಳಿ ಹಳ್ಳಿಗಳಿಂದ ರೈತರು, ರೈತ ಹೆಣ್ಣುಮಕ್ಕಳು ಬೆಂಗಳೂರಿಗೆ ಬುತ್ತಿ ಕಟ್ಟಿಕೊಂಡು ಬಂದರು. ಸಮಾವೇಶಕ್ಕೆ ಸೇರಿದ್ದ ರೈತರ ಸಂಖ್ಯೆ ಐದು ಲಕ್ಷ! ರೈತ ಚಳವಳಿಯ ಕಾರಣಕ್ಕೆ ಗುಂಡೂರಾವ್ ಸರ್ಕಾರ ಉರುಳಿತ್ತು. ನಂತರ ಬಂದ ಜನತಾ ಸರ್ಕಾರ ಅಲ್ಲಾಡುತ್ತಿತ್ತು.
ಇಡೀ ಬೆಳವಣಿಗೆಯನ್ನು ಗಮನಿಸುತ್ತಿದ್ದ ಕೇಂದ್ರ ಗುಪ್ತಚರ ಅಽಕಾರಿಯೊಬ್ಬರು ಹಾಸನದ ಯುವ ರೈತ ನಾಯಕರನ್ನು ಗುಟ್ಟಾಗಿ ಭೆಟ್ಟಿಯಾದರು. ‘ನಿಮ್ಮ ಹೋರಾಟ ಸರ್ಕಾರಕ್ಕೆ ಅಳುಕು ತಂದಿದೆ. ಏನಾದರೂ ಮಾಡಿ ಹತ್ತಿಕ್ಕಬೇಕು. ಅದಕ್ಕಾಗಿ ಗೋಲಿಬಾರ್ ಕೂಡ ಆಗಬಹುದು. ನೀವುಗಳೇ ನೇರ ಟಾರ್ಗೆಟ್ ಆಗುವ ಸಾಧ್ಯತೆ ತೆಗೆದು ಹಾಕುವಂತಿಲ್ಲ. ಸ್ವಿಚ್‌ಆಫ್ ಮಾಡಿದರೆ ಚಳವಳಿಯ ಕರೆಂಟ್ ನಿಲ್ಲುತ್ತೆ. ನಿಮ್ಮನ್ನು ಹೆದರಿಸಲು ನಾನು ಈ ಮಾತು ಹೇಳುತ್ತಿಲ್ಲ. ನೀವೆಲ್ಲರೂ ಲಾ ಓದಿದ ವಿದ್ಯಾವಂತರು. ಮದುವೆಯಾಗದವರು. ನನ್ನ ಮಕ್ಕಳ ವಯಸ್ಸಿನವರು. ಒಂದು ಆದರ್ಶ ಇರುವವರು. ಗೋಲಿಬಾರ್ ಆದರೆ ನೀವೇ ಟಾರ್ಗೆಟ್ ಆಗ್ತೀರಾ ಹುಷಾರಾಗಿರಿ. ನಿಮ್ಮ ಹೋರಾಟ ಸಾಯುವುದಕ್ಕಲ್ಲ; ಬದುಕುವುದಕ್ಕೆ. ಅಸಹಾಯಕ ರೈತರನ್ನು ಬದುಕಿಸುವುದಕ್ಕೆ!’ ಎಂದರು. ಅದು ಬೇರೆಯದೇ ಅಧ್ಯಾಯ. ಪ್ರತ್ಯೇಕ ಬರೆಯುವೆ. ನಾನಾ ಉನ್ನತ ಹುದ್ದೆಗಳಲ್ಲಿದ್ದ ಆ ಅಧಿಕಾರಿ ಆರ್.ಎಸ್.ಕುಲಕರ್ಣಿ ನಂತರ ಅನೇಕ ಪುಸ್ತಕಗಳನ್ನು ಬರೆದರು. ಮೈಸೂರಿನ ಗಂಗೋತ್ರಿಯಲ್ಲಿ ಕಳೆದ ವರ್ಷ ಕೊಲೆಯಾದರು.
(ಮುಂದುವರಿಯುವುದು)