ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು, ನಂತರ ನಿವೃತ್ತರಾಗಿ ತಮ್ಮ ನಿವೃತ್ತಿಯ ಸುಖ ಅನುಭವಿಸುತ್ತಲೋ ಅಥವಾ ಇನ್ನಾವುದೋ ಖಾಸಗಿ ಕಂಪೆನಿಗಳಲ್ಲಿ ಇನ್ನೊಂದು ದೊಡ್ಡ ಉದ್ಯೋಗ ಪಡೆದು ಮತ್ತಷ್ಟು ಹಣ ಸಂಪಾದನೆ ಮಾಡುತ್ತಲೋ ಆರಾಮಾಗಿ ದಿನ ಕಳೆಯುವವರು ಎಲ್ಲೆಡೆ ಕಾಣಸಿಗುತ್ತಾರೆ. ಆದರೆ, ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯನ್ನು ನಿರ್ವಹಿಸಿ, ನಿವೃತ್ತರಾದ ನಂತರ ತಮ್ಮ ನಿವೃತ್ತ ದಿನಗಳನ್ನು ಇತರರ ಸೇವೆಯಲ್ಲಿ ಕಳೆಯುವವರು ಕಾಣಬರುವುದು ತೀರಾ ಅಪರೂಪ.
ಮಹಾರಾಷ್ಟ್ರದ ಮಾಜಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಿ.ಶಿವನಂದನ್ ಅಂತಹ ಅಪರೂಪದ ವ್ಯಕ್ತಿಗಳಲ್ಲೊಬ್ಬರು. ಹನ್ನೆರಡು ವರ್ಷಗಳ ಹಿಂದೆ ಮಹಾರಾಷ್ಟ್ರ ಡಿಜಿಪಿ ಹುದ್ದೆಯಿಂದ ಪ್ರಾಮಾಣಿಕ ಅಧಿಕಾರಿ ಎಂಬ ಬಿರುದಿನೊಂದಿಗೆ ನಿವೃತ್ತರಾದ ಡಿ.ಶಿವನಂದನ್ 2017ರ ಡಿಸೆಂಬರ್ 28ರಂದು ‘ರೋಟಿ ಬ್ಯಾಂಕ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಪ್ರತಿದಿನ ಸಾವಿರಾರು ಹಸಿದ ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದಾರೆ.
ರೋಟಿ ಬ್ಯಾಂಕ್ ಮುಂಬೈ ನಗರವೊಂದರಲ್ಲೇ ಪ್ರತಿದಿನ ಹನ್ನೆರಡು ಸಾವಿರಕ್ಕೂ ಹೆಚ್ಚು ಜನರಿಗೆ ಬಿಸಿಯೂಟವನ್ನು ನೀಡುತ್ತಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿಯೂ ಪ್ರತಿದಿನ ಮುಂಬೈನ ಕೊಳೆಗೇರಿಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಬಿಸಿಯೂಟಗಳನ್ನು ನೀಡುತ್ತಿದ್ದರು.
ರೋಟಿ ಬ್ಯಾಂಕ್ ಶುರುವಾದದ್ದು ಕಾರ್ಪೊರೇಟ್ ಕ್ಯಾಂಟೀನ್, ರೈಲ್ವೇ ಕ್ಯಾಂಟೀನ್, ಎಸ್‌ಬಿಐ ಕ್ಯಾಂಟೀನ್, ವಸತಿ ಸಮುಚ್ಚಯ ಮತ್ತು ಪಾರ್ಟಿ, ಬರ್ತ್ ಡೇ, ಮದುವೆ ಮೊದಲಾದ ಸಮಾರಂಭಗಳಲ್ಲಿ ಬಳಸಿ ಮಿಕ್ಕಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ, ಹಸಿದವರಿಗೆ ಬಡಿಸುವ ಒಂದು ಸಾಧಾರಣ ಉದ್ದೇಶದಿಂದ. ಜಿಪಿಎಸ್ ಅಳವಡಿಸಿದ ವ್ಯಾನುಗಳ ಮೂಲಕ ಹೀಗೆ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಅವು ಬೆಚ್ಚಗಿರುವಾಗಲೇ ಹತ್ತಿರದ ಆಸ್ಪತ್ರೆಯ ಬಡ ರೋಗಿಗಳಿಗೆ, ಸ್ಲಮ್ಮುಗಳ ಬಡವರಿಗೆ ಹಂಚಲಾಗುತ್ತಿತ್ತು. ಹೀಗೆ, ಹೆಚ್ಚುವರಿ ಆಹಾರ ಪದಾರ್ಥಗಳನ್ನು ವಿವಿಧೆಡೆಗಳಿಂದ ಸಂಗ್ರಹಿ ಸುವುದು, ಹಂಚುವುದು ಮೇಲೆ ತೋರುವಷ್ಟು ಸುಲಭದ ಕೆಲಸವಲ್ಲ. ಎಲ್ಲೆಲ್ಲಿ ಸಮಾರಂಭಗಳು ನಡೆಯುತ್ತಿವೆ, ಯಾವ ವಸತಿ ಸಮುಚ್ಚಯ, ಯಾವ ಹೋಟೆಲುಗಳಲ್ಲಿ ಆಹಾರ ಮಿಕ್ಕಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅವನ್ನು ಸಂಗ್ರಹಿಸಲು ತಂಡ ಮತ್ತು ವಾಹನಗಳನ್ನು ಸಿದ್ಧಗೊಳಿಸಬೇಕು. ಹೀಗೆ ಸಂಗ್ರಹಿಸಿದ ಆಹಾರ ವಸ್ತುಗಳು ತಣಿಯುವ ಮೊದಲೇ ಹಸಿದವರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೀಗೆ ಸಂಗ್ರಹಿಸಿದ ಆಹಾರ ವಸ್ತುಗಳು ಕೆಡದಂತೆ ಸ್ವಚ್ಛತೆ ಮುಂಜಾಗ್ರತೆಯನ್ನು ವಹಿಸಬೇಕು. ಆಹಾರವೇನಾದರೂ ಕೆಟ್ಟು, ‘ಫುಡ್ ಪಾಯ್ಸನ್’ ಆಗಿ, ತಿಂದವರಲ್ಲಿ ಆರೋಗ್ಯ ಸಮಸ್ಯೆ ಹುಟ್ಟಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ (ಈ ಕಾರಣಕ್ಕಾಗಿಯೇ ಎಷ್ಟೋ ಫೈವ್ ಸ್ಟಾರ್ ಹೋಟೆಲುಗಳು ತಮ್ಮಲ್ಲಿ ಮಿಕ್ಕಿದ ಆಹಾರ ವಸ್ತುಗಳನ್ನು ಹೊರಗೆ ತೆಗೆದುಕೊಂಡು ಹೋಗಲು ಕೊಡುವುದಿಲ್ಲ).
ಡಿ.ಶಿವನಂದನ್ ಪೊಲೀಸ್ ಹುದ್ದೆಯಲ್ಲಿ ಸಕ್ರಿಯರಾಗಿರುವಾಗಲೇ ತಾವು ನಿವೃತ್ತನಾದ ನಂತರ ಹಸಿದ ಹೊಟ್ಟೆಗೆ ಅನ್ನ ನೀಡುವ ಯಾವುದಾದರೂ ಒಂದು ಯೋಜನೆಯನ್ನು ಆರಂಭಿಸುವುದರ ಬಗ್ಗೆ ಆಲೋಚಿಸುತ್ತಿದ್ದರು. ಏಕೆಂದರೆ, ಮನುಷ್ಯನಲ್ಲಿ ಅಪರಾಽ ಪ್ರವೃತ್ತಿ ಹುಟ್ಟುವುದೇ ಹಸಿದ ಹೊಟ್ಟೆಯಲ್ಲಿ ಎಂಬುದನ್ನು ಅವರು ತಮ್ಮ ಪೊಲೀಸ್ ಅನುಭವದಿಂದ ಕಂಡುಕೊಂಡಿದ್ದರು. ಈ ಕಾರಣಕ್ಕಾಗಿಯೆ ‘ರೋಟಿ ಬ್ಯಾಂಕ್’ ಯೋಜನೆ ಇಂತಹವರ ಹಸಿವನ್ನು ಇಂಗಿಸುವುದು ಮಾತ್ರವಲ್ಲದೆ ಅವರು ಅಪರಾಽಗಳ ಲೋಕಕ್ಕೆ ಸೇರದಂತೆ ತಡೆಯುತ್ತದೆ ಎಂದೂ ಅವರು ಹೇಳುತ್ತಾರೆ.
ನಕ್ಸಲ್ ಚಟುವಟಿಕೆಗಳಿಗೆ ಸುದ್ದಿ ಮಾಡುವ ಮಹಾರಾಷ್ಟ್ರದ ಗಡ್‌ಚಿರೋಳಿಯಲ್ಲಿ ಪೊಲೀಸ್ ಕರ್ತವ್ಯದಲ್ಲಿದ್ದಾಗ ಅಲ್ಲಿನ ಬುಡಕಟ್ಟು ಜನಾಂಗ ಗಳು ತಿನ್ನಲಿಕ್ಕಿಲ್ಲದೆ ವಾರದಲ್ಲಿ ಹಲವು ದಿನಗಳು ಉಪವಾಸ ವಿರುವುದನ್ನು ಕಣ್ಣಾರೆ ಕಂಡವರು. ಅಲ್ಲದೆ, 1967-68ರ ದಶಕದಲ್ಲಿ ಆಹಾರ ಕೊರತೆಯ ಕಾರಣ ತನ್ನ ಹುಟ್ಟೂರು ಕೊಯಂಬತ್ತೂರ್‌ನಲ್ಲಿ ಬಾಲ್ಯದ ದಿನಗಳಲ್ಲಿ ತನ್ನ ಕುಟುಂಬ ಅನುಭವಿಸಿದ ಹಸಿವಿನ ಸಂಕಟವನ್ನು ಅವರು ಮರೆತಿರಲಿಲ್ಲ.
ರೋಟಿ ಬ್ಯಾಂಕ್ ಅವರ ಪರಿಶ್ರಮ ಮತ್ತು ಶಿಸ್ತು ಬದ್ಧ ಕಾರ್ಯ ನಿರ್ವಹಣೆಯಿಂದಾಗಿ ಎರಡೇ ವರ್ಷಗಳಲ್ಲಿ ಹನ್ನೊಂದು ಲಕ್ಷಕ್ಕೂ ಹೆಚ್ಚು ಊಟಗಳನ್ನು ನೀಡುವಲ್ಲಿ ಯಶಸ್ವಿಯಾಯಿತು. ಆದರೆ, 2020ರಲ್ಲಿ ಕೋವಿಡ್ ಸೋಂಕು ತಲೆದೋರಿ, ಮಾರ್ಚ್ ತಿಂಗಳಲ್ಲಿ ಹಠಾತ್ತಾಗಿ ಹೇರಲ್ಪಟ್ಟ ಲಾಕ್‌ಡೌನ್ ರೋಟಿ ಬ್ಯಾಂಕಿನ ಚಟುವಟಿಕೆಗಳಿಗೆ ಬ್ರೇಕ್ ಹಾಕಿತು. ಎಲ್ಲೆಡೆಯ ಕರ್ಫ್ಯೂ ಕಾರಣ ಎಲ್ಲಿಯೂ ಮದುವೆ, ಪಾರ್ಟಿ ಮೊದಲಾಗಿ ಯಾವ ಸಮಾರಂಭವೂ ಇಲ್ಲ. ಆಹಾರ ಮಿಕ್ಕುವುದಿರಲಿ, ಆಹಾರವೇ ಇಲ್ಲದಂತಹ ದುಸ್ಥಿತಿ! ಲಾಕ್‌ಡೌನ್ ಹೇರಲ್ಪಟ್ಟ ಕೆಲವೇ ದಿನಗಳಲ್ಲಿ ವಲಸೆ ಕಾರ್ಮಿಕರ ಕರಾಳ ಪರಿಸ್ಥಿತಿಯ ಚಿತ್ರಣ ಒಂದೊಂದಾಗಿ ಹೊರ ಬರುತ್ತಿದ್ದಂತೆ ಶಿವನಂದನ್ ಹೊಸ ಯೋಜನೆಯೊಂದನ್ನು ರೂಪಿಸಿದರು. ಪ್ರೀತಮ್ ದಾ ಡಾಬಾ ಎಂಬ ಪ್ರಸಿದ್ಧ ಡಾಬಾದ ಮಾಲೀಕ ಟೋನಿ ಸಿಂಗ್ ಎಂಬವರನ್ನು ಭೇಟಿಯಾಗಿ ಸಹಾಯ ಯಾಚಿಸಿದರು. ಅವರು ಒಮ್ಮೆಗೆ 47000ಊಟಗಳಿಗೆ ಬೇಕಾಗುವಷ್ಟು ಅಡುಗೆ ತಯಾರಿಸಿ ಕೊಟ್ಟರು! ಶಿವನಂದನ್ ಒಬ್ಬ ಹೆಸರಾಂತ ಮತ್ತು ಪ್ರಾಮಾಣಿಕ ಮಾಜಿ ಪೊಲೀಸ್ ಅಽಕಾರಿ ಎಂಬ ಕಾರಣದಿಂದ ಮುಂಬೈಯ ಪೊಲೀಸ್ ಇಲಾಖೆ ಅವರ ನೆರವಿಗೆ ಬಂದು, ವಲಸೆ ಕಾರ್ಮಿಕರೂ ಸೇರಿ ಹಸಿದವರಿಗೆ ಆ ಆಹಾರವನ್ನು ಹಂಚುವಲ್ಲಿ ಶಕ್ಯರಾದರು. ಮುಂದೆ ಅವರು ಆಹಾರ ಸಂಗ್ರಹಿಸುವುದನ್ನು ನಿಲ್ಲಿಸಿ ಚೆಂಬೂರ್, ದಾದರ್, ಗೋರೆಗಾಂವ್ ಮತ್ತು ಬೋರಿವಲಿ ಎಂಬಲ್ಲಿ ನಾಲ್ಕು ಅಡುಗೆ ಮನೆಗಳನ್ನು ತೆರೆದು, ಸ್ವತಃ ಅಡುಗೆ ತಯಾರಿಸಿ, ವಿತರಿಸತೊಡಗಿದರು.
ಹೀಗೆ, ಕೋವಿಡ್‌ನ ಕರಾಳ ದಿನಗಳು ಶಿವನಂದನ್‌ರ ರೋಟಿ ಬ್ಯಾಂಕನ್ನು ಸ್ಥಗಿತಗೊಳಿಸುವ ಬದಲು ಅದರ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲು ಕಾರಣ ವಾಯಿತು. ಹೈದರಾಬಾದ್, ಚೆನ್ನೈ, ಅಹ್ಮದಾಬಾದ್, ಕಟಕ್, ಕೊಯಂಬತ್ತೂರ್ ಮೊದಲಾದ ನಗರಗಳಲ್ಲಿ ತನ್ನ ಪೊಲೀಸ್ ದಿನಗಳ ನೆಟ್‌ವರ್ಕ್ ಬಳಸಿಕೊಂಡು ಆ ನಗರಗಳಿಗೂ ರೋಟಿ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದರು. ಶಿವನಂದನ್‌ರ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯ ಪರಿಚಯವಿದ್ದ ಅನೇಕರು ಅವರ ನೆರವಿಗೆ ಬಂದರು. ಶಾರೂಕ್ ಖಾನ್ ಮತ್ತು ಜುಹೀ ಚಾವ್ಲಾರ ಸಾಮಾಜಿಕ ಸಂಸ್ಥೆ ‘ಮೀರ್ ಫೌಂಡೇಷನ್’ 60 ಲಕ್ಷ ರೂಪಾಯಿ ನೀಡಿತು. ನಟಿ ಜಾಕ್ವಿಲಿನ್ ಫೆರ್ನಾಂಡೀಸ್ 40 ಲಕ್ಷ ರೂಪಾಯಿ ಕೊಟ್ಟರು. ಎಸಿಸಿ ಮತ್ತು ಅಂಬುಜಾ ಸಿಮೆಂಟ್ ಕಂಪೆನಿಗಳು ತಲಾ ೫೦ ಲಕ್ಷ ರೂಪಾಯಿ ದೇಣಿಗೆ ನೀಡಿದವು. ಎಸ್ಸಾರ್ ಫೌಂಡೇಷನ್ ತನ್ನ ಪುಣೆ ಮಾರುಕಟ್ಟೆಯಿಂದ ಎರಡು ದಿನಗಳಿಗೊಮ್ಮೆ ಟನ್ನುಗಟ್ಟಲೆ ತಾಜಾ ತರಕಾರಿ ಕಳಿಸಿಕೊಟ್ಟಿತು. ಅಮಿತಾಭ್ ಬಚ್ಚನ್, ಬೊಮ್ಮನ್ ಇರಾಣಿ, ವಿದ್ಯಾ ಬಾಲನ್ ಮೊದಲಾದವರೂ ಶಿವನಂದನ್‌ರ ಬೆಂಬಲಕ್ಕೆ ನಿಂತರು.
ಕೋವಿಡ್ ಸಾಂಕ್ರಾಮಿಕ ಮುಗಿದ ನಂತರ ಶಿವನಂದನ್ ತಮ್ಮ ನಾಲ್ಕು ಕಿಚನ್‌ಗಳಲ್ಲಿ ಚೆಂಬೂರಿನ ಮಾಹುಲ್ ಎಂಬಲ್ಲಿನ ಒಂದನ್ನು ಉಳಿಸಿಕೊಂಡು, ಅದರ ಮೂಲಕ ರೋಟಿ ಬ್ಯಾಂಕಿನ ಚಟುವಟಿಕೆಯನ್ನು ಮುಂದುವರಿಸಿದ್ದಾರೆ. ರೋಟಿ ಬ್ಯಾಂಕಿನ ಆಹಾರದ ಮೆನು ಪ್ರತಿದಿನವೂ ಬದಲಾಗುತ್ತದೆ. ಒಂದು ದಿನ ಸಾಧಾರಣ ಊಟವಾದರೆ, ಇನ್ನೊಂದು ದಿನ ವೆಜ್ ಪಲಾವ್. ಮತ್ತೊಂದು ದಿನ ಮಸಾಲಾ ರೈಸ್. ಮಗದೊಂದು ದಿನ ದಾಲ್ ಕಿಚಡಿ. ಇದರ ಜೊತೆ ಮಜ್ಜಿಗೆ, ಬಿಸ್ಕಟ್, ಬಾಳೆ ಹಣ್ಣು, ಮಾವಿನ ಹಣ್ಣಿನ ಕಾಲದಲ್ಲಿ ಮಾವಿನ ಹಣ್ಣು ಇರುತ್ತದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ ಬಳಿ ಸಿಡ್ಕೋದಿಂದ ಒಂದು ಜಾಗವನ್ನು 60
ವರ್ಷಗಳಿಗೆ ಲೀಸಿಗೆ ಪಡೆದು, ಮುಂದೆ ಪ್ರತಿದಿನ ಒಂದು ಮಿಲಿಯನ್ ಊಟ ಕೊಡುವ ಗುರಿಯನ್ನು ಹಾಕಿಕೊಂಡಿದ್ದಾರೆ. ಈಗ ಮುಂಬೈಯ ಉಪನಗರ ಮೀರಾ-ಭಯಾಂಧರ್, ನೆರೆಯ ಜಿಲ್ಲೆ ಥಾಣೆಯಲ್ಲದೆ, ಚೆನ್ನೈ, ಅಹ್ಮದಾನಗರ್ ಮತ್ತು ನಾಗ್ಪುರದಲ್ಲೂ ರೋಟಿ ಬ್ಯಾಂಕಿನ ಶಾಖೆಗಳನ್ನು ನಡೆಸುತ್ತಿದ್ದಾರೆ.





