ಇತ್ತೀಚಿನ ದಿನಗಳಲ್ಲಿ ಗೋವು ರಾಜಕೀಯ ದಾಳವಾಗಿದ್ದು, ಗೋವುಗಳ ಮೇಲಿನ ರಾಜಕಾರಣ ಕ್ರೌರ್ಯಕ್ಕೆ ತಿರುಗಿರುವುದು ಬೇಸರದ ಸಂಗತಿ.
ಆಗಾಗ್ಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರನ್ನು ಗೋ ರಕ್ಷಕರು ಹಿಡಿದು ಗೋವುಗಳನ್ನು ಬಿಡಿಸಿ ಅವರನ್ನು ಪೊಲೀಸರ ವಶಕ್ಕೆ ನೀಡಿದ ಸಾಕಷ್ಟು ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ ಈಗ ಕೆಲ ಕಿಡಿಗೇಡಿಗಳು ಗೋವುಗಳ ಮೇಲೆ ಕ್ರೌರ್ಯವೆಸಗುತ್ತಿದ್ದು, ವಿಕೃತವಾಗಿ ಗೋವುಗಳನ್ನು ಹಿಂಸಿಸುತ್ತಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವ ಪ್ರಕರಣ ಮಾಸುವ ಮುನ್ನವೇ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಭಕ್ತರು ಹರಕೆ ರೂಪದಲ್ಲಿ ನೀಡಿದ್ದ ಕರುವಿನ ಬಾಲವನ್ನು ಕತ್ತರಿಸಿ ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಅಮಾನವೀಯ ದುಷ್ಕೃತ್ಯಗಳು ಹೆಚ್ಚಾಗಿದ್ದು, ಸಮಾಜದ ಶಾಂತಿ ಕದಡಲು ಇಂತಹ ಘಟನೆಗಳು ಕಾರಣವಾಗುತ್ತಿವೆ. ಒಂದು ಪಕ್ಷದ ಮೇಲಿನ ಅಥವಾ ಒಂದು ಸಮುದಾಯದ ಮೇಲಿನ ಧ್ವೇಷದಿಂದ ಮೂಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುವುದು ಎಷ್ಟು ಸರಿ? ಸರ್ಕಾರ ಇಂತಹ ವಿಚಾರದಲ್ಲಿ ಯಾವುದೇ ಪಕ್ಷಪಾತ ಮಾಡದೆ ವಿಕೃತ ಕ್ರೌರ್ಯ ಮೆರೆದಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
-ರಾಜೇಶ್, ಎಚ್.ಡಿ.ಕೋಟೆ ತಾ.