ಭಾರತ ಕ್ರಿಕೆಟ್ ಟೆಸ್ಟ್ ತಂಡದ ಪ್ರಮುಖ ಆಟಗಾರರಾದ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಏಕಾಏಕಿ ನಿವೃತ್ತಿ ಘೋಷಿಸಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಭಾರತದ ಇತ್ತೀಚಿನ ಬಹುತೇಕ ಯಶಸ್ಸಿನಲ್ಲಿ ಈ ಮೂರೂ ಆಟಗಾರರ ಕೊಡುಗೆ ಪ್ರಮುಖ ವಾಗಿತ್ತು.
ಟೆಸ್ಟ್ ಕ್ರಿಕೆಟ್‌ಗೂ, ಟಿ-೨೦ ಅಥವಾ ಏಕದಿನ ಪಂದ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಟಿ-೨೦ ಹೊಡಿಬಡಿ ಆಟವಾಗಿರುವುದರಿಂದ ಹೊಸಬರು ಬೇಗನೇ ಆಟಕ್ಕೆ ಹೊಂದಿಕೊಳ್ಳ ಬಹುದು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಾಳ್ಮೆ ಯಿಂದ ಆಡಬೇಕಾಗುತ್ತದೆ. ಈ ಹಿಂದೆಯೂ ಭಾರತ ತಂಡದ ಪ್ರಮುಖ ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ನಿವೃತ್ತರಾದಾಗಲೂ ಭಾರತಕ್ಕೆ ಇದೇ ಸಮಸ್ಯೆ ಎದುರಾಗಿತ್ತು. ಮತ್ತೋರ್ವ ಹಿರಿಯ ಕ್ರಿಕೆಟ್ ಪಟು ರವೀಂದ್ರ ಜಡೇಜಾ ನಿವೃತ್ತಿ ಅಂಚಿನಲ್ಲಿದ್ದಾರೆ.
ಭಾರತದ ಈಗಿರುವ ಟೆಸ್ಟ್ ತಂಡ ಸಾಕಷ್ಟು ಯುವ ಪ್ರತಿಭೆಗಳಿಂದ ಕೂಡಿದ್ದು, ಅವರು ಪ್ರಬುದ್ಧರಾಗಿ ಬೆಳೆಯಲು ಸಾಕಷ್ಟು ಸಮಯ ಹಿಡಿಯುತ್ತದೆ. ಮುಂಬರುವ ಇಂಗ್ಲೆಂಡ್ ಸರಣಿ ಭಾರತದ ಪಾಲಿಗೆ ಕಬ್ಬಿಣದ ಕಡಲೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
-ಜಿ. ಪಿ. ಹರೀಶ್, ವಿ. ವಿ. ಮೊಹಲ್ಲ, ಮೈಸೂರು





