ಇತ್ತೀಚೆಗೆ ಮೈಸೂರಿನ ಅನೇಕ ಉದ್ಯಾನವನಗಳಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ವಾಕಿಂಗ್ ಮಾಡುವ ವೇಳೆ ಕಿರಿಕಿರಿಯುಂಟು ಮಾಡುತ್ತಾರೆ.
ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರೀತಿ, ಪ್ರೇಮದ ಹೆಸರಿನಲ್ಲಿ ಕಾಲೇಜಿಗೆ ಹೋಗದೇ ಪಾರ್ಕ್‌ಗಳಲ್ಲಿ ಕೂತು ಕಾಲ ಕಳೆಯುತ್ತಿದ್ದು, ಇದರ ದರ್ಶನ ಸಾರ್ವಜನಿಕರಿಗೆ ಮುಜುಗರ ಉಂಟುಮಾಡುತ್ತಿದೆ. ಇನ್ನು ಕೆಲವು ಉದ್ಯಾನವನಗಳಲ್ಲಿ ಪುಂಡರು ಪಾರ್ಕ್‌ನಲ್ಲಿಯೇ ಮದ್ಯಪಾನ, ಧೂಮಪಾನ ಮಾಡುತ್ತಾರೆ. ಜತೆಗೆ ವಾಯುವಿಹಾರಕ್ಕೆ ಬರುವ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅವರಿಗೆ ಮುಜುಗರವಾಗುವಂತೆ ವರ್ತಿಸುತ್ತಾರೆ. ಇದರಿಂದಾಗಿ ವಾಯುವಿಹಾರಕ್ಕೆ ಬರುವ ಹೆಣ್ಣು ಮಕ್ಕಳು ಹಿಂದೇಟು ಹಾಕುವಂತಾಗಿದೆ.
ಪಾರ್ಕ್‌ಗಳಲ್ಲಿ ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಹಿರಿಯ ನಾಗರಿಕರು ವಾಕಿಂಗ್ ಮಾಡುತ್ತಾರೆ. ಆದರೆ ಈ ಪಾರ್ಕ್‌ಗಳಲ್ಲಿನ ವಾತಾವರಣ ಅವರ ಆರೋಗ್ಯ ಸ್ಥಿತಿಯನ್ನು ಮತ್ತಷ್ಟು ಹಾಳುಮಾಡುವಂತಿದ್ದು, ಸಂಬಂಧಪಟ್ಟವರು ಪಾರ್ಕ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುವ ಸಮಯದಲ್ಲಿ ಪ್ರವೇಶ ನೀಡಬಾರದು. ಹಾಗೂ ಪಾರ್ಕ್‌ಗಳಿಗೆ ಸೂಕ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಜತೆಗೆ ಪೊಲೀಸ್ ಇಲಾಖೆಯೂ ಪಾರ್ಕ್‌ಗಳಲ್ಲಿ ಆಗಾಗ್ಗೆ ಗಸ್ತು ತಿರುಗುವ ಮೂಲಕ ರಕ್ಷಣೆ ಒದಗಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.