ಮೈಸೂರಿನಲ್ಲಿ ತಡರಾತ್ರಿ ಒಂದು ಗಂಟೆವರೆಗೂ ಪಾನಮತ್ತರಾಗಿ ವಾಹನ ಚಲಾಯಿಸುವವರನ್ನು ಹಿಡಿದು ತಪಾಸಣೆ ಮಾಡುತ್ತಿರುವ ಮೈಸೂರು ಪೊಲೀಸರಿಗೆ ಅಭಿನಂದನೆಗಳು, ಕುಡಿದು ವಾಹನ ಚಾಲನೆ ಮಾಡುವುದರಿಂದ ಚಾಲಕರು ತಮ್ಮ ಪ್ರಾಣಕ್ಕೂ ಅಪಾಯವನ್ನು ತಂದುಕೊಳ್ಳುವ ಜತೆಗೆ ಇತರರ ಪ್ರಾಣಕ್ಕೂ ಕಂಟಕವಾಗಲಿದ್ದಾರೆ. ಸದ್ಯ ನಗರದಲ್ಲಿ ಪೊಲೀಸರು ವಾಹನ ತಪಾಸಣೆ ಚುರುಕು ಮಾಡಿದ ಬಳಿಕ ಕಳೆದ ನಾಲೈದು ವರ್ಷಗಳಿಂದ ರಾತ್ರಿ ಹತ್ತು ಗಂಟೆಯ ನಂತರ ವಾಹನಗಳ ವೇಗಕ್ಕೆ ಬ್ರೇಕ್ ಬಿದ್ದಿದೆ. ಆದರೆ ಪೊಲೀಸರ ಈ ತಪಾಸಣೆಯನ್ನು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡರು ಆಕ್ಷೇಪಿಸಿರುವುದು ವಿಷಾದಕರ. ಪ್ರವಾಸೋದ್ಯಮದ ಕಾರಣ ನೀಡಿ ತಪಾಸಣೆಯ ವಿರುದ್ಧ ಅವರು ಮಾತನಾಡಿದ್ದಾರೆ. ವಾಸ್ತವವಾಗಿ ಪ್ರವಾಸಕ್ಕೆಂದು ಬರುವ ವಾಹನಗಳ ಚಾಲಕರೇ ಹೆಚ್ಚು ಪಾನಮತ್ತರಾಗಿ ವಾಹನ ಚಲಾವಣೆ ಮಾಡುತ್ತಿದ್ದಾರೆ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ವಾಹನಗಳು ನಗರ ಭಾಗಗಳನ್ನು ಪ್ರವೇಶಿಸುವ ಮುನ್ನವೇ ತಪಾಸಣೆ ಮಾಡುವುದು ಸೂಕ್ತ. ಸಮುದಾಯದ ಸುರಕ್ತತೆ ಹಾಳಾದರೂ ಪರವಾಗಿಲ್ಲ, ತಮಗೆ ವ್ಯಾಪಾರವಾದರೆ ಸಾಕು’ ಎಂಬ ಹೋಟೆಲ್ ಮಾಲೀಕರ ಧೋರಣೆ ಖಂಡನೀಯ, ನಾರಾಯಣಗೌಡರಂತಹವರಿಂದ ಈ ರೀತಿಯ ಸ್ವಾರ್ಥ ಬೇಡಿಕೆಯನ್ನು ನಿರೀಕ್ಷಿಸಿರಲಿಲ್ಲ.
-ಸ.ರ.ಸುದರ್ಶನ, ಕುವೆಂಪುನಗರ, ಮೈಸೂರು.