ಮೈಸೂರಿನ ಹಿರಿಯ ವಕೀಲರಾದ ಆರ್.ಜಿ.ನರಸಿಂಹ ಐಯ್ಯಂಗಾರ್ (74) ಮೊನ್ನೆ ನಿಧನರಾದರು.
ಮೈಸೂರಿನ ಎರಡನೇ ಮೇಯರ್ ಆಗಿ (1985-86) ಮೈಸೂರು ನಗರದ ಅಭಿವೃದ್ಧಿಗಾಗಿ ಶ್ರಮಿಸಿದ ಇವರ ಸೇವೆಯನ್ನು ಮೈಸೂರಿಗರು ಮರೆಯುವಂತಿಲ್ಲ. ಇವರ ಅಧಿಕಾರಾವಧಿಯಲ್ಲಿ ಕಲಾಮಂದಿರದಲ್ಲಿ ಮೊದಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದದ್ದು ಹೆಮ್ಮೆಯ ವಿಚಾರ. ಕಾರ್ಮಿಕ ಕಾನೂನು ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದ ನರಸಿಂಹ ಐಯ್ಯಂಗಾರ್‌ರವರು ಹಲವಾರು ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇದರ ಜತೆಗೆ ನಗರದ ಕಾಸ್ಮಾಪೋಲಿಟನ್ ಕ್ಲಬ್ ನ ಅಧ್ಯಕ್ಷರಾಗಿಯೂ ಎರಡು ಅವಧಿಗೆ ಚುನಾಯಿತರಾಗಿ ಸೇವೆ ಸಲ್ಲಿಸಿದ್ದಾರೆ.
ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ನರಸಿಂಹ ಐಯ್ಯಂಗಾರ್, ನಂತರದ ದಿನಗಳಲ್ಲಿ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು. ತಮ್ಮ ಜೀವಿತದ ಕೊನೆಯವರೆಗೂ ಕ್ರಿಯಾಶೀಲರಾಗಿಯೇ ಇದ್ದ ನರಸಿಂಹ ಐಯ್ಯಂಗಾರ್ ಮೈಸೂರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರನ್ನು ಎಂದೆಂದಿಗೂ ನಾವೆಲ್ಲರು ಸ್ಮರಿಸಬೇಕಿದೆ.
-ಕೆ.ವಿ.ವಾಸು, ವಕೀಲರು, ವಿವೇಕಾನಂದನಗರ, ಮೈಸೂರು.