ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ. ೧ರಂದು ಮಂಡಿಸಿದ ವಾರ್ಷಿಕ ಬಜೆಟ್‌ನಲ್ಲಿ ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿದೇಶಿ ವಿಮಾ ಕಂಪೆನಿಗಳಿಗೆ ಅನುಕೂಲವಾಗುವಂತೆ ಬಜೆಟ್ ತಯಾರಿಸಿದ್ದಾರೆ ಅನಿಸುತ್ತದೆ.
ಈ ಬಾರಿಯ ಬಜೆಟ್‌ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಈಗಿರುವ ಶೇ. ೭೪ರ ಬದಲು ಶೇ. ೧೦೦ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಅಂದರೆ ವಿಮಾ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೇರವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸರ್ಕಾರ ಅನುಮತಿ ನೀಡಿದಂತಾಗುತ್ತದೆ. ಇದು ಈಗಾಗಲೇ ಸರ್ಕಾರಿ ಸ್ವಾಮ್ಯದಲ್ಲಿರುವ ವಿಮಾ ವಲಯಕ್ಕೆ ತೊಂದರೆಯನ್ನುಂಟು ಮಾಡಲಿದೆ.
ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳು ನಷ್ಟ ಹೊಂದಲು ಹಾಗೂ ವಿದೇಶಿ ವಿಮಾ ಕಂಪೆನಿಗಳು ಲಾಭ ಪಡೆಯಲು ಸರ್ಕಾರವೇ ಪರೋಕ್ಷವಾಗಿ ಸಹಕಾರ ನೀಡುತ್ತಿದೆಯೇನೋ ಅನಿಸುತ್ತದೆ. ಆದ್ದರಿಂದ ಕೇಂದ್ರ ವಿತ್ತ ಸಚಿವರು ಈ ಬಗ್ಗೆ ಮರುಪರಿಶೀಲಿಸಿ ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಿ. -ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.