Mysore
25
haze

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಓದುಗರ ಪತ್ರ | ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯ ಕಾರ್ಮೋಡ!

೨೦೨೩ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ೧೩೬ ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದಾಗ ಈ ಅವಧಿಯಲ್ಲಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇರುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ದಾಗ ಆ ಭಾವನೆ ಸುಳ್ಳಾಗಿದೆಯೇನೋ ಅನಿಸುತ್ತದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ ಎಂಬುದಕ್ಕೆ ರಾಜಕಾರಣಿಗಳು ಆಗಾಗ್ಗೆ ಏರ್ಪಡಿಸುತ್ತಿರುವ ಡಿನ್ನರ್ ಕೂಟಗಳು, ಸಮಾನ ಮನಸ್ಕರ ಸಭೆಗಳು, ಗುಂಪಿನಲ್ಲಿ ವಿದೇಶಿ ಪ್ರವಾಸ, ರಹಸ್ಯ ಮೀಟಿಂಗ್‌ಗಳು ನಡೆ ಯುತ್ತಿರುವುದು ಸಾಕ್ಷಿಯಾಗಿದೆ.

 

ಇನ್ನೇನು ಕೆಲವೇ ದಿನಗಳಲ್ಲಿ ಕುದುರೆ ವ್ಯಾಪಾರವೂ ಆರಂಭವಾಗಲಿದ್ದು, ರೆಸಾರ್ಟ್ ರಾಜಕಾರಣ ಗರಿಗೆದರ ಬಹುದು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಈ ರಾಜಕೀಯ ಅಸ್ಥಿರತೆಯ ಕಾರ್ಮೋಡ ರಾಜ್ಯದ ಎರಡೂ ಪ್ರಮುಖ ಪಕ್ಷಗಳಿಗೆ ಅಂಟಿದ್ದು, ಒಂದು ಪಕ್ಷದ ಭಿನ್ನಮತವನ್ನು ಮತ್ತೊಂದು ಪಕ್ಷ ನಗದೀಕರಿಸಿಕೊಳ್ಳುವ ಸ್ಥಿತಿಯಲ್ಲಿರುವುದರಿಂದ ಭಿನ್ನಮತ ತಾರ್ಕಿಕ ಅಂತ್ಯ ಕಾಣಲು ವಿಳಂಬವಾಗಬಹುದು. ಚಲನಚಿತ್ರಗಳ ಕೊನೆಯ ದೃಶ್ಯಾವಳಿಗಳಲ್ಲಿ ಪೊಲೀಸರು ಪ್ರವೇಶಿಸಿದಂತೆ ಈ ಪಕ್ಷಗಳ ವರಿಷ್ಠರು ತಡವಾಗಿ ಪ್ರವೇಶ ಮಾಡುತ್ತಿದ್ದು, ರಾಜ್ಯ ರಾಜಕಾರಣದ ಪರಿಸ್ಥಿತಿ ‘ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಆಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಕಾರ್ಯ ವೈಖರಿ ಕನ್ನಡಿಗರನ್ನು ಭ್ರಮನಿರಸನಗೊಳ್ಳುವಂತೆ ಮಾಡಿದ್ದು, ನಮ್ಮ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷವೊಂದು ಅಽಕಾರದಲ್ಲಿ ಇರಬಾರದಿತ್ತೇ ಎಂದು ಚಿಂತಿಸುವಂತೆ ಮಾಡಿದೆ. -ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು

 

Tags:
error: Content is protected !!