Mysore
21
overcast clouds

Social Media

ಭಾನುವಾರ, 10 ನವೆಂಬರ್ 2024
Light
Dark

ಓದುಗರ ಪತ್ರ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ

ಮೈಸೂರು ಅರಮನೆಯನ್ನು ನೋಡಲು ದೇಶ-ವಿದೇಶಗಳಿಂದ ನಿತ್ಯ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ ಅರಮನ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದಾಗಿ ಇಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಪ್ರವಾಸಿಗರಿಗೆ ಬೇಸರ ಮೂಡಿಸಿದೆ.

ಅರಮನೆಯ ಪ್ರವೇಶ, ಸಿಂಹಾಸನ ವೀಕ್ಷಣೆ, ಪಾರ್ಕಿಂಗ್‌ ಟಿಕೆಟ್‌ಗಳು ಹಾಗೂ ಮಾರಾಟ ಮಳಿಗೆಗಳ ಬಿಲ್‌ಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅರಮನೆಯಲ್ಲಿ ಪ್ರವಾಸಿಗರಿಗೆ ನೀಡುವ ಟಿಕೆಟ್ ಗಳಲ್ಲಿ ಯಾವುದೇ ಬಾರ್‌ಕೋಡ್ ಆಗಲಿ ಅಥವಾ ಟಿಕೆಟ್ ನಂಬ‌ಗಳಾಗಲಿ ಇರುವುದಿಲ್ಲ. ಹೀಗಾಗಿ ಅನಧಿಕೃತವಾಗಿ ಟಿಕೆಟ್‌ಗಳು ಮಾರಾಟವಾಗುತ್ತಿವೆ ಎಂಬುದು ಪ್ರವಾಸಿಗರ ದೂರಾಗಿದೆ. ಹೀಗೆ ಪ್ರತಿಯೊಂದರಲ್ಲಿಯೂ ಅಕ್ರಮಗಳು ನಡೆಯುತ್ತಿರುವುದು ಬೆಳಕಿಗ ಬಂದಿದ್ದು, ಸರ್ಕಾರಕ್ಕೆ ಸೇರಬೇಕಾದ ಲಕ್ಷಾಂತರ ರೂ. ಭ್ರಷ್ಟರ ಪಾಲಾಗುತ್ತಿದೆ.

2014ರಲ್ಲಿಯೂ ಇಂತಹದ್ದೇ ಒಂದು ಆರೋಪ ಕೇಳಿ ಬಂದಿತ್ತು, ಅರಮನಯ ದರ್ಬಾರ್ ಸಭಾಂಗಣಕ್ಕೆ ಚಿನ್ನದ ಲೇಪನ ಅಳವಡಿಸುವವಲ್ಲಿಯೂ ಕಳಪೆ ಕಾಮಗಾರಿ ನಡೆದಿತ್ತು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಂದ ಸುಮಾರು 8 ಅಧಿಕಾರಿಗಳ ವಿರುದ್ಧ ತನಿಖೆಯನ್ನೂ ನಡೆಸಲಾಗಿತ್ತು. ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿಯೇ ಭ್ರಷ್ಟಾಚಾರ ನಡೆದರೆ, ಅದು ರಾಜ್ಯಕ್ಕೆ ಕಳಂಕ ತರಲಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಎಚ್ಚರ ವಹಿಸಿ ಅರಮನೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕಿದೆ.
-ಮುಳ್ಳೂರು ಪ್ರಕಾಶ್‌, ಕನಕದಾಸ ನಗರ, ಮೈಸೂರು,

 

Tags: