ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು, ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ್ ಮತ್ತು ಬಿಜೆಪಿ-ಜಾ. ದಳ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ಭಾರೀ ಪೈಪೋಟಿ ಎದುರಾಗಿದ್ದು, ಇಬ್ಬರ ಪರವಾಗಿಯೂ ಬೆಟ್ಟಿಂಗ್ ಜೋರಾಗಿದೆ. ಈ ಇಬ್ಬರೂ ಅಭ್ಯರ್ಥಿಗಳ ಪರವಾಗಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಮುಂಬೈ, ಕೊಲ್ಕತ್ತಾ, ಚೆನ್ನೆ ನಂತಹ ನಗರಗಳಲ್ಲಿಯೂ ಬೆಟ್ಟಿಂಗ್ ನಡೆಯುತ್ತಿದೆ ಎಂಬುದಾಗಿ ವರದಿಯಾಗಿದ್ದು, ಇದು ಆತಂಕಕಾರಿ ಬೆಳವಣಿಯಾಗಿದೆ. ಬೆಟ್ಟಿಂಗ್ ದಂಧೆ ಬಹಿರಂಗವಾಗಿಯೇ ನಡೆಯುತ್ತಿದ್ದರೂ ಸರ್ಕಾರ ಅವುಗಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ.
ಚುನಾವಣಾ ಆಯೋಗವೂ ಈ ಬಗ್ಗೆ ಕ್ರಮಕೈಗೊಳ್ಳದಿರುವುದು ಬೇಸರದ ಸಂಗತಿ. ಇಂತಹ ಬೆಳವಣಿಗೆಗಳು ಸಮಾಜಕ್ಕೆ ಮಾರಕವಾಗಲಿದೆ. ಅನೇ ಕ ಮಂದಿ ಹಣ ಮಾತ್ರವಲ್ಲದೇ ತಮ್ಮ ಜಮೀನು, ಮನೆಗಳನ್ನೂ ಅಡವಿಟ್ಟಿದ್ದಾರೆ. ಸೋತವರು ಎಲ್ಲವನ್ನೂ ಕಳೆದುಕೊಂಡು ದಿವಾಳಿಯಾಗು ತ್ತಾರೆ. ಯಾವುದೇ ರೀತಿಯ ಬೆಟ್ಟಿಂಗ್ ಆದರೂ ಅದು ಕಾನೂನು ಬಾಹಿರ. ಅಲ್ಲದೆ ಸಾಕಷ್ಟು ಕುಟುಂಬಗಳು ಬೀದಿಗೆ ಬೀಳುತ್ತವೆ. ಆದ್ದರಿಂದ ಪೊಲೀಸ್ ಇಲಾಖೆಯು ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.