ದೇಶದಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚಾಗಿದ್ದರೂ ಬೆರಳೆಣಿಕೆಯಷ್ಟು ಗ್ರಾಮೀಣ ಕ್ರೀಡಾಪಟುಗಳು ಮಾತ್ರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಗುರುತಿಸಿಕೊಂಡಿದ್ದು, ಸಾಧನೆಯ ಹಾದಿ ಹಿಡಿದ್ದಿದ್ದಾರೆ.
ಬಹುತೇಕ ಕ್ರೀಡಾಪಟುಗಳಿಗೆ ಸರಿಯಾದ ಪ್ರೋತ್ಸಾಹಸಿಗದೆ ಎಲೆಮರೆಯಕಾಯಿಯಂತೆ ಉಳಿದುಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕ್ರೀಡಾಭ್ಯಾಸಕ್ಕಿರಲಿ ಓದಿಗೂ ಸರಿಯಾದ ಶಾಲಾ-ಕಾಲೇಜುಗಳಿಲ್ಲ. ಇದ್ದರೂ ಅಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಭಾಗದ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಈಗಿರುವಾಗ ಕ್ರೀಡಾಭ್ಯಾಸದ ಮಾತೆಲ್ಲಿ? ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ತಾವೂ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲವಿದೆ. ಆದರೆ ನಗರಭಾಗಗಳಂತೆ ಸುಸಜ್ಜಿತ ಕ್ರೀಡಾಂಗಣಗಳಾಗಲಿ, ಆಟದ ಮೈದಾನಗಳಾಗಲಿ ಇಲ್ಲದಿರುವುದರಿಂದ ಅನೇಕ ಕ್ರೀಡಾಪಟುಗಳಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳನ್ನೂ ಮೆಟ್ಟಿನಿಂತು ಅನೇಕ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆಯ ಹಾದಿ ಹಿಡಿದಿದ್ದಾರೆ.
ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಿ, ಸರಿಯಾದ ಮೂಲಸೌಕರ್ಯಗಳನ್ನು ಒದಗಿಸುವ ಜತೆಗೆ ಸೂಕ್ತ ತರಬೇತಿ ನೀಡಿದರೆ ಗ್ರಾಮೀಣ ಪ್ರತಿಭೆಗಳು ಮುನ್ನಲೆಗೆ ಬರುತ್ತಾರೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.





