Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕಗ್ಗಂಟಾಗುವ ಹೆತ್ತವರ ಪಾಲನೆ

ಸೌಮ್ಯಕೋಠಿ, ಮೈಸೂರು

ಸಾಮಾನ್ಯವಾಗಿ ನಾವೆಲ್ಲರೂ ಮಾತನಾಡುವಾಗ ಹೇಳುವುದು ನಾವು ಎಷ್ಟು ಕಷ್ಟಪಟ್ಟು ಮಕ್ಕಳನ್ನು ಸಾಕಿದ್ದೇವೆ ಎಂದು.

ಹೌದು ಎಲ್ಲಾ ತಂದೆ ತಾಯಿಗಳು ಕೂಡ ಮಕ್ಕಳನ್ನು ಅವರ ಶಕ್ತಿ ಮೀರಿ ಸಾಕುತ್ತಾರೆ. ನಾವು ಹೇಗಿದ್ದೇವೋ ಅದಕ್ಕಿಂತ ಇನ್ನೂ ಉತ್ತಮರಾಗಿ ನಮ್ಮ ಮಕ್ಕಳು ಬೆಳೆಯಲಿ ಎನ್ನುವುದೇ ಎಲ್ಲಾ ತಂದೆ ತಾಯಿಗಳ ಆಶಯ. ಆದರೆ ಒಂದು ಹೊಸ ದೃಷ್ಟಿಕೋನದಿಂದ ಯೋಚನೆ ಮಾಡೋಣ, ಅದು ನಮ್ಮದೇ ಮಗು ಅದನ್ನು ಸಾಕುವ ಜವಾಬ್ದಾರಿಯನ್ನು ಭಗವಂತ ನಮಗೆ ಕೊಟ್ಟಿದ್ದಾನೆ ಅಷ್ಟೇ ಅಲ್ಲದೆ ಬಹಳ ಆಸೆಯಿಂದ ನಾವೇ ತೆಗೆದುಕೊಂಡ ಜವಾಬ್ದಾರಿ ನಮ್ಮ ಮಕ್ಕಳು ಅಲ್ಲವೇ.

ಆದರೆ ಮಕ್ಕಳು ತಂದೆ ತಾಯಿಯನ್ನು ಸಾಕುವುದು ನಿಜಕ್ಕೂ ಸುಲಭದ ಮಾತಲ್ಲ ಕಾರಣವೇನೆಂದರೆ ಮಗುವಿಗೆ ಮಾತನಾಡಲು ಬರುವುದಿಲ್ಲ, ಅದಕ್ಕೆ ರುಚಿ ಗೊತ್ತಿರುವುದಿಲ್ಲ, ಲೋಕ ತಿಳಿದಿರುವುದಿಲ್ಲ ಆ ಮಗುವನ್ನು ನಮಗೆ ಹೇಗೆ ಬೇಕೋ ಹಾಗೆ ತಿದ್ದಿ ತೀಡಿ ಬೆಳೆಸಬಹುದು.

ಅರವತ್ತು ವರ್ಷ ದಾಟಿದ ಮೇಲೆ ತಂದೆ ತಾಯಿಗಳು ಕೂಡ ಮಗುವಿನ ಹಾಗೆ ಆದರೆ ಆ ಮಗುವನ್ನು ಸಾಕುವುದು ಬಹಳ ಕಷ್ಟದ ಕೆಲಸ. ಕಾರಣ ಅನುಭವ ಎನ್ನುವ ದಿವ್ಯ ಔಷಧ ಅವರ ಬಳಿ ಇರುತ್ತದೆ. ಸಾಲದ್ದಕ್ಕೆ ನಾನು ನನ್ನದು ಅನ್ನುವ ಅಹಂ ಅಹಂಕಾರ ಸಹ ತುಂಬಿರುತ್ತದೆ. ರುಚಿ ಹೀಗೇ ಇರಬೇಕು, ಇದೇ ನನ್ನ ಸಂಪ್ರದಾಯ, ಇದೇ ಶಾಸ್ತ್ರ ಎನ್ನುವ ಹಠಮಾರಿತನ. ಈ ದೊಡ್ಡ ಮಗುವನ್ನು ಮಕ್ಕಳಾದ ತಂದೆ ತಾಯಿಗಳು ಬೆಳೆಸುವುದು ಬಹಳ ಕಷ್ಟದ ಕೆಲಸ ಹಾಗಾಗಿ ಯಾರಾದರೂ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾರೆ ಎಂದರೆ ಅದು ತಂದೆ ತಾಯಿಯ ಹಿರಿಮೆಗಿಂತ ಆ ಮಕ್ಕಳ ಹಿರಿಮೆ ಎಂದು ನಾನು ಭಾವಿಸುತ್ತೇನೆ.

ಕೆಲವರು ಹೇಳುವುದುಂಟು ನಾವು ಸಾಕಿದ್ದೇವೆ ಈಗ ಅವರು ಸಾಕಲಿ ಎಂದು ನಾವು ಮಕ್ಕಳನ್ನು ಸಾಕುವುದು ನಮ್ಮ ಜವಾಬ್ದಾರಿ ಆದರೆ ಮಕ್ಕಳು ತಂದೆ ತಾಯಿಯನ್ನು ಸಾಕುವುದು ಅವರ ಪ್ರೀತಿ. ಸಾಲದ್ದಕ್ಕೆ ಹಳೇ ತಲೆಮಾರಿನ ಜನರ ಕೈ ಹಿಡಿದು ಅವರ ಹೊಸ ತಲೆಮಾರಿನ ಮಕ್ಕಳ ಕೈಯನ್ನು ಹಿಡಿದು ಇಬ್ಬರನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವುದು ಒಂದು ರೀತಿ ಶ್ರವಣ ಕುಮಾರನ ಕಥೆಗೆ ಸರಿ. ಅಪ್ಪ ಅಮ್ಮನ ಕಡೆ ಮಾತನಾಡಿದರೆ ಮಕ್ಕಳಿಗೆ ಬೇಜಾರು ಮೊಮ್ಮಕ್ಕಳ ಪರ ಮಾತನಾಡಿದರೆ ತಂದೆ ತಾಯಿಗೆ ಬೇಜಾರು ಇದರ ಮಧ್ಯೆ ಹೆಂಡತಿ ಗಂಡನ ವಾದ ಆ ಮಧ್ಯದಲ್ಲಿ ಸಿಲುಕಿ ಹಾಕಿಕೊಂಡಿರುವವರ ಪರಿಸ್ಥಿತಿ ಅಡಕತ್ತರಿಯ ಮಧ್ಯದಲ್ಲಿ ಅಡಕೆ ಸಿಲುಕಿಸಿದ ಹಾಗೆ ನೋವಾಗುವುದು ಅವರಿಗೇ ಅಲ್ಲವೇ, ಇದು ಒಂದು ರೀತಿಯ ಹೊಸ ಚಿಂತನೆ ಎಂದರೆ ಖಂಡಿತವಾಗಿಯೂ ತಪ್ಪಾಗುವುದಿಲ್ಲ.

ಹೌದು ಕಾರಣ ನಾನು ನೋಡಿದ ಹಾಗೆ ಮಕ್ಕಳನ್ನು ಸಾಕುವುದು ಬಹಳ ಸುಲಭ ಆದರೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಒಂದು ದೊಡ್ಡ ಜವಾಬ್ದಾರಿಯೇ ಸರಿ ಅವರ ಹಾಗೆ, ಅವರು ಹೇಳಿದ ಹಾಗೆ ನಡೆದುಕೊಂಡರು ಈಗಲೂ ಕೂಡ ಎಷ್ಟೋ ಮನೆಯಲ್ಲಿ ತಂದೆ ತಾಯಿಗಳ ಕೈಯಲ್ಲಿ ಏನೇಮಾಡಿದರು ಬೈಗುಳವನ್ನು ಕೇಳುವ ಮಕ್ಕಳು ಇದ್ದಾರೆ. ಅವರೂ ನಿಮ್ಮ ಮಕ್ಕಳಲ್ಲವೇ ಎಲ್ಲವನ್ನು ಕ್ಷಮಿಸಿ ಆ ಮಕ್ಕಳನ್ನು ಮಗುವಿನ ಹಾಗೆ ಒಮ್ಮೆ ತಬ್ಬಿ ನೋಡಿ ಇದು ನೀವು ಈ ವರ್ಷದ ಹಬ್ಬಕ್ಕೆ ನಿಮ್ಮ ಮಕ್ಕಳಿಗೆ ಕೊಡುವ ಉಡುಗೊರೆ ಎಂದು ಹಿರಿಯರಿಗೆ ಮನವಿ ಮಾಡುವೆ.

ಎಷ್ಟು ಮನೆಗಳಲ್ಲಿ ವೃದ್ಧಾಶ್ರಮಕ್ಕೆ ಅಪ್ಪ- ಅಮ್ಮನನ್ನು ಕಳಿಸುವ ಮಕ್ಕಳಿದ್ದಾರೆ. ಅದೇ ಕೆಲವು ಕಡೆ ತಂದೆ ತಾಯಿಯನ್ನು ದೇವರ ಸ್ಥಾನದಲ್ಲಿ ಕೂರಿಸಿ ನೋಡಿಕೊಳ್ಳುವ ಮಕ್ಕಳೂ ಇದ್ದಾರೆ. ಅದೇನೇ ಇರಲಿಒಟ್ಟು ಕುಟುಂಬದಲ್ಲಿ ಇದ್ದೀವಿ ಎಂದರೆ ಅದು ಅದೃಷ್ಟವೇ ಸರಿ ಒಮ್ಮೆ ಯೋಚನೆ ಮಾಡಿ. ಸ್ವಲ್ಪ ಎಲ್ಲರೂ ಅನುಸರಿಸಿ ಹೋಗಬಹುದಲ್ಲವೇ ಒಂದು ಪುಟ್ಟ ಚಿಂತನೆ ಅಷ್ಟೇ. ಮಕ್ಕಳು ಅಪ್ಪ ಅಮ್ಮನಿಗೆ ಹೊಂದಿಕೊಂಡರೆ, ಅಪ್ಪ ಅಮ್ಮ ಮಕ್ಕಳಿಗೂ ಹೊಂದಿಕೊಂಡು ಹೋಗುವ ಹೊಸ ಸಂಪ್ರದಾಯವನ್ನು ತರೋಣ.

Tags:
error: Content is protected !!