Mysore
27
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ನೋಟ ಪ್ರತಿನೋಟ : ಬೊಮ್ಮಾಯಿ ಮಂಡಿಸಿದ ರಾಜ್ಯ ಬಜೆಟ್ ಕುರಿತು ಚರ್ಚೆ

ನೋಟ

ಡಾ.ಕೆ.ವಸಂತ ಕುಮಾರ್

ಬಿಜೆಪಿ ಜಿಲ್ಲಾ ಸಹ ವಕ್ತಾರರು, ಮೈಸೂರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಮಂಡಿಸಿದ ರೂ.3 ಲಕ್ಷ ಕೋಟಿಗೂ ಮಿಗಿಲಾದ ರಾಜ್ಯ ಬಜೆಟ್ ಪ್ರಗತಿಪರವಾದ ಆಯವ್ಯಯವಾಗಿದ್ದು, ಎಲ್ಲ ವರ್ಗದ ಜನರಿಗೂ ಆದ್ಯತೆ ಕೊಡಲಾಗಿದೆ.

ಬಿಜೆಪಿಯ ಅಧಿಕಾರಾವಧಿಗೂ ಮೊದಲು ಸುಮಾರು 1.5 ಲಕ್ಷ ಕೋಟಿ ರೂ. ಇದ್ದ ಆಯವ್ಯಯ ಇಂದು 3 ಲಕ್ಷ ಕೋಟಿ ರೂ. ದಾಟುವ ಮೂಲಕ ರೂ.1.5 ಲಕ್ಷ ಕೋಟಿಯಷ್ಟು ಸಂಪನ್ಮೂಲ ಕ್ರೋಡೀಕರಣವಾಗಿರುವುದು ಉತ್ತಮ ನಿದರ್ಶನ. ಆ ಕಾರಣಕ್ಕಾಗಿ ನೀತಿ ಆಯೋಗವು ಇನೊವೇಟಿವ್ ಆಡ್ಮಿನಿಸ್ಟ್ರೇಟಿವ್ ಮೆಷರ್‌ಗೆ ಒಂದನೇ ಸ್ಥಾನ ಎಂದು ಪ್ರಕಟಿಸಿದೆ.

ಬಜೆಟ್ ಅಡಿಯಲ್ಲಿ ಅನೇಕ ಅಂಶಗಳಿಗೆ ಆದ್ಯತೆ ನೀಡಲಾಗಿದೆ. ರೈತರ ಶ್ರೇಯೋಭಿವೃದ್ಧಿಗೆ ಸುಮಾರು 49 ಸಾವಿರ ಕೋಟಿ ರೂ. ನೀಡಲಾಗಿದೆ. ಉತ್ತೇಜನ ನೀಡುವ ಎಲ್ಲ ವಲಯಗಳಿಗೂ ಸುಮಾರು 69 ಸಾವಿರ ಕೋಟಿ ರೂ. ಕೊಡಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಸುಮಾರು 69 ಸಾವಿರ ಕೋಟಿ ರೂ. ನೀಡಲಾಗಿದೆ. ಯುವಕರ ಭವಿಷ್ಯ ನಿರ್ಮಾಣಕ್ಕಾಗಿ ಸುಮಾರು 40 ಸಾವಿರ ಕೋಟಿ ರೂ. ಹಾಗೂ ಮಹದಾಯಿಗೆ ರೂ. 1 ಸಾವಿರ ಕೋಟಿಯನ್ನು ಮೀಸಲಿಡಲಾಗಿದೆ.

ಧಾರ್ಮಿಕ ಸಂಸ್ಕೃತಿಯನ್ನು ಜಾಗೃತಗೊಳಿಸುವುದಕ್ಕಾಗಿ ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಿದ್ದು, ಬೆಟ್ಟದ ಮೇಲಿರುವ ಪೂಜಾ ಕೇಂದ್ರಗಳಿಗೆ ರೋಪ್‌ವೇ ಮೂಲಕ ಅದನ್ನು ಜೋಡಿಸುವ ಕೆಲಸ ಮಾಡಲಾಗುತ್ತ್ತದೆ.

ರೈತರ ಸಾಲವನ್ನು ರೂ. 3 ಲಕ್ಷ ದಿಂದ ರೂ. 5 ಲಕ್ಷಕ್ಕೆ ಏರಿಸಲಾಗಿದೆ. ಕೃಷಿಕರಿಗೆ ಪ್ರೋತ್ಸಾಹಧನವನ್ನು ರೂ. 10 ಸಾವಿರಕ್ಕೆ ವಿಸ್ತರಿಸಿದ್ದು, ತೋಟಗಾರಿಕಾ ಬೆಳೆಗೆ ಸಂಬಂಧಿಸಿದಂತೆ ತೋಟಗಾರಿಕೆ ವಿಶ್ವವಿದ್ಯಾಲಯ ಘೋಷಿಸಿದರೆ, ಸಾವಯವ ಕೃಷಿ ಮತ್ತು ಅನ್ನಶ್ರೀ ಯೋಜನೆಗೆ ಸಂಬಂಧಿಸಿದಂತೆ ಸಿರಿಧಾನ್ಯ ಉತ್ಪಾದನೆಗೆ ಪ್ರೋತ್ಸಾಹ ಕೊಡಲಾಗಿದೆ. ಸ್ವಾಮಿನಾಥನ್ ಆಯೋಗದ ವರದಿಯಂತೆ ರೈತರ ಬೆಳೆಗಳಿಗೆ ದ್ವಿಗುಣ ಬೆಲೆ ಸಿಗಬೇಕೆಂಬ ಆಶಯಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಅಳವಡಿಸಲಾಗಿದೆ.

8 ಲಕ್ಷ ಯುವತಿಯರಿಗೆ, ಅಸಂಘಟಿತ ವಲಯದ ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ಅಲ್ಪಸಂಖ್ಯಾತರಿಗೆ ವಿದೇಶ ವಿದ್ಯಾಭ್ಯಾಸದ ಸಂಬಂಧ 20 ಲಕ್ಷ ರೂ. ಅನುದಾನ ಕೊಡಲಾಗುತ್ತಿದೆ. ಉದ್ಯೋಗ ನೀಡುವ 60ಕ್ಕೂ ಹೆಚ್ಚು ಯೂನಿಕಾರ್ನ್‌ಗಳು ಕರ್ನಾಟಕದಲ್ಲಿ ತಯಾರಾಗಿವೆ. 2025ರೊಳಗೆ ಭಾರತವು 5 ಟ್ರಿಲಿಯನ್ ಇಕಾನಮಿ ಹೊಂದಬೇಕೆಂಬ ಗುರಿ ಹೊಂದಿದ್ದು, 1 ಟ್ರಿಲಿಯನ್ ಇಕಾನಮಿಗೆ ಬೇಕಾದ ದಾರಿದೀವಿಗೆಯನ್ನು ನಿಶ್ಚಯ ಮಾಡಲಾಗಿದೆ. ಆ ನಿಟ್ಟಿನಲ್ಲಿ ದಾಪುಗಾಲಿಡಲು ಆಯವ್ಯಯ ಮಂಡಿಸಲಾಗಿದೆ.

ಕಾಂಗ್ರೆಸ್ಸಿಗರು ಶ್ರೀಸಾಮಾನ್ಯನ ದಾರಿ ತಪ್ಪಿಸುವುದಕ್ಕಾಗಿ ಕಿವಿಗೆ ಹೂ ಮುಡಿಯುವ ಅಣಕು ಪ್ರದರ್ಶನ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ-ಯೊಂದೇ ಭರವಸೆ. ಬಿಜೆಪಿ ಮೂಲಕವೇ ಭಾರತವು ದೊಡ್ಡ ಪ್ರಮಾ-ಣದಲ್ಲಿ ವಿಕಾಸವಾಗಿದೆ.

ಕೋವಿಡ್ ನಂತರದ ಕಾಲಘಟ್ಟದಲ್ಲಿ ಆರೋಗ್ಯ ವಲಯಕ್ಕೆ ಬಹಳ ದೊಡ್ಡದಾದ ಉತ್ತೇಜನವನ್ನು ಕೊಡಲಾಗಿದೆ. ಮುಂದಿನ ೩೦ ವರ್ಷಗಳಿಗೆ ಬೇಕಾದ ಆಮ್ಲಜನಕ, ಬೆಡ್‌ಗಳ ಕೊರತೆ ಇಲ್ಲದಂತೆ ಆರೋಗ್ಯ ಕ್ಷೇತ್ರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. 12 ಕೋಟಿ ಲಸಿಕೆ ಕೊಟ್ಟಿದ್ದರೂ ಅದಕ್ಕೆ ಬೇಕಾದ ಪೂರಕ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡುವುದರಲ್ಲಿಯೂ ಬಿಜೆಪಿ ಯಶಸ್ವಿಯಾಗಿದೆ.

ರಕ್ತ ಹೀನತೆ ಮತ್ತು ಅಪೌಷ್ಟಿಕತೆಯಿಂದ ಹೊರಬರಲು ಪೂರಕ ಚಿಕಿತ್ಸೆ ನೀಡಲಿದೆ. ಮತ್ಸ ಉದ್ಯಮದಲ್ಲಿ ಸೀಮೆ ಎಣ್ಣೆ ಬೋಟ್‌ಗಳಿಗೆ ಬದಲಾಗಿ ಡೀಸೆಲ್ ಬೋಟ್, ಸೋಲಾರ್ ಬೋಟ್‌ಗಳಿಗೆ 50 ಸಾವಿರ ರೂ. ನೀಡಲಾಗುತ್ತಿದೆ. ಇದರೊಂದಿಗೆ ದಲಿತರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಸರ್ಕಾರದ ಲಾಭವನ್ನು ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಪೂರಕ ಅಂಶಗಳು ಈ ಬಜೆಟ್‌ನಲ್ಲಿವೆ.


ಪ್ರತಿನೋಟ

ಚಾ.ನಂಜುಂಡಮೂರ್ತಿ

ರೈತ ಹೋರಾಟಗಾರ, ಎಚ್.ಡಿ.ಕೋಟೆ ತಾ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು 3ಲಕ್ಷ ಕೋಟಿ ರೂ.ಗಳಿಗಿಂತಲೂ ಅಧಿಕವಾದ ಬಜೆಟ್ ಮಂಡಿಸಿದ್ದು, ಇದರಿಂದ ರಾಜ್ಯದಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿದೆ ಎಂದು ಭಾವಿಸಿಕೊಂಡರೂ ಇಲ್ಲಿ ಹಾಲು, ಮಜ್ಜಿಗೆ ಮೊಸರು ಮತ್ತು ಮಂಡಕ್ಕಿ ಮೇಲೆಯೂ ತೆರಿಗೆ ವಿಧಿಸಲಾಗಿದೆ. ಅಕ್ಕಿ, ಗೋಧಿಗೂ ತೆರಿಗೆ ಹೇರಲಾಗಿದೆ ಎಂಬದನ್ನು ಗಮನಿಸಬೇಕು.

ಸಾಮಾನ್ಯ ಬಳಕೆದಾರರ ಅಗತ್ಯತೆಗಳನ್ನು ಪೂರೈಸುವ ಹೊಣೆಗಾರಿಕೆಯನ್ನು ಸರ್ಕಾರವು ನಿರ್ವಹಿಸಬೇಕಾಗುತ್ತದೆ. ಅದು ಸರ್ಕಾರದ ಸಂವಿಧಾನ ಬದ್ಧ ಕರ್ತವ್ಯವಾಗಿದೆ. ಇಲ್ಲಿ ಸರ್ಕಾರವು ಒಂದು ಚುನಾವಣೆಯ ಸಮೀಪದಲ್ಲಿರುವುದರಿಂದ ಬಜೆಟ್‌ನ ವಿಧಿವಿಧಾನಗಳನ್ನು ಪೂರೈಸುವ ಸಲುವಾಗಿ ಬಜೆಟ್ ಮಂಡಿಸಿದಂತಿದೆ. ಈ ಬಜೆಟ್ ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಮುಂಬರುವ ಸರ್ಕಾರದ ಮುಖ್ಯಮಂತ್ರಿಗೆ ಸೇರಿದ್ದು.

ಬೊಮ್ಮಾಯಿಯವರೇ ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ಮುಂದುವರಿಸಬಹುದು. ಆದರೆ ಬೇರೆಯವರು ಮುಖ್ಯಮಂತ್ರಿಗಳಾದರೆ ಅವರ ಅಗತ್ಯತೆಗಳಿಗೆ ತಕ್ಕಂತೆ ಬಜೆಟ್ ರೂಪಿಸಬಹುದು. ಕೇವಲ ನಾಲ್ಕು ತಿಂಗಳ ಖರ್ಚು-ವೆಚ್ಚಕ್ಕೆ ಅನುಮತಿ ಬೇಡುವ ಲೇಖಾ ನುದಾನಕ್ಕಷ್ಟೇ ಹಾಗೂ ರಾಜ್ಯದ ಎಲ್ಲ ವರ್ಗಗಳ ಜನರನ್ನು ಓಲೈಸಿ ಮತವನ್ನು ಸೆಳೆಯುವ ತಂತ್ರವಾಗಿ ಸರ್ಕಾರ ಈ ಬಜೆಟ್ ಮಂಡಿಸಿದಂತಿದೆ.

ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ರೈತರು, ಕೂಲಿ ಕಾರ್ಮಿಕರ ಕಷ್ಟದ ಬದುಕುಗಳನ್ನು ಚೆಂದವಾಗಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಪ್ರಯತ್ನಗಳನ್ನು ಬೊಮ್ಮಾಯಿಯವರು ಮಾಡಬಹುದಾಗಿತ್ತು. ಆದರೆ, ಮುಂಬರುವ ಚುನಾವಣೆಯನ್ನೇ ಜಪ ಮಾಡುತ್ತಿರುವ ಈ ಸರ್ಕಾರ ಮಠ-ಮಂದಿರಗಳಿಗೆ ಪರೋಕ್ಷವಾಗಿ ಒತ್ತಾಸೆಯಾಗಿದೆ.

ಎನ್‌ಇಪಿಗಿಂತಲೂ ವಿದ್ಯಾಸಿರಿಗೆ ಹೆಚ್ಚು ಒತ್ತು ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ನೀತಿ ನಿರೂಪಣೆಗಳನ್ನು ರೂಪಿಸುತ್ತಾ, ರಚನಾತ್ಮಕವಾಗಿ ಹಣವನ್ನು ಕಾಯ್ದಿರಿಸಬೇಕಿತ್ತು. ಇದರಲ್ಲಿ ಈ ಸರ್ಕಾರ ವಿಫಲವಾಗಿದೆ. ಅಲ್ಲದೇ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಉದ್ಯೋಗ ಖಾಯಂಗಾಗಿ ಯಾವುದೇ ಖಚಿತ ನಿರ್ಧಾರ ಕೈಗೊಂಡಿಲ್ಲ. ಯುವಕರಿಗೆ ಬದುಕುವ ದಾರಿಯಾಗಲಿ ಉಚಿತ ಶಿಕ್ಷಣವಾಗಲಿ ಕಾರ್ಯರೂಪಿಸುವ ಹಣಕಾಸು ನಿರ್ವಹಣೆಯ ನಿರೀಕ್ಷೆಗಳನ್ನು ಮಾಡದೇ ಇರುವುದು ಸೂಕ್ತವಾಗಿದೆ ಎಂದರೆ ತಪ್ಪಾಗಲಾರದು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಆದರೆ ಇನ್ನೂ ಸಮಗ್ರ ಕನ್ನಡ ಭಾಷೆಗೆ ಅಧಿನಿಯಮವನ್ನು ಜಾರಿಗೊಳಿಸುತ್ತಲೇ ಇದ್ದೇವೆ. ಯಾವುದೇ ಸರ್ಕಾರಗಳಿಗೆ ಇದು ಘನತೆ ತರುವುದಿಲ್ಲ. ಕೃಷಿ, ತೋಟಗಾರಿಕೆ, ನೀರಾವರಿ, ಮೀನುಗಾರಿಕೆ, ಪಶು ಸಂಗೋಪನೆ, ಸಹಕಾರ ವಲಯ, ರೈತರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಘೋಷಣೆಗಳಾಗಿವೆ. ಆದರೆ ರೈತರಿಗೆ ತಮ್ಮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯೇ ಕೃಷಿ ಮೌಲ್ಯವಧಿತ ಹೊಸ ಯೋಜನೆಗಳಿಗೆ ಒತ್ತು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಈ ಸರ್ಕಾರ ಬೃಹತ್ ಕೈಗಾರಿಕೆಗಳಿಗೆ ಕೊಡುಗೆ ನೀಡಿದೆ. ಎಲ್ಲ ಇಲಾಖೆಗಳ ಟೆಂಡರ್ ಪದ್ಧತಿಯನ್ನು ಪರಿಶೀಲಿಸಲು ಸರ್ಕಾರ ಮುಂದಾಗಬೇಕಿತ್ತು. ಇದರಿಂದ ತಳಮಟ್ಟದಲ್ಲಿ ಯುವಕರು ಉತ್ಸಾಹದಿಂದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತಿತ್ತು.

ಕುಮಾರಸ್ವಾಮಿ ಪ್ರತಿಯೊಬ್ಬ ರೈತನ ಎರಡು ಲಕ್ಷ ರೂ.ಗಳನ್ನು ಮನ್ನಾ ಮಾಡಿದ್ದರು. ಸರ್ಕಾರಕ್ಕೆ ಸಂಕಲ್ಪ ಶಕ್ತಿ ಇದ್ದಾಗ ಮಾತ್ರ ಅದು ಕಾರ್ಯಗತಗೊಳಿಸಲು ಸಾಧ್ಯವಿದೆ ಎಂದರ್ಥ. ಸರ್ಕಾರ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯುವ ಜನತೆ, ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ಮೂಲಕ ವೈಜ್ಞಾನಿಕತೆ ಹಾಗೂ ಎಲ್ಲ ಕೈಗಾರಿಕಾ ವಲಯಗಳಿಗೂ ಆದ್ಯತೆ ನೀಡಬೇಕಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ