ಜೆಬಿ ರಂಗಸ್ವಾಮಿ
ರಾಜಿ ಮಾಡಿಕೊಳ್ಳದೆ ಆವತ್ತು ಉಳಿಗಾಲವಿರಲಿಲ್ಲ, ನಾವಿಬ್ಬರೂ ಒಳಗೊಳಗೇ ನಕ್ಕು ನಿಟ್ಟುಸಿರು ಬಿಟ್ಟೆವು. ಪೊಲೀಸಿನಲ್ಲಿ ಇದಕ್ಕೆ ಹಾವು ಬಿಡೋದು ಅನ್ನುತ್ತಾರೆ!
ಸಹೋದ್ಯೋಗಿ ಗೆಳೆಯ ಎ.ಎಸ್.ಹನುಮಂತರಾಯಪ್ಪ ಇಲ್ಲವಾಗಿದ್ದಾರೆ. ಇಂಗ್ಲೀಷ್ ಎಂ.ಎ ಮಾಡಿದ್ದ ಅವರು ಕನ್ನಡ ಇಂಗ್ಲೀಷ್ ಎರಡೂ ಸಾಹಿತ್ಯ ಓದಿಕೊಂಡವರು. ಕವಿ ಶಿವಪ್ರಕಾಶ್ ರ ಒಡನಾಡಿ. ಅತ್ಯಂತ ತಾಳ್ಮೆಯ ಸಂಭಾವಿತ. ನಾವಿಬ್ಬರೂ ೧೯೮೬ರಲ್ಲಿ ಸರಸ್ವತಿಪುರಂ ಠಾಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು.
ಮಹಮದ್ ದಿ ಈಡಿಯಟ್ ಕಥೆಯಿಂದಾಗಿ ದೊಡ್ಡ ಕೋಮುಗಲಭೆ ನಡೆದಿತ್ತು. ಮೈಸೂರಿನಲ್ಲಿ ಕರ್ಫ್ಯೂ ವಿಧಿಸಿದ್ದರಿಂದ ಇದ್ದಲ್ಲಿಗೇ ಊಟದ ಪ್ಯಾಕೆಟ್ ಬರುತ್ತಿತ್ತು. ಒಂದು ವಾರ ನಾವ್ಯಾರೂ ಮನೆಗೇ ಹೋಗಿರಲಿಲ್ಲ.
ಇವರು ಗಸ್ತಿನಲ್ಲಿದ್ದಾಗ ಕಾರೊಂದರಲ್ಲಿ ವ್ಯಕ್ತಿಯೊಬ್ಬ ಬಂದಿದ್ದಾನೆ. ಆತ ಪ್ರತಿಷ್ಠಿತ ಉದ್ಯಮಿ ಮತ್ತು ಪ್ರಭಾವಶಾಲಿ. ತಡೆದು ನಿಲ್ಲಿಸಿದರೆ, ‘ ಮನೆಗೆ ಹೋಗ್ತಿದ್ದೇನೆ. ಅದಕ್ಕೂ ತಡೆ ಹಾಕ್ತೀರಲ್ರೀ?’ ಆಢ್ಯತೆಯಿಂದಾತ ಪ್ರಶ್ನಿಸಿದ್ದಾನೆ. ‘
ಹಾಗಲ್ಲ. ಪರಿಸ್ಥಿತಿ ಪ್ರಕ್ಷುಬ್ದವಾಗಿದೆ. ನಿಮಗೇ ಯಾರಾದ್ರೂ ತೊಂದರೆ ಮಾಡಿಬಿಡಬಹುದು. ಕಾರಿಗೆ ಬೆಂಕಿ ಹಾಕಲೂ ಹೇಸುವುದಿಲ್ಲ. ಬೇಗ ಮನೆಗೆ ಹೋಗಿ. ಕರ್ಫ್ಯೂ ಇದೆ. ಕಾರನ್ನು ಹೊರಕ್ಕೇ ತೆಗೀಬೇಡಿ’ ಎಂದು ಹನುಮಂತರಾಯಪ್ಪ ತಿಳಿ ಹೇಳಿ ಕಳಿಸಿದ್ದಾರೆ. ಆತ ಇಂಗ್ಲೀಷ್‌ನಲ್ಲಿ ವಟಗುಟ್ಟಿಕೊಂಡು ‘ಅಂತಹ ಪರಿಸ್ಥಿತಿ ಏನಿಲ್ಲ. ನೀವು ಪೊಲೀಸ್ನೋರೇ ಅತಿಯಾಗಿ ಮಾಡ್ತೀರಿ.’ ಎಂದು ವಾದಿಸಿ ಹೋಗಿದ್ದಾನೆ.
ಆದೇ ವ್ಯಕ್ತಿ ಪುನಃ ರಾತ್ರಿ ಹತ್ತು ಗಂಟೆಗೆ ಹಾಸ್ಟೆಲ್ ರಸ್ತೆಯಲ್ಲಿ ಪುನಃ ಸಿಕ್ಕಿದ್ದಾನೆ. ಈ ಬಾರಿ ಕಾರಿನಲ್ಲಿ ಜೊತೆಗೆ ಮೂರ್ನಾಲ್ಕು ಹೆಂಗಸರು. ‘
ಯಾಕ್ರೀ ನಿಮಗೆ ಒಂದ್ಸಾರಿ ಹೇಳಿದರೆ ಅರ್ಥ ಆಗೋದಿಲ್ವಾ? ಇವೆಲ್ಲಾ ಡೇಂಜರಸ್ ಸ್ಪಾಟ್ಸ್. ಹೆಚ್ಚು ಕಡಿಮೆಯಾದ್ರೆ ಯಾರು ಜವಾಬ್ದಾರರು?’ ದಬಾಯಿಸಿದ್ದಾರೆ ಹನುಮಂತರಾಯಪ್ಪ.
ಅವನೂ ಇಂಗ್ಲೀಷಿನಲ್ಲಿ ಸ್ಟೈಲ್ ಹೊಡೆದು ಕೊಂಡು ಜೊತೆಯಲ್ಲಿದ್ದ ಲಲನೆಯರೆದುರು ಏನೋ ಪೋಸ್ ಕೊಟ್ಟು ದೊಡ್ಡಸ್ತಿಕೆಯಲ್ಲಿ ಮಾತಾಡಿದ್ದಾನೆ.
ಮಾತಿಗೆ ಮಾತು ಬೆಳೆದಿದೆ.
ಹನುಮಂತ ರಾಯಪ್ಪನವರಿಗೆ ಅವನ ದೊಡ್ಡಸ್ತಿಕೆಯ ಇಂಗ್ಲೀಷ್ ಹೆಚ್ಚು ಉರಿಸಿದೆ. ವಾರದಿಂದ ನಿದ್ದೆಗೆಟ್ಟಿದ್ದ ಮನುಷ್ಯ. ಇವರೂ ರಪ್ಪೆಂದು ಕಾರಿನ ಟಾಪು , ಬಾನೆಟ್ಟಿನ ಮೇಲೆ ಲಾಠಿಯಿಂದ ಅಪ್ಪಳಿಸಿದ್ದಾರೆ. ಅವನನ್ನು ಆ ಹೆಂಗಸರೊಂದಿಗೆ ಠಾಣೆಗೆ ಎಳೆದು ತಂದಿದ್ದಾರೆ.
ಎಷ್ಟು ಪ್ರಭಾವಿಯಾಗಿದ್ದರೇನು? ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಮುಗಿಯಿತು. ಮುಖ ಮುಸಡಿ ನೋಡದೆ ಹಿಗ್ಗಾಮುಗ್ಗಾ ಲಾತಾ ಬೀಳುವುದು ಗ್ಯಾರಂಟಿ. ( ೧೯೮೬ ).
ನಾನು ರಾತ್ರಿ ಒಂದು ಗಂಟೆಗೆ ಠಾಣೆಗೆ ಹೋದಾಗ ಆ ಉದ್ಯಮಿ ಮತ್ತು ಹೆಂಗಸರು ನಡುಗುತ್ತಾ ಕುಳಿತಿದ್ದಾರೆ. ಅವನ ಮೈಮೇಲೆ ಬಾಸುಂಡೆ ಮೂಡಿವೆ.
ಆತ ನನಗೂ ಕೊಂಚ ಪರಿಚಿತನೇ. ಕಂಡವನೇ ತನ್ನ ದುಸ್ಥಿತಿ ಹೇಳಿಕೊಂಡ. ‘ಫೋನ್ ಕೂಡಾ ಮಾಡೋದಿಕ್ಕೆ ಬಿಟ್ಟಿಲ್ಲ. ತಾನೇನು ಅಂತ ತಪ್ಪು ಮಾಡಿರೋದು? ನಮ್ಮ ಫ್ಯಾಮಿಲಿ ಫ್ರೆಂಡ್ಸ್ ಈ ಲೇಡೀಸ್‌ನ ಮನೆಗೆ ಬಿಡೋದಿಕ್ಕೆ ಹೋಗ್ತಿದ್ದೆ. ಅಷ್ಟಕ್ಕೇ ಇಲ್ಲದ ಕ್ಯಾತೆ ತೆಗೆದು ಹಲ್ಲೆ ಮಾಡಿದ್ದಾರೆ. ಇದು ಸರಿಯೇ ?’ ಎಂದೆಲ್ಲಾ ನ್ಯಾಯ ಒಪ್ಪಿಸಿದ.
ಆತನ ದಯನೀಯ ಸ್ಥಿತಿ ನೋಡಿ ಕರುಣೆ ಬಂತು. ತಾಳ್ಮೆಗೆ ಹೆಸರಾದ ಹನುಮಂತರಾಯಪ್ಪ ಹಾಗೆ ಕಟುವಾಗಿ ವರ್ತಿಸುವವರೇ ಅಲ್ಲ. ಆದರೂ ಎಲ್ಲೋ ಏನೋ ಎಡವಟ್ಟಾಗಿದೆ. ನಿದ್ದೆಗೆಟ್ಟು ಬುದ್ದಿಗೆಟ್ಟ ಪರಿಸ್ಥಿತಿ.
ವೈರ್‌ಲೆಸ್‌ನಲ್ಲಿ ಠಾಣೆಗೆ ಬರುವಂತೆ ಕರೆ ನೀಡಿದೆ. ದೂರದಲ್ಲೆಲ್ಲೋ ಗಸ್ತಿನಲ್ಲಿದ್ದ ಅವರು ಇಪ್ಪತ್ತು ನಿಮಿಷದೊಳಗೆ ಠಾಣೆಗೆ ಬಂದರು. ಆತನ ಏಕವಚನದ ಶೈಲಿಯ ಹೆಡಸಿನ ಮಾತು ಮತ್ತು ಗಲ್ಲಿ ಇಂಗ್ಲೀಷ್ ರೊಚ್ಚಿಗೇಳಲು ಕಾರಣವೆಂದು ಗೊತ್ತಾಯಿತು.
ಆತ ಮೇಲಧಿಕಾರಿ, ಮಂತ್ರಿಗಳವರೆಗೂ ದೂರು ನೀಡಲು ಸಜ್ಜಾಗಿದ್ದ. ಬರೀ ಸಸ್ಪೆಂಡಲ್ಲ. ಡಿಸ್ಮಿಸ್ ಮಾಡುಸ್ತೀನಿ ಎಂದೆಲ್ಲಾ ಕೂಗಾಡಿದ್ದ. ಅವನ ಮೈಮೇಲಿನ ಬಾಸುಂಡೆಗಳು , ಕಾರು ಜಖಂ ಪೊಲೀಸ್ ದೌರ್ಜನ್ಯಕ್ಕೆ ನೇರ ಸಾಕ್ಷಿಯಾಗಿದ್ದವು.
ಪೊಲೀಸರಿಗೆ ಇದ್ದದ್ದು ಒಂದೇ ಒಂದು ಸಮರ್ಥನೆ. ಕರ್ಫ್ಯೂ ಉಲ್ಲಂಘಿಸಿ ತಮ್ಮ ಮೇಲೆ ಅವನೇ ಹಲ್ಲೆ ಮಾಡಲು ಬಂದಿದ್ದ!. be offensive to defend yourself!
ಅವನು ಯಾವಾಗ ಮಂತ್ರಿಗಳ ಹೆಸರು ಹೇಳಿ ಪಾಠ ಕಲಿಸ್ತೀನಿ ಅಂದನೋ ? ಹನುಮಂತ ರಾಯಪ್ಪ ಅಲರ್ಟ್ ಆಗಿಬಿಟ್ಟರು. ಆ ಮಂತ್ರಿಗಳು ಅವನಿಗೆ ಸೇರಿದ್ದ ಐಷಾರಾಮಿ ಹೋಟೆಲ್‌ನಲ್ಲಿ ಉಳಿಯುವುದು ಗೊತ್ತಿದ್ದ ಸಂಗತಿ. ಏನೋ ಒಂದು ಖಾಜೀ ನ್ಯಾಯ ಮಾಡಿ ಕಳಿಸೋಣ ಅಂದು ಕೊಂಡದ್ದು ವಿಪರೀತಕ್ಕೆ ಬಂದಿತ್ತು. ಅವನೀಗ ತುಳಿಸಿಕೊಂಡ ಹಾವು. ಕಚ್ಚದೆ ಬಿಡಲಾರ!. ಸಸ್ಪೆಂಡ್ ಮಾಡಿಸದೆ ಇರಲಾರ.
‘ಡ್ಯೂಟಿ ಮೇಲಿದ್ದ ಪೋಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಮೆಡಿಕಲ್ ಮಾಡಿಸಿ , ಸೆಕ್ಷನ್ ೩೫೩ ಐಪಿಸಿ ರೀತಿ ಕೇಸು ಜಡೀತೀನಿ. ಪೊಲೀಸ್ ಅಂದ್ರೆ ಏನೂ ಅಂತ ತೋರಿಸ್ತೀನಿ. ಇನ್ನೊಂದು ವಾರ ಈ ನನ್ಮಗ ಜೈಲಲ್ಲಿ ಬಿದ್ದಿರಬೇಕು ಹಾಗೆ ಮಾಡ್ತೀನಿ. ದುಡ್ಡಿನ ದೊಡ್ಡಸ್ತಿಕೆ ತೋರುಸ್ತೀಯೇನೋ ಭೋಸುಡಿಕೆ? ಕಾರಲ್ಲಿ ಬಂದು ಕಾರುಬಾರು ಮಾಡ್ತೀಯಾ? ಈ ಕಾರನ್ನ ತಲೇ ಮೇಲೆ ಹೊತ್ಕೊಂಡು ಹೋಗ್ಬೇಕು ಹಂಗ್ ಮಾಡ್ತೀನಿ’ ಎಂದೆಲ್ಲಾ ಅಬ್ಬರಿಸಿದರು.
ಇಬ್ಬರು ಕಾನ್ಸ್ಟೇಬಲ್ ಗಳಿಗೆ ಏಟು ಬಿದ್ದಿದೆ ಎಂದು ಮೆಮೋ ಬರೆದು ಮೆಡಿಕಲ್ ಟೆಸ್ಟಿಗೆ ಕಳಿಸೇಬಿಟ್ಟರು. ಕೇಸು ರಿಜಿಸ್ಟರ್ ಮಾಡಲು ಮುಂದಾದರು. ಅವರ ರೌದ್ರಾವತಾರ ನೋಡಿ ನನಗೆ ಮಾತಾಡಲು ಬಾಯೇ ಬರಲಿಲ್ಲ.
ಅವರು ಕೇಸು ರಿಜಿಸ್ಟರ್ ಮಾಡಲು ರಿಪೋರ್ಟ್ ಬರೆಯ ತೊಡಗಿದರು.
ಈ ಉದ್ಯಮಿಯನ್ನು ನನ್ನ ಛೇಂಬರಿಗೆ ಕರೆಸಿದೆ. ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರಲ್ಲಾ? ಏನೋ ರಾಜಿ ಮಾಡಿಸಿ ಕಳಿಸೋಣ ಅಂದರೆ ಸಸ್ಪೆಂಡ್ ಮಾಡಿಸ್ತೀನಿ ಡಿಸ್ ಮಿಸ್ ಮಾಡಿಸ್ತೀನಿ ಅಂತೀರಲ್ರೀ? ನಿಮಗೇನಾದ್ರೂ ಬುದ್ದಿಗಿದ್ದಿ ಇದೆಯಾ?’ ಎಂದು ಹಿತೈಷಿಯಂತೆ ದಬಾಯಿಸಿದೆ. ಅವನೂ ತನ್ನ ನ್ಯಾಯ ಹೇಳಿಕೊಂಡು ಮಾತಾಡಿದ.
‘ನೋಡೀ ಇದು ಕರ್ಫ್ಯೂ ಟೈಮು. ಅವರು ಏನು ರಿಪೋರ್ಟ್ ಬರೀತಾರೋ ಅದೇ ಕಚ್ಚಿಕೊಳ್ಳುತ್ತೆ. ಹೀಗೆ ನೀವೇ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಲ್ಲದೆ , ಕಾರಿನ ಗಾಜನ್ನೂ ನೀವೇ ಒಡೆದು ಹಾಕಿ ನಿಮ್ಮನ್ನೆಲ್ಲಾ ಸಸ್ಪೆಂಡ್ ಮಾಡುಸ್ತೀನಿ ಕೂಗಾಡಿದಿರಿ ಅಂತ ರಿಪೋರ್ಟ್ ಬರೀತಾ ಇದ್ದಾರೆ. ಹಾಗೆಲ್ಲಾ ನೀವು ಮಾತಾಡಬಾರದಿತ್ತು. ಪೊಲೀಸ್ನೋರ ವಿರುದ್ಧ ಹೋದ್ರೆ ಮಾಡಬಾರದ್ದನ್ನೆಲ್ಲಾ ಮಾಡ್ತಾರೆ. ವ್ಯವಾರಸ್ತರಾಗಿ ನಿಮಗೆ ಇಷ್ಟೂ ಗೊತ್ತಾಗಲಿಲ್ಲವೇ?’ ಎಂದು ಆಕ್ಷೇಪಿಸಿದೆ.
‘
ನನ್ನ ಕಾರಿನ ಗಾಜನ್ನು ನಾನ್ಯಾಕೆ ಒಡೆಯಲಿ ಸಾರ್ !’ನೀವೇನು ಒಡೆದಿಲ್ಲ. ನೀವೇ ಬೇಕಂತ ಒಡೆದು ಹಾಕಿದ್ರಿ ಅಂತ ಈಗ ಒಡೆದು ಹಾಕ್ತಾರೆ !’ ಆತನಂತೂ ನಡುಗಿ ಹೋದ. ಏನೋ ಟೆನ್ಷನ್‌ನಲ್ಲಿ ಹಾಗೆ ಮಾತಾಡಿಬಿಟ್ಟೆ. being a business man ಇದಕ್ಕೆಲ್ಲ
ನಾನು ಹೋಗೋದಿಲ್ಲ. ಏನೋ ಒಂದು ಸೆಟಲ್‌ಮೆಂಟ್ ಮಾಡಿಸಿಬಿಡಿ ಎಂದು ದುಂಬಾಲು ಬಿದ್ದ. ಆ ಹೆಂಗಸರೂ ಕೇಳಿಕೊಂಡರು. ‘
ನಾನೇನೋ sincere ಆಗಿ ಟ್ರೈ ಮಾಡ್ತೀನಿ. ರಾಜಿಯಾಗಿ ಹೋದ್ಮೇಲೆ ನೀವು ಮಂತ್ರಿ ಹತ್ರ ಹೋಗೋದು ಅಲ್ಲಿ ಇಲ್ಲಿ ಲೂಸಾಗಿ ಮಾತಾಡೋದು ಮಾಡಿದ್ರೆ ನಾನು ಇಲ್ಲಿ ಪೊಲೀಸ್ನೋರ ಹತ್ತಿರ ನಿಷ್ಠುರ ಆಗ್ಬೇಕಾಗುತ್ತೆ.
ಆಗಬಾರದ್ದು ಆಗಿ ಹೋಗಿದೆ. ಇದು ಇಲ್ಲಿಗೆ , ಈಗಲೇ ಸ್ಟಾಪ್ ಆಗ್ಬೇಕು. ಹಾಗಿದ್ರೆ ಮಾತ್ರ ನಾನು ಮಧ್ಯೆ ಮಾತಾಡ್ತೀನಿ. ಇಲ್ಲದಿದ್ದರೆ ಮಾತಾಡೋದಿಲ್ಲ.’ ಕಠಿಣವಾಗಿ ಹೇಳಿದೆ.
ಆ ಹೆಂಗಸರು ತಾವು ಗ್ಯಾರಂಟಿ ಕೊಡ್ತೀವಿ. ಇದನ್ನು ಬೆಳೆಸೋದಿಕ್ಕೆ ಬಿಡೋದಿಲ್ಲ. ನೀವು ಜವಾಬ್ದಾರಿ ತಗೊಳ್ಳಿ ಸಾರ್ ಎಂದು ಕೇಳಿಕೊಂಡರು.
ಹನುಮಂತರಾಯಪ್ಪನವರೊಂದಿಗೆ ವಾದ ವಿವಾದ ಮಾಡಿದಂತೆ ಮಾಡಿ ಕೇಸೆಲ್ಲಾ ಬೇಡ ಇಲ್ಲಿಗೇ ಕೈ ಬಿಡುವಂತೆ ಕೇಳಿಕೊಂಡು ಒಪ್ಪಿಸಿದೆ.
ನಮ್ಮ ಸಂಭಾಷಣೆ ಎಲ್ಲವೂ ಹೊರಗಡೆಯಿದ್ದ ಅವರಿಗೆ ಚೆನ್ನಾಗಿ ಕೇಳಿಸುತ್ತಿತ್ತು.
ಅಷ್ಟರಲ್ಲಿ ಮೆಡಿಕಲ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದ ಪೊಲೀಸರೂ ವಾಪಸ್ ಬಂದರು.
‘ಮೆಡಿಕಲ್ ಆಗಿದೆ. acknowledgement ತಂದಿದ್ದಾರೆ. ನಾನು ಕೇಸು ಮಾಡದೆ ವಿಧಿಯಿಲ್ಲ’ ಎಂದು ಹನುಮಂತರಾಯಪ್ಪ ಹಠ ಹಿಡಿದರು.
ಪುನಃ ಅವರನ್ನು ಸಂತೈಸಿ ಕೇಸು ರಿಜಿಸ್ಟರ್ ಮಾಡಿಸದಂತೆ ತಡೆಹಿಡಿಸಿದೆ. ‘
ಆಯ್ತು. ನಾನೂ ಮುಂದುವರೆಯೋಲ್ಲ. ಆದರೆ ಈ ಮೆಡಿಕಲ್ ರಿಪೋರ್ಟ್ ಇರೋದರಿಂದ ಯಾವತ್ತಾದರೂ ಕೇಸು rake up ಮಾಡೋದಿಕ್ಕೆ ಅವಕಾಶವಿದೆ. ಅವರೂ ಏನೂ ಮಾಡಕೂಡದು . ಇದು ನನ್ನ ಕಂಡೀಷನ್!’ ಕಟ್ಟುನಿಟ್ಟಾಗಿ ಹನುಮಂತರಾಯಪ್ಪ ಹೇಳಿದರು.
ಇಬ್ಬರಿಗೂ ಕೈ ಕುಲುಕಿಸಿದೆ.
ಅಷ್ಟರಲ್ಲಿ ರಾತ್ರಿ ಮೂರು ಗಂಟೆ ಮೀರಿತ್ತು.ರಾಜಿ ಮಾಡಿಕೊಳ್ಳದೆ ಆವತ್ತು ಉಳಿಗಾಲವಿರಲಿಲ್ಲ.
ನಾವಿಬ್ಬರೂ ಒಳಗೊಳಗೇ ನಕ್ಕು ನಿಟ್ಟುಸಿರು ಬಿಟ್ಟೆವು. ಪೊಲೀಸಿನಲ್ಲಿ ಇದಕ್ಕೆ ಹಾವು ಬಿಡೋದು ಅನ್ನುತ್ತಾರೆ.
ಅದೇ ಕೊನೆ. ನಂತರದಲ್ಲಿ ಆ ಉದ್ಯಮಿ ಕ್ಲೋಸ್ ಫ್ರೆಂಡಾಗಿ ಬಿಟ್ಟ. ಅವನ ಮನೆಯಲ್ಲಿ ಯಾವುದೇ ಶುಭ ಸಮಾರಂಭವಿರಲಿ ನಮಗೊಂದು ಖಾಯಂ ಆಹ್ವಾನವಿರುತ್ತಿತ್ತು.
‘ಇವರು ಇಷ್ಟು ಡೀಸೆಂಟ್ ಅಂತ ಗೊತ್ತೇ ಇರ್ಲಿಲ್ಲ ’ ಎಂದು ಆ ಉದ್ಯಮಿ ಆಗಾಗ್ಗೆ ಉದ್ಗರಿಸುತ್ತಿದ್ದ.
ವಾರಗಟ್ಲೆ ನೀವೂ ನಿದ್ದೆ ಬಿಟ್ಟು ನೋಡಿ’ ಎನ್ನುತ್ತಿದ್ದೆ!!