‘ಮುದ್ದುರಾಮನ ಮನಸು’ ಕವಿ ಕೆ.ಸಿ. ಶಿವಪ್ಪ ಅವರು ಜುಲೈ ೨೬ ರಂದು ೮೫ಕ್ಕೆ ಕಾಲಿಟ್ಟರು. ಸದಾಚಟುವಟಿಕೆಯಿಂದಕೂಡಿ ಮುಗ್ಧತೆಯೇ ಮೂರ್ತಿವೆತ್ತಂತಿರುವ ಕವಿ ಚಾಮರಾಜನಗರ ಜಿಲ್ಲೆಯ ‘ಹೆಮ್ಮೆಯಕುವರ’. ಅಲ್ಲಿಯ ಸಂತ ಮಹಂತರ ನೆರಳು ತಾಕಿದವರು. ಕಿರುವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯಕಣ್ಣರಿಕೆಯಲ್ಲಿ ಬೆಳೆದವರು. ಪ್ರಸಾರಾಂಗ ಮತ್ತು ಮುದ್ರಣಾಲಯದ ನಿರ್ದೇಶಕರಾಗಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅಪರೂಪದ ಯೋಜನೆಗಳನ್ನು ರೂಪಿಸಿ ಬೆಂಗಳೂರು ಪ್ರಸಾರಾಂಗವನ್ನು ಉನ್ನತೀಕರಿಸಿದವರು.
ಬೆಂಗಳೂರು ವಿಶ್ವವಿದ್ಯಾಲಯದ ಅಂದಿನ ಕುಲಪತಿ ಎಚ್.ನರಸಿಂಹಯ್ಯನವರೊಂದಿಗೆ ಒಳ್ಳೆಯ ಒಡನಾಟ ಹಾಗೂ ಕವಿ ಜಿ.ಎಸ್.ಶಿವರುದ್ರಪ್ಪನವರ ನಿಕಟ ಸಂಪರ್ಕ ಇವೆಲ್ಲದರಿಂದ ವೈಚಾರಿಕ ಮನೋಭಾವ ಮತ್ತು ಸಂವೇದನಾಶೀಲ ಕವಿ ಹೃದಯ ಮತ್ತಷ್ಟು ಸ್ಫುಟಗೊಂಡ ಹದವಾದ ಜೀವನ ಅವರದು. ಈಗಲೂ ಅವರು ಎಳೆಯ ಹುಡುಗರಂತೆ ಓಡಾಡುತ್ತಾ ಇರುವ ಚೆಂದ ಕಣ್ಣಿಗೆ ಹಬ್ಬ. ಅವರೊಳಗಿನ ಕವಿ ಇನ್ನೂ ಪುಟಗೊಳ್ಳುತ್ತಲೇ ಇರುವುದು ಸಂತಸದ ವಿಷಯ. ಕವಿಯೊಳಗಿರುವ ಮಗುವಿನ ಮುಗ್ಧ ನಿರ್ಮಲ ಮನಸ್ಸು ಸದಾ ಸಕಲರಿಗೂ ಒಳಿತನ್ನು ಬಯಸುತ್ತದೆ. ಜೀವನವನ್ನು ಸ್ವೀಕರಿಸು ಎಂಬ ಕರೆಯನ್ನುಕೊಡುತ್ತದೆ. ಸೃಷ್ಟಿಯ ವೈಚಿತ್ರ್ಯಗಳಿಗೆ ಬೆರಗುಗಣ್ಣಿನ ನೋಟವಿದೆ. ಇರುವುದರಲ್ಲಿ ಆನಂದವಿದೆ. ಹೊರಗೆ ನಡೆವ ವಿದ್ಯಮಾನಗಳಲ್ಲಿ ಒಳ್ಳೆಯದನ್ನು ಹಿಡಿಯುವ ಮೆಚ್ಚುವ ಉಲ್ಲಸಿತಗೊಳ್ಳುವ ಮನಸ್ಸು ಈ ಮುದ್ದುರಾಮನದು.
ಸಾಮಾನ್ಯವಾಗಿ ಮುದ್ದುಕೃಷ್ಣನ ಬಗೆಗೆ ಒಲವಿರುವವರು ಸಾಕಷ್ಟು ಜನ. ಆದರೆ ಈ ಕವಿಗೆ ಮುದ್ದುರಾಮನ ಮೇಲೆ ಅಗಾಧ ಖಂಡಿತ ಪ್ರೀತಿ. ಮುದ್ದುರಾಮನ ಹೆಸರಿನಲ್ಲಿ ಬರೆದ ಚೌಪದಿಗಳಲ್ಲೆಲ್ಲ ಪ್ರೀತಿಧಾರೆಯಾಗಿ ಹರಿದಿದೆ. ಪ್ರಕೃತಿಯಲ್ಲಿ ನಡೆವ ವಿದ್ಯಮಾನಗಳೆಲ್ಲ ಜೀವನವನ್ನು ರೂಪಿಸುವ ಶಿಲ್ಪಿಗಳಾಗಿ ಜೀವನವನ್ನು ಬೆಳಗಿಸುವ ದಾರಿದೀಪಗಳಾಗಿ ಕಾಣುವುದು. ಕವಿಗೆ ದೈವದ ಇರುವಿಕೆಯಲ್ಲಿ ನಂಬುಗೆಯಿದೆ. ಆ ದೈವವನ್ನವರು ಪ್ರಕೃತಿಯ ಕಣಕಣದಲ್ಲೂ ಕಾಣುತ್ತಾರೆ. ದೈವಕ್ಕೊಂದು ನಿಶ್ಚಿತ ರೂಪಆಕಾರವನ್ನು ಕೊಡದೇ ಒಲವು, ಚೆಲುವುಗಳೇ ದೈವದ ಅಸ್ತಿತ್ವವನ್ನು ಸಾರುತ್ತವೆಎಂದು ನಂಬಿದ್ದಾರೆ.
ಆಕಾಶ ತುಂಬೆಲ್ಲ ಬೆಳದಿಂಗಳಿನ ಸೋನೆ
ಮಾವುಚಿಗುರಿನ ಪುಲಕ ತೋಟದಲ್ಲೆಲ್ಲ
ಕಮಲ ಕಲ್ಯಾಣಿಯಲಿ ಮರಿದುಂಬಿ ಝೇಂಕಾರ
ದೈವನಗೆ ಇದೆ ತಾನೆ ? – ಮುದ್ದುರಾಮ
ಹೀಗೆ ಚೆಲುವಿರುವೆಡೆಯಲ್ಲೆಲ್ಲ ದೈವ ಸಾಕ್ಷಾತ್ಕಾರ ಪಡೆವ ಮನಸು ಮುದ್ದುರಾಮನದು.
ಈ ಮುದ್ದುರಾಮ ಆಶಾವಾದಿ ಕದವೊಂದು ಮುಚ್ಚಿದರೆ ತೆರೆಯುವುದು ಮತ್ತೊಂದು ಕೊನೆಯೆಲ್ಲಿ ರಸಸೆಲೆಗೆ ‘ಮುದ್ದುರಾಮ’ ಎಂಬ ಆಶಾವಾದ ಹೆಜ್ಜೆ ಹೆಜ್ಜೆಗೂ ಕಾಣುತ್ತದೆ. ಇಂಥ ಆಶಾವಾದವಿಲ್ಲದಿದ್ದರೆ ಬದುಕು ದುರ್ಭರವಾಗುತ್ತದೆ. ಈ ಆಶಾವಾದಕ್ಕೆ ಒಂದು ನಂಬುಗೆ ಬೇಕು. ಈ ನಂಬುಗೆಯೇ ಜೀವನದ ಸಂಕಷ್ಟಗಳನ್ನು ಎದುರಿಸುವ ಗುರಾಣಿಯಾಗುತ್ತದೆ. ಬದುಕನ್ನು ಸ್ವೀಕರಿಸುವ ಮನೋಭಾವವನ್ನು ಮೂಡಿಸುತ್ತದೆ ಮತ್ತು ಅತ್ಮಸ್ಥೈರ್ಯವನ್ನು ತುಂಬುತ್ತದೆ.
‘ಮುದ್ದುರಾಮನ ಮನಸು’ ಎಂಬ ಈ ಕೃತಿ ೨೦೦೩ರಲ್ಲಿ ಮೊದಲಬಾರಿಗೆ ಬೆಳಕು ಕಂಡಿದ್ದು ೨೦೨೨ರ ಹೊತ್ತಿಗೆ ೭ ಸಲ ಮರುಮುದ್ರಣವಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಪಾಕೆಟ್ ಬುಕ್ ಸೈಜಿನ ಈ ಕಿರುಹೊತ್ತಿಗೆಯಲ್ಲಿ೧೧೦೧ ಚೌಪದಿಗಳಿವೆ. ಇಲ್ಲಿಯ ಚೌಪದಿಗಳನ್ನು ವಿಷಯಾನುಗುಣವಾಗಿ ವರ್ಗೀಕರಿಸಿದ್ದು ಅಲ್ಲಿ ಆಶಾವಾದತುಂಬಿ ತುಳುಕುತ್ತದೆ. ಅದು ಓದುಗರ ಮನಸ್ಸಿಗೂ ಆಶಾವಾದದ ಸೆಲೆಯನ್ನು ಹರಿಯಿಸುತ್ತದೆ.
ಪರಿವಿಡಿಯ ಭಾಗದ ಶೀರ್ಷಿಕೆಗಳನ್ನು ನೋಡಿದರೆ ಈ ಮಾತು ಮನದಟ್ಟಾಗುತ್ತದೆ.
ಗುರುವೆನಗೆ ಶ್ರೀರಕ್ಷೆ, ಬದುಕಿಗುತ್ತರವಿದೆಯೆ, ಸೃಷ್ಟಿ ಕೌತುಕದೊಡಲು ಆ ಬೆಳಕು ನಿಬ್ಬೆರಗು, ಪೂರ್ಣತೆಯೆ ಪರಮ ಕಲೆ, ವಿಧಿ ಬಾಳಕುಂಬಾರ, ಇಂದು ನಾಳೆಗೆ ನಾಂದಿ, ಸಾವೆಂದರೇಕೆ ಭಯ, ಅರಿವೆ ಸಾಕ್ಷಾತ್ಕಾರ, ಮನಸೊಂದುಉದ್ಯಾನ, ಚೆಲುವು ಪ್ರಕೃತಿಯಕೊಡುಗೆ, ನಗೆ ಜೀವದುಲ್ಲಾಸ ಎಂಬ ಈ ಶೀರ್ಷಿಕೆಗಳು ಓದುಗರಲ್ಲಿಉಲ್ಲಾಸವನ್ನುಉತ್ಸಾಹವನ್ನುಉಕ್ಕಿಸುತ್ತವೆಯೆಂಬುದು ಮುಖ್ಯ. ಜೀವನವೆಂದರೆಕತ್ತಲು ಬೆಳಕಿನಾಟ ನಿಜ. ಆದರೆಕತ್ತಲೆ ಬಂತೆಂದು ನಿರಾಶೆಯಲ್ಲಿಕೈಚೆಲ್ಲುವುದಕ್ಕಿಂತ ಬೆಳಕು ಬರುತ್ತದೆ ಎಂಬ ನಂಬಿಕೆ ನಿರೀಕ್ಷೆಯಲ್ಲಿಜೀವನದಗೆಲುವಿದೆಯೆಂಬುದನ್ನು ಈ ಚೌಪದಗಳು ಸಾರುತ್ತವೆ.
ನಂಬಿ ನಾಳಿನ ಸೊಗಸ ಬದುಕುವುದು ಈ ಜೀವ
ಭರವಸೆಯೆ ಇಲ್ಲದಿರೆ ಬಾಳು ನಿಸ್ಸಾರ
ಎಂಬಲ್ಲಿ ನಂಬಿಕೆಯೇ ಜೀವನದ ಬಹು ದೊಡ್ಡ ಆಧಾರವೆಂಬುದನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಡುವ ಮನಸು ಮುದ್ದುರಾಮನದು.
ನೆನಪಿನ ಬಗೆಗೆ ಕವಿಯ ಅಂಬೋಣ ಹೀಗಿದೆ-
ಇಡು ನೆನಪಿನಾಭರಣ ಪ್ರೀತಿ ಪೆಟ್ಟಿಗೆಯಲ್ಲಿ
ಕಾಪಾಡುಕಣ್ಣಿಟ್ಟು ಬಲು ಜತನದಿಂದ
ಮರೆತರಿದೆಅನುತಾಪಇಲ್ಲ ಬೆಳಕಿನ ಶೋಭೆ
ಭಾವದಂಕಿತ ನೆನಪು – ಮುದ್ದುರಾಮ
ನೆನೆಪನ್ನು ಭಾವದಂಕಿತ ಎಂದು ಹೊಸನೆಲೆಯಲ್ಲಿ ಕರೆದು ಗೌರವಿಸುವುದು, ನೆನಪುಗಳು ಅತ್ಯಂತ ಅಮೂಲ್ಯ, ಜೀವನಕ್ಕೆ ಭರವಸೆಯನ್ನು ಬೆಳಕನ್ನು ತುಂಬುವಂತವು. ನೆನಪಿಲ್ಲದಿದ್ದರೆ ಜೀವನವೇ ನಿಸ್ಸಾರವೆಂಬ ಭಾವ ಈ ಚೌಪದದ್ದು.
ಭಾರವಿಲ್ಲದ ಹಗುರ ನಡೆಯ ಚೌಪದಿಗಳಿವು. ಅತ್ಯಂತ ನವುರಾದ ಭಾಷೆಯಲ್ಲಿ ವಿಷಯ ಮುಟ್ಟಿಸುವ ಕಲೆ ಕವಿಗೆ ಸಿದ್ಧಿಸಿದೆ. ಅವರ ನಡಿಗೆಯಲ್ಲಿನ ಚಟುಲತೆ ಹಗುರತೆ ಚೌಪದಿಯ ನಡೆಯಲ್ಲಿಯೂ ಕಾಣುತ್ತದೆ.
ಈ ಕವಿ ೮೫ ವರ್ಷ ಪೂರೈಸುತ್ತಿರುವ ಈ ಹೊತ್ತಿನಲ್ಲಿ ಅವರಿಗೆ ಶುಭದ ಹಾರೈಕೆ. ಅವರಿಗೆಆಯಸ್ಸುಆರೋಗ್ಯ ವೃದ್ಧಿಸು ಎಂದು ಆ ಋತದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ.