Mysore
21
broken clouds

Social Media

ಸೋಮವಾರ, 13 ಜನವರಿ 2025
Light
Dark

ವೈಡ್‌ ಆಂಗಲ್‌ : ಮನರಂಜನೋದ್ಯಮದಲ್ಲಿ ‘ಅನ್ನದಾತ’ರೂ ಅವರ ಸಂಘಟನೆಗಳೂ

ಬಾನಾಸುಬ್ರಮಣ್ಯ

ಸೃಜನಶೀಲತೆ ಮೆರೆಯಬೇಕಾದ ಕಿರುತೆರೆ, ಸಿನಿಮಾ ರಂಗಗಳು ವಿವಾದಗಳಿಂದ ಹೊರ ಬಂದು ಹೊಸ ಸಾಧ್ಯತೆಗಳಿಗೆ ಮುಖಮಾಡಬೇಕಿದೆ!

ಚಲನಚಿತ್ರನಿರ್ಮಾಪಕರನ್ನು ಡಾ. ರಾಜಕುಮಾರ್ ‘ಅನ್ನದಾತ’ರು ಎಂದು ಗೌರವ ನೀಡಿದರು. ಅಭಿಮಾನಿಗಳನ್ನು ‘ದೇವರು’ಗಳೆಂದರು. ಕನ್ನಡ ಚಿತ್ರ ನಿರ್ಮಾಪಕರು ತಮ್ಮದೇ ಆದ ಸಂಘವನ್ನು ಸ್ಥಾಪಿಸಿಕೊಂಡಿದ್ದಾರೆ. ೧೯೮೨ರಲ್ಲಿ ಆರಂಭವಾದ ಈ ಸಂಘ ಮೊದಲ ವರ್ಷಗಳಲ್ಲಿ ನಿರ್ಮಾಪಕರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನುಹಮ್ಮಿಕೊಂಡದ್ದಿದೆ. ಅಧ್ಯಕ್ಷರ ಸ್ವಂತ ಕಚೇರಿಯೆ ಸಂಘದ ವಿಳಾಸವೂ ಆಗಿದ್ದ ದಿನಗಳವು. ಇದೀಗ ಕಾರ್ಡ್ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿರುವ ಸಂಘ, ಶಿವಾನಂದ ವೃತ್ತದ ಬಳಿಯಲ್ಲಿ ಸ್ವಂತ ಕಟ್ಟಡ ಸಿದ್ಧವಾಗುತ್ತಲೇ ಅಲ್ಲಿ ಕಾರ್ಯನಿರ್ವಹಿಸಲಿದೆ.
ಹೊಸ ಭಾರವಾಹಿಗಳು ಹೊಸ ಉತ್ಸಾಹದಿಂದ ಕಾರ್ಯೋನ್ಮುಖರಾಗಿದ್ದಾರೆ.
ಹೊಸ ಪದಾಧಿಕಾರಿಗಳಲ್ಲಿ ಅಧ್ಯಕ್ಷರು ಮಾತ್ರ ಬದಲಾಗಿದ್ದಾರೆ. ಉಮೇಶ ಬಣಕಾರ್ ಅಧ್ಯಕ್ಷರು. ಹಿಂದಿನ ಅಧ್ಯಕ್ಷರಾಗಿದ್ದ ಡಿ ಕೆ ರಾಮಕೃಷ್ಣ ಉರುಫ್ ಪ್ರವೀಣ ಕುಮಾರ್ ಈಗ ಗೌರವ ಕಾರ್ಯದರ್ಶಿ. ಉಪಾಧ್ಯಕ್ಷ ಎಂ.ಜಿ. ರಾಮಮೂರ್ತಿ, ಜಂಟಿ ಕಾರ್ಯದರ್ಶಿ ರಮೇಶ್ ಯಾದವ್ ಮತ್ತು ಖಜಾಂಚಿ ಆರ್.ಎಸ್. ಗೌಡ ಅವರ ಸ್ಥಾನ ಅಬಾಧಿತ. ಅವಿರೋ ಆಯ್ಕೆ ಅವರದು.

ನಿರ್ಮಾಪಕರ ಸಂಘದ ಚುನಾವಣೆ, ನ್ಯಾಯಾಲಯದ ಆದೇಶದಂತೆ ಆಯಿತು, ಶುಕ್ರವಾರ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಚುನಾವಣೆ ಇಲ್ಲ ಎಂದ ಸಂಘ, ಭಾನುವಾರ ಮತ್ತೆ ಜಾಹೀರಾತು ನೀಡಿ, ನ್ಯಾಯಾಲಯದ ಆದೇಶದಂತೆ ಸರ್ವಸದಸ್ಯರ ಸಭೆಯ ಜೊತೆ ಚುನಾವಣೆಯೂ ನಡೆಯಲಿದೆ ಎಂದಿತು. ಚುನಾವಣೆಯೂ ನಡೆಯಿತೆನ್ನಿ.
ಹೊಸ ಆಡಳಿತ ವರ್ಗ ಈ ವರ್ಷ ತಾನು ಮಾಡಲಿರುವ ಕೆಲಸಗಳ ಕುರಿತಂತೆ ಹೇಳಲು ಪತ್ರಿಕಾಗೋಷ್ಠಿ ಕರೆದಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಹೊಸ ಚುನಾಯಿತ ಆಡಳಿತ ವರ್ಗ ಬಂದಿದೆ. ಆದರೆ ಅದು ಈ ತನಕ ತನ್ನ ಕಾರ್ಯಕ್ರಮಗಳ ಕುರಿತಂತೆ ಹೇಳಿಲ್ಲ.

ನಿರ್ಮಾಪಕರ ಸಂಘ ಹಾಕಿ ಕೊಂಡಿರುವ ಈ ವರ್ಷದ ಕಾರ್ಯಕ್ರಮಗಳಲ್ಲಿ, ಸಂಘದ ಕಟ್ಟಡ ಪೂರ್ಣಗೊಳಿಸುವುದು ಮೊದಲನೆಯದು. ನಿರ್ಮಾಪಕ ರಮೇಶ್ ರೆಡ್ಡಿಯವರು ಅತಿಕಡಿಮೆ ಮೊತ್ತಕ್ಕೆ ಕಟ್ಟಡ ನಿರ್ಮಿಸಿಕೊಡಲಿದ್ದಾರಂತೆ. ನಿರ್ಮಾಪಕರಿಗೆ ಸಂಘದ ಕಲ್ಯಾಣ ನಿಧಿಯಿಂದ ಹೆಚ್ಚು ನೆರವು ನೀಡುವ ಯೋಜನೆ ಇನ್ನೊಂದು.
ಚಿತ್ರಗಳ ಪ್ರದರ್ಶನ ವ್ಯವಸ್ಥೆ ಮಾಡಿ ಕೊಡುವ ಯುಎಫ್‌ಒ ಮತ್ತು ಕ್ಯೂಬ್‌ಗಳು ವಿಧಿಸುವ ಶುಲ್ಕ ದುಬಾರಿಯಾಗಿದ್ದು, ಈ ನಿಟ್ಟಿನಲ್ಲಿ ಅವುಗಳ ಜೊತೆ ಮಾತುಕತೆ, ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗುವ ಯೋಜನೆ ಮತ್ತೊಂದು.

ಸಹಾಯ ಧನ ಮತ್ತು ಪ್ರಶಸ್ತಿಗಳನ್ನು ಆಯಾ ವರ್ಷದ ಅವಧಿಯಲ್ಲೇ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ಮತು ಸಹಾಯಧನ ನೀಡಲು ಆಗುತ್ತಿದೆ ಎನ್ನಲಾಗಿರುವ ಲಂಚಗುಳಿತನ ತಡೆಯಲು ಬೇಕಾದ ಕ್ರಮ ಕೈಗೊಳ್ಳುವುದು ಸಂಘದ ಉದ್ದೇಶ. ಈ ಸಮಿತಿಗಳಲ್ಲಿ ನಿರ್ಮಾಪಕರೂ ಸದಸ್ಯರಾಗಿ ಇರುತ್ತಾರೆನ್ನಿ!
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ, ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗಾಗಿ ರೂ.೫೦೦ ಕೋಟಿ ಮೀಸಲಿಡುವುದಾಗಿ ಮುಂಗಡಪತ್ರದಲ್ಲಿ ಹೇಳಿದ್ದರು. ಆ ಕುರಿತಂತೆ ನಿರ್ಮಾಪಕರ ಸಂಘ ಒತ್ತಾಯಿಸಿ, ಚಿತ್ರನಗರಿ ಸ್ಥಾಪನೆಗೆ ಒತ್ತಾಸೆಯಾಗುವ ಯೋಚನೆ ಇದೆ. ಕಂಠೀರವ ಸ್ಟುಡಿಯೊದಲ್ಲಿ ಈಗ ಇರುವ ಚಿತ್ರೀಕರಣ ಅಂಗಣಗಳಲ್ಲಿ ಕಿರುತೆರೆ ಧಾರಾವಾಹಿಗ ಚಿತ್ರೀಕರಣ ನಡೆಯುತ್ತಿರುವುದರಿಂದ ಅಲ್ಲಿ ಇನ್ನೂ ಮೂರು ಅಂಗಣಗಳನ್ನು ಸ್ಥಾಪಸಲು ಸಂಘ ಒತ್ತಾಯಿಸಲಿದೆ. ಚೋದ್ಯವೆಂದರೆ, ವಿಧಾನಮಂಡಲದ ಸಮಿತಿಯೊಂದು ನಷ್ಟದಲ್ಲಿರುವ ಸಂಸ್ಥೆಗಳನ್ನು ಮುಚ್ಚಲು ಶಿಫಾರಸು ಮಾಡಿರುವ ಸಂಸ್ಥೆಗಳಲ್ಲಿ ಕಂಠೀರವ ಕೂಡಾ ಸೇರಿದೆ.

ಧಾರಾವಾಹಿಗಳು ಎಂದಾಗ, ಕಿರುತೆರೆ ಸರಣಿಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ಒಂದೆರಡು ಬೆಳವಣಿಗೆಗಳು ನೆನಪಾಗುತ್ತಿವೆ. ಜೀ ಕನ್ನಡ ವಾಹಿನಿಯಲ್ಲಿ ‘ಜೊತೆಜೊತೆಯಲಿ’ ಸರಣಿ ಕಳೆದ ಎರಡು ವರ್ಷಗಳಿಂದಲೂ ಪ್ರಸಾರವಾಗುತ್ತಿದೆ. ಭಾರತೀಯ ಭಾಷೆಯ ಸರಣಿಗಳಲ್ಲೇ ಅತಿ ಹೆಚ್ಚು ಟಿಆರ್‌ಪಿ ಇದ್ದ ಸರಣಿಯದು. ಆರೂರು ಜಗದೀಶ್ ನಿರ್ಮಾಣ, ನಿರ್ದೇಶನದ ಈ ಸರಣಿಯ ಕೇಂದ್ರ ಪಾತ್ರಧಾರಿ ಅನಿರುದ್ಧ.
ಗೆಲುವಿಗೆ ಹಲವು ಮಂದಿ ಅಪ್ಪಂದಿರು, ಸೋಲು ಅನಾಥ ಎನ್ನುವ ಮಾತಿದೆ. ಅದೇಕೋ ಏನೋ ಸರಣಿಯ ಕೇಂದ್ರ ಪಾತ್ರಧಾರಿ ಅನಿರುದ್ಧ ಮತ್ತು ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಈ ಸರಣಿಯಲ್ಲಿ ಇನ್ನುಮುಂದೆ ಜೊತೆಜೊತೆಯಲಿ ಸಾಗಲು ಸಾಧ್ಯವಾಗದ ಜಾಗದಲ್ಲಿ ಬಂದು ನಿಂತಿದ್ದಾರೆ. ‘ಪರಸ್ಪರ ಮಾತನಾಡಿಕೊಂಡು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಮುಂದುವರಿಯಬಹುದಾಗಿತ್ತು‘ ಎನ್ನುವವರು ಒಂದೆಡೆ ಯಾದರೆ, ‘ಆ ಹಂತ ಎಂದೋ ದಾಟಿದೆ, ಇನ್ನು ಅದು ಸಾಧ್ಯವಿಲ್ಲ’ ಎನ್ನುವವರು ಒಂದೆಡೆ.
ಇನ್ನು ಮುಂದೆ ‘ಜೊತೆಜೊತೆಯಲಿ’ ಸರಣಿಯಲ್ಲಿ ಅನಿರುದ್ಧ ಅವರಿರುವುದಿಲ್ಲ ಎನ್ನುವುದು ನಿರ್ಮಾಪಕ, ನಿರ್ದೇಶಕರ ನಿರ್ಧಾರ.

ಈ ನಿರ್ಧಾರವನ್ನು ಪ್ರಕಟಿಸಲು ಅವರು ಪತ್ರಿಕಾಗೋಷ್ಠಿಯನ್ನೂ ಕರೆದಿದ್ದರು. ಅದಕ್ಕೂ ಮೊದಲು, ತಮ್ಮನ್ನು ಭೇಟಿಯಾದ ಸುದ್ದಿವಾಹಿನಿಗಳ ಜೊತೆ ಮಾತನಾಡಿದ್ದ ಅನಿರುದ್ಧ ಅವರು ತಮ್ಮ ಅನುಭವವನ್ನೂ ಹೇಳಿದ್ದರು.
ಸರಣಿಗಳಲ್ಲಿ ಪಾತ್ರಧಾರಿಗಳನ್ನು ಬದಲಾಯಿಸುವುದು ಹೊಸದೇನೂ ಅಲ್ಲ. ಅವರದೇ ಕಾರಣಗಳಿಗಾಗಿ ಈ ಬದಲಾವಣೆ ನಡೆಯುತ್ತಿರುತ್ತದೆ. ಕಥೆಯ ಜೊತೆ ಸಾಗುವ ಆಸಕ್ತ ವೀಕ್ಷಕರು ಪಾತ್ರಧಾರಿಗಳ ಬದಲಾವಣೆಯ ಬಗ್ಗೆ ತಲೆಕೆಡಿಸಿಕೊಂಡದ್ದು ಕಡಿಮೆ. ನಿರ್ಮಾಪಕ, ನಿರ್ದೇಶಕ, ಕಲಾವಿದರ ನಡುವೆ ಅದು ಮುಗಿದು ಹೋಗುತ್ತಿತ್ತು.
ಆದರೆ ಇಲ್ಲಿ ಹಾಗಾಗಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ‘ಜೊತೆಜೊತೆಯಲಿ’ ತಂಡದ ಮುಖ್ಯರಲ್ಲದೆ, ಇತರ ಕಿರುತೆರೆ ಸರಣಿ ನಿರ್ಮಾಪಕರೂ ಹಾಜರಿದ್ದರು.

ತಾವು ಯಾರೂ ಮುಂದಿನ ದಿನಗಳಲ್ಲಿ ಅನಿರುದ್ಧ ಅವರನ್ನು ತಮ್ಮ ಸರಣಿಗಳಲ್ಲಿ ಪಾತ್ರ ಮಾಡಿಸುವುದಿಲ್ಲ, ಮಾತ್ರವಲ್ಲ, ಎಲ್ಲ ವಾಹಿನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಅವರನ್ನೂ ಈ ಕುರಿತಂತೆ ಕೋರುತ್ತೇವೆ ಎನ್ನುವುದನ್ನು ಹೇಳಲು ಅವರು ಅಲ್ಲಿದ್ದರು!
‘ಜೊತೆಜೊತೆಯಲಿ’ ತಂಡ, ಇತರ ನಿರ್ಮಾಪಕರ ಜೊತೆ ಈ ಸರಣಿಗೆ ಜೀಟಿವಿಯ ಕಡೆಯಿಂದ ಅಧಿಕೃತವಾಗಿ ಬರುವ ವ್ಯಕ್ತಿಯೂ ಇದ್ದರು. ಸಾಮಾನ್ಯವಾಗಿ ಹೊಸ ಸರಣಿಯ ಆರಂಭದ ಮೊದಲು ವಾಹಿನಿಯ ಕಡೆಯಿಂದ ಸಂಬಂದಪಟ್ಟವರು ಇರುತ್ತಾರೆ. ಆದರೆ, ಇಂತಹದೊಂದು ವಿವಾದ ಮತ್ತು ಇತರ ವಾಹಿನಿಗಳಲ್ಲಿ ನಟರೊಬ್ಬರನ್ನು ಬಳಸಿ ಕೊಳ್ಳಬಾರದು ಎನ್ನುವ ನಿರ್ಧಾರವನ್ನುಪ್ರಕಟಿಸುವ ವೇಳೆ ಅವರ ಹಾಜರಾತಿಯ ಬಗ್ಗೆ ಸಹಜವಾಗಿಯೇ ಪ್ರಶ್ನೆ ಏಳುತ್ತದೆ.

ಈ ಕುರಿತಂತೆ ವಾಹಿನಿಯ ಮುಖ್ಯಸ್ಥರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ, ಅವರು ಕರೆ ಸ್ವೀಕರಿಸಲಿಲ್ಲ.
ಅನಿರುದ್ಧ ಅವರ ಈ ಪ್ರಸಂಗ ಸಾಂಕೇತಿಕ. ಜನಪ್ರಿಯವಾಗುತ್ತಿರುವ ಸರಣಿಗಳ ಪ್ರಮುಖ ನಟರಲ್ಲಿ ಹೆಚ್ಚಿನವರು ಈ ರೀತಿಯ ಬೇಡಿಕೆಗಳನ್ನು ಇಡುತ್ತಾರೆ. ಈ ಬೆಳವಣಿಗೆ ಅವರ ಬೇಡಿಕೆಗಳನ್ನು ಕಡಿಮೆ ಮಾಡಬಹುದು ಎನ್ನುವ ಮಾತೂ ಇದೆ.
ತೆಲುಗು ಸರಣಿಯಲ್ಲಿ ನಟಿಸಲು ಹೋದ ಚಂದನ್ ಪ್ರಸಂಗ ಕೂಡಾ ಇದಕ್ಕೆ ಪೂರಕವಾಯಿತು, ಅವರಿಗೆ ಯಾರೂ ಅವಕಾಶ ಕೊಡಬಾರದು ಎಂದು ಎಲ್ಲ ತೆಲುಗು ನಿರ್ಮಾಪಕರು ನಿರ್ಧರಿಸಿದ ಹಾಗೆ, ಇಲ್ಲಿ ಎಲ್ಲ ನಿರ್ಮಾಪಕರು ಒಟ್ಟಿಗೆ ಸೇರಿ ಅನಿರುದ್ಧ ಅವರಿಗೆ ಅವಕಾಶ ಕೊಡಬಾರದು ಎಂದು ನಿರ್ಧರಿಸಿದ ಹಾಗಿದೆ ಎಂದೂ ಹೇಳುತ್ತಾರೆ.

ಕಲೆಗೆ ಭಾಷೆ, ಗಡಿಯ ಬೇಲಿ ಇಲ್ಲ ಎನ್ನುವ ಮಾತಿದ್ದರೂ, ಹೊರಗಿನಿಂದ ಬಂದ ನಟ ಎನ್ನುವ ಕಾರಣದಿಂದ, ಸಲ್ಲದ ಕಾರಣವೊಂದರ ಮೂಲಕ ಚಂದನ್ ಅವರನ್ನುತೆಲುಗು ಸರಣಿಯಿಂದ ದೂರ ಮಾಡಲಾಯಿತು. ಆದರೆ ಅನಿರುದ್ಧ ಹೊರಗಿನವರೇನೂ ಅಲ್ಲವಲ್ಲ!
ಕರ್ನಾಟಕ ಟಿವಿ ಅಸೋಸಿಯೇಶನ್ ಈ ಕುರಿತಂತೆ ಮಾತುಕತೆ ನಡೆಸುತ್ತಿದೆ. ತನ್ನ ಸರಣಿಯಿಂದ ತೆಗೆದು ಬೇರೆ ನಟನನ್ನು ಹಾಕಿಕೊಳ್ಳುವುದು ಆಯಾ ನಿರ್ಮಾಪಕನ ಇಷ್ಟ. ನಮ್ಮಲ್ಲಿ ಯಾರೂ ಅವರಿಗೆ ಅವಕಾಶ ಕೊಡುವುದಿಲ್ಲ ಎನ್ನುವುದು ಸರಿಯಲ್ಲ ಎನ್ನುವ ಹಿರಿಯ ನಿರ್ಮಾಪಕರೊಬ್ಬರು ಹಿಂದಿನ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.

ಇದು ಆ ಘಟನೆ: ೧೯೯೬-೯೭ರ ಸಮಯ. ಯಾವುದೋ ಕಾರಣಕ್ಕಾಗಿ, ನಿರ್ದೇಶಕರ ಸಂಘ ಇನ್ನು ಮುಂದೆ ವಿಷ್ಣುವರ್ಧನ್ ಅವರ ಜೊತೆ ಕೆಲಸ ಮಾಡುವುದಿಲ್ಲ ಎನ್ನುವ ನಿರ್ಧಾರ ಮಾಡುತ್ತದೆ. ಆ ನಿರ್ಧಾರ ಪ್ರಕಟವಾದ ಮರುವಾರ, ವಿಷ್ಣುವರ್ಧನ್ ಅಭಿನಯದ ಭಾರ್ಗವ ನಿರ್ದೇಶನದ ‘ಜನನಿಜನ್ಮಭೂಮಿ’ ಚಿತ್ರ ಸೆಟ್ಟೇರುತ್ತದೆ!
ಸೃಜನಶೀಲತೆ ಮೆರೆಯಬೇಕಾದ ಕಿರುತೆರೆ, ಸಿನಿಮಾ ಎರಡೂ ರಂಗಗಳು ಅದರ ಆಚೆ ವಿವಾದಗಳ ಬೆನ್ನುಬಿದ್ದಿವೆ. ಅದರಿಂದ ಹೊರ ಬಂದು ಹೊಸ ಸಾಧ್ಯತೆಗಳಿಗೆ ಮುಖಮಾಡಲು ಅವುಗಳ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ