Light
Dark

ಮಂಡ್ಯ ನೆಲದಲ್ಲಿ ಸ್ವಾತಂತ್ರ್ಯದ ಕಿಚ್ಚು!

ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದಲ್ಲಿ ನಡೆದ ಹೋರಾಟದ ಇಣುಕು ನೋಟ

ಸಿ.ಸಿದ್ದರಾಜು ಆಲಕೆರೆ
ಸಿ.ಸಿದ್ದರಾಜು ಆಲಕೆರೆ

ಭಾಗ-2

ಅಧಿವೇಶನದ ಕಾರ್ಯಕ್ರಮದ ಉತ್ತಮ ನಿರ್ವಹಣೆಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ, ಸ್ವಯಂ ಸೇವಕ ವ್ಯವಸ್ಥೆ, ವೇದಿಕೆ ವ್ಯವಸ್ಥೆ ,ಮೆರವಣಿಗೆ ವ್ಯವಸ್ಥೆಗಳಿಗೆ ಉಪಸಮಿತಿಗಳು ರಚನೆಗೊಂಡವು. ಮೈಸೂರು ಸಂಸ್ಥಾನದ ಮೊದಲ ‘ರಾಷ್ಟ್ರಕೂಟ’ಅಧಿವೇಶನಕ್ಕೆ ಅಂತಿಮವಾಗಿ ಟಿ.ಸಿದ್ದಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಯಾದರು.

ರಾಷ್ಟ್ರಕೂಟ ನಡೆಸಲು ಹೆಚ್ಚಿನ ಹಣದ ಅವಶ್ಯಕತೆ ಇದ್ದಕಾರಣ ಸಾಹುಕಾರ ಚನ್ನಯ್ಯ ಹಾಗೂ ಹೆಚ್.ಕೆ. ವೀರಣ್ಣಗೌಡ ಅವರುಗಳು ಮದ್ದೂರು, ಮಂಡ್ಯ, ಚನ್ನಪಟ್ಟಣ ತಾಲ್ಲೂಕಿನ ಹಳ್ಳಿ ಹಳ್ಳಿಗಳಿಗೆ ಹೋಗಿ ಹಣ ಸಂಗ್ರಹಿಸಿದರು. ವಳಗೆರೆಹಳ್ಳಿ ರೈತರು ಹಣ ಕೊಟ್ಟರಲ್ಲದೆ ಅಲ್ಲಿನ ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡರು.

ತಿರುಪತಿ ಯಾತ್ರೆಗೆ ಹೊರಟಿದ್ದ ಗೌಡಗೆರೆ ಜನ ದೇವರ ಹರಕೆಯ ಹಣವನ್ನು ‘ಕಾಂಗ್ರೆಸ್ ಕೆಲಸ ದೇವರ ದೇವರ’ಎಂದು ಕಾಂಗ್ರೆಸ್ ನಾಯಕರಿಗೆ ನೀಡಿದರು. ಜೊತೆಗೆ ನಾಯಕರು ಹಳ್ಳಿಯ ಜನರಿಗೆ ರಾಷ್ಟ್ರಕೂಟದ ಉದ್ದೇಶವನ್ನು ತಿಳಿಸಿ ಅಧಿವೇಶನದಲ್ಲಿ ಭಾಗವಹಿಸುವಂತೆ ಮನವರಿಕೆ ಮಾಡಿಕೊಟ್ಟರು. ಹಳ್ಳಿಯ ಜನ ಉತ್ಸಾಹದಿಂದ ಹಣ ನೀಡಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ಹಳ್ಳಿಹಳ್ಳಿಗಳಗೆ ಹೋಗಿ ಪ್ರಚಾರ ಮಾಡಿದರು.

ಶಿವಪುರದಲ್ಲಿ ಅಧಿವೇಶನಕ್ಕೆ ಸಿದ್ಧತೆಗಳ ಕಾರ್ಯ ನಡೆಯತೊಡಗಿತು. ತಿರುಮಲೇಗೌಡರ ಎಂಟು ಎಕರೆ ಜಮೀನು ಪ್ರದೇಶದಲ್ಲಿ ಧ್ವಜ ಸ್ತಂಭ ನಿಲ್ಲಿಸಲಾಯಿತು. ಅಧಿವೇಶನದ ಸ್ಥಳದಲ್ಲಿ ಖಾದಿ ಬಟ್ಟೆ ಅಂಗಡಿ, ಔಷಧಿ ಅಂಗಡಿ ಮಳಿಗೆಗಳನ್ನು ತೆರೆಯಲಾಯಿತು. ನೂರಾರು ಸ್ವಯಂ ಸೇವಕ,ಸೇವಕೀಯರು ಹಲವು ಗುಂಪುಗಳಾಗಿ ವಿಂಗಡಿಸಿಕೊಂಡು ಒಂದೊಂದು ಬಣ್ಣವೂ ತಿಲಕ್, ಭಗತ್ ಸಿಂಗ್, ಪಟೇಲ್ ಮುಂತಾದ ರಾಷ್ಟ್ರ ನಾಯಕರ ಹೆಸರಿನಿಂದ ಗುರುತಿಸಿಕೊಂಡರು.

ಸರ್ಕಾರ ಅಧಿವೇಶನ ನಡೆಯದಂತೆ ಹತ್ತಿಕ್ಕುವ ಕೆಲಸ ಮಾಡಿತು. ಮೈಸೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ. ಎಂ.ಮೆಕ್ರಿ ಅವರು ಮದ್ದೂರು ಸುತ್ತಮುತ್ತ ಮೂರು ಮೈಲಿವರಗೆ ಒಂದು ತಿಂಗಳ ಕಾಲ ಮೆರವಣಿಗೆ, ಸಭೆ ಹಾಗೂ ಧ್ವಜಾರೋಹಣ ಮಾಡಬಾರದು ಎಂದು ನಿಷೇಧಾಜ್ಞೆ ಹೊರಡಿಸಿದರು. ಈ ಆಜ್ಞೆಯನ್ನು ಪ್ರಮುಖ ಕಾಂಗ್ರೆಸ್ ನಾಯಕರುಗಳಿಗೆ ಜಾರಿಗೊಳಿಸಲಾಯಿತು. ಮ್ಯಾಜಿಸ್ಟ್ರೇಟ್‌ರ ಆಜ್ಞೆಯನ್ನು ಮದ್ದೂರು, ಶಿವಪುರದ ಬೀದಿಗಳಲ್ಲಿ ಹಾಗೂ ಜನಜಂಗುಳಿ ಇರುವ ಕಡೆ ಟಾಂ ಟಾಂ ಮೂಲಕ ಪ್ರಚಾರ ಮಾಡಿದರು.
ಕಾಂಗ್ರೆಸ್ ನಾಯಕರು ‘ನಾವು ಸತ್ಯಾಗ್ರಹ ಮಾಡುವ ಸ್ಥಳ ಸರ್ಕಾರದ ಸ್ಥಳವಲ್ಲ ಖಾಸಗಿ ಸ್ಥಳ. ಧ್ವಜಾರೋಹಣ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕನ್ನು ಹತ್ತಿಕ್ಕುವ ಸರ್ಕಾರಕ್ಕೆ ಧಿಕಾರ’ ಎಂದು ಹೇಳುವ ಮೂಲಕ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಅಧಿವೇಶನ ಮುನ್ನ ದಿನ ೧೯೩೮ ರ ಏಪ್ರಿಲ್ ೮ ಸಂಜೆ ಮದ್ದೂರು ಪ್ರವಾಸಿ ಮಂದಿರ ದಿಂದ ಪೇಟೆ ಬೀದಿ ಮೂಲಕ ಶಿವಪುರದವರಗೆ ರಾಷ್ಟ್ರಕೂಟ ಅಧ್ಯಕ್ಷ ಟಿ.ಸಿದ್ದಲಿಂಗಯ್ಯ ಅವರ ಮೆರವಣಿಗೆ ನಡೆಯಿತು.
ಎತ್ತಿನ ಮರದ ಗಾಡಿಯ ಚಕ್ರಗಳಿಗೆ ಕೆಮ್ಮಣ್ಣು- ಸುಣ್ಣ ಬಳಿದು ಗಾಡಿಗೆ ಬಾಳೆಕಂಬ ಮಾವಿನ ಎಲೆಯ ಹಸಿರುತೋರಣಗಳಿಂದ ಅಲಂಕಾರ ಮಾಡಿ ಅಧ್ಯಕ್ಷರನ್ನು ಅದರಲ್ಲಿ ಮೆರವಣಿಗೆ ನಡೆಯಿತು. ಅಲಂಕೃತ ಗಾಡಿಯ ಜೊತೆ ನೂರಾರು ಸ್ವಯಂ ಸೇವಕ-ಸೇವಕೀಯರು ಶಿಸ್ತು ಬದ್ಧವಾಗಿ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಸುಮಾರು ಹತ್ತು ಸಾವಿರ ಜನ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಜನರು ‘ಏನೇ ಬರಲಿ ಒಗ್ಗಟ್ಟಿರಲಿ’ ಎಂಬ ಘೋಷಣೆ ಜೊತೆಗೆ ಗಾಂಧೀಜಿ ಮುಂತಾದ ರಾಷ್ಟ್ರ ನಾಯಕರ ಹೆಸರಿಗಳಿಗೂ ಕಾಂಗ್ರೆಸ್ಸಿಗೂ ಜಯಕಾರ ಕೂಗಿದರು.

ಏಪ್ರಿಲ್ ೯ ರ ಬೆಳಿಗ್ಗೆ ಧ್ವಜಾರೋಹಣ ಸ್ಥಳದಲ್ಲಿ ಸುಮಾರು ೪೦,೦೦೦ ಸತ್ಯಾಗ್ರಹಿಗಳು ಸೇರಿದ್ದರು. ವೇದಿಕೆ ಬಳಿಗೆ ಅಧ್ಯಕ್ಷ ಟಿ.ಸಿದ್ದಲಿಂಗಯ್ಯ ಅವರನ್ನು ಕುದುರೆ ಮೇಲೆ ಕರೆದುಕೊಂಡು ಬರಲಾಯಿತು. ಎಂ.ಎನ್.ಜೋಯಿಸ್, ಕೆ. ಟಿ. ಭಾಷ್ಯಮ್, ಕೆ. ಸಿ.ರೆಡ್ಡಿ, ಸಾಹುಕಾರ ಚನ್ನಯ್ಯ, ಕೆಂಗಲ್ ಹನುಮಂತಯ್ಯ, ಯಶೋಧರ ದಾಸಪ್ಪ, ವೆಂಕಮ್ಮ ಸೀತಾರಾಮಯ್ಯ ಮೊದಲಾದ ಮಹಿಳಾ ಸತ್ಯಾಗ್ರಹಿಗಳು ಖಾದಿ ಬಿಳಿ ಟೋಪಿ ಧರಿಸಿದ್ದರು. ದೂರದಲ್ಲಿ ಪ್ರಂಚ್‌ರಕ್ಸ್‌ನ (ಈಗಿನ ಪಾಂಡವಪುರ) ಪೊಲೀಸ್ ವರಿಷ್ಠಾಧಿಕಾರಿ ಮತ್ತೊಜಿರಾವ್ ಸಿಂಧ್ಯ ಹಾಗೂ ಮಂಡ್ಯದ ಸಬ್ ಡಿವಿಜನ್ ಅಫೀಸರ್ ಬೀರಪ್ಪ ಮೊದಲವರು ನಿಂತಿದ್ದರು.
ಟಿ.ಸುನಂದಮ್ಮ ಅವರು ವಂದೇ ಮಾತರಂ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

ಎಂ.ಎನ್.ಜೋಯಿಸ್ ಅವರು ಅಧ್ಯಕ್ಷ ಟಿ.ಸಿದ್ದಲಿಂಗಯ್ಯ ಅವರನ್ನು ಗೌರವ ದಿಂದ ಧ್ವಜಸ್ತಂಭದ ಹತ್ತಿರಕ್ಕೆ ಕರೆತಂದು ಧ್ವಜಾರೋಹಣ ನೆರವೇರಿಸ ಬೇಕೆಂದು ಕೇಳಿಕೊಂಡರು. ಅಧ್ಯಕ್ಷರು ಚಿಕ್ಕ ಭಾಷಣ ಮಾಡಿ ಸರ್ಕಾರದ ನಿಷೇಧಾಜ್ಞೆಯನ್ನು ತಾವು ಉಲ್ಲಂಘಿಸುವುದಾಗಿ ಹೇಳಿ ಧ್ವಜಾರೋಹಣ ನೆರವೇರಿಸಿದರು. ಆಗ ಸತ್ಯಾಗ್ರಹಿಗಳು ಜಯಕಾರದ ಮೂಲಕ ಕರತಾಡನ ಮಾಡಿದರು. ಧ್ವಜಾರೋಹಣ ಮಾಡಿದ ಸಿದ್ದಲಿಂಗಯ್ಯ ಅವರನ್ನು ದಸ್ತಗಿರಿ ಮಾಡಿದರು. ನಂತರ ಧ್ವಜಾರೋಹಣ ಮಾಡಿದ ಜೋಯೀಸ್ ಅವರನ್ನು ದಸ್ತಗಿರಿ ಮಾಡಿದರು. ಹೀಗೆ ಮೊದಲ ದಿನ ಅಧ್ಯಕ್ಷರು ಸೇರಿದಂತೆ ಮೂರು ಮಂದಿಯನ್ನು ಬಂಧಿಸಿದರು. ಉಳಿದ ಎರಡು ದಿನವೂ ಧ್ವಜಾರೋಹಣ ನಡೆಯಿತು. ಈ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿದ ಮುಖಂಡರನ್ನು ಬಂಧಿಸಿದರು. ಧ್ವಜಾರೋಹಣ ನಡೆದ ಮೂರು ದಿನಗಳು ಸ್ತ್ರೀಯರು ಧ್ವಜರಕ್ಷಣೆಗಾಗಿ ಕುಳಿತಿದ್ದು ವಿಶೇಷವಾಗಿತ್ತು.

ಮೈಸೂರು ಸಂಸ್ಥಾನದ ಮದ್ದೂರಿನ ಶಿವಪುರದಲ್ಲಿ ರಾಷ್ಟ್ರಕೂಟ ಪ್ರಮುಖವಾಗಿ ಮೂರು ದಿನಗಳ ಕಾಲ ಯಾವುದೇ ಅಹಿತಕರ ಘಟನೆಗಳು ನಡೆಯದೆ ನಡೆದಿರುವುದು. ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ಸ್ಮರಣೀಯವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಗಂಡು ಮೆಟ್ಟಿದ ನೆಲ ಎಂದೇ ಕರೆಯುವ ಮಂಡ್ಯದ ಶಿವಪುರದಲ್ಲಿ ನಡೆದ ಸತ್ಯಾಗ್ರಹದ ನೆನಪಿಗೆ ಕೆಂಗಲ್ ಹನುಮಂತಯ್ಯ ಅವರ ಪ್ರೇರಣೆಯಿಂದ ೧೯೭೯ ರಲ್ಲಿ ನಿರ್ಮಾಣ ಆಗಿರುವ ಸ್ಮಾರಕ ಭವನ ಶಿವಪುರದಧ್ವಜ ಸತ್ಯಾಗ್ರಹದ ಪ್ರತೀಕವಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ