Mysore
19
overcast clouds
Light
Dark

ಇಸ್ರೇಲ್-ಹಮಾಸ್ ಯುದ್ಧ; ಮುಂದೇನು?

     ಪ್ಯಾಲೆಸ್ಟೇನ್‌ನ ಹಮಾಸ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ನಡೆಸಿದ ಸಶಸ್ತ್ರ  ದಾಳಿ ಮತ್ತು ಅದಕ್ಕೆ ಇಸ್ರೇಲ್ ಮಿಲಿಟರಿ ನಡೆಸುತ್ತಿರುವ ಪ್ರತಿದಾಳಿ, ಏಳುದಿನಗಳ ನಂತರವೂ ಮುಂದುವರಿಯುತ್ತಿದೆ. ಕದನ ವಿರಾಮ ಸಾಧ್ಯತೆಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಹಮಾಸ್ ಉಗ್ರಗಾಮಿಗಳು ನಡೆಸಿದ ಹಠಾತ್ ದಾಳಿಗೆ ಇಸ್ರೇಲ್ ಕ್ಷಣಕಾಲ ತಬ್ಬಿಬ್ಬಾದರೂ ಕ್ರಮೇಣ ಚೇತರಿಸಿಕೊಂಡು ಸಂಘಟಿತವಾಗಿ ಯುದ್ಧಕ್ಕಿಳಿದಿದೆ.

 ಉತ್ತರ ಗಾಜಾಕ್ಕೆ ಸೇನೆಯನ್ನು ಕಳುಹಿಸಲು ಇಸ್ರೇಲ್ ಸಿದ್ಧತೆ ನಡೆಸಿದೆ. ಹಮಾಸ್ ಉಗ್ರರಿಗಾಗಿ ಮನೆಮನೆ ಹುಡುಕುವ ಯತ್ನ ಇದು. ಈ ಕಾರಣಕ್ಕೆ ಉತ್ತರ ಗಾಜಾದಲ್ಲಿರುವ 11ಲಕ್ಷ ಜನರನ್ನು 24 ಗಂಟೆಯೊಳಗೆ ದಕ್ಷಿಣಕ್ಕೆ ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲ್ ಸೂಚಿಸಿದೆ. ಆ ಆದೇಶವನ್ನು ವಿಶ್ವಸಂಸ್ಥೆಗೂ ತಿಳಿಸಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ವಿಶ್ವಸಂಸ್ಥೆ ಇದೊಂದು ಅಮಾನವೀಯ ಆಲೋಚನೆ ಎಂದು ಪ್ರತಿಕ್ರಿಯೆ ನೀಡಿದೆ.

 ಹಮಾಸ್ ಉಗ್ರರು ಅಕ್ಟೋಬರ್ 7ರಂದು ಗಾಜಾ ಗಡಿ ಬೇಲಿಯನ್ನು ದಾಟಿ ಇಸ್ರೇಲ್‌ಗೆ ಬಂದು ನಡೆಸಿದ ಸಶಸ್ತ್ರ ದಾಳಿಯಲ್ಲಿ ನೂರಾರು ಮಂದಿ ಯಹೂದಿಗಳು ಸತ್ತಿದ್ದಾರೆ, ಅದಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾಕಷ್ಟು ಯಹೂದಿಗಳನ್ನು ಸೆರೆಯಾಳಾಗಿರಿಸಿಕೊಳ್ಳಲಾಗಿದೆ. ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನ ದಕ್ಷಿಣ ಭಾಗದ ನಗರಗಳು, ಸೇನಾ ನೆಲೆಗಳು, ಜನವಸತಿ     ಪ್ರದೇಶಗಳಿಗೆ ತೀವ್ರ ಹಾನಿ ಸಂಭವಿಸಿದೆ. ಹಮಾಸ್ ಉಗ್ರವಾದಿಗಳು ಮನೆಗಳಿಗೆ ನುಗ್ಗಿ ಅಲ್ಲಿದ್ದವರನ್ನು ಮಕ್ಕಳು ಮರಿ ಎನ್ನದೆ ಗುಂಡುಹಾರಿಸಿ ಕೊಂದಿದ್ದಾರೆ ಎಂದೂ ಆರೋಪಿಸಲಾಗಿದೆ. ಹಮಾಸ್ ಉಗ್ರರು ಸಣ್ಣಮಕ್ಕಳನ್ನು ಕೊಂದಿರುವ ಚಿತ್ರಗಳನ್ನು ಇಸ್ರೇಲ್ ಪ್ರಧಾನಿ ನೇತಾನ್ಯಹು ಪ್ರದರ್ಶಿಸುತ್ತಿದ್ದಾರೆ. ಇಸ್ರೇಲ್ ಸೇನೆ ಎಚ್ಚೆತ್ತುಕೊಂಡ ನಂತರ ಹಮಾಸ್ ವಿರುದ್ಧ ಯುದ್ಧ ಘೋಷಿಸಲಾಗಿದೆ. ಹಮಾಸ್ ನೆಲೆ ವಾಸವಿರುವ ಗಾಜಾ ಪಟ್ಟಿ ಪ್ರದೇಶದ ಮೇಲೆ ಬಾಂಬ್ ಮತ್ತು ರಾಕೆಟ್ ದಾಳಿ ಆರಂಭಿಸಿದೆ.

 ಇಸ್ರೇಲ್ ಸೈನಿಕರು ನಡೆಸಿದ ಬಾಂಬ್ ದಾಳಿಯಲ್ಲಿ 1550 ಪ್ಯಾಲೆಸ್ಟೇನ್ ಜನರು, ಹಮಾಸ್ ನಡೆಸಿದ ದಾಳಿಗಳಲ್ಲಿ 1300 ಮಂದಿ ಸತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಂದರೆ ಸುಮಾರು ಮೂರು ಲಕ್ಷ ಮಂದಿ ಸೈನಿಕರನ್ನು (ಸೈನಿಕರಾಗಬೇಕಾದವರ ಪಟ್ಟಿಯಲ್ಲಿದ್ದವರು) ಸಂಘಟಿಸಿ ಗಾಜಾ ಗಡಿಯಲ್ಲಿ ಯುದ್ಧಕ್ಕೆ ನಿಲ್ಲಿಸಲಾಗಿದೆ. ನೇತಾನ್ಯಹು ಯುದ್ಧ ಘೋಷಿಸಿದ್ದು ಗಾಜಾ ಪಟ್ಟಿ ಪ್ರದೇಶದಲ್ಲಿರುವ ಎಲ್ಲ ಹಮಾಸ್ ಭಯೋತ್ಪಾದರನ್ನು ಮುಗಿಸುವುದಾಗಿ ಹೇಳಿದ್ದಾರೆ. ಮೊದಲ ಹಂತದಲ್ಲಿ ಗಾಜಾ ಪಟ್ಟಿ ಪ್ರದೇಶಕ್ಕೆ ವಿದ್ಯುತ್, ನೀರು ಮತ್ತು ಆಹಾರ ಸಾಮಗ್ರಿ ಸರಬರಾಜನ್ನು ಬಂದ್ ಮಾಡಲಾಗುವುದು ಎಂದು ರಕ್ಷಣಾ ಸಚಿವರು ಘೋಷಿಸಿದ್ದು, ಅದು ಗುರುವಾರದಿಂದಲೇ ಜಾರಿಗೆ ಬಂದಿದೆ. ಈ ಘೋಷಣೆ ಬಂದ ನಂತರ ಜನರು ಭಯಭೀತರಾಗಿದ್ದಾರೆ. ಈ ಮಧ್ಯೆ ದಿಗ್ಬಂಧನ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದುದು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರಸ್ ಎಚ್ಚರಿಕೆ ನೀಡಿದ್ದಾರೆ. ಯೂರೋಪ್ ಒಕ್ಕೂಟವೂ ಇಂಥದೇ ಮಾತನ್ನು ಹೇಳಿದೆ. ಆಹಾರ ಮತ್ತು ನೀರು ಒದಗಿಸಲು ವಿಶ್ವಸಂಸ್ಥೆ ಸಿಬ್ಬಂದಿಗೆ ಅವಕಾಶ ಕೊಡಬೇಕೆಂದು ಗುಟರಸ್ ಹೇಳಿದ್ದಾರೆ. ವಿಶ್ವಸಂಸ್ಥೆ ಸೂಚನೆಗೆ ಇಸ್ರೇಲ್ ಹಿಂದೆಯೂ ಬೆಲೆ ಕೊಟ್ಟಿಲ್ಲ, ಈಗಲೂ ಕೊಡುವ ಹಾಗೆ ಕಾಣುತ್ತಿಲ್ಲ.

 ಇಸ್ರೇಲ್   ಮಿಲಿಟರಿ ಬಾಂಬ್ ದಾಳಿ ಮುಂದುವರಿಸಿದ್ದು, ಗುರುವಾರದಂದು  44 ಮಕ್ಕಳು ಬಲಿಯಾಗಿದ್ದಾರೆ. ಪ್ಯಾಲೆಸ್ಟೇನ್ ಜನರು ಆಸ್ಪತ್ರೆಗಳಲ್ಲಿ, ಶಾಲೆಗಳಲ್ಲಿ ರಕ್ಷಣೆ ಪಡೆದಿದ್ದಾರೆ. ನಿರಾಶ್ರಿತರ ಶಿಬಿರಕ್ಕೆ ತೆರಳಿರುವವರ ಸಂಖ್ಯೆ ಮೂರು ಲಕ್ಷ ಮೀರಿದೆ. ಅತ್ತ ಹಮಾಸ್ ಉಗ್ರವಾದಿಗಳು ದೇಶದ ದಕ್ಷಿಣ ಭಾಗದಿಂದ ರಾಕೆಟ್ ದಾಳಿಯನ್ನು ಮುಂದುವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಮಾಸ್‌ಗೆ ಬೆಂಬಲವಾಗಿ ಲೆಬನಾನ್‌ನಲ್ಲಿರುವ ಹಿಜಬುಲ್ಲ ಉಗ್ರರೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡದ ಹೊರತು ಗಾಜಾ ಮೇಲೆ ಬಾಂಬ್ ದಾಳಿ ನಿಲ್ಲದು ಎಂದು ಇಸ್ರೇಲ್ ಸರ್ಕಾರ ಹೇಳಿದೆ.

 ನಿಜವಾಗಿಯೂ ಇಸ್ರೇಲ್ ಸೇನೆ ಗಾಜಾ ಪಟ್ಟಿ ಪ್ರದೇಶವನ್ನು ಅತಿಕ್ರಮಣ ಮಾಡುವುದೇ ಎಂಬ ಬಗ್ಗೆ ಅನೇಕ ರೀತಿಯ ಅನುಮಾನಗಳು ವ್ಯಕ್ತವಾಗಿದೆ. ಬಹುಶಃ ಗಾಜಾಪಟ್ಟಿ ಪ್ರದೇಶದಲ್ಲಿರುವ ಹಮಾಸ್ ಉಗ್ರರನ್ನು ಸೆರೆಹಿಡಿದ ನಂತರ ಅದರ ಆಡಳಿತವನ್ನು ಜನರಿಗೇ ಬಿಟ್ಟುಕೊಡಬಹುದೆಂಬ ಮಾತೂ ಕೇಳಿಬಂದಿದೆ. ಅತಿಕ್ರಮಣ ಮಾಡುವುದರಿಂದ ಆಗುವ ಕೆಟ್ಟ ಪರಿಣಾಮಗಳ ಅರಿವು ಇಸ್ರೇಲ್ ಆಡಳಿತಗಾರರಿಗೆ ಇದೆ ಎನ್ನುವ ವಾದವೂ ಇದೆ. ಈ ಯುದ್ಧದಿಂದ ಆಗಬಹುದಾದ ಮಾನವ ದುರಂತವನ್ನು ಗಮನದಲ್ಲಿ ಟ್ಟುಕೊಂಡು ಯುದ್ಧವಿರಾಮ ಘೋಷಣೆ ಮಾಡುವಂತೆ ಎರಡೂ ಕಡೆಯವರನ್ನು ಮನವೊಲಿಸುವ ಪ್ರಯತ್ನಗಳು ಆರಂಭವಾಗಬಹುದಾದ ಸೂಚನೆಗಳು ಕಾಣುತ್ತಿವೆ. ಒಂದು ಕಡೆ ಟರ್ಕಿ, ಮೊತ್ತೊಂದು ಕಡೆ ಅರಬ್ ದೇಶಗಳು ಸಭೆ ಸೇರಿ ಚರ್ಚಿಸಿವೆ. ಹಮಾಸ್ ಮತ್ತು ಇಸ್ರೇಲ್ ನಾಯಕರು ಇಂಥ ಒಂದು ಸೂತ್ರಕ್ಕೆ ಒಪ್ಪುವರೇ ಎಂಬ ಬಗ್ಗೆ ಅನುಮಾನಗಳಿವೆ. ಆದರೆ ಯುದ್ಧ ಮುಂದುವರಿದರೆ ಅದರಿಂದ ಆಗಬಹುದಾದ ಮಾನವ ದುರಂತ ಭಯಂಕರವಾಗಿರುತ್ತದೆ ಎನ್ನುವುದನ್ನು ಅರಿತೇ ಸಂಧಾನಕಾರರು ಮುಂದೆ ಹೆಜ್ಜೆ ಇಟ್ಟಿದ್ದಾರೆ.

ಪ್ಯಾಲೆಸ್ಟೇನ್ ಸಮಸ್ಯೆಗೆ ದೊಡ್ಡ ಇತಿಹಾಸವೇ ಇದೆ. ೧೯೪೮ರಲ್ಲಿ ಯಹೂದಿ ಗಳಿಗಾಗಿಯೇ ಇಸ್ರೇಲ್ ದೇಶ ಸ್ಥಾಪನೆ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಅಂಗೀಕಾರ ನೀಡಿದ ದಿನದಿಂದಲೂ ಪ್ಯಾಲೆಸ್ಟೇನ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ಯಾಲೆಸ್ಟೇನ್ ಜನರು ಸುಮ್ಮನಿಲ್ಲ. ಇದು ತಮ್ಮ ಜಾಗ, ಅದರಲ್ಲಿ ಯಹೂದಿಗಳ ದೇಶ ರಚನೆಗೆ ಆಸ್ಪದ ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತ ಬಂದಿದ್ದಾರೆ.

ಇದು ನಮ್ಮ ಪೂರ್ವಜರು ಇದ್ದ ಪ್ರದೇಶ ಎಂದು ಯಹೂದಿಗಳು ಹೇಳುತ್ತಾ ಬಂದಿದ್ದಾರೆ. ಸ್ವತಂತ್ರ ಇಸ್ರೇಲ್ ದೇಶ ಸ್ಥಾಪನೆಗೆ ಒಪ್ಪಿಗೆ ನೀಡಿದಂತೆ ಪ್ಯಾಲೆಸ್ಟೇನ್ ದೇಶ ರಚನೆಗೂ ಒಪ್ಪಿಗೆ ನೀಡಲು 1948ರಲ್ಲಿ ವಿಶ್ವಸಂಸ್ಥೆ ಸಿದ್ಧವಿತ್ತು. ಆದರೆ ತಮ್ಮ ಪ್ರದೇಶದಲ್ಲಿ ಯಹೂದಿ ದೇಶ ರಚನೆಯನ್ನು ಅರಬ್ ದೇಶಗಳು ಒಪ್ಪಲಿಲ್ಲ. ಹೀಗಾಗಿ ಪ್ಯಾಲೆಸ್ಟೇನ್ ದೇಶ ರಚನೆ ನನೆಗುದಿಗೆ ಬಿದ್ದಿದೆ. ಪ್ಯಾಲೆಸ್ಟೇನ್ ಜನರಲ್ಲಿ ಒಗ್ಗಟ್ಟಿಲ್ಲ. ಗಾಜಾ ಪಟ್ಟಿ ಪ್ರದೇಶ ಹಮಾಸ್ ಎಂಬ ಉಗ್ರಗಾಮಿ ಸಂಘಟನೆಯ ಹಿಡಿತದಲ್ಲಿದೆ. ಪಶ್ಚಿಮ ದಂಡೆ ಪ್ರದೇಶ ಮಹಮ್ಮದ್ ಅಬ್ಬಾಸ್ ನೇತೃತ್ವದ ಫತಾ ಸಂಘಟನೆ ಹಿಡಿತದಲ್ಲಿದೆ. ಹಮಾಸ್ ಸಂಘಟನೆ ಅರಬ್ ವಲಯದಲ್ಲಿ ಇಸ್ರೇಲ್ ಅಸ್ತಿತ್ವವನ್ನೇ ಒಪ್ಪುವುದಿಲ್ಲ. ಆದರೆ ಫತಾ ಗುಂಪು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಿದ್ಧ. ಆದರೆ ಹಮಾಸ್ ಇದಕ್ಕೆ ಸಿದ್ಧವಿಲ್ಲ. ಹಮಾಸ್ ಗುರಿ ಸಾಧನೆಗೆ ಅಂದರೆ ಇಸ್ರೇಲ್ ದೇಶವನ್ನು ಇಲ್ಲದಂತೆ ಮಾಡಲು ಭಯೋತ್ಪಾದನೆ ಹಾದಿ ಹಿಡಿದಿದೆ.

 ಪ್ಯಾಲೆಸ್ಟೇನ್ ಜನರ ನಾಯಕರಾಗಿದ್ದ ಯಾಸಾರ್ ಅರಾಫತ್ ಬದುಕಿದ್ದಾಗ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲಾಗಿತ್ತು. ನಾರ್ವೆಯ ಓಸ್ಲೋದಲ್ಲಿ ನಡೆದ ಶೃಂಗಸಭೆ(1993) ಮತ್ತು ಆ ನಂತರ ವಾಷಿಂಗ್ಟನ್‌ನಲ್ಲಿ ಆದ ಮಾತುಕತೆಯಲ್ಲಿ ಇಸ್ರೇಲ್ ಪ್ರಧಾನಿ ಯತ್ಜಿಕ್ ರಬೀನ್ ಮತ್ತು ಅರಾಫತ್ ಒಪ್ಪಂದಕ್ಕೆ ಸಹಿ ಮಾಡಿದ್ದರು. ಈ ಒಪ್ಪಂದದ ಪ್ರಕಾರ ಪ್ಯಾಲೆಸ್ಟೇನ್ ಜನರು ಇಸ್ರೇಲ್ ಅಸ್ತಿತ್ವನ್ನು ಒಪ್ಪಬೇಕಿತ್ತು. ಹಾಗೆಯೇ ಸ್ವತಂತ್ರ ಪ್ಯಾಲೆಸ್ಟೇನ್ ದೇಶ ರಚನೆಗೆ ಇಸ್ರೇಲ್ ಒಪ್ಪಿಗೆ ನೀಡಬೇಕಿತ್ತು. ೧೯೬೭ರ ಸ್ಥಿತಿ ಆಧರಿಸಿ ಪಶ್ಚಿಮ ದಂಡೆ ಮತ್ತು ಪೂರ್ವ ಜರುಸಲೆಂ ಅನ್ನು ಪ್ಯಾಲೆಸ್ಟೇನ್ ಪ್ರದೇಶವೆಂದು ಗುರುತಿಸಲು ತೀರ್ಮಾನಿಸಲಾಗಿತ್ತು. ವಲಸೆ ಹೋಗಿದ್ದ ಪ್ಯಾಲೆಸ್ಟೇನೀಯರಿಗೆ ನೆಲೆವಾಸ ಕಲ್ಪಿಸುವ ವಿಚಾರದಲ್ಲಿ ಮಾತ್ರ ಒಮ್ಮತ ಮೂಡಿರಲಿಲ್ಲ. ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಎರಡೂ ಕಡೆಯವರು ಒಪ್ಪಿದ್ದರು. ಆದರೆ ಯಹೂದಿಗಳಿಗೆ ಪುನರ್‌ವಸತಿ ಕಲ್ಪಿಸುವ ಕಾರ್ಯಕ್ರಮದ ವಿಚಾರದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಾಯಕರ ನಡುವೆ ಒಮ್ಮತ ಮೂಡಲಿಲ್ಲ. ಹೀಗಾಗಿ ಸಮಸ್ಯೆ ಹಾಗೆಯೇ ಉಳಿಯಿತು. ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಜನರಲ್ಲಿ ಬೇಸರ ಕೋಪ ಉಗ್ರಗಾಮಿತ್ವಕ್ಕೆ ದಾರಿ ಮಾಡಿಕೊಟ್ಟಿತು. ಹಮಾಸ್ ಸಂಘಟನೆ   ಹುಟ್ಟಿದ್ದೇ ಅಂಥ ಸನ್ನಿವೇಶದಲ್ಲಿ. ಹಮಾಸ್ ಬಲಗೊಳ್ಳಲು ಇಸ್ರೇಲ್‌ನ ಹಠಮಾರಿ ಧೋರಣೆಯೇ ಕಾರಣ. ಪ್ಯಾಲೆಸ್ಟೇನ್ ಪ್ರದೇಶಗಳನ್ನು ಅತಿಕ್ರಮಿಸಿಕೊಳ್ಳದೆ ಮತ್ತು ಜರುಸಲೆಂ ಅನ್ನು ಸ್ವತಂತ್ರ ಪ್ರದೇಶವಾಗಿ ಪರಿವರ್ತಿಸಲು ಒಪ್ಪಿದ್ದರೆ ಮತ್ತು ಓಸ್ಲೋ ಒಪ್ಪಂದವನ್ನು ಜಾರಿಗೊಳಿಸಿದ್ದರೆ ಬಹುಶಃ ಸಮಸ್ಯೆ ಈ ಹಂತಕ್ಕೆ ಬರುತ್ತಿರಲಿಲ್ಲ. ಬಂದೂಕಿನಿಂದ ಏನನ್ನಾದರೂ ಸಾಧಿಸಬಹುದು ಎನ್ನುವ ಇಸ್ರೇಲ್ ನಿಲುವು ಇಂದಿನ ಅತಿರೇಕಕ್ಕೆ ಮುಖ್ಯಕಾರಣ.

ಹಠಾತ್ತನೆ ಈಗ ಹಮಾಸ್ ಉಗ್ರವಾದಿಗಳು ಇಸ್ರೇಲ್ ಮೇಲೆ ದಾಳಿಮಾಡಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಹೊಂದಾಣಿಕೆ ಒಪ್ಪಂದಗಳಾಗುತ್ತಿರುವುದು ಬಹುಶಃ  ಹಮಾಸ್ ನಾಯಕರನ್ನು ಕಂಗೆಡಿಸಿರಬೇಕು. ಪ್ಯಾಲೆಸ್ಟೇನ್ ಜನರಿಗಾಗಿ ಇಸ್ರೇಲ್ ವಿರುದ್ಧ ಯುದ್ಧಕ್ಕಿಳಿದಿದ್ದ ಈ ದೇಶಗಳು ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವುದು ಹಮಾಸ್ ನಾಯಕರ ಹತಾಸೆಯನ್ನು ಹೆಚ್ಚಿಸಿರಬಹುದು. ಪ್ಯಾಲೆಸ್ಟೇನ್ ಸಮಸ್ಯೆಯನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆನ್ನುವ ಭಾವನೆಯಿಂದಾಗಿ ಹತಾಶರಾಗಿ ಇಂಥ ದಾಳಿಗೆ ಮುಂದಾಗಿರಬೇಕು. ದಾಳಿ ವ್ಯಾಪಕತೆ ಮತ್ತು ನಿರ್ದಿಷ್ಟತೆಯನ್ನು ನೋಡಿದರೆ ಕನಿಷ್ಠ ಆರು ತಿಂಗಳ ಪೂರ್ವಸಿದ್ಧತೆ ನಡೆದಿರಬೇಕು.

ಹಮಾಸ್‌ಗೆ ಇರಾನ್ ಬೆಂಬಲ ಕೊಡುತ್ತಿರುವ ವಿಚಾರ ಎಲ್ಲರಿಗೂ ತಿಳಿದದ್ದೇ ಆಗಿದೆ. ಆದರೆ ಈ ದಾಳಿಗೂ ತನಗೂ ಸಂಬಂಧವಿಲ್ಲ ಎಂದು ಸ್ವತಃ ದೇಶದ ಮುಖ್ಯಸ್ಥ ಅಲಿ ಖಮೇನಿ ಹೇಳಿರುವುದನ್ನು ನೋಡಿದರೆ ಹಮಾಸ್ ಮತ್ತೆಲ್ಲಿಂದ ನೆರವು ಪಡೆದಿರಬಹುದು ಎಂಬ ಪ್ರಶ್ನೆ ಏಳುತ್ತದೆ. ಈ ಬಗ್ಗೆ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅದಕ್ಕೂ ಒಂದು ಕಾರಣವಿದೆ. ಇರಾನ್ ಮತ್ತು ಅಮೆರಿಕದ ನಡುವೆ ಬಾಂಧವ್ಯ ವೃದ್ಧಿಯ ಮಾತುಕತೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಇರಾನ್ ಮೇಲೆ ಮತ್ತೆ ಸಂಶಯ ಬರುವಂತಾಗಿದೆ.

ಗೂಢಚರ್ಯೆಗೆ ಇಸ್ರೇಲ್ ಪ್ರಖ್ಯಾತ. ಇತರ ದೇಶಗಳಿಗೂ ತಮ್ಮ ತಂತ್ರಗಾರಿಕೆಯನ್ನು ಇಸ್ರೇಲ್ ಕೊಟ್ಟದ್ದಿದೆ. ಅಂಥ ದೇಶದ ಗೂಢಚರ್ಯೆ ಸಂಸ್ಥೆಗಳಿಗೆ ಹಮಾಸ್ ದಾಳಿ ಬಗ್ಗೆ ಸ್ವಲ್ಪವೂ ಸುಳಿವು ಸಿಗದಿದ್ದುದು ಆಶ್ಚರ್ಯವೇ ಸರಿ. ಯುದ್ಧದ ಸಮಯವಾದ್ದರಿಂದ ಪ್ರಧಾನಿ ನೇತಾನ್ಯಹು ಬಚಾವಾಗಿದ್ದಾರೆ. ಅವರ ರಾಜೀನಾಮೆಗೆ ವಿರೋಧಪಕ್ಷಗಳು ಖಂಡಿತ ಒತ್ತಾಯಿಸುತ್ತಿದ್ದವು. ಅದನ್ನು ಎಲ್ಲರೂ ಅನುಮೋದಿಸುತ್ತಿದ್ದರು. ಯುದ್ಧ ನಿಲ್ಲುತ್ತಿದ್ದಂತೆ ಅವರ ಅಽಕಾರದ ಅವಽಯೂ ಮುಗಿಯಬಹುದು. ಹಾಗೆಯೇ ದೇಶದ ರಾಜಕೀಯವೂ ಬದಲಾಗಬಹುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ