Light
Dark

ರಾಜ್ಯಗಳ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆಯೇ?

ಜಾರಖಂಡ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ತಲಾ ಆದಾಯವು ಇನ್ನೂ ಒಂದು ಲಕ್ಷ ರೂಪಾಯಿಗಳನ್ನೇ ತಲುಪಿಲ್ಲ!  

ಪ್ರೊ.ಆರ್.ಚಿಂತಾಮಣಿ

ಈ ಎಪ್ಪತ್ತೈದು ವರ್ಷಗಳಲ್ಲಿ ಭಾರತ ಎಲ್ಲ ರಂಗಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ. ಸ್ವತಂತ್ರ ದೇಶವಾದಾಗ ನಾವು ಪ್ರತಿ ವರ್ಷ ಏಳೆಂಟು ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುವ ಸ್ಥಿತಿಯಲ್ಲಿದ್ದೆವು. ಈಗ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದೇವೆ. ಆಗ ಜನ ಸಂಖ್ಯೆಯ ಶೇ.೬೦ಕ್ಕಿಂತ ಹೆಚ್ಚು ಜನರು ಬಡತನ ರೇಖೆಗಳಿಂತ ಕೆಳಗೆ ಇದ್ದರೆ ಕೆಲವು ವರ್ಷಗಳ ಹಿಂದಿನ ವರದಿಗಳ ಪ್ರಕಾರ ಈ ಪ್ರಮಾಣ ಶೇ.೧೯ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಈಗ ಇನ್ನೂ ಕಡಿಮೆಯಾಗಿದೆ. ನಮ್ಮ ರಕ್ಷಣಾ ವ್ಯವಸ್ಥೆ ಸದೃಢವಾಗಿದೆ. ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಇಂದು ಜಗತ್ತಿನ ಐದನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿದೆ ಎಂದು ಬ್ಲೂಮ್‌ಬರ್ಗ್ ಸಂಶೋಧನಾ ಸಂಸ್ಥೆ ಘೋಷಿಸಿದೆ. ನಮ್ಮ ರಾಷ್ಟ್ರೀಯ ಒಟ್ಟಾದಾಯವು (ಜಿಡಿಪಿ) ಇತರ ದೇಶಗಳಿಗಿಂತ ವೇಗವಾಗಿ ಬೆಳೆಯುತ್ತಿದ್ದು, ಸರಾಸರಿ ತಲಾ ಆದಾಯವೂ (ಛ್ಟಿ ್ಚಜಿಠಿ ಜ್ಞ್ಚಿಟಞಛಿ) ಗಣನೀಯವಾಗಿ ಹೆಚ್ಚುತ್ತಿರುವುದನ್ನು ಗಮನಿಸಬಹುದು. ಸಾಧಿಸಬೇಕಾದದ್ದು ಇನ್ನೂ ಬಹಳ ಇದೆ ಎನ್ನುವುದನ್ನೂ ನಾವು ಮತ್ತು ನಮ್ಮ ಆಡಳಿತಗಾರರು ವಿನೀತರಾಗಿ ಅರ್ಥಮಾಡಿಕೊಂಡು ಆ ದಿಕ್ಕಿನಲ್ಲಿ ಸೂಕ್ತ ಆರ್ಥಿಕ ನೀತಿಗಳನ್ನೂ ಹೊಸ ತಂತ್ರಗಳನ್ನೂ ರೂಪಿಸಿ ಅನುಷ್ಠಾನಗೊಳಿಸುವುದು ಇಂದಿನ ಅವಶ್ಯಕತೆ.

ಆದರೆ, ಈ ಒಟ್ಟಾರೆ ಬೆಳವಣಿಗೆಯ ಒಳ ಹೊಕ್ಕು ವಿವರಗಳನ್ನು ಗಮನಿಸಿದರೆ ಕೆಲವು ರಾಜ್ಯಗಳು ಹೆಚ್ಚು ಬೆಳವಣಿಗೆ ಕಂಡು ಮುಂದುವರೆದಿರುವುದು ಮತ್ತು ಬೇರೆ ಕೆಲವು ರಾಜ್ಯಗಳು ತೀರ ಹಿಂದೆ ಉಳಿದಿರುವುದು ಗೋಚರಿಸುತ್ತದೆ. ಆಯಾ ರಾಜ್ಯಗಳ ಜನ ಸಂಖ್ಯೆಯ ಸರಾಸರಿ ತಲಾ ಆದಾಯದಲ್ಲಿ ಇದು ಪ್ರತಿಪಲಿಸುತ್ತದೆ. ರಾಷ್ಟ್ರೀಯ ಸರಾಸರಿ ತಲಾ ಆದಾಯಕ್ಕಿಂತ ಮುಂದುವರಿದ ರಾಜ್ಯಗಳ ತಲಾ ಆದಾಯವು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದು ತಳ ಮಟ್ಟದಲ್ಲಿರುವ ರಾಜ್ಯಗಳ ತಲಾ ಆದಾಯವು ತೀರ ಕಡಿಮೆ ಇರುತ್ತದೆ. ಈ ಅಸಮಾನತೆಯನ್ನು ಕೆಲವು ಉದಾಹರಣೆಗಳೊಂದಿಗೆ ಸಂಕ್ಷಿಪ್ತವಾಗಿ ವಿವರಿಸಲು ಇಲ್ಲಿ ಯತ್ನಿಸಲಾಗಿದೆ.

ರಾಜ್ಯಗಳ ತಲಾ ಆದಾಯ ಪಟ್ಟಿಯಲ್ಲಿ ಪ್ರಾತಿನಿಧಿಕವಾಗಿ ಮೊದಲ ಐದು ರಾಜ್ಯಗಳು ಮತ್ತು ತಳದಲ್ಲಿರುವ ಐದು ರಾಜ್ಯಗಳನ್ನು ತೆಗೆದುಕೊಂಡು ವಿಶ್ಲೇಷಣೆ ಮಾಡಲಾಗಿದೆ. ಪಕ್ಕದಲ್ಲಿ ಕೊಟ್ಟಿರುವ ಸಂಖ್ಯಾಪಟ್ಟಿಯಲ್ಲಿ ೨೦೨೧-೨೨ ಹಣಕಾಸು ವರ್ಷದ ಈ ಹತ್ತು ರಾಜ್ಯಗಳ ತಲಾ ಆದಾಯಗಳನ್ನು ಗಮನಿಸಬಹುದು.

ಹೊಸದಿಲ್ಲಿ ೪೦೧೯೮೨ ರೂ. ತಲಾ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ೪೯೪೭೦ ರೂ.ನೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇವೆರೆಡರ ನಡುವಿನ ಅಂತರ ಎಷ್ಟು ದೊಡ್ಡದಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಲ್ಲದೆ ಹೊಸದಿಲ್ಲಿಗೂ ನಂತರದ ರಾಜ್ಯಗಳಿಗೂ ಒಂದುಕಾಲು ಲಕ್ಷ ರೂ.ಗಳಷ್ಟೇ ಅಂತರವಿದೆ. ಜಾರಖಂಡ, ಉತ್ತರ ಪ್ರದೇಶ ಮತ್ತು ಬಿಹಾರಗಳ ತಲಾ ಆದಾಯ ಒಂದು ಲಕ್ಷ ರೂ.ಗಳನ್ನೇ ತಲುಪಿಲ್ಲ.

ಕೆಲವು ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉತ್ತಮ ಸ್ಥಿತಿಯಲ್ಲಿದ್ದು, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ತಲಾ ಆದಾಯ ಹೊಂದಿರುವುದನ್ನು ಅಲ್ಲಗಳೆಯುವಂತಿಲ್ಲ. ಗುಜರಾತ್, ಮಹಾರಾಷ್ಟ್ರ , ಕೇರಳ ಮತ್ತು ಪಶ್ಚಿಮ ಬಂಗಾಲ ಮುಂದುವರಿದ ರಾಜ್ಯಗಳಲ್ಲಿ ಪರಿಗಣಿಸಲ್ಪಡುತ್ತವೆ.

ಇನ್ನೊಂದು ಅಂಶವನ್ನೂ ಇಲ್ಲಿ ಗಮನಿಸಬೇಕು. ಮೇಲಿನ ಐದು ರಾಜ್ಯಗಳ ಸರಾಸರಿ ತಲಾ ಆದಾಯ ೨೦೧೨-೧೩ರಲ್ಲಿ ೧೨೪೧೦೧ ರೂ.ಇದ್ದದ್ದು ೨೦೨೧-೨೦೨೨ರಲ್ಲಿ ೨೯೪೩೯೫ ರೂ.ಗಳಿಗೆ ಏರಿದೆ. ಅಂದರೆ ಈ ಒಂಭತ್ತು ವರ್ಷಗಳಲ್ಲಿ ಎರಡೂ ಕಾಲು ಪಟ್ಟಾಗಿದೆ. ಆದರೆ, ಕೆಳಗಿನ ಐದು ರಾಜ್ಯಗಳ ಸರಾಸರಿಯ ಅಂದು ೪೧೪೩೯ ರೂ. ಇದ್ದದ್ದು ಒಂಭತ್ತು ವರ್ಷಗಳ ನಂತರ ೮೯೨೫೯ ರೂ.ಆಗಿದೆ. ಅಂದರೆ ಅಂತರ ಸ್ವಲ್ಪ ಹೆಚ್ಚೇ ಆಗಿದೆ. ಹಣ ದುಬ್ಬರವೂ (ಬೆಲೆ ಏರಿಕೆ) ಹಿಂದುಳಿದ ರಾಜ್ಯಗಳನ್ನು ಹೆಚ್ಚು ಕಾಡುತ್ತಿದ್ದು ಆರ್ಥಿಕ ಅಂತರ ಹೆಚ್ಚಾಗಲು ಅದು ಒಂದೂ ಕಾರಣವಾಗಿದೆ. ಸಾಮಾನ್ಯವಾಗಿ ಬೆಲೆ ಏರಿಕೆಯಿಂದ ಉಳ್ಳವರಿಗಿಂತ ಬಡವರಿಗೇ ಹೆಚ್ಚು ತೊಂದರೆ.

ಅಸಮಾನತೆ ಕಡಿಮೆ ಮಾಡಬೇಕು

ಬರಿ ರಾಜ್ಯಗಳಲ್ಲಷ್ಟೇ ಅಸಮಾನತೆ ಇಲ್ಲ. ಪ್ರತಿಯೊಂದು ರಾಜ್ಯಗಳಲ್ಲೂ ಪ್ರಾದೇಶಿಕ ಅಸಮಾನತೆಗಳಿರುವುದನ್ನೂ ಗಂಭೀರವಾಗಿ ಪರಿಗಣಿಸಿ ಸರಿ ಪಡಿಸುವ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕು. ಇದರಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿರುತ್ತದೆ. ಅವುಗಳು ಮೇಲಿನಿಂದ ಬರುವ ಅನುದಾನಗಳಿಗಾಗಿ ಕಾಯದೇ ತಮ್ಮಲ್ಲಿಯೇ ಸಂಪನ್ಮೂಲಗಳನ್ನು ರೂಢಿಸಿಕೊಂಡು ಅವಶ್ಯವಿರುವ ಮತ್ತು ಬೆಳವಣಿಗೆಗೆ ಪೂರಕವಾಗಿರುವ ವಲಯಗಳಲ್ಲಿ ಹೂಡಿಕೆಗಳನ್ನು ಹೆಚ್ಚು ಮಾಡಿ ಸಮರ್ಥ ಮತ್ತು ಪ್ರಾಮಾಣಿಕ ನಿರ್ವಹಣೆಯಿಂದ ಅಭಿವೃದ್ಧಿ ಸಾಧಿಸಬೇಕು.

ಹಿಂದುಳಿದ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಸ್ಥಳೀಯರೇ ಉದ್ದಿಮೆಗಳನ್ನು ಆರಂಭಿಸಲು ಮತ್ತು ಕೃಷಿಯೂ ಸೇರಿ ಇತರ ವಲಯಗಳಲ್ಲಿ ಸಂಶೋಧನೆ ಮತ್ತು ನಾವಿನ್ಯತೆಗಳನ್ನು ರೂಢಿಸಿಕೊಳ್ಳಲು ಅನುಕೂಲವಾಗುವಂತೆ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ತರಬೇತಿಗಳನ್ನು ಹೆಚ್ಚಿಸಬೇಕು. ಕೇವಲ ಸಬ್ಸಿಡಿಗಳನ್ನು ಕೊಡುವ ಬದಲು ಈ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಲಾಭದಾಯಕವಾಗುವಂತೆ ವಾತಾವರಣ ನಿರ್ಮಿಸಬೇಕು. ಆಗ ವೆಂಚರ್ ಕ್ಯಾಪಿಟಲಿಸ್ಟ್‌ಗಳು ಮತ್ತು ಎಂಜೆಲ್ ಇನ್ವೆಸ್ಟರ್‌ಗಳು ಆ ಕಡೆಗೆ ಧಾವಿಸುತ್ತಾರೆ. ಖಾಸಗಿ ಬಂಡವಾಳವೂ ಆ ಕಡೆಗೆ ಹೆಚ್ಚು ಹರಿಯುವಂತಾಗುತ್ತದೆ.

ಪ್ರವಾಸೋದ್ಯಮ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸುವುದಲ್ಲದೆ ಇತರ ಉದ್ದಿಮೆಗಳ ಬೆಳವಣಿಗೆಗೆ ಪೂರಕವಾಗಿದೆ. ಅದರ ವೈಜ್ಞಾನಿಕ ಬೆಳವಣಿಗೆಗೆ ಅನುಕೂಲಗಳನ್ನು ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶೈಕ್ಷಣಿಕ ಪ್ರವಾಸೋದ್ಯಮ, ಕೈಗಾರಿಕಾ ಪ್ರವಾಸೋದ್ಯಮ, ಆರೋಗ್ಯ ಪ್ರವಾಸೋದ್ಯಮ, ಐತಿಹಾಸಿಕ ಪ್ರವಾಸೋದ್ಯಮ ಹೀಗೆ ಹಲವು ಭಾಗಗಳಲ್ಲಿ ಅದು ವಿಸ್ತರಣೆಯಾಗಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ