Mysore
20
overcast clouds
Light
Dark

ನೀರು ಬೇಕೆಂದರೆ ಇಲ್ಲಿ ಹಗ್ಗ ಹಿಡಿದು ಬಾವಿಗೇ ಇಳಿಯಬೇಕು!

ಒಮ್ಮೆ ಮಳೆಗಾಲ ಶುರುವಾಯಿತೆಂದರೆ ಮಹಾರಾಷ್ಟ್ರದ ನಂದೂರ್ ಬಾರ್ ಜಿಲ್ಲೆಯ ದೇಬ್ರಮಲ್ ಗ್ರಾಮದ ಜನ ದೊಡ್ಡದೊಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಸಾತ್ಪುರ ಪರ್ವತ ಶ್ರೇಣಿಯ ನೆತ್ತಿಯ ಮೇಲಿರುವ ದೇಬ್ರಮಲ್ ಒಂದು ಸುಂದರ ಹಳ್ಳಿ. ಈ ಹಳ್ಳಿಯ ಅಂಚಿನಲ್ಲಿ ನಿಂತು ನೋಡಿದರೆ ದೂರದಲ್ಲಿ ಹರಿಯುವ ನರ್ಮದಾ ನದಿಯ ವಿಹಂಗಮ ನೋಟ ಕಾಣಿಸುತ್ತದೆ. ಆದರೆ, ದೇಬ್ರಮಲ್ ಗ್ರಾಮದ ಜನ ಆ ನದಿ ನೀರನ್ನು ನೋಡಿ ಕಣ್ಣು ತಣಿಸಿ ಕೊಳ್ಳಬಹುದೇ ವಿನಾ ಹೊಟ್ಟೆ ತಣಿಸಿಕೊಳ್ಳಲಾರರು. ಏಕೆಂದರೆ, ಮಾರ್ಚ್ ತಿಂಗಳು ಬಂತೆಂದರೆ ದೇಬ್ರಮಲ್‌ನಲ್ಲಿ ಕುಡಿಯುವ ನೀರಿನ ಬವಣೆ ಶುರುವಾಗುತ್ತದೆ. ಇದು ಮಳೆಗಾಲ ಶುರುವಾಗುವ ತನಕ ಮುಂದುವರಿಯುತ್ತದೆ. ಎಂತಹ ಬವಣೆಯೆಂದರೆ, ಒಂದು ಕೊಡ ಕುಡಿಯುವ ನೀರು ಬೇಕೆಂದರೂ ಒಂದು ಗಂಟೆ ನಡೆದು, ಹಗ್ಗ ಹಿಡಿದು 40 ಅಡಿ ಆಳದ ಬಾವಿಗೆ ಇಳಿದು, ಅದರ ತಳದಲ್ಲಿ ಒಸರುವ ನೀರನ್ನು ತುಂಬಿ ಮೇಲಕ್ಕೆ ತರಬೇಕು. ಬೇರೆಡೆಯಲ್ಲಿ ಕೊಡಕ್ಕೆ ಹಗ್ಗ ಕಟ್ಟಿ ಬಾವಿಗಿಳಿಸಿ ನೀರು ಸೇದಿದರೆ, ದೇಬ್ರಮಲ್ ಗ್ರಾಮದ ಜನ ಹಗ್ಗ ಹಿಡಿದು ಬಾವಿಗೇ ಇಳಿದು ನೀರು ತರಬೇಕು!

50 ಕುಟುಂಬಗಳಿರುವ ದೇಬ್ರಮಲ್ ಗ್ರಾಮದಲ್ಲಿ ಮಾರ್ಚ್ ತಿಂಗಳಿಂದ ಮಳೆಗಾಲ ಶುರುವಾಗುವ ತನಕ ಪ್ರತಿ ಮನೆಯಲ್ಲೂ ಒಬ್ಬಿಬ್ಬರಿಗೆ ಬಾವಿಗಿಳಿದು ನೀರು ತರುವುದೇ ಚಾಕರಿಯಾಗುತ್ತದೆ. ಈ ಒಬ್ಬಿಬ್ಬರು 11 ವರ್ಷದ ಬಾಲಕ/ಬಾಲಕಿಯರಾಗಿರಬಹುದು ಅಥವಾ 50 ವರ್ಷದ ವಯಸ್ಕರೂ ಆಗಿರಬಹುದು. ಕಳೆದ ಐದು ದಶಕಗಳಿಂದ ಈ ವಿಚಿತ್ರ ವಾದರೂ ನಂಬಲೇಬೇಕಾದ ಚಾಕರಿ ನಡೆಯುತ್ತಿದೆ. ಬೆಟ್ಟದ ಇಳಿಜಾರಿ ನಲ್ಲಿರುವ ಈ ಬಾವಿಯಲ್ಲಿ ಬೆಳಿಗ್ಗಿನ ನಸುಕಿನಿಂದ ಶುರುವಾಗಿ ತಡ ರಾತ್ರಿಯವರೆಗೂ ಈ ಚಾಕರಿ ನಡೆಯುತ್ತದೆ. ಹಿಂದೆ ಸಪೂರವಾಗಿದ್ದ ಈ ಬಾವಿ ಈಗ ಬಹಳಷ್ಟು ಅಗಲವಾಗಿದೆ. ಪ್ರತೀ ತಲೆಮಾರಿಗೆ ಬಾವಿಗಿಳಿಯುವವರೂ ಬದಲಾಗಿದ್ದಾರೆ. ಆದರೆ, ನೀರಿನ ಬರಸ್ಥಿತಿಯಲ್ಲಿ ಮಾತ್ರ ಕಳೆದ ಐವತ್ತು ವರ್ಷಗಳಿಂದ ಯಾವುದೇ ಬದಲಾವಣೆಯಾಗಿಲ್ಲ.

ಹೀಗಾಗಿ ದೇಬ್ರಮಲ್‌ನ ಜನರಿಗಿರುವುದು ಎರಡೇ ಆಯ್ಕೆ-ಕುಡಿಯಲು ನೀರಿಲ್ಲದೆ ಬವಣೆ ಪಡುವುದು ಅಥವಾ ೪೦ ಅಡಿ ಆಳದ ಈ ಬಾವಿಯ ತಳಕ್ಕಿಳಿದು ನೀರು ತರುವುದು. ಹೀಗೆ ಬಾವಿಗಿಳಿಯಲು ಆಗದವರು ಮೂರು ಕಿ.ಮೀ. ಬೆಟ್ಟದಿಂದಿಳಿದು ಬೇರೊಂದು ಹಳ್ಳಿಯಿಂದ ನೀರು ತರಬೇಕು.

14 ವರ್ಷ ಪ್ರಾಯದ ದಿನೇಶ್ ವಾಳ್ವಿ ತನ್ನ 10ನೇ ವಯಸ್ಸಿನಿಂದ ಬಾವಿಗಿಳಿಯುವ ಚಾಕರಿ

ಮಾಡುತ್ತಿದ್ದಾನೆ. ಹನ್ನೊಂದನೇ ತರಗತಿಯಲ್ಲಿ ಕಲಿಯುತ್ತಿರುವ ರಾಹುಲ್ ಪಾಡವಿ ಬೇಸಿಗೆ ರಜೆಯಲ್ಲಿ ಊರಿಗೆ ಬಂದಾಗಲೆಲ್ಲ ಅವನ ಹೆಚ್ಚಿನ ಸಮಯ ಬಾವಿಯೊಳಗೆ ಕಳೆಯುತ್ತದೆ. ಹಗ್ಗ ಹಿಡಿದು ಬಾವಿಗಿಳಿಯುವುದು ಸುಲಭದಂತೆ ತೋರಿದರೂ ವಾಪಸ್ ಹತ್ತಿ ಬರುವುದು ಬಹು ತ್ರಾಸದಾಯಕ. ಕೆಳಕ್ಕಿಳಿದು ಕೊಡಗಳಿಗೆ ನೀರು ತುಂಬಿಸಿ ಶ್ರಮವಾಗುವುದರ ಜೊತೆ ಬಾವಿಯ ತಳದಲ್ಲಿ ಗಾಳಿ ಕಡಿಮೆ ಇರುವ ಕಾರಣ ಉಸಿರಾಡುವುದೂ ಕಷ್ಟ. ಸೆಖೆ ಬೇರೆ. ಆದರೆ, ಎಷ್ಟೇ ಸುಸ್ತಾದರೂ ಹತ್ತುವಾಗ ಸರಸರನೆ ಹತ್ತಿ ಬರಬೇಕು. ಏಕೆಂದರೆ, ಸುಸ್ತಾಯಿತೆಂದು ನಿಧಾನಕ್ಕೆ ಹತ್ತಿದರೆ ಇನ್ನಷ್ಟು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಹಗ್ಗ ಹಿಡಿದ ಕೈ ಜಾರಿದರೆ ಸೀದಾ ಕಲ್ಲಿನ ಮೇಲೆ ಬಿದ್ದು, ಪ್ರಾಣಾಪಾಯವಾಗುವ ಸಂಭವವಿರುತ್ತದೆ.

ದಿನೇಶ್ ವಾಳ್ವಿಯಂತಹ ಪುಟ್ಟ ಬಾಲಕರು ಸರಸರನೆ ಬಾವಿಗಿಳಿಯುತ್ತಾರೆ. ಆದರೆ, ವಾಪಸ್ ಹತ್ತುವಾಗ ಬಹಳ ಕಷ್ಟಪಡುತ್ತಾರೆ. ಆಗ ಬಕೆಟನ್ನು ಬಾವಿಗಿಳಿಸಿ, ಅದರಲ್ಲಿ ಅವರನ್ನು ಕುಳ್ಳಿರಿಸಿ ಮೇಲಕ್ಕೆತ್ತುತ್ತಾರೆ. ಕಳೆದ ವರ್ಷ ಶಿರೀಶ್ ವಾಳ್ವಿಗೆ ಹನ್ನೊಂದು ತುಂಬಿತ್ತು. ಅವನ ತಂದೆ ತರಬೇತಿ ನೀಡಲು ಅವನನ್ನು ಒಂದು ಬಕೆಟೊಳಗೆ ಕುಳ್ಳಿರಿಸಿ ಬಾವಿಯೊಳಕ್ಕೆ ಇಳಿಸಿದರು. ಕೆಲವು ಅಡಿ ಕೆಳಕ್ಕೆ ಹೋಗುತ್ತಲೇ ಶಿರೀಶ್ ಭಯದಿಂದ ಕೂಗತೊಡಗಿದನು. ಆದರೂ ತಂದೆ ಅವನನ್ನು ಮೇಲಕ್ಕೆತ್ತದೆ ಬಾವಿಯ ತಳಕ್ಕೆ ಇಳಿಸಿಯೇ ಬಿಟ್ಟರು. ಅವರ ಚಿಂತೆಯೇ ಬೇರೆ- ಮುಂದೆ ತನಗೆ ವಯಸ್ಸಾದ ಮೇಲೆ ಅವನೇ ತಾನೇ ಬಾವಿಗಿಳಿದು ಕುಟುಂಬಕ್ಕೆ ನೀರು ತರಬೇಕಾದವನು? ಈಗ ಶಿರೀಶ್ ಯಾವ ಭಯವೂ ಇಲ್ಲದೆ ಸರಾಗವಾಗಿ ಹಗ್ಗ ಹಿಡಿದು ಬಾವಿಗಿಳಿದು ನೀರೆತ್ತಿ ಕೊಡುವ ಚಾಕರಿ ಮಾಡುತ್ತಾನೆ.

ಗಲಿನ ಉರಿ ಬಿಸಿಲಿನ ಕಾರಣ ದೇಬ್ರಮಲ್‌ನಲ್ಲಿ ನೀರು ತರುವ ಚಾಕರಿ ಹಗಲಿಗಿಂತ ರಾತ್ರಿ ಹೊತ್ತು ಹೆಚ್ಚು ನಡೆಯುತ್ತದೆ. ಆಗ ಗಂಡಸರಲ್ಲದೆ ಮಕ್ಕಳು, ಹೆಂಗಸರು ಪಾತ್ರೆ ಹಿಡಿದು ಬಾವಿ ಕಟ್ಟೆಗೆ ಬಂದು ತಮ್ಮ ಜಾಗ ನಿಗದಿ ಮಾಡುತ್ತಾರೆ. ಮನೆಗೆ ವಾಪಸು ಹೋಗಿ ಬೆಳಿಗ್ಗೆ ಮತ್ತೆ ಪುನಃ ಬರುವುದು ಬೇಡವೆಂದು ಕೆಲವರು ಬಾವಿ ಕಟ್ಟೆಯ ಬಳಿಯೇ ಮಲಗುತ್ತಾರೆ. ರಾತ್ರಿ ಹೊತ್ತಲ್ಲಿ ಅನುಭವಸ್ಥರು ಮಾತ್ರವೇ ಬಾವಿಗಿಳಿಯ ಬಲ್ಲರು. ಹೆಚ್ಚೂ ಕಡಿಮೆ ನಡು ವಯಸ್ಸಿನ ಖೇತ್ಯಾ ವಾಳ್ವಿ ಅಂತಹ ಒಬ್ಬ ಅನುಭವಸ್ಥ. ನಾಲ್ಕ್ತ್ಯೈದು ಅಡಿ ಕೆಳಕ್ಕಿಳಿಯುತ್ತಲೇ ಕತ್ತಲೆಯಿಂದಾಗಿ ಏನೂ ಕಾಣಿಸದು. ಕೇವಲ ಅನುಭವದ ಅಂದಾಜಿನಲ್ಲೇ ಬಾವಿಯ ಗೋಡೆಗೆ ಬಡಿಯದಂತೆ ಎಚ್ಚರಿಕೆ ವಹಿಸಿ, ತಳ ಮುಟ್ಟಿ, ನೀರು ತುಂಬಿಸಬೇಕು. ಅದಾಗಲೇ ಇತರರು ನೀರು ತುಂಬಿಸಿಕೊಂಡು ಹೋಗಿರುವುದರಿಂದ ಒಂದೆರಡು ಕೊಡ ನೀರು ತುಂಬಿಸಲು ಗಂಟೆಗಳ ಸಮಯ ತಗಲುತ್ತದೆ. ಖೇತ್ಯಾ ವಾಳ್ವಿ ಇಷ್ಟೆಲ್ಲ ಮಾಡಿ ಮೇಲಕ್ಕೆ ಬರುವಷ್ಟರಲ್ಲಿ ಸುಸ್ತಾಗಿರುತ್ತಾನೆ. ಆದರೂ, ಅಷ್ಟಕ್ಕೆ ಅವನ ಚಾಕರಿ ಮುಗಿಯುವುದಿಲ್ಲ. ನೀರಿನ ಕೊಡಗಳನ್ನು ಎತ್ತಿಕೊಂಡು ಮನೆ ತಲುಪಲು ಒಂದು ಗಂಟೆ ನಡೆಯಬೇಕು!

ದೇಬ್ರಮಲ್‌ನ ಈ ನೀರಿನ ಸಮಸ್ಯೆಯನ್ನು ಪರಿಹರಿಸಲು ಮಹಾರಾಷ್ಟ್ರ ಸರ್ಕಾರ ಏನೂ ಮಾಡಿಲ್ಲ ಅಂತಲ್ಲ. ೨೦೧೭ರಲ್ಲಿ ಒಂದು ಯೋಜನೆಯನ್ನು ಘೋಷಿಸಿ, ಸರ್ಕಾರಿ ಅಧಿಕಾರಿಗಳು ಗ್ರಾಮದ ಸರ್ವೇ ಮಾಡಿ, ಒಂದು ನೀರಿನ ಟ್ಯಾಂಕನ್ನು ನಿರ್ಮಿಸಿ, 17 ಹ್ಯಾಂಡ್ ಪಂಪುಗಳನ್ನು ನಿಲ್ಲಿಸಿ, ಎರಡು ಬಾವಿಗಳನ್ನು ಅಗೆದು ಹೋಗಿದ್ದರು. ಆದರೆ, ಅವುಗಳಲ್ಲಿ ನೀರು ಮಾತ್ರ ಬರಲಿಲ್ಲ! ಮತ್ತೆ ಕಳೆದ ವರ್ಷ ಜಿಲ್ಲಾಧಿಕಾರಿ ಬಂದು ಜಲ್ ಜೀವನ್ ಮಿಷನ್ ಯೋಜನೆಯಡಿ ಸರ್ವೇ ಮಾಡಿ ಹೋಗಿದ್ದಾರೆ. ಸದ್ಯಕ್ಕೆ ಮಳೆಗಾಲ ಶುರುವಾಗಿ ಬಾವಿ ತುಂಬುತ್ತಿರುವುದರಿಂದ ದೇಬ್ರಮಲ್‌ನ ಬಡಪಾಯಿಗಳಿಗೆ ಮುಂದಿನ ಮಾರ್ಚ್ ತಿಂಗಳ ತನಕ ಈ ಚಾಕರಿಯಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ