Mysore
20
overcast clouds
Light
Dark

ಮಾನಾಪಮಾನದ ನೆನಪುಗಳು

ವರ್ಷಂಪ್ರತಿ ಋತುಗಳಂತೆ ತಪ್ಪದೆ ಬರುತ್ತಿದ್ದ ಆರ್ಥಿಕ ತಾಪತ್ರಯಗಳು, ಲೋಕದ ಅಪಮಾನ ಉದಾಸೀನ ತಿರಸ್ಕಾರಗಳನ್ನು ಸ್ವೀಕರಿಸುವ ಜಡತೆ ಬೆಳೆಸುತ್ತವೆ. ಬದುಕೇ ದಯಪಾಲಿಸುವ ರಕ್ಷಣಾತ್ಮಕ ರೂಕ್ಷತೆಯಿದು- ಸುತ್ತಿಗೆ ಹಿಡಿದು ಜಡ್ಡುಗಟ್ಟಿದ ಅಪ್ಪನ ಅಂಗೈಯಂತೆ. ಕಾವಲಿಯ ಮೇಲೆ ರೊಟ್ಟಿ ಮಗುಚುತ್ತ ಶಾಖದ ಸಂವೇದನೆ ಕಳೆದುಕೊಂಡ ಅಮ್ಮನ ಬೆರಳಂತೆ. ಆಸುಪಾಸಿನ ಎಲ್ಲರ ಪಾಡೂ ಒಂದೇ ಆಗಿದ್ದಾಗಲಂತೂ ನಮ್ಮ ಬವಣೆ ವಿಶೇಷವೆನಿಸದು. ಧರ್ಮದ ಕಾರಣಕ್ಕೆ ಅನುಭವಿಸುವ ತಾರತಮ್ಯವಾದರೂ ಅಷ್ಟೆ. ಪ್ರಜ್ಞೆಯೊಳಗೆ ಹಾಯದ ಹೊರತು ವೇದನೆಯಾಗಿ ಕಾಡದು.

ಮಾಧ್ಯಮಿಕ ಶಾಲೆಯಲ್ಲಿ ನಾನು ದೊಗಳೆ ಪೈಜಾಮ ಉಟ್ಟು ಹೋಗುತ್ತಿದ್ದೆ. ಅದು ಕೋಲಿಗೆ ಪತಾಕೆ ಕಟ್ಟಿದಂತೆ ಹಾಸ್ಯಾಸ್ಪದ ಕಾಣುತ್ತಿರಬೇಕು. ಮೇಷ್ಟರು ಬೇಸರವಾದಾಗ ‘ಚಳ್ಳಸಾಬಿ, ಬಾರೊ ಇಲ್ಲಿ’ ಎಂದು ಕರೆಯುವರು. ಇಳಿಬಿದ್ದ ಇಜಾರದ ಲಾಡಿಗೆ ಕೋಲು ಹಾಕಿ ಜಗ್ಗುವರು. ಬಡಿಯುವಂತೆ ನಟಿಸುತ್ತ ಬೆತ್ತವನ್ನು ಮೇಲೆತ್ತುವರು. ನಾನು ದೇಹವನ್ನು ಬಿಲ್ಲಿನಂತೆ ಬಾಗಿಸಿ ಬೇಡಸಾ ಇಲ್ಲಸಾ ಎಂದು ನುಲಿಯುತ್ತಿರಲು, ‘ಆಹಹಾ! ಮಗಂದು ಜ್ಯೋತಿಲಕ್ಷಿ ಡ್ಯಾನ್ಸ್’ ಎನ್ನುವರು. ಕೆಲವರ ಚಡ್ಡಿಯೊಳಗೆ ಸರಕ್ಕನೆ ಕೋಲುತೂರಿಸಿ ಚಕಿತಗೊಳಿಸುವ ಗುಣವೂ ಗುರುಗಳಲ್ಲಿತ್ತು. ಕ್ಲಾಸು ಗೊಳ್ಳೆನ್ನುತ್ತಿತ್ತು. ನಮಗೆ ಗುರುಚೇಷ್ಟೆ ಅಪಮಾನ ಅನಿಸುತ್ತಿದ್ದಿಲ್ಲ. ಸಾಮಾನ್ಯ ಹೊಡೆತ ಬೈಗುಳಗಳಿಗೆ ಕೇರೇ ಮಾಡಿದ್ದಿಲ್ಲ. ಆದರೆ ಕೆಲವು ಹೊಡೆತಗಳು ಮಾತ್ರ ಮರೆಯದ ಮಾಣಿಕ್ಯಗಳು.

ಹೈಸ್ಕೂಲಿನಲ್ಲಿ ಸುಬ್ಬರಾವ್ ಎಂಬ ಹೆಡ್‌ಮಾಸ್ಟರ್ ಇದ್ದರು. ಅವರ ಹೆಣ್ಣುಮಕ್ಕಳು ನಮ್ಮ ಕಾಲೇಜಿನಲ್ಲೇ ಓದುತ್ತಿದ್ದರು. ಪ್ರಿನ್ಸಿಪಾಲರಿಗೆ ಬೆಳೆದ ಹುಡುಗರೆಲ್ಲ ಹುಡುಗಿಯರನ್ನು ಕಾಡುವ ಪೋಲಿಗಳು ಎಂಬ ಅನುಮಾನ. ಹುಡುಗಿಯರನ್ನು ಕೆಣಕಿದ ಪ್ರಕರಣದಲ್ಲಿ ಕೆರಳಿದ ಸರ್ಪವಾಗುತ್ತಿದ್ದರು. ಶಂಕಿತರನ್ನು ದನಕ್ಕೆಂಬಂತೆ ಬಡಿಯುತ್ತಿದ್ದರು. ಕಪಾಳಕ್ಕೆ ಒಂದು ಬಿಟ್ಟರೆ ವಾರಕಾಲ ಸುಧಾರಿಸಿಕೊಳ್ಳಬೇಕು. ದಷ್ಟಪುಷ್ಟ ಮೈಕೈಯಿದ್ದ ಹುಡುಗರು ಅವರ ಪ್ರಹಾರಕ್ಕೆ ಸುಲಭ ಗುರಿಗಳಾಗಿದ್ದರು. ಒಂದು ಸಲ ಸರಸ್ವತಿ ಪೂಜೆಗೆ ಐದು ರೂಪಾಯಿ ಬಾಕಿ ಇದ್ದವರನ್ನೆಲ್ಲ ಸಾಲಾಗಿ ನಿಲ್ಲಿಸಿ ಕೆನ್ನೆಮೋಕ್ಷ ಮಾಡಿದರು. ನನಗೆ ಮೆದುಳು ಒಮ್ಮೆ ಅಲ್ಲಾಡಿದಂತಾಗಿ ಜುಮ್ಮೆಂದಿv . ಆದರೆ ಸಪೂರನಾಗಿಯೂ ಕೋಮಲವಾಗಿಯೂ ಇದ್ದ ಸಹಪಾಠಿ ಆಚಾರಿ ಧಾತುತಪ್ಪಿ ನೆಲಕ್ಕೆ ಬಿದ್ದನು. ಐದು ರೂಪಾಯಿ ಚಂದಾ ಅನೇಕರಿಗೆ ಹೊರಲಾರದ ಹೊರೆಯಾಗಿತ್ತು.

ಅಪ್ಪ ಪೇಟೆಯ ಸಾಹುಕಾರರ ಹಿತ್ತಲುಗಳನ್ನು ಚೊಕ್ಕಮಾಡಿ, ಬೀಜ ಬಿತ್ತುವ ಸಸಿ ನೆಡುವ ಗುತ್ತಿಗೆ ಹಿಡಿಯುತ್ತಿದ್ದನು. ಉತ್ತು, ಕಸತೆಗೆದು, ಬಿತ್ತಿ, ಮುಳ್ಳುಬೇಲಿ ಹಾಕಿ ಭದ್ರಗೊಳಿಸುತ್ತಿದ್ದನು. ಜತೆಗೆ ನನ್ನನ್ನೂ ಕರೆದೊಯ್ಯುತ್ತಿದ್ದನು. ಒಮ್ಮೆ ಮಾಲಿ ಕೆಲಸಕ್ಕೆ ಹೋದ ಮನೆಯ ಹಿತ್ತಲಲ್ಲಿ ಸೀಬೆಗಿಡವಿತ್ತು. ಹಣ್ಣು, ಹಕ್ಕಿ ಅಳಿಲು ತಿಂದು ಸೂರೆ ಹೊಡೆದಿದ್ದವು. ನಾನು ಯುದ್ಧಭೂಮಿಯ ಗಾಯಾಳುಗಳಂತಿದ್ದ ಹಣ್ಣನ್ನೆಲ್ಲ ಆರಿಸಿ ಟವೆಲಿನಲ್ಲಿ ಕಟ್ಟಿಕೊಂಡೆ. ಹೊರಡುವಾಗ ಮನೆಯೊಡತಿ ತಪಾಸಣೆ ನಡೆಸಿದಳು. ಹಕ್ಕಿಗಡುಕ ಹಣ್ಣಿಗೇನೂ ಹೇಳಲಿಲ್ಲ. ಜೇಬಲ್ಲಿದ್ದ ತೊಗರಿಕಾಯಿ ಕಂಡು ಆಕೆಗೆ ಸಿಟ್ಟು ಬಂದಿತ್ತು. ‘ದಸ್ತೂ, ಇವನ ಕೈಬಾಯಿ ಸುದ್ದಿಲ್ಲ. ನಾಳಿಂದ ಕರಕೊಂಡು ಬರಬೇಡ’ ಎಂದಳು. ಅಪ್ಪ ಹೊರಬಂದ ಬಳಿಕ ‘ಮಕ್ಕಳಿಲ್ಲ ಮರಿಲ್ಲ. ದೇವರು ಎಷ್ಟ್ ಕೊಟ್ಟಿದ್ದಾನೆ. ನಾಲ್ಕು ಕಾಯಿಗೆ ಈಕೆ ಗಂಟು ಹೋಗುತ್ತಿತ್ತೇ? ದೊಡ್ಡ ಮನುಷ್ಯರು. ಸಣ್ಣ ಮನಸ್ಸು’ ಎಂದು ಗೊಣಗಿದನು. ಮನೆಗೆ ಬಂದು ಅಮ್ಮನಿಗೆ ವರದಿ ಮಾಡಿದೆ. ‘ತಪ್ಪಲ್ವಾ? ನೀನು ಕೇಳಿ ಕಿತ್ತುಕೊಬೆಕಾಗಿತ್ತು’ ಎಂದಳು.

ಅಪ್ಪ ಪರಸ್ಥಳಕ್ಕೆ ಹೋದರೆ ನನ್ನನ್ನು ಕರೆದೊಯ್ಯುತ್ತಿದ್ದನು. ಒಂದು ಸಲ ನಾವಿಬ್ಬರೂ ಕುಲುಮೆಗೆ ಜಾಗ ಕೊಟ್ಟಿದ್ದ ಸಾಹುಕಾರರ ಮನೆಯ ಮದುವೆಗೆಂದು ಶಿವಮೊಗ್ಗಕ್ಕೆ ಹೋದೆವು. ಕರ್ನಾಟಕ ಸಂಘದ ಸ್ಟಾಪಿನಲ್ಲಿ ಇಳಿದು ವೀರಶೈವ ಕಲ್ಯಾಣಮಂಟಪ ವಿಚಾರಿಸಿದೆವು. ನಮ್ಮಂತೆ ಮದುವೆಗೆ ಬಂದಿದ್ದ ಅಡಕೆ ತೋಟದ ಸಾಹುಕಾರರು ಎದುರಾದರು. ಅಪ್ಪ ‘ಮದುವೆ ಛತ್ರ ಎಲ್ಲೈತಿ ಸ್ವಾಮಿ?’ ಎಂದು ಕೇಳಿದನು. ಆತನಿಗೆ ಅಪ್ಪನೂ ಆಹ್ವಾನಿತನಾಗಿರುವುದು ವಿಚಿತ್ರ ಅನಿಸಿರಬೇಕು- ‘ಇದೇ ರೋಡಲ್ಲಿ ನೆಟ್ಟಗೆ ಹೋಗು’ ಎಂದು ಗಾಂಽಬಜಾರಿನತ್ತ ತೋರಿಸಿದನು. ನಾವು ಕಿಲೋಮೀಟರಷ್ಟು ನಡೆದು ಛತ್ರ ತಲುಪಿದೆವು. ಅಲ್ಲಿ ಬೇರೆಯೇ ಮದುವೆ. ‘ಅರರೇ! ಛಿನಾಲ್ಕಾ ಝೂಟ್ ಬೋಲ್ಯಾರೆ’ ಎಂದು ಅಪ್ಪ ಬೈದನು. ಹುಡುಕಿಕೊಂಡು ಮದುವೆ ಛತ್ರಕ್ಕೆ ಬಂದೆವು. ಅದು ಬಸ್ಸಿಳಿದ ಜಾಗದಲ್ಲೇ ಇತ್ತು.

ನಾವು ಛತ್ರ ಪ್ರವೇಶಿಸುವಾಗ ಲಗ್ನ ಮುಗಿದು ಶಾಸಕರೂ ಮುನಿಸಿಪಲ್ ಮೆಂಬರುಗಳೂ ಅಡಕೆ ತೋಟದ ಕುಳಗಳೂ ದೊಡ್ಡ ವ್ಯಾಪಾರಿಗಳೂ ಊಟಕ್ಕೆ ಏಳುತ್ತಿದ್ದರು. ಅಪ್ಪನನ್ನು ಕಂಡ ಸಾಹುಕಾರರು ‘ಯಾಕೊ ದಸ್ತು, ಲೇಟ್ ಮಾಡಿದೆ?’ ಎನ್ನಲು, ಅಪ್ಪ ಸಾದ್ಯಂತ ವಿವರಿಸಿದನು. ಸಾಹುಕಾರರು ‘ಬೇಜಾರ ಮಾಡ್ಕೊಬ್ಯಾಡ. ಸಣ್‌ಜನ ಎಲ್ಲ ಕಡೆ ಇರ್ತಾರೆ. (ಕೈಯಲ್ಲಿದ್ದ ಮುಯ್ಯಿ ಕವರನ್ನು ಕಂಡು) ಇದನ್ನ ನಿನ್ನಲ್ಲೇ ಇಟ್ಟುಕೊ. (ನನ್ನ ಬಾಡಿದ ಮುಖ ನೋಡಿ) ಹುಡುಗ ಹಸ್ದಂಗೈತಿ. ಮೊದಲು ಹೋಗಿ ಊಟ ಮಾಡಸು’ ಎಂದರು. ದೊಡ್ಡ ಬಾಳೆಲೆಯಲ್ಲಿ ಬಡಿಸಿದ ಬಗೆಬಗೆಯ ಭಕ್ಷ್ಯಗಳು, ‘ಮಾಯಾಬಜಾರ್’ನ ‘ಇದಾವ ಭೋಜನವಿದು’ ದೃಶ್ಯವನ್ನು ನೆನಪಿಸಿದವು. ಫೇಣಿ-ಬಾದಾಮಿ ಹಾಲು ಜೀವನದಲ್ಲೇ ಮೊದಲ ಸಲ ಕಂಡಿದ್ದು. ಅವನ್ನೆಲ್ಲ ತಿನ್ನುತ್ತ ನಿಷ್ಕಾರಣವಾಗಿ ಬಿಸಿಲಲ್ಲಿ ಪಥ ಸಂಚಲಗೈದ ತಾಪತ್ರಯವೆಲ್ಲ ಮರೆಯಾಯಿತು.

ಒಂದು ಸಲ ಗೆಳೆಯರೊಟ್ಟಿಗೆ ಪ್ರವಾಸವಿತ್ತು. ಹಾದಿಯಲ್ಲಿ ಸಿಕ್ಕ ಊರಲ್ಲಿ ಪರಿಚಿತ ಕನ್ನಡ ಲೇಖಕರಿದ್ದರು. ಅವರನ್ನು ಕಾಣಬಯಸಿದೆವು. ಶ್ರೀಯುತರು ಮನೆಯಲ್ಲಿದ್ದಾರೆಯೇ ತಿಳಿಯಬೇಕಿತ್ತು. ರಸ್ತೆ ಬದಿಯಿದ್ದ ಸಾರ್ವಜನಿಕ ಬೂತಿಗೆ ಹೋದೆ. ಅಲ್ಲೊಬ್ಬ ಯುವಕ ಫೋನ್ ಆಪರೇಟರ್ ಯುವತಿಯ ಜತೆ ಚಕಮಕಿ ನಡೆಸಿದ್ದ. ಟೆಲಿಫೋನ್ ಡೈರಿಕ್ಟರಿ ಕೇಳಿದೆ. ಆತ ‘ಯಾರ ನಂಬರ್ ಬೇಕಾಗತ?’ ಎನ್ನಲು ಹೆಸರು ಹೇಳಿದೆ. ‘ಓ! ಆ ಮುದ್ಕಂದಾ?’ ಎಂದ. ‘ನಿಮ್ಮ ಅವರ ಜಗಳ ಸಾವಿರ ಇರಬಹುದು. ನಮಗೆ ಬೇಕಾದವರು ಅವರು. ದಯವಿಟ್ಟು ಹಗುರ ಮಾತಾಡಬೇಡಿ’ ಎಂದೆ. ಆತ ಹುಡುಕಿಕೊಟ್ಟ ನಂಬರಿಗೆ ಕರೆ ಮಾಡಿ ಹಿಂತಿರುಗುತ್ತಿದ್ದೆ. ಆತ ‘ಏಯ್…ನಂಬರ್ ಹುಡಿಕೊಟ್ಟೆ ಥ್ಯಾಂಕ್ಸ್ ಹೇಳುವಟ್ಟೂ ಸೌಜನ್ಯ ಇಲ್ವಾ ನಿಂಗೆ?’ ಎಂದು ತಡವಿದ. ಹುಡುಗಿಯೆದುರು ಆದ ಅಪಮಾನದಿಂದ ಗೂಳಿ ನೆಲಕೆರೆದು ಕೊಂಬನ್ನು ಹಾಯಿಸಲು ತಯಾರಾಗಿತ್ತು. ಅದನ್ನು ಲೆಕ್ಕಿಸದೆ ‘ಮರ್ಯಾದೆ ಕೊಟ್ಟು ಮಾತಾಡದನ್ನ ಕಲೀರಿ’ ಎಂದೆ. ಹುಡುಗಿ ಕಿಸಕ್ಕನೆ ನಕ್ಕಳು. ಅದು ಹೊಗೆಯಾಡುತ್ತಿದ್ದ ರೋಷಕ್ಕೆ ಪೆಟ್ರೋಲ್ ಸುರಿಯಿತು. ಆತ ಸಿಡಿದ ಬಾಣದಂತೆ ಛಕ್ಕನೆದ್ದು ತೋಳೇರಿಸಿ ‘ನಾ ಹೆಂಗ್ ಮಾತಾಡ್ಬೇಕ ಅನ್ನುದ ಕಲ್ಸೂಕ್ ಬಂದ್ಯಾ? ಯಾವಲ್ಲಿಯಂವ ನೀನ?’ ಎಂದು ಕಾಲರ್ ಹಿಡಿದ. ಅವನ ಸೀಮೆಯ ಬೈಗುಳಮಾಲೆ ತೊಡಿಸಿದ. ಬಹುಶಃ ಭಗ್ನಪ್ರೇಮಿಯಾಗಿ ಅನುಭವಿಸುತ್ತಿದ್ದ ವ್ಯಥೆಯನ್ನೆಲ್ಲ ನನ್ನ ಮೇಲೆ ಹೊರಳಿಸಿದ. ಕಾದುವ ತ್ರಾಣ ಇಲ್ಲದಿದ್ದರೂ ರಣರಂಗಕ್ಕೆ ಧುಮುಕಿದ್ದೆ.

ಈ ದುರಂತ ನಾಟಕವನ್ನು ಕಾರಲ್ಲಿ ಕೂತಿದ್ದ ಗೆಳೆಯರು ಗಮನಿಸಿ ಗಲಭೆಗ್ರಸ್ತ ಪ್ರದೇಶಕ್ಕೆ ಧಾವಿಸಿದರು. ಉಗ್ರ ಪ್ರತಾಪಿಯ ಕೈಯಿಂದ ನನ್ನನ್ನು ಬಿಡಿಸಿ ‘ರೀ, ಇವರು ಯಾರೂಂತ ತಿಳಿದಿದ್ದೀರಿ?’ ಎಂದರು. ಆತ ‘ಯಾರಾದ್ರೆ ನಂಗೇನ್…’ ಎಂದ. ನಾವು ಲೇಖಕರ ಮನೆಗೆ ಹೋದಾಗ ಪ್ರಸಂಗ ನಿರೂಪಿಸಿದೆವು. ‘ಅಯ್ಯೊ! ಆ ಫಟಿಂಗನ ಕೈಗೆ ನೀವ್ ಹೆಂಗೆ ಸಿಕ್ಕಿದಿರಿ? ನನ್ನ ಹಳೇ ವಿದ್ಯಾರ್ಥಿ ಅವನು’ ಎಂದು ನೊಂದುಕೊಂಡರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ