Mysore
24
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಇನ್ನು ಇತಿಹಾಸವಾದ ಡಾ. ಫಿಲಿಯೋಜಾ

ನಟರಾಜು ಹಾನವಾಡಿ
ಸಂಸ್ಕೃತ ವಿದ್ವಾಂಸರಾಗಿ ಇತಿಹಾಸ, ಸಂಸ್ಕೃತ ಭಾಷೆ ವ್ಯಾಕರಣ, ಕಾವ್ಯಶಾಸ್ತ್ರ, ತಂತ್ರ, ವಿಶೇಷವಾಗಿ ಶೈವ ಸಿದ್ಧಾಂತವೂ ಸೇರಿದಂತೆ ಭಾರತೀಯ ದೇವಾಲಯ ಮತ್ತು ವಾಸ್ತು ಶಿಲ್ಪ ಹೀಗೆ ಹಲವು ಕ್ಷೇತ್ರಗಳಲ್ಲಿ ಖ್ಯಾತ ಸಂಸ್ಕೃತ ಮತ್ತು ಇತಿಹಾಸ ತಜ್ಞರಾದ ಫಿಯರ್ರೆ ಸಿಲ್ವನ್ ಫಿಲಿ ಯೋಜಾ ಅವರು ವಿಶೇಷ ಪರಿಣತರಾಗಿದ್ದರು. ಈ ಕ್ಷೇತ್ರಗಳನ್ನು ಕುರಿತು ಅವರು ಧ್ಯಾನಿಸಿದ, ಸಂಶೋಧನೆಗೈದು ಮೂಡಿಸಿದ ಛಾಪು ಜಗತ್ಪ್ರ ಸಿದ್ಧವಾದುದು. ಪ್ಯಾರಿಸ್ ಮೂಲದ ಅವರು ಮೈಸೂರಿನಲ್ಲೇ ನೆಲೆಸಿದ್ದುದು ಗಮನಾರ್ಹ.

೨೦೨೪ರ ಏಪ್ರಿಲ್ ತಿಂಗಳಿನಲ್ಲಿ ‘ಕರ್ಣಾಟ’ ಶಾಸೀಯ ಕನ್ನಡ ಕೇಂದ್ರವು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಕುರಿತು ನಡೆಸುತ್ತಿರುವ ಹಂಪಿಯ ವಿಜಯವಿಠ್ಠಲ ದೇವಾಲಯದ ಇತಿಹಾಸ ಮತ್ತು ವಾಸ್ತುಶಿಲ್ಪ ಕುರಿತ ಸಂಶೋಧನಾ ಕಾರ್ಯ ಯೋಜನೆ ಯಲ್ಲಿ ಖ್ಯಾತ ಸಂಸ್ಕೃತ ಮತ್ತು ಇತಿಹಾಸ ತಜ್ಞ ರಾದ ಫಿಯರ್ರೆ ಸಿಲ್ವನ್ ಫಿಲಿಯೋಜಾ ಮತ್ತು ಇವರ ಪತ್ನಿ ಇತಿಹಾಸ ಮತ್ತು ಶಾಸನ ತಜ್ಞ ರಾದ ಡಾ. ವಸುಂಧರಾ ಕವಲಿ ಅವರೊಡನೆ ಸಹಾಯಕ ಸಂಶೋಧಕರಾಗಿ ಕೆಲಸ ನಿರ್ವ ಹಿಸುವ ಅವಕಾಶ ಒದಗಿ ಬಂತು.

ಈ ಅವಧಿಯಲ್ಲಿ ಅವರೊಂದಿಗಿನ ಒಡನಾಟ ನನಗೆ ಹೊಸ ಪ್ರಪಂಚವೊಂದನ್ನು ಪರಿಚಯಿ ಸಿತು. ಅವರ ವ್ಯಕ್ತಿತ್ವ, ವಿದ್ವತ್ತು, ಸಂಶೋಧನಾಸಕ್ತಿ, ನಿರಂತರ ಅಧ್ಯಯನಗಳು ನನ್ನಲ್ಲಿ ಸೋಜಿಗವನ್ನುಂಟು ಮಾಡಿದವು. ಅಧ್ಯಯನಕ್ಕಾಗಿ ದಿನದ ನಿಗದಿತ ಸಮಯದಲ್ಲಿ ತೊಡಗಿ ಕೊಳ್ಳುತ್ತಿದ್ದಾಗ ಅವರಿಗೆ ಇತರ ಯಾವುದೇ ಸಂಗತಿಗಳೂ ಮುಖ್ಯವಾಗುತ್ತಿರಲಿಲ್ಲ. ಇತ್ತೀಚೆಗೆ ವಯೋಸಹಜ ಮೂಳೆ ಸವೆತ ದಿಂದ ಬಳಲಿದ್ದಾಗಲೂ ತಮ್ಮ ಸಂಶೋಧನಾ ಕಾರ್ಯ ವನ್ನು ಮುಂದುವರಿಸಿದ್ದರು. ‘ನಾವು ಮಾಡುವ ಪ್ರತಿ ಕಾರ್ಯ ಮತ್ತು ಕ್ರಿಯೆ ನಮಗೆ ಆತ್ಮತೃಪ್ತಿಯನ್ನು ತರುವುದರೊಂದಿಗೆ ಸಮಾಜಕ್ಕೆ ಕೊಡುಗೆಯಾಗಿ ಉಳಿಯಬೇಕು’ ಎನ್ನುವ ತಮ್ಮ ಮಾತಿನಂತೆಯೇ ಬದುಕಿದ ವರು ಪಿಯರ್ರೆ-ಸಿಲ್ವನ್ ಫಿಲಿಯೋಜಾ.

೧೫ ಫೆಬ್ರವರಿ ೧೯೩೬ರಲ್ಲಿ ಪ್ರಾನ್ಸ್‌ನ ನಾನ್ಸಿಯಲ್ಲಿ ಜನಿಸಿದ ಫಿಲಿಯೋಜಾ ಅವರು ಹಿಂದಿ ಮತ್ತು ಸಂಸ್ಕೃತದಲ್ಲಿ ಪದವಿ ಗಳಿಸಿ ಮುಂದೆ ಪಾಂಡಿಚೇರಿಯ ಪ್ರೆಂಚ್ ಇನ್ಸ್‌ಸ್ಟಿ ಟ್ಯೂಟ್‌ನಲ್ಲಿ ‘ಲಿ ಪ್ರತಾಪರುದ್ರೀಯ ದೆ ವೈದ್ಯನಾಥ- (ಅಲಂಕಾರ-ಶಾಸ್ತ್ರ) ಎ ೧೩ ಸೆಂಚುರಿ ಟ್ರೆಟೈಸ್ ಆಫ್ ಸಂಸ್ಕೃತ್ ಪೊಯಟಿಕ್ಸ್’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ೧೯೬೨ರಲ್ಲಿ ಪಿಎಚ್. ಡಿ. ಪದವಿ ಪಡೆದರು.

ಪ್ಯಾರಿಸ್‌ನ ಶಾಸ್ತ್ರೀಯ ಭಾಷೆ, ಪಾಂಡಿಚೇರಿ-ವ್ಯಾಕರಣ, ವಿಶಿಷ್ಟಾದ್ವೈತದಲ್ಲಿ ವಿಶೇಷಾಸಕ್ತಿ ಹೊಂದಿದ್ದ ಫಿಲಿಯೋಜಾ ಅವರು ೧೯೬೩ ರಿಂದ ೬೭ರವರೆಗೆ ಫ್ರೆಂಚ್ ಸ್ಕೂಲ್ ಆಫ್ ಏಷ್ಯನ್ ಸ್ಟಡೀಸ್‌ನಲ್ಲಿ, ೧೯೬೭ ರಿಂದ ೨೦೦೪ರವರೆಗೆ ಪ್ಯಾರಿಸ್‌ನ ಸರ್ಬಾನ್ನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.

ಫಿಲಿಯೋಜಾ ಅವರು ತಮ್ಮ ತಂದೆ ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸ ತಜ್ಞ ಪ್ರೊ. ಜೀನ್ ಫಿಲಿಯೋಜಟ್ ಅವರ ಬಳಿ ಯುರೋಪಿಯನ್ ರಂಗಭೂಮಿ ಕುರಿತು ಪಿಎಚ್. ಡಿ. ಅಧ್ಯಯನಕ್ಕಾಗಿ ಕರ್ನಾಟಕದ ಹಾವೇರಿಯಿಂದ ಆಗಮಿಸಿದ್ದ ವಸುಂಧರಾ ಕವಲಿಯವರೊಂದಿಗೆ ಸ್ನೇಹ ವಾಗಿ ೧೯೬೮ರಲ್ಲಿ ಅವರನ್ನೇ ವಿವಾಹವಾದರು.

ಇತಿಹಾಸ ಮತ್ತು ದೇವಾಲಯ ವಾಸ್ತುಶಿಲ್ಪವನ್ನು ಕುರಿತು ಸಮಾನ ಆಸಕ್ತಿ ಹೊಂದಿದ ದಂಪತಿ ನಿರಂತರವಾಗಿ ಭಾರತ-ಪ್ಯಾರಿಸ್ ನಡುವೆ ಪ್ರತಿ ಆರು ತಿಂಗಳಿಗೊಮ್ಮೆ ಪ್ರಯಾಣಿಸುತ್ತಲೇ, ಹಲವಾರು ಐತಿಹಾಸಿಕ ಸ್ಥಳಗಳು, ದೇವಾ ಲಯಗಳಿಗೆ ಭೇಟಿ ನೀಡುತ್ತ, ಆ ಕುರಿತು ವಿವಿಧೆಡೆ ಉಪನ್ಯಾಸಗಳನ್ನು ನೀಡುತ್ತಾ ನಿರಂತರವಾಗಿ ಅದನ್ನು ಧ್ಯಾನಿಸುವೆಡೆಗೆ ತಮ್ಮನ್ನು ತೊಡಗಿಸಿಕೊಂಡರು.

ಅಂತಹ ನಿರಂತರ ಯಾನದಿಂದ ಫ್ರೆಂಚ್, ಇಂಗ್ಲಿಷ್, ಸಂಸ್ಕೃತದಲ್ಲಿ ಇವರು ಸಂಶೋಧಿಸಿದ ಹಲವು ಕುತೂಹಲವುಳ್ಳ ೨೫೦ಕ್ಕೂ ಹೆಚ್ಚು ಲೇಖನಗಳು ಮತ್ತು ೨೫ಕ್ಕೂ ಮೇಲ್ಪಟ್ಟ ಪುಸ್ತಕಗಳು ಪ್ರಕಟಗೊಂಡಿವೆ.

ತಮ್ಮ ಪತ್ನಿ ವಸುಂಧರಾ ಕವಲಿಯವರ ಜೊತೆಗೂಡಿ ‘ದ ಟೆಂಪಲ್ ಆರ್ಕಿಟೆಕ್ಚರ್ ಮುಕ್ತೇಶ್ವರ ಅಟ್ ಚೌದನಪುರ’, ‘ಕಾಳ ಮುಖ ಟೆಂಪಲ್ಸ್ ಆಫ್ ಕರ್ನಾಟಕ: ಆರ್ಟ್ ಅಂಡ್ ಕಲ್ಚರಲ್ ಲೆಗಸಿ’, ‘ಚಾಲುಕ್ಯ ಆರ್ಕಿಟೆಕ್ಚರ್’, ‘ಹಂಪಿ-ವಿಜಯನಗರ; ದ ಟೆಂಪಲ್ ಆಫ್ ವಿಠಲ’ ಲಾಕುಲೀಶ- ಪಾಶುಪತ ಮುಂತಾದ ಕರ್ನಾಟಕ ದೇವಾಲಯ ಇತಿಹಾಸ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಹೊರತಂದಿದ್ದಾರೆ.

ಫಿಲಿಯೋಜಾ-ವಸುಂಧರಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಪುತ್ರಿ ದೊಮಿನಿಕ್-ಮನೋನ್ಮನೀ ಅವರು ಇತಿಹಾಸ-ಶಾಸನ ಅಧ್ಯಯನ ಕೈಗೊಂಡು ಪ್ಯಾರಿಸ್‌ನಲ್ಲಿ ಪತ್ರಾಗಾರದ ಮುಖ್ಯ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಬ್ರುನೋ ರೆತಿಫ್ ರೈಂಸ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಎರಡನೇ ಪುತ್ರಿ ದಾನಿಯಲ್ ಭಾಮತೀ ಅವರು ಗ್ರೀಕ್, ಲ್ಯಾಟಿನ್, ಫ್ರೆಂಚ್ ಭಾಷೆಯ ಪದವೀಧರರಾಗಿದ್ದು ಪ್ಯಾರಿಸ್‌ನ ಶಾಸ್ತ್ರೀಯ ಭಾಷಾ ಪ್ರಾಧ್ಯಾಪಕರಾಗಿದ್ದಾರೆ. ಇವರ ಪತಿ ಜ್ಯುಲಿಯಾ ಓಮಾ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಫಿಲಿಯೋಜಾ ಅವರ ಸಂಶೋಧನಾ ಕಾರ್ಯಸಿದ್ಧಿಗೆ ಭಾರತ ಸರ್ಕಾರವು ೨೦೨೪ರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ಪುಣೆಯ ಲಾಲ್ ಬಹದ್ದೂರ್ ಶಾಸ್ತ್ರೀ ಸಂಸ್ಕೃತ ವಿದ್ಯಾಪೀಠವು ‘ಮಹಾಮಹೋಪಾಧ್ಯಾಯ’ ಗೌರವ ಪದವಿ ನೀಡಿದೆ. ಮೈಸೂರಿನ ವನಮಾಲಿ ಟ್ರಸ್ಟ್, ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರದ ಗೌರವಕ್ಕೆ ಭಾಜನರಾಗಿದ್ದಾರೆ. ಪುಣೆಯ ಸಂವಿಧಾ ಕಲ್ಚರಲ್ ಸ್ಟಡೀಸ್‌ನ ಗೌರವ ಪ್ರಾಧ್ಯಾಪಕತ್ವ ಲಭಿಸಿದೆ.

ವಿದೇಶದಿಂದ ಬಂದು ಭಾರತ ಮತ್ತು ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಭಾಷೆಗಳ ಮೇಲೆ ವಿದ್ವತ್ಪೂರ್ಣ ಅಧ್ಯಯನ ನಡೆಸಿ ಆ ಕ್ಷೇತ್ರಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿ, ಹೆಚ್ಚಿನ ಸಂಶೋಧನೆಗಳಿಗೆ ಮಾರ್ಗಗಳನ್ನು ತೆರೆದ ಪಿಯರ್ರೆ ಫಿಲಿಯೋಜಾ ಅವರ ಕೊಡುಗೆಗಳು ಅಪಾರ; ಆದರೆ ಅವರು ಶನಿವಾರ ಕೊನೆಯುಸಿರೆಳೆದಿದ್ದು, ಇನ್ನು ನೆನಪು ಮಾತ್ರ.

 

Tags:
error: Content is protected !!