Light
Dark

ಯೂರೋಪಿನಲ್ಲಿ ಕಾಡ್ಗಿಚ್ಚು, ಬಿಸಿಲಿನ ಝಳ, ಗ್ಯಾಸ್ ಅಭಾವದಿಂದ ಜನ ತತ್ತರ; ಆರ್ಥಿಕ ಹಿಂಜರಿತದ ಭೀತಿ

ಯೂರೋಪಿನ ಕಾಡುಗಳಲ್ಲಿ ಪ್ರತಿವರ್ಷ ಅಲ್ಲಲ್ಲಿ ಮತ್ತು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಕಾಡ್ಗಿಚ್ಚು ಈವರ್ಷ ಭಯಂಕರ ಸ್ವರೂಪದಲ್ಲಿ ಮತ್ತು ವ್ಯಾಪಕ ಪ್ರಮಾಣದಲ್ಲಿ ಕಾಣಿಸಿಕೊಂಡು ಸರ್ಕಾರಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಭಯಂಕರ ಬಿಸಿಲಿನ ಝಳಕ್ಕೆ ತಾನೇ ತಾನಾಗಿಯೇ ಕಾಡುಗಳಲ್ಲಿ ಬೆಂಕಿ ಹೊತ್ತಿಕೊಂಡು ಮರಗಿಡಗಳನ್ನು ಸುಟ್ಟು ಹಾಕಿದೆ. ಕಾಡುಗಳ ಸಮೀಪದ ಹಳ್ಳಿ, ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಸಹಸ್ರಾರು ಜನರನ್ನು ರಾತ್ರೋರಾತ್ರಿ ಸ್ಥಳಾಂತರಿಸಬೇಕಾಗಿ ಬಂದಿದೆ. ಯೂರೋಪಿನ ಶ್ರೀಮಂತ ದೇಶಗಳೂ ಕಾಡ್ಗಿಚ್ಚು ಆರಿಸಲು ಪರದಾಡುತ್ತಿವೆ.

ಇಷ್ಟು ದೊಡ್ಡ ಪ್ರಮಾಣದ ಕಾಡ್ಗಿಚ್ಚು ಹಬ್ಬುತ್ತದೆಂದು ಯಾವ ಸರ್ಕಾರಗಳು ಊಹಿಸಿ ಸಿದ್ಧತೆ ನಡೆಸಿರಲಿಲ್ಲ. ಕಾಡುಗಳನ್ನು ಉಳಿಸುವುದಿರಲಿ ಜನವಸತಿ ಪ್ರದೇಶಗಳಿಗೆ ಹಬ್ಬದಂತೆ ತಡೆಯುವುದೇ ಕಷ್ಟವಾಗುತ್ತಿದೆ. ಕಾಡ್ಗಿಚ್ಚು ಹಬ್ಬಿದ ಕಾಡುಗಳ ಮೇಲೆ ಬೀಸಿದ ಗಾಳಿ ವಾತಾವರಣದ ಶಾಖವನ್ನು ಹೆಚ್ಚಿಸಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಹೊರಗೆ ಕಾಲಿಟ್ಟರೆ ತಲೆ ಸುಟ್ಟುಹೋಗುವಷ್ಟು ಬಿಸಿಲು, ಜೊತೆಗೆ ಬಿಸಿ ಗಾಳಿ ಜನರು ಕಂಗಾಲಾಗಿದ್ದಾರೆ.

ಭಾರತದ ರಾಜಾಸ್ತಾನ, ಬಿಹಾರದ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಒಮ್ಮೊಮ್ಮೆ ಬೇಸಿಗೆಯಲ್ಲಿ ಬಿಸಿಲಿನ ತಾಪ ೫೦ರಿಂದ ೫೫ ಸೆಂಟಿಗ್ರೇಡ್ನಷ್ಟು ಇರುತ್ತದೆ. ಈ ತಾಪಮಾನಕ್ಕೆ ಕಾಡ್ಗಿಚ್ಚು ಹಬ್ಬಿರುವುದುಂಟು, ಹಾಗೆಯೇ ಕೆಲವರು ಸತ್ತಿರುವುದುಂಟು. ಆದರೆ ಈಗ ಯೂರೋಪಿನಲ್ಲಿ ಬಿಸಿಲಿನ ಝಳ ೪೦ ಸೆ. ಆಸುಪಾಸಿನಲ್ಲದೆ. ಅಷ್ಟಕ್ಕೇ ಇಷ್ಟೆಲ್ಲಾ ಅನಾಹುತ. ಇದಕ್ಕೆ ಕಾರಣ ಬಿಸಲಿನ ಶಾಖದ ಪ್ರಮಾಣ ಭಯಂಕರವಾಗಿರುವುದು. ಜಾಗತಿಕ ತಾಪಮಾನ ಏರಿಕೆಯಾಗಿದ್ದು ಅದನ್ನು ತಗ್ಗಿಸುವ ಪ್ರಯತ್ನಗಳು ನಡೆಯದಿದ್ದರೆ ಇಡೀ ಜೀವ ಸಂಕುಲ ಅಪಾಯದಲ್ಲಿ ಸಿಲುಕುತ್ತದೆ ಎಂದು ಪರಿಸರ ತಜ್ಞರು ಹಿಂದೆಯೇ ಹೇಳಿದ್ದಾರೆ ಮತ್ತೆ ಈಗ ಹೇಳುತ್ತಿದ್ದಾರೆ.

ಕಾಡ್ಗಿಚ್ಚು ಗ್ರೀಸ್, ಪೋರ್ಚುಗಲ್, ಇಟಲಿ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಸ್ಪೇನ್, ಫ್ರಾನ್ಸ್ ದೇಶಗಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಗ್ರೀಸ್ ರಾಜಧಾನಿ ಅಥೆನ್ಸ್ ಸಮೀಪದ ಕಾಡುಗಳಲ್ಲಿ ಕಳೆದ ವಾರ ಕಾಣಿಸಿಕೊಂಡ ಬೆಂಕಿ ಕ್ರಮೇಣ ನಗರವಲಯದತ್ತ ಹಬ್ಬಲಾರಂಭಿಸಿ ಸಹಸ್ರಾರು ಜನರು ಬೇರೆಡೆಗೆ ಸ್ಥಳಾಂತರ ಮಾಡುವಂತಾಯಿತು.

ಜುಲೈ ೧೭ನೇ ತಾರೀಖಿನಿಂದೀಚೆಗೆ ೧೭೦೦ ಪ್ರಕರಣಗಳು ನಡೆದಿವೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ. ಸ್ಪೇನ್ನಲ್ಲಿ ಬೆಂಕಿಯ ಅಲೆಗೆ ಜಮೋರಾ ಪ್ರಾಂತ್ಯದಲ್ಲಿ ೬೦ ಸಾವಿರ ಹೆಕ್ಟೇರ್ ಕಾಡು ನಾಶವಾಗಿದೆ. ಸುಮಾರು ೩೦ಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಜನರನ್ನು ಸ್ಥಳಾತರಿಸಲಾಗಿದೆ. ಮ್ಯಾಡ್ರಿಡ್ , ಕೆಟಲೋನಿಯಾ ಪ್ರದೇಶಗಳಲ್ಲಿ ಕಾಡ್ಗಿಚ್ಚು ಮತ್ತು ಬಿಸಿಲಿನ ಝಳದಿಂದಾಗಿ ರೈಲು ಸಂಚಾರವನ್ನೂ ಸ್ಥಗಿತಗೊಳಿಸಿದ ಬೆಳವಣಿಗೆಯೂ ನಡೆದಿದೆ.
ಹತ್ತುದಿನಗಳ ಕಾಲದ ಶಾಖದ ಅಲೆಗೆ ೫೦೦ಕ್ಕೂ ಹೆಚ್ಚು ಜನರು ಸತ್ತಿದ್ದಾರೆಂದು ಸರ್ಕರ ತಿಳಿಸಿದೆ. ಇಂಥ ತಾಪಮಾನವನ್ನು ನಿಭಾಯಿಸಲು ಜನರು ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕೆಂದು ಪ್ರಧಾನಿ ಪೆಡ್ರೋ ಸಾಂಚೇಜ್ ಕರೆನೀಡಿದ್ದಾರೆ. ಸರ್ಕಾರಿ ಸಿಬ್ಬಂದಿ ಯಾರೂ ಟೈಕಟ್ಟಿಕೊಂಡು ಬರಬೇಕಿಲ್ಲ, ಸಾಧ್ಯವಾದಷ್ಟೂ ಶಾಖ ಮೈಗೆ ತಾಕದಂಥ ಸರಳ ಬಟ್ಟೆಗಳನ್ನೇ ಧರಿಸುವಂತೆ ಅವರು ಸೂಚಿಸಿದ್ದಾರೆ. ಇದರಿಂದ ಏರ್‌ಕಂಡಿಷನರುಗಳ ಮೇಲಿನ ವಿದ್ಯುತ್ ಬಳಕೆಯನ್ನು ಕಡಮೆ ಮಾಡಬಹುದು ಎಂಬುದು ಅವರ ಲೆಕ್ಕಾಚಾರ.

ಈಜುಕೊಳಗಳ ಬಳಿ ದೇಹಕ್ಕೆ ತಣ್ಣೀರು ಸಿಂಪಡಿಸುವಂತ ಷವರ್ಗಳನ್ನು ವ್ಯವಸ್ಥೆಮಾಡಲಾಗಿದೆ. ಹಲವು ಕಡೆ ಕಾಲುಗಳನ್ನು ನೀರಿನಲ್ಲಿ ಇಳಿಬಿಟ್ಟು ಕೂರಲು ಸಾಧ್ಯವಾಗುವಂಥ ತೊಟ್ಟಿಗಳನ್ನು ಹಾಕಲಾಗಿದೆ. ಜನರನ್ನು ತಣ್ಣಗಿಡಲು ಸ್ಥಳೀಯ ಸರ್ಕಾರಗಳು ಏನೆಲ್ಲಾ ಮಾಡುತ್ತಿವೆ ಎನ್ನುವುದನ್ನು ಊಹಿಸಲೂ ಅಸಾಧ್ಯ.


ಪೋರ್ಚುಗಲ್ ದೇಶದಲ್ಲಿ ಜುಲೈ ೧೭ರಂದು ಆರಂಭವಾದ ಕಾಡ್ಗಿಚ್ಚು ಸುಮಾರು ೧೫ ಸಾವಿರ ಎಕರೆಯಷ್ಟು ಕಾಡನ್ನು ಸುಟ್ಟುಹಾಕಿದೆ. ಹತ್ತೇ ದಿನದಲ್ಲಿ ಕಾಡ್ಗಿಚ್ಚು ಮತ್ತು ಬಿಸಿಲಿನ ಝಳಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇಟಲಿಯಲ್ಲಿ ೨೦ ಸಾವಿರ ಎಕರೆಯಷ್ಟು ಕಾಡು ಸುಟ್ಟು ಕರಕಲಾಗಿದೆ. ಬೆಂಕಿಯ ಅಲೆಗಳು ಎಷ್ಟು ಭಯಾನವಾಗಿದ್ದವೆಂದರೆ ಕಾಡಿನ ಗ್ರಾಮಗಳ ಬಳಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರುಗಳು ಕ್ಷಣಾರ್ಧದಲ್ಲಿ ಸ್ಫೋಟಗೊಂಡಿವೆ. ಪ್ರಯಾಣಿಕರಿಂದ ತುಂಬಿದ್ದ ರೈಲೊಂದು ಕಾಡ್ಗಿಚ್ಚಿನ ಮಧ್ಯೆ ಸಿಕ್ಕಿಹಾಕಿಕೊಂಡ ಭಯಾನಕ ಪ್ರಕರಣ ನಡೆದಿದೆ. ಕಾಡ್ಗಿಚ್ಚು ಸ್ಲಾವೇನಿಯಾ ಕಾಡುಗಳಿಗೂ ಹಬ್ಬುತ್ತಿದ್ದು ಉಷ್ಣಾಂಶ ೪೦.೮ ಸೆ.ನಷ್ಟು ಇದೆ ಎಂದು ವರದಿಯಾಗಿದೆ. ಫ್ರಾನ್ಸ್‌ನಲ್ಲಿ ಜುಲೈ ಎರಡನೆಯ ವಾರದಲ್ಲಿ ಕಂಡುಬಂದ ಕಾಡ್ಗಿಚ್ಚು ಸುಮಾರು ೫೦ಸಾವಿರ ಎಕರೆ ಕಾಡನ್ನು ಸುಟ್ಟುಹಾಕಿದೆ. ಕಾಡುಗಳ ಅಂಚಿನಲ್ಲಿ ವಾಸಿಸುತ್ತಿದ್ದ ೪೦ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಬ್ರಿಟನ್ನಲ್ಲಿ ಈ ಬಾರಿ ಬಿಸಲಿನ ತಾಪ ಹೆಚ್ಚಿತ್ತು. ಲಂಡನ್ ಹೊರವಲಯದಲ್ಲಿ ಸುಮಾರು ೪೦ಕ್ಕೂ ಹೆಚ್ಚು ಮನೆಗಳು ಸುಟ್ಟುಹೋಗಿವೆ. ಬ್ರಿಟನ್ನ ಬೇರೆ ಬೇರೆ ಪ್ರದೇಶಗಳಲ್ಲಿಯೂ ಕಾಡ್ಗಿಚ್ಚು ಕಾಣಿಸಿಕೊಂಡು ಕಾಡುಗಳು ನಾಶವಾಗಿವೆ. ಲಂಡನ್ನ ಬೀದಿಗಳು ಕಳೆದ ವಾರ ಯುದ್ಧದ ಸಮಯದಲ್ಲಿಯಂತೆ ಬಿಕೋ ಎನ್ನುತ್ತಿದ್ದವು. ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿತ್ತು. ಶಾಲೆಗಳನ್ನು ಮುಚ್ಚಲಾಗಿತ್ತು. ದೊಡ್ಡ ದೊಡ್ಡ ಮಾಲ್ಗಳೂ ಮುಚ್ಚಿದ್ದವು. ದೇಶದಲ್ಲಿ ಇಂಥ ಬಿಸಿಗಾಳಿಯನ್ನು ಮತ್ತು ತಾಪಮಾನವನ್ನು ಎದುರಿಸುವಂಥ ಸಿದ್ಧತೆ ಇಲ್ಲದಿದ್ದುದು ಎದ್ದು ಕಾಣುತ್ತಿತ್ತು. ಪ್ರಧಾನಿ ಜಾನ್ಸನ್ ರಾಷ್ಟ್ರೀಯ ಪರಿಸರ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಜರ್ಮನಿಯಲ್ಲಿ ಪರಿಸ್ಥಿತಿ ಭಿನ್ನವಿಲ್ಲ. ಬಿಸಿಲಿನ ತಾಪಕ್ಕೆ ಜನ ತತ್ತರಿಸಿಹೋಗಿದ್ದಾರೆ. ಸಾಕಷ್ಟು ಕಾಡ್ಗಿಚ್ಚು ಹಬ್ಬಿದ ಪ್ರಕರಣಗಳೂ ವರದಿಯಾಗಿವೆ. ಉಕ್ರೇನ್ ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದ ಗ್ಯಾಸ್ ಪೂರೈಕೆ ಕಡಿತಗೊಂಡು ಜನರು ಪರಾಡುತ್ತಿರುವ ಈ ಸಂದರ್ಭದಲ್ಲಿ ಬಿಸಲಿನ ಝಳದ ಅಲೆಗಳು ಜನರನ್ನು ಕಂಗೆಡಿಸಿವೆ. ಯೂರೋಪಿನ ಕಥೆ ಇದಾದರೆ ಅಮೆರಿಕದಲ್ಲಿಯೂ ಕಾಡ್ಗಿಚ್ಚು ಸಾಕಷ್ಟು ಹಾನಿಯುಂಟು ಮಾಡಿದ ವರದಿಗಳಿವೆ. ಈ ವರ್ಷ ಕ್ಯಾಲಿಫೋರ್ನಿಯಾ, ಟೆಕ್ಸಾಸ್, ನಾರ್ತ್‌ಕೆರೊಲಿನಾ, ಫ್ಲೋರಿಡಾ ಮುಂತಾದ ರಾಜ್ಯಗಳಲ್ಲಿ ಕಂಡುಬಂದ ಕಾಡ್ಗಿಚ್ಚಿನಿಂದಾಗಿ ೧೫ ಲಕ್ಷ ಎಕರೆ ಅರಣ್ಯ ನಾಶವಾಗಿದೆ. ಈ ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದಲ್ಲಿ ಜೀವಸಂಕುಲಕ್ಕೆ ಹಾನಿಯಾಗಿದೆ. ಕೃಷಿ ಭೂಮಿ ಹಾಳಾಗಿದೆ.

ಯೂರೋಪ್ ದೇಶಗಳು ಮತ್ತು ಅಮೆರಿಕ ಒಂದು ಕಡೆ ಕಾಡ್ಗಿಚ್ಚಿನ ವಿರುದ್ಧ ಹೋರಾಡುವ ಜತೆಜತೆಗೇ ಹಣದುಬ್ಬರ ಮತ್ತು ಆರ್ಥಿಕ ಕುಸಿತದ ಭೀತಿಯನ್ನು ಎದುರಿಸಬೇಕಾಗಿ ಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಕರೋನಾ ಪಿಡುಗಿನ ವಿರುದ್ಧ ಸರ್ಕಾರಗಳು ಯುದ್ಧವನ್ನೇ ಘೋಷಿಸಿದ್ದವು. ತಮ್ಮಲ್ಲಿದ್ದ ಎಲ್ಲ ಸಂಪನ್ಮೂಲವನ್ನು ಕರೋನಾ ಪಿಡುಗನನ್ನು ನಿವಾರಿಸಲು ಬಳಸಿ ಆರ್ಥಿಕವಾಗಿ ದುರ್ಬಲವಾಗಿವೆ. ಪೋರ್ಚುಗಲ್, ಐರ್ಲೆಂಡ್, ಸ್ಪೇನ್, ಸೈಪ್ರೆಸ್ ಮುಂತಾದ ದೇಶಗಳು ಯೂರೋಪಿಯನ್ ಸೆಂಟ್ರಲ್ ಬ್ಯಾಂಕಿನಿಂದ ಪಡೆ ಸಾಲಕ್ಕೆ ಬಡ್ಡಿಕಟ್ಟಲಾಗದೆ ಮರುಸಾಲ ಪಡೆಯಲು ವಿಫಲವಾಗಿವೆ. ಇಂಥ ಸಂದರ್ಭದಲ್ಲಿ ಕಾಡ್ಗಿಚ್ಚು ಮತ್ತು ಅನಿಲದ ಅಭಾವ ಯೂರೋಪಿನ ಜನರನ್ನು ಸಂಕಷ್ಟಕ್ಕೆ ಈಡುಮಾಡಿದೆ. ಸಹಜವಾಗಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದೆ. ಆರ್ಥಿಕ ಕುಸಿತ ಎಂದರೆ ವರ್ಷದಲ್ಲಿ ಸತತವಾಗಿ ಮೂರು ತಿಂಗಳ ಎರಡು ಅವಧಿಗೆ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ)ಕುಸಿಯುವುದು ಎಂದು ಅರ್ಥ. ಈ ಅವಧಿಯಲ್ಲಿ ಕೈಗಾರಿಕಾ ಚಟುವಟಿಕೆ ಕಡಿಮೆಯಾಗುವುದು ಮತ್ತು ನಿರುದ್ಯೋಗಿಗಳ ಸಂಖ್ಯೆ ಹೆಚ್ಚುವುದು ಸಾಮಾನ್ಯ.

ಅಮೆರಿಕದ ಸ್ಥಿತಿ ವಿಚಿತ್ರವಾಗಿದೆ. ಹಣದುಬ್ಬರ ನೋಡಿ ಆರ್ಥಿಕ ಕುಸಿತ ದಿನ ದೂರವಿಲ್ಲ ಎಂದು ಹೇಳುವವರು ಒಂದು ಕಡೆಯಾದರೆ ಇನ್ನೊಂದುಕಡೆ ಆರ್ಥಿಕ ಕುಸಿತ ಇಲ್ಲ ಎಂದು ಹೇಳುವವರೂ ಇದ್ದಾರೆ. ಹೆಚ್ಚು ಹೆಚ್ಚು ಉದ್ಯೋಗಗಳು ಜನರಿಗೆ ಸಿಗುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಮೂಲಿಯಾಗಿರುವಾಗ ಆರ್ಥಿಕ ಕುಸಿತ ಬರುತ್ತದೆ ಎನ್ನುವ ವಾದ ಅರ್ಥವಿಲ್ಲದ್ದು ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಹೇಳುತ್ತಾರೆ. ಆದರೆ ಹಣದುಬ್ಬರ ಎಷ್ಟಿದೆ ಎನ್ನುವುದೂ ಮುಖ್ಯ ಎನ್ನುತ್ತಾರೆ ವಿರೋಧಿ ರಿಪಬ್ಲಿಕನ್ ಪಕ್ಷ. ಹಣದುಬ್ಬರ ಮಾಮೂಲಿಗಿಂದ ಜಾಸ್ತಿ ಇದೆ ಎನ್ನುವುದು ವಾಸ್ತವ. ಹಣದುಬ್ಬರ ಎಂದರೆ ಹಣದ ಮೌಲ್ಯ ಇಳಿಯುವುದು ಎಂದೇ ಅರ್ಥ. ವಸ್ತುಗಳ ಬೆಲೆಯಲ್ಲಿ ಏರಿಕೆ ಇದೆ. ಹಣದುಬ್ಬರದ ಪರಿಣಾಮವನ್ನು ತಗ್ಗಿಸಲು ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಿಸಿದೆ. ಅಂದರೆ ದೇಶ ಆರ್ಥಿಕ ಕುಸಿತದ ಸನಿಹದಲ್ಲಿ ಇದೆ ಎಂದು ಅರ್ಥ ಎನ್ನುವುದು ಕೆಲವು ಆರ್ಥಿಕ ತಜ್ಞರ ವಾದ. ಮುಂದಿನ ನವೆಂಬರ್ ತಿಂಗಳಲ್ಲಿ ಕಾಂಗ್ರೆಸ್ನ ಮಧ್ಯಕಾಲೀನ ಚುನಾವಣೆಗಳು ಬರುವುದರಿಂದ ಆರ್ಥಿಕ ಕುಸಿತ ಆಗದಂತೆ ನೋಡಿಕೊಳ್ಳಲು ಸರ್ಕಾರ ಸಹಜವಾಗಿ ಯತ್ನಿಸುತ್ತದೆ ಎನ್ನುವುದು ನಿರೀಕ್ಷೆ.

ಅಮೆರಿಕದ ಆರ್ಥಿಕ ಪರಿಸ್ಥಿತಿ ಇದಾದರೆ ಇನ್ನು ಯೂರೋಪ್ ಪರಿಸ್ಥಿತಿ ಚಿಂತಾದಾಯಕವಾಗಿಯೇ ಇದೆ. ಯೂರೋಪನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿಸಿರುವ ವಿಚಾರ ಎಂದರೆ ರಷ್ಯಾ ದೇಶ ಗ್ಯಾಸ್ ಪೂರೈಕೆಯನ್ನು ಕ್ರಮೇಣ ಕಡಿಮೆ ಮಾಡುತ್ತಿರುವುದೇ ಆಗಿದೆ. ಯೂರೋಪ್ ದೇಶಗಳು ತಮ್ಮ ಬಹುಪಾಲು ಇಂಧನವನ್ನು ರಷ್ಯಾದಿಂದ ಪಡೆಯುತ್ತಿದ್ದವು. ರಷ್ಯಾ ದೇಶ ಉಕ್ರೇನ್ ದೇಶದ ಮೇಲೆ ಯುದ್ಧಕ್ಕಿಳಿದ ನಂತರ ಯೂರೋಪ್ ಮತ್ತು ರಷ್ಯಾದ ನಡುವಣ ಸಂಬಂಧಗಳು ಕೆಟ್ಟಿವೆ. ಅಮೆರಿಕ ಮತ್ತು ಯೂರೋಪ್ ಒಕ್ಕೂಟ ವಿಧಿಸಿದ ನಿರ್ಬಂಧಗಳಿಗೆ ಪ್ರತೀಕಾರವಾಗಿ ರಷ್ಯಾ ಯೂರೋಪ್ ದೇಶಗಳಿಗೆ ಪೂರೈಸುತ್ತಿದ್ದ ಗ್ಯಾಸ್ ಪ್ರಮಾಣವನ್ನು ಕಡಿಮೆ ಮಾಡುತ್ತ ಬಂದಿದೆ. ಜರ್ಮನಿಯಂಥ ಪ್ರಮುಖ ದೇಶ ದೇಶದ ಬೇಡಿಕೆ ಶೇ ೪೦ ಭಾಗ ಅನಿಲವನ್ನು ರಷ್ಯದಿಂದಲೇ ಪಡೆಯುತ್ತಿತ್ತು. ಮೊದಲು ಬೇಡಿಕೆಯ ಅರ್ಧದಷ್ಟು ಅನಿಲ ಪ್ರಮಾಣವನ್ನು ಕಟ್ ಮಾಡಿ ಇದೀಗ ಅದನ್ನು ಶೇ. ೨೦ಕ್ಕೆ ಇಳಿಸಿದೆ.

ಇದೇ ರೀತಿ ಯೂರೋಪಿನ ಹಲವು ದೇಶಗಳಿಗೆ ಪೂರೈಸುತ್ತಿದ್ದ ಅನಿಲ ಮತ್ತು ತೈಲದ ಪ್ರಮಾಣವನ್ನು ತಗ್ಗಿಸಿದೆ. ವಾಸ್ತವಾಗಿ ರಷ್ಯಾ ತನ್ನ ಕ್ರಮವನ್ನು ಪ್ರತೀಕಾರ ಎಂದು ಹೇಳುತ್ತಿಲ್ಲ. ತಾಂತ್ರಿಕ ಕಾರಣಗಳಿಂದ ಅನಿಲ ಮತ್ತ ತೈಲ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಹೇಳುತ್ತಿದೆ. ಕೊಟ್ಟ ಅನಿಲ ಮತ್ತು ತೈಲಕ್ಕೆ ಡಾಲರ್‌ಗೆ ಬದಲಾಗಿ ರುಬೆಲ್‌ಗಳಲ್ಲಿ ಹಣಕೊಡಬೇಕೆಂದು ಅದು ಒತ್ತಾಯಿಸುತ್ತಿದೆ. ಹಾಗೆ ವಿನಿಮಯ ಹಣ ಬದಲಾಯಿಸಲು ಆ ದೇಶಗಳ ಬಳಿ ರುಬೆಲ್‌ಗಳು ಇಲ್ಲ. ಅಮೆರಿಕದಿಂದ ಸಿಎನ್ಜಿ ತರಿಸಲಾಗುತ್ತಿದೆ. ಕತಾರ್, ಯುಎಇ ಮತ್ತಿತರ ದೇಶಗಳಿಂದ ಅನಿಲ ಮತ್ತು ತೈಲ ಪಡೆಯಲು ಪ್ರಯತ್ನಿಸುತ್ತಿವೆ. ಆದರೆ ಪ್ರಯತ್ನ ಸಂಪೂರ್ಣವಾಗಿ ಸಫಲವಾಗಿಲ್ಲ. ಇದರಿಂದಾಗಿ ತೈಲ ಮತ್ತು ಅನಿಲ ಬೆಲೆಗಳು ಯೂರೋಪ್ ದೇಶಗಳಲ್ಲಿ ಗಗನಕ್ಕೇರಿವೆ. ಹಣದುಬ್ಬರ ಮಿತಿ ಮೀರಿದೆ.

ರಷ್ಯಾ ತಾನು ಇಟ್ಟ ಹೆಜ್ಜೆಯನ್ನು ಹಿಂತೆಗೆಯುವಂಥ ದೇಶವಲ್ಲ. ಹೀಗಾಗಿ ಜರ್ಮನಿ ಸೇರಿದಂತೆ ಬಹುಪಾಲು ಯೂರೋಪ್ ದೇಶಗಳು ಆರ್ಥಿಕ ಕುಸಿತಕ್ಕೆ ಒಳಗಾಗುವ ಎಲ್ಲ ಸೂಚನೆಗಳೂ ಕಾಣುತ್ತಿವೆ.

ಸದ್ಯಕ್ಕೆ ಭಾರತಕ್ಕೆ ಅಂಥ ಭೀತಿಯಲ್ಲಿ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರೇ ಈಗ ಹೇಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂಥ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ. ವಿಶ್ವದಲ್ಲಿ ಎಲ್ಲ ಕಡೆ ಆರ್ಥಿಕ ಕುಸಿತ ಕಂಡುಬಂದರೆ ಸಹಜವಾಗಿ ಭಾರತದ ಮೇಲೂ ಅದು ಪರಿಣಾಮ ಬೀರುತ್ತದೆ. ಈಗಾಗಲೇ ದೇಶದಲ್ಲಿ ಹಣದುಬ್ಬರ ಇದೆ. ಹಣದುಬ್ಬರದ ಮುಂದಿನ ಹಂತ ಆರ್ಥಿಕ ಹಿಂಜರಿತ. ಆ ಹಂತ ಬರಬೇಕೆಂದೂ ಇಲ್ಲ. ಅದನ್ನು ನಿಯಂತ್ರಿಸುವಂಥ ಕ್ರಮಗಳನ್ನು ತೆಗೆದುಕೊಳ್ಳಬೇಕಷ್ಟೆ. ಆರ್ಥಿಕ ಕುಸಿತದ ಸಾಧ್ಯತೆಯನ್ನು ಅಲ್ಲಗಳೆಯುತ್ತಾ ಇರುವ ಬದಲು ಆರ್ಥಿಕ ಪರಿಸ್ಥಿತಿ ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಕಡೆಗೆ ಕೇಂದ್ರ ಸರ್ಕಾರ ಗಮನಕೊಡುವುದು ಒಳಿತು.

 

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ