ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟ ಸುತ್ತಮುತ್ತಲ ಗಣಿ ಸ್ಫೋಟದಿಂದ ಕೃಷ್ಣರಾಜಸಾಗರ ಅಣೆಕಟ್ಟೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಭೂಗರ್ಭ ಶಾಸ್ತ್ರಜ್ಞ ಪ್ರೊ.ಎಚ್.ಟಿ.ಬಸವರಾಜಪ್ಪ ಅವರ ಅಧ್ಯಯನದ ವರದಿಯ ಸಾರಾಂಶ. ಕೃಷ್ಣರಾಜಸಾಗರ ಜಲಾಶಯ ನಿರ್ಮಿಸುವ ಸಂದರ್ಭದಲ್ಲಿ ಅಂದಿನ ಇಂಜಿನಿಯರುಗಳಿಗೆ ರಾಕ್ ಮೆಕ್ಯಾನಿಕ್ಸ್ ತಿಳಿದಿತ್ತು. ಅಣೆಕಟ್ಟೆಯ ಸಂರಕ್ಷಣಾ ವಿಷಯಗಳ ಎಲ್ಲಾ ಆಯಾಮಗಳನ್ನೂ ಅಧ್ಯಯನ ನಡೆಸಿ ಅದನ್ನು ನಿರ್ಮಾಣ ಹಂತದಲ್ಲಿ ಕಾರ್ಯಗತಗೊಳಿಸಿದ್ದರು. ಆದರೆ, ಮುಂದೆ ಈ ಭಾಗದಲ್ಲಿ ಬೃಹತ್ತಾದ ಗಣಿ ಸ್ಪೋಟಗಳು ನಡೆಯುತ್ತವೆ ಎಂಬ ಭವಿಷ್ಯ ತಿಳಿದಿರಲಿಲ್ಲವಾದ್ದರಿಂದ ಇಂದು ಅಣೆಕಟ್ಟೆಗೆ ಸ್ಫೋಟದ ಕಂಪನ ಅಪಾಯಕಾರಿಯಾಗುತ್ತಿದೆ ಎಂಬ ಎಚ್ಚರಿಕೆ ಅವರದು.
ಸಾಮಾನ್ಯವಾಗಿ ಎಲ್ಲ ಅಣೆಕಟ್ಟೆಗಳನ್ನೂ ನಿರ್ಮಿಸುವುದು ನೀರು ಧುಮ್ಮಿಕ್ಕುವ ಸ್ಥಳದಲ್ಲಿ. ಆ ಜಾಗ ಅಗ್ನಿಶಿಲೆ, ಜಲಜಶಿಲೆ, ರೂಪಾಂತರ ಶಿಲೆಯ ಸನ್ನಿವೇಶದಲ್ಲೇ ಇರುತ್ತದೆ. ಅದರಲ್ಲೂ ಅಣೆಕಟ್ಟೆ ಕಟ್ಟಿರುವ ಸ್ಥಳದಲ್ಲಿ ಕಾವೇರಿ ಮಾತೆಯ ಪ್ರತಿಮೆ ನಿರ್ಮಿಸಲಾಗಿದ್ದು, ಇದೊಂದು ಆಯಕಟ್ಟಿನ ಜಾಗವಾಗಿದೆಯಂತೆ.
ಶಿಲಾಪದರದ ಶೀರ್‌ಝೋನ್‌ನ್ನಲ್ಲಿ ದೊಡ್ಡ ಬಿರುಕುಗಳಿರುತ್ತವೆ. ಅಂತಹ ಕಡೆಯೇ ಎಲ್ಲಾ ಅಣೆಕಟ್ಟೆಗಳನ್ನೂ ಕಟ್ಟಲಾಗುತ್ತದೆ. ಹಾಗಾಗಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿರುವ ಈ ಶಿಲಾಪದರ ಕಾವೇರಿ ಮಾತೆಯ ಪ್ರತಿಮೆಯಿಂದ ಬೇಬಿ ಬೆಟ್ಟ, ರಾಮನಗರ, ಕಬ್ಬಾಳುದುರ್ಗ, ಹೈದರಾಬಾದ್‌ವರೆಗೂ ಎಂದರೆ ಸರಿ ಸುಮಾರು ೮೨೪ ಕಿ.ಮೀ. ಉದ್ದದ ಬೃಹತ್ ಶಿಲಾಸ್ಥರವಾಗಿದೆ.
ಕೆಆರ್‌ಎಸ್‌ನ ೨೨ ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟ ಮಾಡಿದಾಗ ಈ ಶೀರ್‌ಝೋನ್ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಪೂನಾದ ತಜ್ಞರು ಈಗಾಗಲೇ ಖಚಿತವಾಗಿ ವರದಿ ಮಾಡಿ ಹೋಗಿದ್ದಾರೆ. ರಾಜ್ಯದಲ್ಲಿರುವ ೪೮ ಬಿರುಕುಗಳಿರುವ ಶೀರ್‌ಝೋನ್‌ನಲ್ಲಿ ೮ ದೊಡ್ಡ ಮಟ್ಟದಲ್ಲಿದೆ. ಅದರಲ್ಲಿ ಕೆಆರ್‌ಎಸ್‌ನ ಪದರವೂ ಪ್ರಮುಖವಾದದ್ದು ಎಂದು ದಾಖಲಿಸಿದ್ದಾರೆ.
ಅಣೆಕಟ್ಟೆ ವ್ಯಾಪ್ತಿಯಲ್ಲಿ ಬರುವ ಗಣಿಗಾರಿಕೆಗಳಲ್ಲಿ ಸುಮಾರು ಐದಾರು ಮೀಟರ್ ಗುಳಿ ತೋಡಿ ಸ್ಪೋಟ ಮಾಡಲಾಗುತ್ತದೆ. ಇದರಿಂದ ಏಳುವ ಭೂಕಂಪನದ ಅಲೆಗಳು ಹಾಗೂ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ಒತ್ತಡ ಕೆಲವೊಮ್ಮೆ ಜಲಾಶಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ಇದನ್ನೆಲ್ಲಾ ಅಧ್ಯಯನ ನಡೆಸಿಯೇ ಅಣೆಕಟ್ಟೆ ನಿರ್ಮಿಸಲಾಗಿದೆಯಾದರೂ, ಇತ್ತೀಚೆಗೆ ಇದೇ ಕಾವೇರಿ ಮಾತೆಯ ಪ್ರತಿಮೆ ಬಳಿ ಮೆಟ್ಟಿಲುಗಳು ಕುಸಿದಿದ್ದನ್ನು ಸಂಬಂಧಪಟ್ಟವರು ಇದನ್ನು ತೀರಾ ಸಾಮಾನ್ಯ ವಿಚಾರ ಎಂಬಂತೆ ನಿರ್ಲಕ್ಷಿಸಿದರು.
ವಾಸ್ತವದಲ್ಲಿ ಭೂಕಂಪನ ಮತ್ತು ಜಲರಾಶಿಯ ಅಗಾಧ ಒತ್ತಡದಿಂದ ಉಂಟಾಗುವ ಒಳಸುಳಿಗಳಿಂದ ಹಲವು ಬಾರಿ ಅಣೆಕಟ್ಟೆ ಅಪಾಯಗಳನ್ನು ಎದುರಿಸುತ್ತಿರುತ್ತದೆ. ಇದೆಲ್ಲಾ ಆ ವಿಭಾಗದಲ್ಲಿ ಅಧ್ಯಯನ ನಡೆಸಿದವರಿಗೆ ಮಾತ್ರ ತಿಳಿಯುವಂತಹುದು. ಹಾಗಾಗಿ ಇಲ್ಲಿ ಸ್ಪೋಟಗಳು ಪರಿಪೂರ್ಣವಾಗಿ ನಿಲ್ಲದಿದ್ದರೆ ಅಣೆಕಟ್ಟೆ ಎಂದಿಗೂ ಸುರಕ್ಷಿತವಲ್ಲ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಸರ್ಕಾರ ಅಣೆಕಟ್ಟೆ ಸುರಕ್ಷತೆ ವಿಚಾರದಲ್ಲಿ ಐಐಎಸ್‌ಸಿ ಮತ್ತು ಪೂನಾ ತಜ್ಞರ ವರದಿ ಪಡೆದ ನಂತರ ಅಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ಯಾವ ಒತ್ತಡಕ್ಕೆ ಮಣಿದು ಅದೇ ಸ್ಥಳದಲ್ಲಿ ಪ್ರಾಯೋಗಿಕ ಸ್ಪೋಟ ನಡೆಸುತ್ತಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿದೆ.
ಆಡಳಿತ ಯಾರಿಗೆ ಅನುಕೂಲ ಮಾಡಲು ಹೊರಟಿದೆ? ಶತಮಾನೋತ್ಸವದ ಹೊಸ್ತಿಲಲ್ಲಿರುವ ಅಣೆಕಟ್ಟೆಯನ್ನು ಉಳಿಸಿಕೊಳ್ಳಲು, ಲಕ್ಷಾಂತರ ಎಕರೆ ಜಮೀನಿಗೆ ನೀರುಣಿಸಲು, ಆ ಮೂಲಕ ಜಿಲ್ಲೆಯ ಜನಜೀವನ ರಕ್ಷಿಸಿಕೊಳ್ಳಲು ಗಣಿ ಸ್ಫೋಟವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದವರ ಸಂಖ್ಯೆಯೇನೂ ಕಮ್ಮಿಯಿಲ್ಲ.
ಸಂಸದೆ ಸುಮಲತಾ ಅವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಕೇಂದ್ರ ವಲಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣಿ ಸಾಕಷ್ಟು ಸದ್ದುಮಾಡಿತ್ತು. ‘ಅಕ್ರಮ ಗಣಿಗಾರಿಕೆ ಬಗ್ಗೆ ಎಷ್ಟೆಲ್ಲ ದೂರುಗಳು ಬಂದಿವೆ. ಸರಣಿ ಪ್ರತಿಭಟನೆಗಳಾಗುತ್ತಿವೆ. ಗ್ರಾಮಸ್ಥರು ತಮ್ಮ ಮನೆ ಬಿರುಕು ಬಿಡುತ್ತಿವೆ ಎನ್ನುತ್ತಿದ್ದಾರಲ್ಲ. ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಸಂಸದರು ಪ್ರಶ್ನಿಸಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳು ಹಾಗೂ ಪಾಂಡವಪುರದ ಉಪವಿಭಾಗಾಧಿಕಾರಿ ಅವರು ಬೇಬಿಬೆಟ್ಟ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಬಳಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಬೇಕಾದ ಪೊಲೀಸ್ ಇಲಾಖೆಯ ಯಾವ ಅಧಿಕಾರಿಯೂ ಆ ಸಭೆಯಲ್ಲಿ ಇರಲಿಲ್ಲ. ಏನಿದರ ಮರ್ಮ ಎಂಬುದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿರುವ ಆರ್ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರ ಪ್ರಶ್ನೆ.
ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಪೂನಾದ ಗಣಿ ಮತ್ತು ಭೂ ವಿಜ್ಞಾನಿಗಳು ಕೆಆರ್‌ಎಸ್ ಸುತ್ತಮುತ್ತ ಸಮೀಕ್ಷೆ ನಡೆಸಿ, ಸ್ಪೋಟದಿಂದಾಗುವ ಕಂಪನಗಳನ್ನು ಅಭ್ಯಸಿಸಿದ್ದರು. ಕೊನೆಗೆ ಅಕ್ರಮ ಸ್ಪೋಟ ತಡೆಯೊಡ್ಡದಿದ್ದರೆ ಕನ್ನಂಬಾಡಿ ಅಣೆಕಟ್ಟೆಗೆ ಅಪಾಯ ನಿಶ್ಚಿತ ಎಂಬ ವರದಿ ನೀಡಿ ಹೋಗಿದ್ದರು. ಹೀಗಿದ್ದರೂ ಬಹಳ ದಿನಗಳ ಕಾಲ ಹಗಲು ರಾತ್ರಿಯೆನ್ನದೆ ಸ್ಪೋಟಗಳು ನಡೆಯುತ್ತಿದ್ದವು. ಅಣೆಕಟ್ಟೆಗೆ ಅಪಾಯ ಸಂಭವಿಸಿದರೆ ಯಾರು ಹೊಣೆ ? ಇದರ ಜವಾಬ್ದಾರಿ ಹೊರುವವರು ಯಾರು? ಜಿಲ್ಲೆಗಾಗುವ ಆರ್ಥಿಕ ನಷ್ಟ, ಪರಿಸರದ ಮೇಲಾಗುವ ದುಷ್ಪರಿಣಾಮಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?