ಇಲ್ಲಿಯವರೆಗೆ ಅಡೆ-ತಡೆ ಇಲ್ಲದೆ ಮುಕ್ತವಾಗಿ ಆಮದಾಗುತ್ತಿದ್ದ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳ ಆಮದಿನ ಮೇಲೆ ಬರುವ ನವೆಂಬರ್ 1ರಿಂದ ನಿರ್ಬಂಧಗಳನ್ನು ಹಾಕಿ ಇದೇ ತಿಂಗಳ 3ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಂದಿನಿಂದ ಇವುಗಳನ್ನು ಮತ್ತು ಸಂಬಂಧಿಸಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾದರೆ ವಿದೇಶ ವ್ಯಾಪಾರ ನಿರ್ದೇಶನಾಲಯದಿಂದ ಅಧಿಕೃತ ಲೈಸೆನ್ಸ್ ಅನ್ನು ಪಡೆದಿರಲೇಬೇಕು. ಅಕ್ಟೋಬರ್ 31ರವರೆಗೆ ಭಾರತದಲ್ಲಿ ಬಂದಿಳಿಯುವ ಈ ಉತ್ಪನ್ನಗಳಿಗೆ ಯಾವುದೇ ತೊಂದರೆ ಇಲ್ಲ. ಲೈಸೆನ್ಸ್ ಕೊಡಲು ನಿರ್ದೇಶನಾಲಯದಲ್ಲಿ ವೆಬ್‌ಸೈಟ್ ಆರಂಭಿಸಲಾಗಿದ್ದು, ಅರ್ಹ ಕಂಪೆನಿಗಳಿಗೆ ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಲೈಸೆನ್ಸ್ ಕೊಡಲಾಗುವುದೆಂದು ಹೇಳಲಾಗಿದೆ. ದೇಶದ ರಕ್ಷಣೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಅರ್ಜಿದಾರ ಕಂಪೆನಿಗಳ ಚೀನಾದೊಡನೆ ಸಂಬಂಧಗಳನ್ನೂ (ನೇರವಾಗಿ ಅಥವಾ ಪರೋಕ್ಷವಾಗಿ) ಪರಿಗಣಿಸಲಾಗುವುದು ಎನ್ನಲಾಗಿದೆ.
‘ಭಾರತದಲ್ಲಿ ಉತ್ಪಾದಿಸಿದ’ (make in india ) ಯೋಜನೆಯನ್ನು ಬಲಪಡಿಸಿ ಚೀನಾದೊಂದಿಗೆ ಜಗತ್ತಿನ ಇನ್ನೊಂದು ಉತ್ಪಾದನಾ ಕೇಂದ್ರವಾಗಿ ಭಾರತವನ್ನು ಬೆಳೆಸುವುದು ಒಂದು ಉದ್ದೇಶವಾಗಿದ್ದರೆ, ಚೀನಾದ ಮೇಲಿನ ನಮ್ಮ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು ಇನ್ನೊಂದು ಉದ್ದೇಶವೆಂದು ಬಲವಾಗಿ ಪ್ರತಿಪಾದಿಸಲಾಗಿದೆ. 2020ರ ಗಲವಾನ್ ಕಣಿವೆಯಲ್ಲಿ ಚೀನಾ ಕ್ಯಾತೆ ತೆಗೆದು ಘರ್ಷಣೆಗಿಳಿದಿದ್ದರಿಂದ ಅಂದಿನಿಂದ ಚೀನಾದೊಡನೆ ವ್ಯವಹಾರವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದು, ಚೀನಾ ಮೂಲದ ಕಂಪೆನಿಗಳಿಗೆ ಹೊಸ ಬಂಡವಾಳ ಹೂಡಿಕೆಯನ್ನು ಈಗಾಗಲೇ ನಿರಾಕರಿಸಲಾಗುತ್ತಿದೆ. ಆದರೂ ಅಲ್ಲಿಂದ ಆಮದು ಕಡಿಮೆಯಾಗಿಲ್ಲ. ಹೆಚ್ಚುತ್ತಲೇ ಇತ್ತು. 2022-23ರಲ್ಲಿ ಲ್ಯಾಪ್‌ಟಾಪ್ ಮುಂತಾದ ಈ ಗುಂಪಿನ ಉತ್ಪನ್ನಗಳನ್ನು ನಾವು ಉತ್ಪಾದಿಸಿದ್ದು 3.4 ಬಿಲಿಯನ್ ಡಾಲರ್ ಮೌಲ್ಯದ್ದಾದರೆ ಆಮದು ಮಾಡಿಕೊಂಡದ್ದು 8.8 ಬಿಲಿಯನ್ ಡಾಲರ್. ಅದರಲ್ಲಿ ಚೀನಾದಿಂದಲೇ 5.1 ಬಿಲಿಯನ್ ಡಾಲರ್. ಉಳಿದಂತೆ 1.7 ಬಿಲಿಯನ್ ಡಾಲರ್ ಸಿಂಗಾಪುರದಿಂದ, 0.9 ಬಿಲಿಯನ್ ಡಾಲರ್ ಹಾಂಗ್‌ಕಾಂಗ್‌ನಿಂದ. ಇತರರಿಂದ ಸಣ್ಣ ಭಾಗ. ಅಷ್ಟೇ ಅಲ್ಲ, ಇದೇ ವರ್ಷ 25ಕ್ಕೂ ಹೆಚ್ಚು ಗುಂಪುಗಳ ಆಮದು ಹೆಚ್ಚಾಗಿದೆ. ಎಲ್ಲ ಎಲೆಕ್ಟ್ರಾನಿಕ್ಸ್ ಗುಂಪಿನ ಆಮದು ಶೇ.14ರಷ್ಟು ಹೆಚ್ಚಾಗಿದೆ ಎಂದು ಸಂಸತ್ತಿಗೆ ತಿಳಿಸಲಾಗಿದೆ. ಚೀನಾದೊಡನೆ ವ್ಯವಹಾರ ತಗ್ಗಿಸಬೇಕಾಗಿದೆಯಂತೆ.
ಅಂದು ‘ಇಂಪೋರ್ಟ್ ಸಬ್‌ಸ್ಟಿಟ್ಯೂಷನ್’, ಇಂದು ‘ಮೇಕ್ ಇನ್ ಇಂಡಿಯಾ’
ಈ ಆದೇಶ ನಾವು ಮುಕ್ತ ವ್ಯಾಪಾರ ಒಪ್ಪಂದ (free trade agreement ) ಮಾಡಿಕೊಂಡಿರುವ ದೇಶಗಳೊಡನೆ ವ್ಯವಹಾರಕ್ಕೂ ಅನ್ವಯವಾಗುತ್ತದೆ ಎಂದೂ ಸ್ಪಷ್ಟಪಡಿಸಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಇನ್ನೂ ಹಲವು ಉತ್ಪನ್ನ ಗುಂಪುಗಳಿಗೂ ವಿಸ್ತರಿಸುವುದು ಎಂದು ನಿರೀಕ್ಷಿಸಲಾಗಿದೆ. ನಮ್ಮ ಉತ್ಪನ್ನಗಳನ್ನು ಹೆಚ್ಚಿಸುವುದು ಮತ್ತು ನಮ್ಮ ದೇಶದ ಭದ್ರತೆಗಾಗಿ ಈ ಕ್ರಮ ಎಂದು ನಾವು ಏನೇ ಹೇಳಿದರೂ ಇದನ್ನು ‘ರಕ್ಷಣಾತ್ಮಕ ನಿಲುವು’ (protectionsim) ಎಂದೇ ಅರ್ಥೈಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ವಿಶ್ವ ವ್ಯಾಪಾರ ಸಂಸ್ಥೆಯ (world trade organisation) ನಿಯಮಗಳ ಉಲ್ಲಂಘನೆ ಎನ್ನಲೂಬಹುದು. ಅಂಥ ವಾದಗಳಿಗೆ ಪುರಸ್ಕಾರ ಸಿಗಬೇಕಾದರೆ ಆಧಾರಗಳಿಲ್ಲ ಎನ್ನುವುದೂ ಎಲ್ಲರಿಗೂ ಗೊತ್ತು.
ಇತ್ತೀಚೆಗೆ ಅಂತಾರಾಷ್ಟ್ರೀಯ ಅನಿಶ್ಚಿತತೆಗಳು ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ಆಹಾರ ಹಣದುಬ್ಬರ ಹೆಚ್ಚಾದಾಗ ಮತ್ತು ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ಆತಂಕ ನಿರೀಕ್ಷಿಸಿದ ಹಲವು ದೇಶಗಳು ತಮ್ಮ ದೇಶದ ಆಹಾರ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈವರೆಗೆ ತಾವು ರಫ್ತು ಮಾಡುತ್ತಿದ್ದ ಆಹಾರ ಧಾನ್ಯಗಳ ರಫ್ತನ್ನು ನಿಷೇಽಸಿವೆ. ಅಥವಾ ಕಡಿಮೆ ಮಾಡಿವೆ. ಅಕ್ಕಿ ವಿಷಯದಲ್ಲಿ ನಾವು ರಫ್ತು ನಿಷೇಧಿಸಿದ್ದೇವೆ.
ಅಂದು 1970-80ರ ದಶಕಗಳಲ್ಲಿ ನಮ್ಮ ಕೈಗಾರಿಕಾ ಬೆಳವಣಿಗೆ ಗತಿ ಹೆಚ್ಚಬೇಕಿತ್ತು. ಆಯಾತ ಅನಿವಾರ್ಯವಾಗಿ ಹೆಚ್ಚಾಗಿದ್ದು, ನಿರ್ಯಾತ ಕಡಿಮೆ ಇದ್ದವು. ಆಗ ಕೈಗಾರಿಕಾ ನೀತಿಯಲ್ಲಿಯೇ ಆಯಾತಕ್ಕೆ ಪರ್ಯಾಯವಾಗಿ ಸ್ಥಳೀಯ ಉತ್ಪಾದನೆ ಹೆಚ್ಚಿಸಲು ಆಯಾತಗಳ ಮೇಲೆ ಹೆಚ್ಚು ತೆರಿಗೆ ಹಾಕಲಾಗುತ್ತಿತ್ತು.
ಸ್ಥಳೀಯ ಉತ್ಪಾದನೆಗೆ ಉತ್ತೇಜನಗಳೂ ಇದ್ದವು. ವಿದೇಶಿ ಬಂಡವಾಳ ಕರೆದರೂ ಕಡಿಮೆ ಬರುತ್ತಿತ್ತು. ಆಗ ಪರಿಣಾಮಕಾರಿ ಆಯಾತ ಶುಲ್ಕಗಳು ಶೇ.56.4ಕ್ಕೆ ಹೋಗಿದ್ದವು. ಆರ್ಥಿಕ ಸುಧಾರಣೆಗಳ (1991) ನಂತರ ಶೇ.4.88ಕ್ಕೆ ಇಳಿದು 2018ರವರೆಗೆ ಅದೇ ಮಟ್ಟದಲ್ಲಿದ್ದವು. ಈಗ ಸ್ವಲ್ಪ ಹೆಚ್ಚಿವೆ.
ಇಂದು ವಿದೇಶಿ ಬಂಡವಾಳ ತಾನಾಗಿಯೇ ಹರಿದು ಬರುತ್ತಿದೆ. ನಮ್ಮ ರಫ್ತುಗಳೂ ಗಣನೀಯವಾಗಿ ಹೆಚ್ಚಿವೆ. ‘ಮೇಕ್ ಇನ್ ಇಂಡಿಯಾ’ ಘೋಷಣೆಯೊಡನೆ ಸ್ಥಳೀಯ ಉತ್ಪಾದನೆ ಹೆಚ್ಚುತ್ತಿದೆ. ಪಿಎಲ್‌ಐನಂತಹ ಉತ್ತೇಜನಗಳೂ ಇವೆ. ಆಮದು ಕಡಿಮೆ ಮಾಡುವ ತುರ್ತು ಇದೆ.
ಎಚ್ಚರಿಕೆಯ ನಡೆ ಇರಲಿ
ತಮ್ಮ ಸ್ವಂತದ ಹಿತಾಸಕ್ತಿಯ ರಕ್ಷಣೆಗಾಗಿ ದೇಶಗಳು ಮುಕ್ತ ವಿದೇಶಿ ವ್ಯಾಪಾರಕ್ಕೆ ಎರಡು ರೀತಿಯಲ್ಲಿ ತಡೆಗೋಡೆಗಳನ್ನು ಕಟ್ಟಬಹುದು. ಒಂದು: ತಮ್ಮ ಅನುಕೂಲಕ್ಕೆ ಆಯಾತಗಳ ಮೇಲೋ ನಿರ್ಯಾತಗಳ ಮೇಲೋ ಕಸ್ಟಮ್ಸ್ ಸುಂಕಗಳನ್ನು ಹೆಚ್ಚಿಸಬಹುದು. ಇದರಿಂದ ಉತ್ಪನ್ನಗಳು ತುಟ್ಟಿಯಾಗಿ ಅವು ಕಡಿಮೆಯಾಗಬಹುದು. ಇನ್ನೊಂದು: ತೆರಿಗೆಯೇತರ ತಡೆಗೋಡೆಗಳು. ಆಯಾತ ನಿರ್ಯಾತ ಕೋಟಾಗಳು, ನಿರ್ಬಂಧಗಳು, ಆಕರ್ಷಣೆಗಳು, ದೇಶ ದೇಶಗಳಲ್ಲಿ ಭೇದ ನೀತಿ ಅನುಸರಿಸುವುದು ಮುಂತಾದವುಗಳನ್ನು ಹೆಸರಿಸಬಹುದು. ೧೯೭೫ರ ಹಿಂದೆ ತಮ್ಮ ದೇಶದ ನಾಣ್ಯದ ಅಧಿಕೃತ ಮೌಲ್ಯ ಅಪಮೌಲ್ಯಗೊಳಿಸುವುದನ್ನೂ ಕಾಣಬಹುದಿತ್ತು. ಆಗ ನಿರ್ಯಾತಗಳು ಅಗ್ಗವಾಗಿ ಆಯಾತಗಳು ತುಟ್ಟಿಯಾಗುತ್ತಿದ್ದವು. ಆದರೆ ಪ್ರತಿರೋಧವಾಗಿ ಇತರ ದೇಶಗಳಿಗೂ ಅಪಮೌಲ್ಯ ಮಾಡಿದರೆ ಇದು ಅರ್ಥಹೀನ.
ಈಗ ಜಾಗತೀಕರಣದಿಂದಾಗಿ ಜಗತ್ತೇ ಒಂದು ಹಳ್ಳಿಯಂತಾಗಿದೆ. ಅವಲಂಬನೆ ಹೆಚ್ಚಾಗಿದೆ. ದೇಶಗಳ ಜಿಡಿಪಿಯಲ್ಲಿ ವಿದೇಶ ವ್ಯಾಪಾರದ ಪಾಲು ಹೆಚ್ಚಾಗಿದೆ. ತೀವ್ರ ಬೆಳವಣಿಗೆಗೆ ಪೂರಕವಾಗಿದೆ. ಚೀನಾ ಮುಸುಕಿನಲ್ಲಿ ಇದ್ದದ್ದು ಜಗತ್ತಿನೊಡನೆ ತೆರೆದುಕೊಂಡ ನಂತರವೇ ವೇಗವಾಗಿ ಬೆಳೆದು ಇಂದು ಎರಡನೇ ದೊಡ್ಡ ಜಿಡಿಪಿ ಹೊಂದಿದ ದೇಶವಾಗಿದೆ. ನಮ್ಮ ವಾರ್ಷಿಕ ಸರಾಸರಿ ಜಿಡಿಪಿ ಬೆಳವಣಿಗೆ ಹೆಚ್ಚಾದದ್ದು ಮತ್ತು ತಂತ್ರಜ್ಞಾನ ಅಳವಡಿಕೆ ಎಲ್ಲ ರಂಗಗಳಲ್ಲಿಯೂ ಬಂದದ್ದು ಉದಾರೀಕರಣದ ನಂತರವೇ.
ಈಗಿನ ಕ್ರಮ ತಾತ್ಕಾಲಿಕ ಎಂದು ಹೇಳಿದ್ದರೂ ಲೈಸೆನ್ಸ್ ಬೇಕು ಎನ್ನುವ ಮಾತಿನಿಂದ ಹಿಂದಿನ ‘ಲೈಸೆನ್ಸ್ ಪರ್ಮಿಟ್’ ಆಡಳಿತಕ್ಕೆ ಮರಳುತ್ತಿದ್ದೇವೆಯೇ ಎಂಬ ಆತಂಕ ಹೆಚ್ಚಾಗಬಹುದು. ನಮ್ಮ ಆಡಳಿತ ಯಂತ್ರ ಇದನ್ನು ದುರುಪಯೋಗಪಡಿಸಿಕೊಳ್ಳುವ ಆತಂಕ ಉದ್ಯಮಿಗಳಲ್ಲಿದೆ. ತಜ್ಞರ ಪ್ರಕಾರ ಭ್ರಷ್ಟಾಚಾರ ಮತ್ತು ನಿಧಾನಗತಿಯ ಫೈಲ್ ಚಲನೆಯಿಂದ ಉದ್ಯಮಗಳಿಗೆ ತೊಂದರೆಯಾದೀತೆಂಬ ಭಯವಿದೆ. ಸರ್ಕಾರವು ಇದನ್ನು ಹೋಗಲಾಡಿಸಲು ತಕ್ಕ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಪರ್ಯಾಯ ಮಾರ್ಗಗಳನ್ನೂ ಹುಡುಕಬೇಕು.
ತಾತ್ಕಾಲಿಕವಾಗಿಯಾದರೂ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಹೆಚ್ಚಾಗಬಹುದು. ಪೇಟೆಯಲ್ಲಿ ಕೃತಕ ಕೊರತೆಯನ್ನೂ ಸೃಷ್ಟಿಸಿ ದುರ್ಲಾಭ ಪಡೆಯುವ ಆತಂಕವಿದೆ.
ಅದೇ ರೀತಿ ಚೀನಾದ ಉತ್ಪನ್ನಗಳು ಬೇರೆ ದೇಶಗಳ ಮೂಲಕ ಒಳಬರುವ ಆತಂಕವೂ ಇದೆ. ಇವೆಲ್ಲವನ್ನು ತಪ್ಪಿಸಲು ಸರ್ಕಾರ ಸದಾ ಜಾಗೃತವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು.