ಮೊದ ಮೊದಲು ಕೇಂದ್ರದ ಪ್ರತಿ ತೆರಿಗೆಯಲ್ಲೂ ರಾಜ್ಯಗಳದು ಇಂತಿಷ್ಟು ಪಾಲು ಎಂದು ನಿರ್ಧರಿಸಿ ಆಯಾ ರಾಜ್ಯಗಳಲ್ಲಿ ಸಂಗ್ರಹವಾದ ಮೊತ್ತ ಸಂಗ್ರಹ ದಲ್ಲಿ ಏರಿಕೆಯ ಪ್ರಮಾಣ, ಅಭಿವೃದ್ಧಿ ಪ್ರಯತ್ನ ಮುಂತಾದವುಗಳನ್ನು ಆಧರಿಸಿ ರಾಜ್ಯಗಳಿಗೆ ಹಂಚಲಾಗುತ್ತಿತ್ತು. ನಂತರದ ಹಣಕಾಸು ಆಯೋಗಗಳ ಎಲ್ಲ ತೆರಿಗೆಗಳನ್ನು ಸೇರಿಸಿ ಒಂದು ಪ್ರಮಾಣದಲ್ಲಿ ರಾಜ್ಯಗಳಿಗೆ ವರ್ಗಾಯಿಸುವ ಶಿಪಾರಸ್ಸು ಮಾಡಿದವು. ಇತ್ತೀಚಿನ ೧೨ನೇ ಆಯೋಗ ಶೇ.೨೯ ತೆರಿಗೆ ಆದಾಯ ವರ್ಗಾಯಿಸಬೇಕೆಂದು ಶಿಫಾರಸ್ಸು ಮಾಡಿತ್ತು. ನಂತರದ ೧೩, ೧೪ ಮತ್ತು ೧೫ನೇ ಆಯೋಗಗಳು ಅನುಕ್ರಮವಾಗಿ ಶೇ.೩೨, ೪೨ ಮತ್ತು ೪೧ ವರ್ಗಾವಣೆಗೆ ಸಲಹೆ ಮಾಡಿವೆ. ೧೫ನೇ ಆಯೋಗ ಶೇ.೦೧ ಕಡಿಮೆ ಮಾಡಲು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖಗಳು ಕೇಂದ್ರಾಡಳಿತ ಪ್ರದೇಶಗಳಾಗಿರುವುದು ಕಾರಣ ಎಂದು ವಿವರಿಸಲಾಗಿದೆ. ಈ ವಿತರಣೆಯಲ್ಲದೆ ರಾಜ್ಯಗಳಿಗೆ ವಿಶಿಷ್ಟ ವಾರ್ಷಿಕ ಅನುದಾನಗಳು ವಿಶೇಷ ಸಾಂದರ್ಭಿಕ ಅನುದಾನಗಳು ದೊರೆಯುತ್ತವೆ. ಆ ಮಾತು ಬೇರೆ.
ರಾಜ್ಯಗಳಿಗೆ ವಿಭಜನೆ ಕಡಿಮೆಯಾಗಿದೆ
ಇತ್ತೀಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ಕೆಲವು ಮುಖ್ಯ ಮಂತ್ರಿಗಳು ಈ ವಿಷಯ ಪ್ರಸ್ತಾಪಿಸಿ ತಮ್ಮ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ. ಸಂವಿಧಾನ ಬದ್ಧವಾಗಿ ಹಣಕಾಸು ಆಯೋಗಗಳು ರಾಜ್ಯಗಳಿಗೆ ಕೊಟ್ಟಿರುವ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಒಕ್ಕೂಟ ಹಣಕಾಸು ವ್ಯವಸ್ಥೆಗೆ ( Federal finance system ) ಧಕ್ಕೆ ಉಂಟು ಮಾಡಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೋದಿಯವರ ಸರ್ಕಾರ ೧೩ನೇ ಆಯೋಗದ ಕೊನೆಯ ವರ್ಷದಿಂದ (೨೦೧೪-೧೫) ಆರಂಭವಾಗುತ್ತದೆ. ಆ ವರ್ಷ ರಾಜ್ಯಗಳಿಗೆ ಶೇ.೩೨ರಷ್ಟು ಪಾಲು ಸಿಗಬೇಕಿತ್ತು. ಆದರೆ, ರಾಜ್ಯಗಳಿಗೆ ದಕ್ಕಿದ್ದು ಶೇ.೨೭.೧೩ರಷ್ಟು ಮಾತ್ರ. ೨೦೨೨-೨೩ ಮುಂಗಡ ಪತ್ರವೂ ಸೇರಿ ಒಂಬತ್ತು ಬಜೆಟ್‌ಗಳ ಅಧ್ಯಯನ ಮಾಡಿದಾಗ ಕೇಂದ್ರದ ಒಟ್ಟು ತೆರಿಗೆ ಆದಾಯದಲ್ಲಿ ಸೆಸ್ ಮತ್ತು ಸರ್‌ಜಾರ್ಜ್‌ಗಳ ಪ್ರಮಾಣ ಹೆಚ್ಚುತ್ತ ಹೋಗಿರುವುದಲ್ಲದೆ ರಾಜ್ಯಗಳ ತೆರಿಗೆ ಪಾಲು ಆಯೋಗಗಳ ಶಿಫಾರಸ್ಸಿನಂತೆ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಇಲ್ಲಿ ಕೊಡಲಾಗಿರುವ ಸಂಖ್ಯಾ ಪಟ್ಟಿಯಿಂದ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.
ಮೇಲ್ತೆರಿಗೆಗಳು ಒಂದು ಮಿತಿಯಲ್ಲಿ ಇದ್ದಾಗ ರಾಜ್ಯಗಳೊಡನೆ ಹಂಚಿಕೊಳ್ಳಲು ಹೆಚ್ಚು ಮೊತ್ತವಿರುತ್ತಿತ್ತು. ಆಗಲೂ ರಾಜ್ಯಗಳಿಗೆ ದಕ್ಕಿದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರಲಿಲ್ಲ. ಉದಾಹರಣೆಗೆ ೨೦೧೪-೧೫ರಲ್ಲಿ ಮೇಲ್ತೆರಿಗೆಗಳು ಶೇ.೫.೯೭ ಇದ್ದವು. ಆಗ ರಾಜ್ಯಗಳಿಗೆ ಅವುಗಳ ಹಕ್ಕಿನ ಶೇ.೪.೮೭ರಷ್ಟು ಕಡಿಮೆ ಹಂಚಿಕೆಯಾಗಿತ್ತು. ಜುಲೈ ೦೧, ೨೦೧೭ರಂದು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಅವುಗಳ ಹಿಂದಿನ ಸ್ವಂತ ತೆರಿಗೆ ಬೆಳವಣಿಗೆಯನ್ನಾಧರಿಸಿ ಜಿಎಸ್‌ಟಿಯಿಂದಾಗಿ ಅನುಭವಿಸುವ ಕೊರತೆ ತುಂಬಿಕೊಡಲು (ಜಿಎಸ್‌ಟಿ ಕೌನ್ಸಿಲ್ ನಿರ್ಣಯದಂತೆ) ಕೆಲವು ಉತ್ಪನ್ನ ಮತ್ತು ಸೇವೆಗಳ ಜಿಎಸ್‌ಟಿ ಮೇಲೆ ಜಿಎಸ್‌ಟಿ ಪರಿಹಾರ ಸೆಸ್‌ಅನ್ನು ಕೇಂದ್ರ ಆಕರಿಸಲಾರಂಭಿಸಿತು. ಅಂದಿನಿಂದ ಮೇಲ್ತೆರಿಗೆಗಳ ಪ್ರಮಾಣ ಈಗ ಶೇ.೨೦ರಷ್ಟನ್ನು ದಾಟಿದೆ. ಸ್ವಾಭಾವಿಕವಾಗಿಯೇ ರಾಜ್ಯಗಳ ಪಾಲು ಅವುಗಳ ಹಕ್ಕಿಗಿಂತ ಶೇ.೧೦ರಷ್ಟಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಈ ಸೆಸ್ ಪೂರ್ಣವಾಗಿ ರಾಜ್ಯಗಳಿಗೆ ಹೋಗುತ್ತದೆ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿ ಅರ್ಧ ಅವರಿಗೇ ವರ್ಗಾವಣೆಯಾಗುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ದೇಶಕ್ಕೆ ಒಂದೇ ಪರೋಕ್ಷ ತೆರಿಗೆ ತರುವುದಕ್ಕಾಗಿ ರಾಜ್ಯಗಳ ಸುಮಾರು ೧೩ಕ್ಕೂ ಹೆಚ್ಚು ತೆರಿಗೆಗಳನ್ನು ಪಡೆಯುವ ಅಧಿಕಾರವನ್ನು ರಾಜ್ಯಗಳು ಕಳೆದುಕೊಂಡು ಕೇಂದ್ರವನ್ನು ಅವಲಂಬಿಸುವಂತಾಗಿದೆ.
ರಾಜ್ಯಗಳ ಹಣಕಾಸು ಸ್ಥಿತಿ ಅಷ್ಟೊಂದು ಸುಭದ್ರವಾಗಿಲ್ಲವೆಂದು ರಿಜರ್ವ್ ಬ್ಯಾಂಕ್ ಅಧ್ಯಯನ ಹೇಳಿದೆ. ಇದಕ್ಕೆ ಕೇಂದ್ರದಿಂದ ಅವರ ಹಕ್ಕಿನ ಪಾಲು ಪೂರ್ಣವಾಗಿ ಸಿಗದೇ ಇರುವುದೂ ಒಂದು ಪ್ರಮುಖ ಕಾರಣ. ಸುಸ್ಥಿರ ರಾಜ್ಯಗಳಿದ್ದರೆ ಕೇಂದ್ರವೂ ಸುಭದ್ರವಾಗಿರುತ್ತದೆ. ಕೇಂದ್ರದ ಯೋಜನೆಗಳನ್ನೂ ರಾಜ್ಯಗಳೇ ಅನುಷ್ಠಾನಗೊಳಿಸಬೇಕು.
ಕೇಂದ್ರ ಸರ್ಕಾರ ರಾಜಕೀಯವನ್ನು ಬದಿಗಿಟ್ಟು ದೇಶದ ಒಟ್ಟಾರೆ ಅಭಿವೃದ್ಧಿ ಗಾಗಿ ಒಕ್ಕೂಟ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಎಲ್ಲ ರಾಜ್ಯ ಸರ್ಕಾರ ಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಜ್ಞರ ಸಲಹೆಗಳನ್ನೂ ಪಡೆದು ವಿವರವಾಗಿ ಚರ್ಚಿಸಿ ಕೊಡು ಕೊಳ್ಳುವುದರ ಮೂಲಕ ಒಮ್ಮತದ ತೀರ್ಮಾನ ತೆಗೆದು ಕೊಳ್ಳಬೇಕು. ಅದರ ಅನುಷ್ಠಾನದಲ್ಲಿಯೂ ಸಂಶಯಾತೀತ ಸಹಕಾರವನ್ನು ಪಡೆಯಬೇಕು. ಹೇಗೂ ಜಿಎಸ್‌ಟಿ ಸಂಗ್ರಹ ದಿನೇ ದಿನೇ ಹೆಚ್ಚುತ್ತಿದೆ. ರಾಜ್ಯಗಳಿಗೆ ವರ್ಗಾವಣೆ ಹೆಚ್ಚಾಗಿರಲಿ. ಮೇಲ್ತೆರಿಗೆಗಳು ತೀರ ಕಡಿಮೆ ಪ್ರಮಾಣದಲ್ಲಿ ಇರಲಿ.
೨೦೧೪-೧೫ ಶೇ.೨೭.೧೩ ಶೇ.೫.೯೭
೨೦೧೫-೧೬ ಶೇ.೩೪.೭೭ ಶೇ.೫.೬೬
೨೦೧೬-೧೭ ಶೇ.೩೫.೪೩ ಶೇ.೭.೧೯
೨೦೧೭-೧೮ ಶೇ.೩೫.೦೭ ಶೇ.೮.೦೪
೨೦೧೮-೧೯ ಶೇ.೩೬.೬೦ ಶೇ.೧೫.೪೨
೨೦೧೯-೨೦ ಶೇ.೩೨.೩೭ ಶೇ.೧೨.೬೬
೨೦೨೦-೨೧ ಶೇ.೨೯.೩೫ ಶೇ.೧೪.೬೯
೨೦೨೧-೨೨ ಶೇ.೩೨.೫೦ ಶೇ.೨೩.೦೩
೨೦೨೨-೨೩ ಶೇ.೨೯.೬೦ ಶೇ.೨೦.೨೮
ಟಿಪ್ಪಣಿ ೨: ೨೦೨೧-೨೨ರ ಸಂಖ್ಯೆಗಳು ಪರಿಷ್ಕೃತ ಅಂದಾಜುಗಳು
ಟಿಪ್ಪಣಿ ೩: ೨೦೨೨-೨೩ರ ಸಂಖ್ಯೆಗಳು ಬಜೆಟ್ ಅಂದಾಜುಗಳು
ಆಧಾರ: ಬಜೆಟ್ ದಾಖಲೆಗಳಿಂದ ಅಳವಡಿಸಿಕೊಂಡಿದ್ದು ಮತ್ತು ಬಿಜಿನೆಸ್ ಸ್ಟ್ಯಾಂಡರ್ಡ್ ಧೈನಿಕ ೧೧-೦೮-೨೦೨೨