ಇತ್ತೀಚೆಗೆ ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಸಿದ್ದರಾಮೋತ್ಸವವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಪರ- ವಿರೋಧ ಹೇಳಿಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವದ ಬಗ್ಗೆ ಎರಡು ಬಗೆ ಭಿನ್ನ ದೃಷ್ಟಿಕೋನ ಇಲ್ಲಿದೆ.
ನೋಟ
ನೈತಿಕತೆಯ ರಾಜಕಾರಣವನ್ನು ಸಾಕ್ಷೀಕರಿಸಿದ ದಾವಣಗೆರೆ ಘೋಷಣೆ
![](https://andolana.in/wp-content/uploads/2022/08/Screenshot-2022-08-06-123445.jpg)
೧೯೮೦-೮೫ ರ ಆಸುಪಾಸಿನಲ್ಲಿ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಪ್ರಾದೇಶಿಕ ನಾಯಕತ್ವಕ್ಕೆ ಮುನ್ನುಡಿ ಬರೆದವು. ಕರ್ನಾಟಕ ಕೂಡ ರಾಜಕೀಯ ಅಸ್ಥಿರತೆಯಿಂದ ನೈತಿಕತೆಯ ನಾಯಕತ್ವಕ್ಕಾಗಿ ಹುಡುಕಾಟ ಆರಂಭಿಸಿರುತ್ತೆ. ೧೯೯೦-೯೫ರ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಜಾತಿ ಮತ್ತು ಹಣ ಬಲದ ಮೇಲಾಟಗಳು ಆರಂಭವಾಗಿರುತ್ತವೆ. ಆಗ ರಾಮ ಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಆದರ್ಶ ರಾಜಕಾರಣವನ್ನು ಬಹಳವಾಗಿ ಒಪ್ಪಿಕೊಂಡಿದ್ದ ಸಿದ್ದರಾಮಯ್ಯ ಅವರು ರೂಪುಗೊಳ್ಳುತ್ತಾರೆ. ಜನತಾ ಪರಿವಾರದಲ್ಲಿ ಉಲ್ಬಣಿಸಿದ ಭಿನ್ನಾಭಿಪ್ರಾಯಗಳು ಹಾಗೂ ಪಕ್ಷಾಂತರ ಪರ್ವದಿಂದ ಸಿದ್ದರಾಮಯ್ಯ ವ್ಯಕ್ತಿತ್ವ ಬದಲಾಗುವುದಿಲ್ಲ. ಅಂತಹ ಸಿದ್ದರಾಮಯ್ಯ ಅವರ ಬದ್ಧತೆ ಮತ್ತು ಪ್ರಾಮಾಣಿಕ ರಾಜಕಾರಣದ ಹಿನ್ನೆಲೆಯಲ್ಲಿ ೨೦೧೩ರಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತದೆ.
೨೦೧೩ರಿಂದ ೨೦೧೮ರವರೆಗೆ ಮತ್ತೆ ಸಿದ್ದರಾಮಯ್ಯ ಎಂಬ ನೈತಿಕ ರಾಜಕಾರಣದ ಮುತ್ಸದ್ಧಿಗೆ ಜಾತಿವಾದ ಮತ್ತು ಅಪ್ರಾಣಿಕತೆಯ ಅನಗತ್ಯ ಪಟ್ಟ ಕಟ್ಟಲು ಕಾಂಗ್ರೆಸ್ಸೇತರ ನಾಯಕರು ಮತ್ತು ಪಕ್ಷಗಳು ಹಂಬಲಿಸುವ ಪ್ರಯತ್ನಕ್ಕೆ ಹಿನ್ನಡೆಯಾಗುತ್ತದೆ. ನಂತರದಲ್ಲಿ ಕರ್ನಾಟಕವನ್ನು ಮುನ್ನಡೆಸಿದ ಕಾಂಗ್ರೆಸ್ಸೇತರ ಪಕ್ಷಗಳ ಅತ್ಯಂತ ಪ್ರಭಾವಿಗಳು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿಹೋದ ರಾಜಕೀಯ ಸಂದರ್ಭಗಳು ಮತ್ತೆ ಪರಿಶುದ್ಧ ಹಾಗೂ ಜನವರ್ಗದ ನಾಯಕನತ್ತ ಮುಖ ಮಾಡಿದವು. ಇದೇ ಸಂದರ್ಭದಲ್ಲಿ ೭೫ ವರ್ಷ ಪೂರೈಸಿದ್ದ ಸಿದ್ದರಾಮಯ್ಯ ಅವರಿಗೆ ದಾವಣಗೆರೆಯ ಅಮೃತ ಮಹೋತ್ಸವ ಕೇವಲ ಕಾರ್ಯಕ್ರಮವಾಗಿಲ್ಲದೇ, ಕರ್ನಾಟಕ ಮತ್ತೊಮ್ಮೆ ಕಾಂಗ್ರೆಸ್‌ನತ್ತ ಸಂಪೂರ್ಣವಾಗಿ ವಾಲುವ ದಟ್ಟ ಸನ್ನಿವೇಶದ ಸಂದೇಶವನ್ನು ರವಾನಿಸಿದೆ.
ಈ ಅಮೃತ ಮಹೋತ್ಸವವಾದ ಮೂಲಕ ಕಾಂಗ್ರೆಸ್ ನಾಯಕತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ ಎಂಬುದರ ಸ್ಪಷ್ಟ ನಿಲುವನ್ನು ಪ್ರದರ್ಶಿಸುವ ಜತೆಗೆ ಸಾಮೂಹಿಕ ನಾಯಕತ್ವವನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿ, ಒಗ್ಗಟ್ಟನ್ನು ಪ್ರದರ್ಶನ ಮಾಡಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸುಳ್ಳಿನ ಆಶ್ವಾಸನೆಗಳ ಕಟ್ಟುಕಥೆಗಳ ಬೆತ್ತಲು ಈಗಾಗಲೇ ರಾಜ್ಯಕ್ಕೆ ಗೊತ್ತಾಗಿದೆ. ಇಂತಹ ತಪ್ಪುಗಳು ಮರುಕಳಿಸಬಾರದೆಂದು ಮತದಾರರು ನಿರ್ಧರಿಸಿರುವ ಸೂಚನೆಗಳು ಸಿದ್ದರಾಮಯ್ಯನವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕಂಡುಬಂದಿತು. ಅವರು ರಾಜ್ಯಕ್ಕೆ ನೀಡಿರುವ ಎಲ್ಲಾ ಕೊಡುಗೆಗಳ ಫಲಶ್ರುತಿಯ ಫಲವಾಗಿ ಅವರ ಅಭಿಮಾನಿಗಳು ಸಾಗರೋಪಾದಿಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಾಕ್ಷಿಯಾದರು. ಕಾಂಗ್ರೆಸ್ ತನ್ನ ಶಕ್ತಿಯನ್ನು ಸಿದ್ದರಾಮಯ್ಯನವರ ಜನ್ಮದಿನೋತ್ಸವದ ಅಮೃತ ಮಹೋತ್ಸವದಲ್ಲಿ ಕಂಡುಕೊಂಡಿದೆ. ಇದನ್ನು ಕಂಡ ಇತರ ರಾಜಕೀಯ ಪಕ್ಷಗಳಲ್ಲಿ ಹಾಗೂ ನಮ್ಮ ರಾಜಕೀಯ ವಿರೋಧ ಪಕ್ಷಗಳಲ್ಲಿ ನಡುಕ ಉಂಟಾಗಿದೆ. ನಮಗೆ ನಿಶ್ಚಯವಾಗಿದೆ, ನಾಡಿನ ಮತದಾರರು ಕಾಂಗ್ರೆಸ್ ಪರವಾಗಿದ್ದು, ಅದರ ಸೂಚಕವಾಗಿ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಎಲ್ಲಾ ಪ್ರದೇಶಗಳಿಂದ ಒಗ್ಗೂಡಿದ ಜನಸಾಗರವೇ ಇದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ನಾವು ಮತದಾರರ ಪರವಾಗಿ ಕೆಲಸ ಮಾಡುವ ಉಮೇದುವಾರಿಕೆಯನ್ನು ಮಾತ್ರ ಹೊಂದಿದ್ದೇವೆ. ಅದಕ್ಕಾಗಿ ಕರ್ನಾಟಕದ ಜನ ಮತ್ತು ಕಾಂಗ್ರೆಸ್ ಈಗಾಗಲೇ ಮುಂದಿನ ೨೦೨೩ರ ಮೇ ತಿಂಗಳ ವಿಜೋಂತ್ಸವದ ಸಂಭ್ರಮಾಚರಣೆಗೆ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಕಾರ್ಯಕ್ರಮದ ಮೂಲಕ ನಾಂದಿ ಹಾಡಿದ್ದೇವೆ.
ಬೇರೆ ಪಕ್ಷಗಳ ಮಾತುಗಳಿಗೆ ನಾವು ಕಿವಿಗೊಡದೆ ನೇರವಾಗಿ ಚುನಾವಣೆ ಮತ್ತು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಉದ್ದೇಶವೇ ನಮ್ಮ ಮುಂದಿನ ಗುರಿಯಾಗಿದೆ. ಸಿದ್ದರಾಮಯ್ಯನವರ ಜನ್ಮೋತ್ಸವ ಕಾಂಗ್ರೆಸ್ಸಿನ ಮರುಸ್ಥಾಪನೆಯ ದಿನ ಎಂದು ನಾವು ಭಾವಿಸಿದ್ದೇವೆ. ನಮ್ಮ ಒಗ್ಗಟ್ಟಿನ ಬಲವನ್ನು ಚುನಾವಣೆಯ ನಂತರದ ಸಂದರ್ಭದಲ್ಲಿ ಉತ್ತರವಾಗಿ ನೀಡುತ್ತೇವೆ ಮತ್ತು ಮತದಾರರ ಆಸೆಯ ನಿರೀಕ್ಷೆಗಳನ್ನು ನಾವು ಖಂಡಿತವಾಗಿಯೂ ಪೂರೈಸುತ್ತೇವೆ.
ಪ್ರತಿ ನೋಟ
‘ಸಿದ್ದರಾಮೋತ್ಸವ’ವನ್ನು ಹೆಚ್ಚೆಂದರೆ ಒಂದು ‘ಪಾರ್ಟಿ’ಗೆ ಸೀಮಿತಗೊಳಿಸಬಹುದು
![](https://andolana.in/wp-content/uploads/2022/08/Screenshot-2022-08-06-123552.jpg)
ನಮ್ಮಲ್ಲಿ ಎರಡು ರೀತಿಯ ರಾಜಕೀಯ ಸಭೆ ಸಮಾರಂಭಗಳನ್ನು ಕಾಣಬಹುದಾಗಿದೆ. ಒಂದು, ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಲುವಾಗಿ ಮತ್ತು ಪ್ರತಿಷ್ಠೆಗಾಗಿ ತಮ್ಮ ಕೈಲಾದಷ್ಟು ಜನರನ್ನು ಸೇರಿಸಿ ನಡೆಸುವ ವಿಜೃಂಭಣೆಯ ಸಭೆ ಸಮಾರಂಭಗಳು. ಮತ್ತೊಂದು, ರಾಜಕೀಯ ಪಕ್ಷಗಳು ಅಥವಾ ಗುಂಪುಗಳು ಒಂದು ನಿರ್ದಿಷ್ಟ ಧ್ಯೇಯದೊಂದಿಗೆ, ಸಮಾಜದಲ್ಲಿ ಒಂದು ಬದಲಾವಣೆ ಮೂಡಿಸುವ ಒಂದು ಪ್ರಾಮಾಣಿಕ ಪ್ರಯತ್ನದ ಫಲವಾಗಿ ಜನರು ಸ್ವಯಂಪ್ರೇರಿತರಾಗಿ ಸೇರಿ ನಡೆಸುವ ಸಭೆ ಸಮಾರಂಭಗಳು. ಜಾತ್ಯತೀತ ಜನತಾದಳದ ‘ಜನತಾ ಜಲಧಾರೆ’ ರಥಯಾತ್ರೆಯೂ ಅಂತಹ ಒಂದು ಕಾರ್ಯಕ್ರಮವಾಗಿತ್ತು. ಸಾಂಕೇತಿಕ ರಥಗಳು ರಾಜ್ಯದಾದ್ಯಂತ ಸಂಚರಿಸಿ ಎಲ್ಲಾ ನದಿಗಳಿಂದ ನೀರು ಸಂಗ್ರಹಣೆ ಮಾಡಿದವು. ಜಾ.ದಳದ ಪ್ರಮುಖ ನಾಯಕರು, ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರೆಲ್ಲರೂ ಆ ರಥದ ಸಾರಥಿಗಳಂತೆ ಅದನ್ನು ಮುನ್ನಡೆಸುತ್ತಾ ಸಾಗಿ, ಆ ಯಾತ್ರೆಯ ದಾರಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಸಮಾವೇಶಗಳನ್ನು ಏರ್ಪಡಿಸಿ, ನೀರಿನ ವಿಷಯದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಕುರಿತು ಮತ್ತು ದುರುಪೋಂಗವಾಗುತ್ತಿರುವ ನೀರನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಅರಿವು ಮೂಡಿಸಿದರು. ಕೊನೆಯದಾಗಿ ಸಂಗ್ರಹಣೆಯಾದ ತೀರ್ಥಗಳಿಗೆ ವಾರಣಾಸಿಯ ಪಂಡಿತರಿಂದ ವಿಶೇಷ ಗಂಗಾ ಪೂಜೆ ಮಾಡಿಸಿ, ತಮ್ಮ ಪಕ್ಷವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ರಾಜ್ಯದ ಅಷ್ಟೂ ನೀರಾವರಿ ೋಂಜನೆಗಳನ್ನು ಪರಿಪೂರ್ಣ ಮಾಡುವುದಾಗಿ ಮತ್ತು ನಮ್ಮ ರಾಜ್ಯದ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿ ಘೋಷಿಸಿದರು. ಈ ಐತಿಹಾಸಿಕ ಸಮಾರಂಭವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಲಕ್ಷಾಂತರ ಜನರೆದುರು ಪ್ರತಿಜ್ಞೆ ಮಾಡಲಾಯಿತು. ಈ ಪವಿತ್ರ ಗಂಗಾ ಜಲಕ್ಕೆ ಜಾ.ದಳ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದಿಗೂ ಪ್ರತಿನಿತ್ಯ ನಿಷ್ಠೆಯಿಂದ ಪೂಜೆ ಮಾಡಲಾಗುತ್ತಿದೆ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೇ ಇತ್ತೀಚೆಗೆ ಮಾಹಿತಿ ನೀಡಿದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮಟ್ಟದ ಸಮಾರಂಭವಾದ ಈ ಕಾರ್ಯಕ್ರಮಕ್ಕೆ ತನ್ನದೇ ಆದ ರಾಜಕೀಯ ಕೋನವಿದ್ದರೂ, ಇದು ಬಹುತೇಕವಾಗಿ ಒಂದು ಜನಪರ ಕಾರ್ಯಕ್ರಮವೆಂದು ಚರಿತ್ರೆಯಲ್ಲಿ ದಾಖಲೆಯಾಗಿದೆ. ಆದರೆ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ೭೫ನೇ ಜನ್ಮದಿನದ ಅಂಗವಾಗಿ ನಡೆಸಿದ ‘ಸಿದ್ದರಾಮೋತ್ಸವ‘ ಕಾರ್ಯಕ್ರಮವನ್ನು ‘ಜನತಾ ಜಲಧಾರೆ‘ ಕಾರ್ಯಕ್ರಮಕ್ಕೆ ಪೈಪೋಟಿಯಂತೆ ಬಿಂಬಿಸುತ್ತಿರುವುದು ಅವಿವೇಕವೇ ಸರಿ. ಏಕೆಂದರೆ ‘ಸಿದ್ದರಾಮೋತ್ಸವ‘ವು ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಮೊದಲನೇ ರೀತಿಯ ಸಮಾರಂಭಗಳ ಪಟ್ಟಿಗೆ ಸೇರುತ್ತದೆ. ಅಂದರೆ ಅದು ವೈಯಕ್ತಿಕ ಪ್ರತಿಷ್ಠೆಗಾಗಿ, ಇತರೆ ಪಕ್ಷಗಳ ಜೊತೆಗಿನ ಪೈಪೋಟಿಗಾಗಿ, ಶಕ್ತಿ ಪ್ರದರ್ಶನಕ್ಕಾಗಿ, ವ್ಯಕ್ತಿ ಪೂಜೆ ಮಾಡುವ ಸಲುವಾಗಿ ನಡೆಸಿದ ಒಂದು ಸಮಾರಂಭವಾಗಿತ್ತು. ನೆಚ್ಚಿನ ರಾಜಕೀಯ ನಾಯಕನ ಸಾಧನೆಯನ್ನು ಸಂಭ್ರಮಿಸುವುದು, ಕಾನೂನಿನ ಚೌಕಟ್ಟಿನಲ್ಲಿ ಕುಡಿದು, ಕುಣಿದು ಕುಪ್ಪಳಿಸುವುದು ತಪ್ಪೇನು ಅಲ್ಲವಾದರೂ, ಇಂತಹ ಸಮಾರಂಭಗಳಿಗೆ ಜನರು ಹೆಚ್ಚಾಗಿ ಸೇರಿದಷ್ಟೂ ಇತರರಿಗೆ ತೊಂದರೆಗಳು ಹೆಚ್ಚಾಗುತ್ತವೆ ಹೊರೆತು ಯಾರಿಗೂ ಕಿಂಚಿತ್ತೂ ಒಳಿತಾಗುವುದಿಲ್ಲ ಎಂಬ ವಾಸ್ತವಾಂಶವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನೂರಾರು ಮಂದಿ ಪೊಲೀಸ್ ಪೇದೆಗಳನ್ನು ಈ ಸಮಾರಂಭಕ್ಕೆ ಭದ್ರತೆ ನೀಡುವ ಉದ್ದೇಶದೊಂದಿಗೆ ನಿೋಂಜಿಸಲಾಗಿತ್ತು. ಸಮಾರಂಭಕ್ಕೆ ಬರುವ ಜನಸಾಗರದಿಂದ ಸಾಕಷ್ಟು ಸಂಚಾರ ದಟ್ಟಣೆಯೂ ಸೃಷ್ಟಿಯಾಗಿ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ಸಾಮಾನ್ಯ ಜನರಿಗೂ ತೊಂದರೆಯುಂಟಾಯಿತು. ಆದ್ದರಿಂದ ‘ಜನತಾ ಜಲಧಾರೆ‘ ಕಾರ್ಯಕ್ರಮವು ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡ ಒಂದು ಪವಿತ್ರ ಯಾಗದಂತೆಯಾದರೆ, ‘ಸಿದ್ದರಾಮೋತ್ಸವ‘ ವನ್ನು ಹೆಚ್ಚೆಂದರೆ ಒಂದು ‘ಪಾರ್ಟಿ’ ಎಂದು ಪರಿಗಣಿಸಬಹುದು. ಹೀಗಾಗಿ ಈ ಎರಡು ಕಾರ್ಯಕ್ರಮಗಳನ್ನು ತಕ್ಕಡಿಗೆ ಹಾಕಿ ತೂಗುವುದರಿಂದ ಸಿದ್ದರಾಮಯ್ಯನವರಿಗೆ ಮತ್ತು ಅವರ ಅಭಿಮಾನಿಗಳಿಗೆ ಅತ್ಯಂತ ಮುಜುಗರ ಉಂಟಾಗುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ಕಾಂಗ್ರೆಸ್ ಪಕ್ಷವು ಗಮನದಲ್ಲಿಟ್ಟುಕೊಂಡರೆ ಒಳಿತು. ಇಂತಹ ಕಾರ್ಯಕ್ರಮ ಮಾಡುವುದರಿಂದ ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಎಂಬ ಭ್ರಮೆಯೂ ಬೇಡ.