Light
Dark

ಆರ್ಟಿಮಿಸ್’ ಎಂಬ ಅದ್ಭುತ ಚಂದ್ರಯಾನ!

ಕಾರ್ತಿಕ್ ಕೃಷ್ಣ
ಕಾರ್ತಿಕ್ ಕೃಷ್ಣ

 

ಈ ಚಂದ್ರಯಾನಕ್ಕೆ ನಾಸಾ ಹುರಿಗೊಳಿಸಿದವರಲ್ಲಿ ಭಾರತೀಯ ಮೂಲದ ರಾಜಾಚಾರಿ ಎಂಬ ಗಗನಯಾತ್ರಿಯೂ ಇದ್ದಾರೆ!

1958ರಲ್ಲಿ ಜನ್ಮ ತೆಳೆದ ಅಮೆರಿಕಾದ ನಾಸಾ ಸಂಸ್ಥೆಗೆ ಮೂರು ವರುಷ ತುಂಬುವಷ್ಟರಲ್ಲೇ ಬಹು ದೊಡ್ಡ ಜವಾಬ್ದಾರಿಯೊಂದು ಅದರ ಹೆಗಲೇರಿತ್ತು. ಅಮೆರಿಕಾದ ಅಂದಿನ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನೆಡಿ, ೧೯೬೧ರಲ್ಲಿ ನಡೆದ ಕಾಂಗ್ರೆಸಿನ ಜಂಟಿ ಅಧಿವೇಶನದ ತಮ್ಮ ಭಾಷಣದಲ್ಲಿ ನಾಸಾದ ಮೇಲೆ ಸಂಪೂರ್ಣ ಭರವಸೆಯಿಟ್ಟು ಈ ದಶಕ ಮುಗಿಯುವಷ್ಟರಲ್ಲಿ ನಾವು ಚಂದ್ರನಲ್ಲಿಗೆ ಮಾನವರನ್ನು ಕಳುಹಿಸಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವುದಾಗಿ ಘೋಷಿಸಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಹಲವು ಯೋಜನೆಗಳನ್ನು ಹಾಕಿಕೊಂಡ ನಾಸಾ ಮುಂದಿನ ಹತ್ತು ವರುಷಗಳಲ್ಲಿ ೧೨ ಜನರನ್ನು ಅಪೊಲೊ ನೌಕೆಗಳ ಮೂಲಕ ಚಂದ್ರನ ನೆಲಕ್ಕೆ ಕಳುಹಿಸಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತಂದಿತ್ತು.

ಅಪೋಲೋ ನೌಕೆಗಳು ಮಾನವನನ್ನು ಕಡೆಯ ಬಾರಿಗೆ ಚಂದ್ರನ ಮೇಲೆ ಇಳಿಸಿದ ೫೦ ವರುಷಗಳ ನಂತರ ಮತ್ತೆ ಮಾನವರು ಚಂದ್ರನ ಮೇಲೆ ಇಳಿಯುವ ಕಾಲ ಸನ್ನಿಹಿತವಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ನಾಸಾ ಆರಂಭಿಸಿರುವ ಯಾನದ ಹೆಸರೇ ‘ಆರ್ಟಿಮಿಸ್’. ಈ ಯಾನಕ್ಕೊಂದು ವಿಶೇಷತೆಯಿದೆ. ಇಲ್ಲಿಯ ತನಕ ಚಂದ್ರನ ಮೇಲೆ ಕಾಲಿಟ್ಟವರೆಲ್ಲರೂ ಪುರುಷರು ಹಾಗೂ ಬಿಳಿಯರೇ ಆಗಿದ್ದರು. ಆದರೆ ಆರ್ಟಿಮಿಸ್ ಮೂಲಕ ಮೊದಲ ಬಾರಿಗೆ ಮಹಿಳೆ ಹಾಗೂ ಅನ್ಯ ವರ್ಣೀಯ ಪುರುಷನನ್ನು ಚಂದ್ರನಂಗಳದಲ್ಲಿ ಇಳಿಸಲಾಗುತ್ತಿದೆ. ಇಲ್ಲಿ ಅನ್ಯ ವರ್ಣೀಯ ಅಂದರೆ ಬಿಳಿಯರಲ್ಲದವರು ಎಂದರ್ಥ. ಇದನ್ನೇ ಮಾರ್ಟಿನ್ ಲೂರ್ಥ ಕಿಂಗ್ ಅವರು person of color ಎಂದು ಹೇಳಿದ್ದರು. ನಾಸಾದ ಹೇಳಿಕೆಯ ಪ್ರಕಾರ, ಇಲ್ಲಿಯ ತನಕ ಮಾನವ ಕಾಲಿಡದ ಚಂದ್ರನ ದಕ್ಷಿಣ ಧ್ರುವಕ್ಕೆ ಮಾನವನನ್ನು ಇಳಿಸುವ ಇರಾದೆಯಿಂದ ಹಿಂದೆಂದೂ ಕಂಡರಿಯದ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಯೋಜನೆಯಲ್ಲಿ ಬಳಸಲಾಗುತ್ತಿದೆ.

ಈ ಅಭೂತಪೂರ್ವ ಯೋಜನೆಯು ಆರ್ಟಿಮಿಸ್- ೧, ಆರ್ಟಿಮಿಸ್- ೨ ಹಾಗೂ ಆರ್ಟಿಮಿಸ್- ೩ ಎಂಬ ಮೂರು ಹಂತದ ಯಾನಗಳನ್ನು ಒಳಗೊಂಡಿದೆ. ಮೊದಲನೆಯದು ಮಾನವರಹಿತವಾದ ಪರೀಕ್ಷಾ ಯಾನವಾಗಿದ್ದು ಇದರಲ್ಲಿ ಸ್ಪೇಸ್ ಲಾಂಚ್ ಸಿಸ್ಟಮ್ ಎಂಬ ಏರುಬಂಡಿ, ಒರಿಯನ್ ಗಗನನೌಕೆಯನ್ನು ಹೊತ್ತು ನಭಕ್ಕೆ ಜಿಗಿಯಲಿದೆ. ಎರಡನೆಯ ಯಾನದಲ್ಲಿ ಮಾನವನು ಒರಿಯನ್ ನೌಕೆಯಲ್ಲಿ ಕೂತು ಚಂದ್ರನ ಸಮೀಪ ಹೋಗಲಿದ್ದಾನೆ. ಆದರೆ ಚಂದ್ರನನ್ನು ಸ್ಪರ್ಶಿಸದೆ, ಚಂದ್ರನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಾ ಚಂದ್ರನನ್ನು ಹತ್ತಿರದಿಂದ ಅಧ್ಯಯನ ಮಾಡುವ ಯಾನವಿದು. ಮಾನವ ಮತ್ತೆ ಚಂದ್ರನ ಮೇಲೆ ಕಾಲಿಡುವುದು ಆರ್ಟಿಮಿಸ್- ೩ ಯಾನದಲ್ಲಿ. ಈ ಕನಸಿನ ಪಯಣ ೨೦೨೪ರ ವೇಳೆಗೆ ನನಸಾಗಲಿದೆ.

ಈ ಯೋಜನೆಯನ್ನು ಪೂರ್ಣಗೊಳಿಸಲು ಶ್ರಮಿಸುವ ಕೆಲವೊಂದು ಪ್ರಮುಖ ಘಟಕಗಳಿವೆ. ಇವೆಲ್ಲ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಆರ್ಟಿಮಿಸ್ ಎಂಬ ಸುಂದರ ಕಲಾಕೃತಿ ಪೂರ್ಣಗೊಳ್ಳುವುದು. ಅವುಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ.

ಹಿಂದೆ ನಾಸಾ ಬಳಸುತ್ತಿದ್ದ ‘ಸ್ಪೇಸ್ ಶಟಲ್’ ಸರಣಿಯ ಬಾಹ್ಯಾಕಾಶ ನೌಕೆಗಳ ಬಗ್ಗೆ ನೀವು ಕೇಳಿರಬಹುದು. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ ಕೊಲಂಬಿಯಾ, ಚಾಲೆಂಜರ್, ಡಿಸ್ಕವರಿ, ಅಟ್ಲಾಂಟಿಸ್ ಹಾಗೂ ಎಂಡಿಯವರ್ ಸ್ಪೇಸ್ ಶಟಲ್ ಸರಣಿಯ ವಿವಿಧ ನೌಕೆಗಳು. ಭಾರತೀಯ ಸಂಜಾತೆ ಕಲ್ಪನಾ ಚಾವ್ಲಾ ಅವರು ಗಗನಯಾನ ಕೈಗೊಂಡಿದ್ದು ಇದೇ ಸರಣಿಯ ಕೊಲಂಬಿಯಾ ನೌಕೆಯಲ್ಲಿ. ಅದು ೨೦೦೩ರಲ್ಲಿ ದುರಂತ ಅಂತ್ಯ ಕಂಡಿದ್ದು ನಿಮಗೆ ನೆನಪಿರಬಹುದು.

ಈಗ ಆರ್ಟಿಮಿಸ್ ಯೋಜನೆಯ ಮೂಲಕ ಗಗನಯಾತ್ರಿಗಳು ಸೇರಿದಂತೆ ಇತರ ಸರಕು ಸರಂಜಾಮುಗಳನ್ನು ಹೊತ್ತೊಯ್ಯಲು ಶಕ್ತಿಶಾಲಿ ಏರುಬಂಡಿಯಾಗಿರುವ ಸ್ಪೇಸ್ ಲಾಂಚ್ ಸಿಸ್ಟಮ್ (SLS) ಉಡಾವಣೆಗೆ ಸಿದ್ಧವಾಗಿದೆ. ೨೦೧೧ರಿಂದ ನಿರ್ಮಾಣ ಹಂತದಲ್ಲಿದ್ದSLS  ಈಗ ಕೆನಡಿ ಬಾಹ್ಯಾಕಾಶ ಕೇಂದ್ರದ ಏರುನೆಲೆಗೆ ಬಂದು ನಿಂತಿದೆ. ಮಾನವನನ್ನು ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಇಳಿಸುವುದಕ್ಕೆ ಬಳಸಿಕೊಳ್ಳುವುದರ ಜೊತೆಗೆ ರೋಬೋಟ್‌ಗಳನ್ನು ಗುರು ಹಾಗೂ ಶನಿ ಗ್ರಹಕ್ಕೆ ಕಳುಹಿಸುವ ಯೋಜನೆಯಲ್ಲೂ ಇದನ್ನು ಬಳಸಿಕೊಳ್ಳಬಹುದು ಎಂದು ನಾಸಾ ವರದಿ ಮಾಡಿದೆ.

ಮಾನವನನ್ನು ಸುರಕ್ಷಿತವಾಗಿ ಚಂದ್ರನ ಕಕ್ಷೆಗೆ ತಲುಪಿಸಲು ಒಂದು ಗಗನ ನೌಕೆ ಬೇಕಲ್ಲವೇ? ಆ ಕಾರ್ಯವನ್ನು ನಿರ್ವಹಿಸಲೆಂದೇ ‘ಒರಿಯನ್’ ಎಂಬ ನೌಕೆಯೊಂದು ಸಿದ್ಧವಾಗಿದೆ. ಪರಿಶೋಧನಾ ವಾಹನವಾಗಿ ಕಾರ್ಯ ನಿರ್ವಹಿಸುವ ಒರಿಯನ್, ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಿ, ಕಾರ್ಯಾಚರಣೆಗಳ ಸಮಯದಲ್ಲಿ ಅವರನ್ನು ಸುರಕ್ಷಿತವಾಗಿಡುವ ಒಂದು ಗೂಡಿನಂತಿರಲಿದೆ. ತುರ್ತು ಸಮಯದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಈ ನೌಕೆ, ಅವರನ್ನು ಮರಳಿ ಭೂಮಿಗೆ ಕರೆತರುವ ದಕ್ಷತೆಯನ್ನೂ ಹೊಂದಿದೆ. ಗಗನಯಾತ್ರಿಗಳನ್ನು ಒರಿಯನ್‌ನಿಂದ ಚಂದ್ರನ ಅಂಗಳಕ್ಕೆ ಕರೆದೊಯ್ಯುವ ಗ್ರಹ ನೌಕೆ Lander)ಗೆ ಸಾಗಿಸಲು gate way ಎಂಬ ನೌಕೆ ಚಂದ್ರನ ಕಕ್ಷೆಯಲ್ಲಿರಲಿದೆ. gatewayಯು ಇಡೀ ಆರ್ಟಿಮಿಸ್ ಯೋಜನೆ ಮುಗಿಯುವವರೆಗೂ ಚಂದ್ರನ ಕಕ್ಷೆಯಲ್ಲಿರಲಿದೆ ಎಂದು ನಾಸಾ ತಿಳಿಸಿದೆ.

ಇನ್ನು ಕೊನೆಯದಾಗಿ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸುವ ಪ್ರಮುಖ ಕೆಲಸವನ್ನು human landing system (HLS)  ಮಾಡಲಿವೆ. ಎಠಿಛಿಡಿನಲ್ಲಿ ತಂಗಿರುವ ಯಾತ್ರಿಗಳು HLS ಮೂಲಕ ಚಂದ್ರನ ದಕ್ಷಿಣ ಧ್ರುವವನ್ನು ಸಮೀಪಿಸಿ ಚಂದ್ರನ ಮೇಲಿಳಿಯಬಹುದು. ಅಲ್ಲಿ ಗಗನ ಯಾತ್ರಿಗಳು ಉಳಿದುಕೊಂಡು ಅಧ್ಯಯನ ನಡೆಸಲು ಶಿಬಿರಗಳನ್ನು ನಿರ್ಮಿಸುವ ಯೋಜನೆಯೂ ನಾಸಾ ಸಂಸ್ಥೆಗಿದೆ. ಈ ಪರಿಕಲ್ಪನೆಯಲ್ಲಿ, ಚಂದ್ರನ ನೆಲದಲ್ಲಿ ಸಂಶೋಧನೆಗೆ ಬೇಕಾದ ಕುಟೀರಗಳು, ರೋವರ್ ಹಾಗೂ ಸಂಚಾರಿ ಬಿಡಾರವನ್ನು ನಿರ್ಮಿಸಲಾಗುವುದಂತೆ.

ಸುಮಾರು ೫೦ ವರ್ಷಗಳ ನಂತರ ಮತ್ತೆ ಚಂದ್ರನ ನೆಲದಲ್ಲಿ ಮಾನವರು ಇಳಿಯಲಿದ್ದಾರೆ. ೧೨ ಜನರಿಗೆ ಚಂದ್ರ ಸ್ಪರ್ಶ ಭಾಗ್ಯವನ್ನು ನೀಡಿದ ಅಪೋಲೋ ಯೋಜನೆ ಪೂರ್ಣಗೊಂಡು ದಶಕಗಳ ನಂತರ ನಾಸಾ ಆರ್ಟಿಮಿಸ್ ಯೋಜನೆಯ ಮೂಲಕ ಮಾನವನನ್ನು ಮತ್ತೆ ಚಂದ್ರನ ಮೇಲೆ ಇಳಿಸುವ ಸಾಹಸಕ್ಕೆ ಕೈ ಹಾಕಿದೆ. ಇಡೀ ಯೋಜನೆಯ ವೆಚ್ಚ ಸುಮಾರು ೯೩೦೦ ಕೋಟಿ ಡಾಲರ್! (ರೂಪಾಯಿ ಲೆಕ್ಕದಲ್ಲಿ ೭,೪೪,೦೦೦ ಕೋಟಿ).

ಅಂದ ಹಾಗೆ ಆರ್ಟಿಮಿಸ್ ಎಂದರೆ ಗ್ರೀಕ್ ಪುರಾಣದ ಆಕಾಶ ರಾಜನಾದ ಝಿಯುಸ್‌ನ ಮಗಳು ಹಾಗೂ ಅಪೋಲೋನ ಅವಳಿ ಸಹೋದರಿ! ಇನ್ನೊಂದು ವಿಷಯ, ಈ ಆರ್ಟಿಮಿಸ್ ಯೋಜನೆಯಲ್ಲಿ ಚಂದ್ರನಲ್ಲಿಗೆ ಕಳುಹಿಸಲು ನಾಸಾ ಹುರಿಗೊಳಿಸಿದವರಲ್ಲಿ ಭಾರತೀಯ ಮೂಲದ ರಾಜಾಚಾರಿ ಎಂಬ ಗಗನಯಾತ್ರಿಯೂ ಇದ್ದಾರೆ. ಮುಂಬರುವ ಸೋಮವಾರ, ಅಂದರೆ ಆಗಸ್ಟ್ ೨೯ ಕ್ಕೆ ಆರ್ಟಿಮಿಸ್- ೧ರ ಯಾನವು ಶುರುವಾಗಲಿದೆ. ಇದೊಂದು ಪರೀಕ್ಷಾ ಯಾನವಾಗಿದ್ದು, ಇದರ ಅವಧಿ ೪೨ ದಿನಗಳು. ಇದು ಮಾನವ ರಹಿತವಾಗಿದ್ದರೂ  SLSಏರುಬಂಡಿ ಕೊಂಡೊಯ್ಯುವ ಒರಿಯನ್ ನೌಕೆಯಲ್ಲಿ ಕೆಲವು ಆಟಿಕೆಗಳು, ಮನುಷ್ಯಾಕೃತಿ ಹಾಗೂ ಅಮೆಜಾನ್ ಅಲೆಕ್ಸಾ ಇರಲಿದೆಯಂತೆ! ನಾಸಾದ ಈ ಮಹತ್ವಾಕಾಂಕ್ಷಿ ಯೋಜನೆ ಫಲಪ್ರದವಾಗಲಿ ಎಂದು ಆಶಿಸೋಣ!

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ