ನೀವು ಸೂರ್ಯವಂಶ ಸಿನಿಮಾ ನೋಡಿರಬೇಕು. ದ್ವಿ ಪಾತ್ರದಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್‌ರವರಿಗೆ ಒಂದು ಸನ್ನಿವೇಶದಲ್ಲಿ ಅವರ ಮೊಮ್ಮಗನೇ ಸ್ನೇಹಿತನಾಗಿ ಬಿಡುತ್ತಾನೆ. ತಾತನನ್ನು ಫ್ರೆಂಡೂ ಎಂದು ಕರೆಯುವ ಮೂಲಕ ತಾತ ಮತ್ತು ಮೊಮ್ಮಗನ ಸಂಬಂಧವನ್ನು ಅರ್ಥಪೂರ್ಣವಾಗಿ ಅಲ್ಲಿ ಚಿತ್ರಿಸಲಾಗಿದೆ.ತಾತ ಊರಿಗೆ ದೊಡ್ಡ ಮನುಷ್ಯನಾಗಿದ್ದರೂ ಮೊಮ್ಮಗನ ಜತೆ ಸ್ನೇಹಿತನಂತೆ ಕಾಲ ಕಳೆಯುವ ಪಾತ್ರವದು.
ಈ ಸಿನಿಮಾ ವಿಶ್ಲೇಷಣೆ ಈಗ ಏಕೆ ಅಂತೀರಾ? ಇಂತಹದೊಂದು ಸನ್ನಿವೇಶ ಎಲ್ಲರ ಜೀವನದಲ್ಲಿಯೂ ಬಂದಾಗಲೇ ತಾತ ಮತ್ತು ಮೊಮ್ಮಗನ ಬಾಂಧವ್ಯಕ್ಕೆ ಒಂದು ಅರ್ಥ ಬರುವುದು. ವಯಸ್ಸಾಗುತ್ತಿದ್ದಂತೆಯೇ ಮನೆಯಿಂದ ಹೊರಹೋಗಲಾಗದೆ, ಗೆಳೆಯರೊಂದಿಗೆ ಕುಳಿತು ಹರಟೆ ಹೊಡೆಯಲಾಗದ ಪರಿಸ್ಥಿತಿ ಎದುರಾದಾಗ ಹಿರಿಯ ಜೀವಗಳಿಗೆ ಅವರ ಮೊಮ್ಮಕ್ಕಳೇ ಕೊನೆಯ ಗೆಳೆಯರಾಗಿಬಿಡುತ್ತಾರೆ.
ಮೊಮ್ಮಕ್ಕಳಿಗೂ ಜೀವನದಲ್ಲಿ ಮುಂದೆ ಸಾಕಷ್ಟು ಸ್ನೇಹಿತರು ಸಿಕ್ಕರೂ ಅವರ ಮೊದಲ ಗೆಳೆಯನಾಗಿ ಉಳಿಯುವುದು ತಾತ ಮಾತ್ರ. ಅಂಗೈಯಲ್ಲಿಯೇ ಪ್ರಪಂಚ ನೋಡುವ ಈ ಕಾಲಘಟ್ಟದಲ್ಲಿ ಮನುಷ್ಯನ ಜೀವನಶೈಲಿ ಬದಲಾಗುತ್ತಿದೆ. ಪ್ರತಿಯೊಂದು ಸಂಬಂಧವೂ ದೂರವಾಣಿ ಕರೆಗಳಲ್ಲಿಯೇ ಅಡಗಿ ಹೋಗಿ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿದೆ. ಇದರಿಂದಾಗಿ ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಿದ್ದ ಅಜ್ಜ ಅಜ್ಜಿಯರು ಒಂಟಿ ಜೀವನ ಸಾಗಿಸುತ್ತಿದ್ದಾರೆ.
ಹಿರಿಯ ಜೀವಗಳಿಗೆ ಕೊನೆಯ ಘಟ್ಟದಲ್ಲಿ ಅವರ ಸ್ನೇಹಿತರಂತಾಗಿರುವಂತಹವರೇ ಅವರ ಮೊಮ್ಮಕ್ಕಳು. ಅವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವರು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಗು ಹುಟ್ಟಿ ಎರಡೆಜ್ಜೆ ಇಡುವುದೇ ತಡ ಅವರನ್ನು ಅಂಗನವಾಡಿ, ಬೇಬಿ ಸಿಟ್ಟಿಂಗ್, ಪ್ರೀ-ಕೆಜಿಗಳಿಗೆ ಸೇರಿಸಿ ಬಿಡುತ್ತಾರೆ. ಇದರಿಂದಾಗಿ ಮನೆಯಲ್ಲಿ ಅಜ್ಜ-ಅಜ್ಜಿಯೊಂದಿಗೆ ಆಡಬೇಕಿದ್ದ ಮಕ್ಕಳು ಅಲ್ಲಿ ಬಂದಿಯಾಗಿ ಕಾಲಕಳೆಯುವಂತಾಗುತ್ತದೆ.
‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಮಾತಿನಂತೆ ಮಕ್ಕಳು ಬೆಳೆಯುವಾಗ ಹಿರಿಯರ ಆಶ್ರಯವಿರಬೇಕು. ಅವರು ಕಲಿಸುವ ಬದುಕಿನ ಪಾಠ ಅವರ ಜೀವನದುದ್ದಕ್ಕೂ ಮಾರ್ಗದರ್ಶನವಾಗಿರಬೇಕು. ಎಲ್ಲ ಮೊಮ್ಮಕ್ಕಳಿಗೆ ತಾತನೇ ಮೊದಲ ಸ್ನೇಹಿತನಾದಾಗ ಮಾತ್ರ ಇದು ಸಾಧ್ಯ. ಹಿರಿಯರ ಮಾರ್ಗದರ್ಶನ ಇಲ್ಲದಿದ್ದರೆ ಮಕ್ಕಳು, ಮೊಮ್ಮಕ್ಕಳು ದಿಕ್ಕು ತಪ್ಪುವುದು ಸಹಜ. ಮಕ್ಕಳು ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನೂ ಕಲಿಯಬೇಕು ಎಂದರೆ ಅವರು ಹಿರಿಯರೊಂದಿಗೆ ಸ್ನೇಹ ಸಂಪಾದಿಸಲೇಬೇಕು. ಹಿರಿಯರೊಟ್ಟಿಗೆ ಮಕ್ಕಳು ಕಾಲ ಕಳೆದರೆ ಬದುಕಿನ ಪಾಠನ್ನು ಕಲಿಯುತ್ತಾರೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಯುತ್ತಾರೆ.
ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬ ಪ್ರಜ್ಞೆ ಅವರಲ್ಲಿ ಮೂಡುತ್ತದೆ. ಹಿರಿಯರೊಂದಿಗೆ ನಡೆದು ಕೊಳ್ಳುವ ರೀತಿಯನ್ನು ಅವರು ಕಲಿಯುತ್ತಾರೆ. ಇದ್ಯಾವುದೂ ಇಲ್ಲದೇ ಬೆಳೆಯುವ ಮಕ್ಕಳು ತಪ್ಪು ಹಾದಿಗಳನ್ನು ಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.
ಒಟ್ಟಾರೆ ಕೊನೆಯ ಕಾಲದಲ್ಲಿ ಸಿಗುವ ಸ್ನೇಹಿತನೊಂದಿಗೆ ತಾತ ಹೆಚ್ಚು ಆತ್ಮೀಯವಾಗಿ ಇರುತ್ತಾರೆ. ಅವರ ಮನಸ್ಸಿಗೂ ಉಲ್ಲಾಸ ಬರುತ್ತದೆ. ಜೀವನದ ಕೊನೆಯ ಘಟ್ಟದಲ್ಲಿ ಹಸನ್ಮುಖಿಯಾಗಿ ಕಾಲ ಕಳೆಯುತ್ತಾರೆ ಎಂದರೆ ತಪ್ಪಲ್ಲ. ಆದ್ದರಿಂದ ಮಕ್ಕಳನ್ನು ಮೊದಲು ನಮ್ಮ ಹಿರಿಯರಿಗೆ ಪರಿಚಯಿಸಬೇಕು. ಅವರ ಮೊದಲ ಗೆಳೆಯ ತಾತನೇ ಆಗಿರುವಂತೆ ನೋಡಿಕೊಳ್ಳ ಬೇಕು. ಆಗ ಮಾತ್ರ ಮಕ್ಕಳು ಸಂಸ್ಕಾರವಂತ ರಾಗಲು ಸಾಧ್ಯ.





