Mysore
15
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಡಾ. ಮಿಷೆಲ್‌ ಹ್ಯಾರಿಸನ್‌ : 14 ಹೆಣ್ಣುಮಕ್ಕಳ ʼಎರಡನೇ ತಾಯಿʼ

  • ಪಂಜು ಗಂಗೊಳ್ಳಿ

ಜಗತ್ತಿನ ಯಾವುದೇ ಭಾಗದಲ್ಲಿ ಯಾವುದೇ ಯುದ್ಧ ನಡೆಯಲಿ, ಅದಕ್ಕೆ ಎಲ್ಲರಿಗಿಂತ ಹೆಚ್ಚು ಬೆಲೆ ತೆರುವವರು ಮಕ್ಕಳು. 2022ರ ಫೆಬ್ರವರಿಯಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ದದಲ್ಲಿ ಹಾಗೂ ಇತ್ತೀಚೆಗೆ ಗಾಜಾದಲ್ಲಿ ಶುರುವಾದ ಇಸ್ರೇಲ್-ಪ್ಯಾಲೆಸ್ಟೈನ್‌ ಯುದ್ಧದಲ್ಲೂ ಮಕ್ಕಳೇ ಅಧಿಕ ಸಂಖ್ಯೆಯ ಸಂತ್ರಸ್ತರು.

ಇಸ್ರೇಲ್-ಪ್ಯಾಲೆಸ್ಟೆನ್ ಯುದ್ದದಲ್ಲಂತೂ ಮಕ್ಕಳು ನೇರವಾಗಿ ಅಪಹರಿಸಲ್ಪಡುತ್ತಿದ್ದಾರೆ ಅಥವಾ ಕೊಲ್ಲಲ್ಪಡುತ್ತಿದ್ದಾರೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಗಾಜಾದಲ್ಲಿ ಈವರೆಗೆ ಐದು ಸಾವಿರಕ್ಕೂ ಹೆಚ್ಚು ಮಕ್ಕಳು ಸತ್ತಿದ್ದಾರೆ.

80 ವರ್ಷ ಪ್ರಾಯದ ಇಸ್ರೇಲ್ ಮೂಲದ ಯಹೂದಿ ಸಮುದಾಯದ ಡಾ.ಮಿಷೆಲ್ ಹ್ಯಾರಿಸನ್ ಇಂತಹ ಯುದ್ಧ ಪೀಡಿತ ಮಕ್ಕಳಿಗಾಗಿ ದುಡಿದವರು. ರಷ್ಯಾ ಮೂಲದ ಅವರ ಅಜ್ಜಿಯು ಹಲವಾರು ವರ್ಷಗಳ ಕಾಲ ಅಮೆರಿಕಾದ ಎಲಿಸ್ ಐಲ್ಯಾಂಡ್‌ನಲ್ಲಿದ್ದು ಅಲ್ಲಿಗೆ ವಲಸೆ ಬರುತ್ತಿದ್ದ ಯಹೂದಿ ಸಮುದಾಯದ ಹೆಣ್ಣು ಮಕ್ಕಳು ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕದಂತೆ ಕಾಪಾಡಿದವರು. ಬಾಲಕಿ ಮಿಷೆಲ್ ಆಗಾಗ್ಗೆ ತನ್ನ ಅಜ್ಜಿಯ ಜೊತೆ ಎಲಿಸ್ ಐಲ್ಯಾಂಡಿಗೆ ಹೋಗುತ್ತಿದ್ದರು. ಅಲ್ಲಿ ಅಜ್ಜಿಯು ಮಿಷೆಲ್‌ರಿಗೆ ಸಮುದ್ರದ ಆಚೆಗಿರುವ ಚೀನಾದಲ್ಲಿ ಹಸಿದ ಮಕ್ಕಳ ಬಗ್ಗೆ ಕತೆಗಳನ್ನು ಹೇಳುತ್ತಿದ್ದರು. ಮಿಷೆಲ್ ಶಾಲೆಯಲ್ಲಿ ಕಲಿಯುತ್ತಿದ್ದಾಗ ಅವರ ಸ್ನೇಹಿತರೊಬ್ಬರು ಕೊರಿಯನ್ ಯುದ್ಧದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಚಿತ್ರಗಳನ್ನು ತೋರಿಸುತ್ತಿದ್ದರು. ಅಜ್ಜಿಯು ಹೇಳುತ್ತಿದ್ದ ಚೀನೀ ಮಕ್ಕಳ ಕತೆ ಹಾಗೂ ಕೊರಿಯನ್ ಯುದ್ಧದ ಅನಾಥ ಮಕ್ಕಳ ಚಿತ್ರಗಳನ್ನು ನೋಡಿ ಪ್ರಭಾವಿತರಾದ ಮಿಷೆಲ್ ಅಂದೇ ತನ್ನ ಬದುಕನ್ನು ಇಂತಹ ಮಕ್ಕಳ ಬದುಕಿಗಾಗಿ ಮುಡುಪಿಡಲು ನಿರ್ಧರಿಸುತ್ತಾರೆ. ಆದರೆ, ಕೊನೆಗೆ ಡಾ.ಮಿಷೆಲ್ ಹ್ಯಾರಿಸನ್‌ ಆರಿಸಿಕೊಂಡಿದ್ದು ಭಾರತವನ್ನು!

ಡಾ.ಮಿಷೆಲ್ ಚೊಚ್ಚಲು ಬಸುರಿಯಾಗಿದ್ದಾಗ ಅವರ ಪತಿ ಅವರನ್ನು ತ್ಯಜಿಸಿದರು. ಅವರು ಒಂಟಿ ತಾಯಿಯಾಗಿ ತಮ್ಮ ಮಗಳನ್ನು ಬೆಳೆಸಿದರು. ಸ್ವಂತ ಮಗಳಿದ್ದರೂ 1984ರಲ್ಲಿ ಅವರು ಇನ್ನೊಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು. ಆಗ ಒಂಟಿ ತಾಯಿಯರು ಮಕ್ಕಳನ್ನು ದತ್ತು ಸ್ವೀಕರಿಸಲು ಕೇವಲ ಎರಡು ದೇಶಗಳಲ್ಲಿ ಮಾತ್ರ ಅವಕಾಶವಿತ್ತು-ಒಂದು ಸೆಂಟ್ರಲ್ ಅಮೆರಿಕ ಮತ್ತು ಇನ್ನೊಂದು ಭಾರತ. ಆಗ 40 ವರ್ಷ ಪ್ರಾಯದವರಾಗಿದ್ದ ಡಾ.ಮಿಷೆಲ್ ಭಾರತಕ್ಕೆ ಬಂದು, ಕೊಲ್ಲೋತ್ತಾದ ಒಂದು ಅನಾಥ ಹೆಣ್ಣು ಮಗುವನ್ನು ದತ್ತು ಪಡೆದರು. ಆಗ ವಿದೇಶಿಗರು ಭಾರತದ ಮಕ್ಕಳನ್ನು ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋದ ನಂತರ ತಮ್ಮ ಧರ್ಮಕ್ಕೆ ಮತಾಂತರಿಸಿ ಬೆಳೆಸುವುದು ಸಾಮಾನ್ಯವಾಗಿತ್ತು. ಆದರೆ ಡಾ.ಮಿಷೆಲ್ ಒಬ್ಬ ಯಹೂದಿಯಾಗಿ ಅಮೆರಿಕದಲ್ಲಿ ನೆಲೆಸಿದ್ದರೂ ತಾನು ದತ್ತು ಪಡೆದ ಭಾರತದ ಮಗುವನ್ನು ತನ್ನ ಧರ್ಮಕ್ಕೆ ಮತಾಂತರಿಸದೆ, ಅವಳನ್ನು ಭಾರತೀಯ ಸಂಸ್ಕೃ ತಿಯಲ್ಲೇ ಬೆಳೆಸಿದರು.

1999ರಲ್ಲಿ ಡಾ.ಮಿಷೆಲ್‌ ರಿಗೆಸ್ತನ ಕ್ಯಾನ್ಸ‌ರ್ ತಗಲಿರುವುದು ಪತ್ತೆಯಾಯಿತು. 2000ರಲ್ಲಿ ಅವರು ತಮ್ಮ ದತ್ತು ಮಗಳೊಂದಿಗೆ ಭಾರತಕ್ಕೆ ಬಂದರು. ಭಾರತದಲ್ಲಿ ಎರಡು ವಾರಗಳ ಕಾಲ ಇರಬೇಕೆಂದು ನಿರ್ಧರಿಸಿ ಬಂದಡಾ.ಮಿಷೆಲ್ ಆರು ತಿಂಗಳು ಇಲ್ಲೇ ಉಳಿದರು. ಈ ಅವಧಿಯಲ್ಲಿ ಅವರು ಅನೇಕ ಬಾಲಾಶ್ರಮಗಳನ್ನು ಭೇಟಿ ಮಾಡಿದರು. ಅವರು ಹೀಗೆ ಭೇಟಿ ಮಾಡಿದ ಬಾಲಾಶ್ರಮಗಳಲ್ಲಿ ಮಕ್ಕಳನ್ನು ದತ್ತು ನೀಡುವುದರಲ್ಲಿ ಹಾಗೂ ಆಶ್ರಮದ ದಿನನಿತ್ಯದ ವ್ಯವಹಾರಗಳಲ್ಲಿ ಅಕ್ರಮಗಳು ನಡೆಯುವುದನ್ನು ಕಂಡು, ಅದರ ವಿರುದ್ಧ ದನಿ ಎತ್ತಿದರು. ಅದಕ್ಕಾಗಿ ಅವರು ಹಲವು ಬಾರಿ ಜೀವ ಬೆದರಿಕೆಗಳನ್ನು ಎದುರಿಸಬೇಕಾಯಿತು. ಆದರೂ ಅವರು ಹಿಂಜರಿಯದೆ ಆ ವಿಚಾರದಲ್ಲಿ ತಾನೇ ಏನಾದರೂ ಮಾಡಬೇಕೆಂದು ನಿರ್ಧರಿಸಿದರು.

2006ರಲ್ಲಿ ಡಾ.ಮಿಷೆಲ್ ಕೊಳ್ಳೋತ್ತಾದಲ್ಲಿ ‘ಚೈಲ್ಡ್ ಲೈಫ್ ಪ್ರಿಸರ್ವ್ ಶಿಶುರ್ ಸೇವಾಯ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಪ್ರಾರಂಭದಲ್ಲಿ 2 ಲಕ್ಷ ಡಾಲರುಗಳನ್ನು ತೆಗೆದಿರಿಸಿ, 20 ವರ್ಷಗಳ ಒಂದು ಯೋಜನೆಯನ್ನು ರೂಪಿಸಿದರು. ಆ ಯೋಜನೆಯ ಪ್ರಕಾರ ಡಾ. ಮಿಷೆಲ್ ಎಂಟು ಅನಾಥ ಹೆಣ್ಣು ಮಕ್ಕಳನ್ನು ಬೆಳೆಸಲು ಸಾಧ್ಯವಿತ್ತು. ಅವರುಆರಿಸಿಕೊಂಡದ್ದು ಬೇರೆಲ್ಲರೂ ಏನೇನೋ ಕಾರಣಗಳಿಗೆ ದತ್ತು ಪಡೆಯಲು ನಿರಾಕರಿಸಿದ ಅನಾಥ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳನ್ನು. ಆದರೆ, ಆ ಹೆಣ್ಣು ಮಕ್ಕಳನ್ನು ದತ್ತು ಪಡೆಯಲು ಹೋದಾಗ ಆ ಮಕ್ಕಳೊಂದಿಗಿದ್ದ ಇತರ ನಾಲ್ಕು ಅಂಗವಿಕಲ ಹೆಣ್ಣು ಮಕ್ಕಳನ್ನು ಕಂಡು, ಅವರನ್ನು ಬಿಟ್ಟು ಬರಲು ಮನಸ್ಸು ಬಾರದೆ ಎಂಟು ಮಕ್ಕಳ ಜೊತೆ ಆ ನಾಲ್ಕು ಮಕ್ಕಳನ್ನೂ ದತ್ತು ಸ್ವೀಕರಿಸಿದರು. ಮತ್ತು, ಅದರ ನಂತರ ಇನ್ನೂ ಎರಡು ಅಂಗವಿಕಲ ಮಕ್ಕಳು ಡಾ.ಮಿಷೆಲ್‌ರ ಮಡಿಲು ಸೇರಿದವು. ಈಗ ಮಿಷೆಲ್‌ ಜೊತೆ 12 ರಿಂದ 23 ವರ್ಷದೊಳಗಿನ 14 ಹೆಣ್ಣು ಮಕ್ಕಳು ಬೆಳೆಯುತ್ತಿದ್ದಾರೆ.

ಡಾ.ಮಿಷೆಲ್ ಸರ್ಕಾರೇತರ ಸಂಸ್ಥೆಯನ್ನು ನಡೆಸುತ್ತಿದ್ದರಾದರೂ ಅವರು ಅದನ್ನು ಬಾಲಾಶ್ರಮ ಎಂದು ಕರೆಯುವುದಿಲ್ಲ. ಹಾಗೂ ಮಕ್ಕಳನ್ನು ಬಾಲಾಶ್ರಮದ ಮಕ್ಕಳಂತೆ ಬೆಳೆಸುವುದೂ ಇಲ್ಲ. ತಮ್ಮನ್ನು ತಾವು ಆ ಮಕ್ಕಳ ‘ಎರಡನೇ ತಾಯಿ’ ಎಂದು ಕರೆದುಕೊಳ್ಳುತ್ತ ಆ ಮಕ್ಕಳ ಜೊತೆಯೇ ಬದುಕುತ್ತಿದ್ದಾರೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಬಂಗಾಲಿ ಭಾಷೆಯಲ್ಲಿ ಕೊಡಿಸುತ್ತಿದ್ದಾರೆ. ಹಾಗೂ 5ನೇ ತರಗತಿಯ ನಂತರ ಇಂಗ್ಲಿಷ್ ಕಲಿಸುತ್ತಾರೆ. ನೃತ್ಯ ಮತ್ತು ಕರಾಟೆ ತರಬೇತಿ ನೀಡುತ್ತಿದ್ದಾರೆ. ವಿವಿಧ ಪ್ರಾಯದ ಮಕ್ಕಳು ಪ್ರತ್ಯೇಕವಾಗಿ ವಾಸಿಸದೆ ಒಂದೇ ಮನೆಯ ಮಕ್ಕಳಂತೆ ಒಬ್ಬರಿಗೊಬ್ಬರು ಪ್ರೀತಿ, ಅಕ್ಕರೆ ತೋರುತ್ತ, ದೊಡ್ಡ ಮಕ್ಕಳು ಚಿಕ್ಕ ಮಕ್ಕಳ ಪಾಲನೆ ಮಾಡುತ್ತ ಬೆಳೆಯುತ್ತಿದ್ದಾರೆ.

ಡಾ.ಮಿಷೆಲ್ ಬೆಳೆಸುತ್ತಿರುವ ಆರು ಅಂಗವಿಕಲ ಮಕ್ಕಳು ತೀವ್ರತರದ ಮಾನಸಿಕ ವೈಕಲ್ಯವುಳ್ಳ ಮಕ್ಕಳು. ಎರಡು ಮಕ್ಕಳಿಗೆ ಗಂಭೀರ ರೂಪದ ಸೆರೆಬ್ರೆಲ್ ಪ್ಲಾಸಿ ಸಮಸ್ಯೆ ಇದ್ದು, ಅವರು ಮಾತಾಡಲಾರವು, ನಡೆಯಲಾರವು ಅಥವಾ ತಾವೇ ಉಣ್ಣಲಾರವು. ಡಾ.ಮಿಷೆಲ್ ಆ ಮಕ್ಕಳಿಗಾಗಿ ದುಬಾರಿ ಬೆಲೆಯ ‘ಟೋಬಿ ಐ ಟ್ರ್ಯಾಕರ್’ ಖರೀದಿಸಿ, ಅದರ ಸಹಾಯದಿಂದ ಆ ಮಕ್ಕಳು ಸಾಮಾನ್ಯ ಸರಳ ಅಭಿವ್ಯಕ್ತಿಗಳನ್ನು ಪ್ರಕಟಪಡಿಸಲು ಸಾಧ್ಯವಾಗುವಂತೆ ಮಾಡಿದರು. ಇನ್ನೊಂದು ಮಗು ಹುಟ್ಟುವಾಗಲೇ ಅದರ ಮಿದುಳು ಘಾಸಿಗೊಳಗಾದ ಕಾರಣ ಸಂಪೂರ್ಣವಾಗಿ ದೃಷ್ಟಿಯನ್ನು ಕಳೆದುಕೊಂಡಿತ್ತು. ಇನ್ನೊಂದು ಮಗು ಆಟಿಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದೆ. ಡಾ.ಮಿಷೆಲ್‌ರ ಮನೆಯಲ್ಲಿ ಈ ಎಲ್ಲ ಮಕ್ಕಳಿಗೂ ಖಾಸಗೀ ವೈದ್ಯರಿಂದ ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಕೊಡಿಸಲಾಗುತ್ತದೆ. ಆರು ಮಕ್ಕಳಿಗೆ ಪ್ರತ್ಯೇಕ ಗಾಲಿ ಕುರ್ಚಿಗಳಿವೆ. ಪ್ರತಿಯೊಂದು ಮಗುವಿಗೂ ಉಣ್ಣಿಸಲು, ಕುಡಿಸಲು ಪ್ರತ್ಯೇಕ ಆಯಾಗಳಿದ್ದಾರೆ. ಅಂದರೆ, ಒಂದು ವೇಳೆ ಡಾ.ಮಿಷೆಲ್‌ರ ಸ್ವಂತ ಮಗು ಅಂಗವಿಕಲವಾಗಿದ್ದರೆ ಅವರು ಅದರ ಲಾಲನೆ ಪಾಲನೆಯನ್ನು ಹೇಗೆ ಮಾಡುತ್ತಿದ್ದರೋ ಅದೇ ರೀತಿಯಲ್ಲಿ ಈ ಮಕ್ಕಳನ್ನು ಬೆಳೆಸುತ್ತಿದ್ದಾರೆ.

ಡಾ.ಮಿಷಲ್‌ರಿಗೆ ಈಗ ಭಾರತವೇ ತಾಯ್ತಾಡು. ಒಬ್ಬಳು ಸಾಮಾನ್ಯ ಭಾರತೀಯ ಮಹಿಳೆಯಂತೆ ಸ್ಥಳೀಯ ಉಡುಪು ಧರಿಸುತ್ತಾರೆ. ‘ಬೇರೆ ದೇಶಗಳಲ್ಲಿ ಯುದ್ಧದಂತಹ ಕಾರಣಗಳಿಗೆ ಮಕ್ಕಳು ಅನಾಥರಾದರೆ ಭಾರತದಂತಹ ದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಮೊದಲಾದ ಕಾರಣಗಳಿಗಾಗಿ ಮಕ್ಕಳು ಅನಾಥರಾಗುತ್ತವೆ’ ಎನ್ನುವ ಡಾ.ಮಿಷೆಲ್, ತನ್ನ ನಂತರ ‘ಶಿಶುರ್‌ ಸೇವಾಯ್‌’ನ್ನು ಮುನ್ನಡೆಸಲು ತಾನು ಬೆಳೆಸುತ್ತಿರುವ ಹೆಣ್ಣು ಮಕ್ಕಳಲ್ಲಿ ಹಿರಿಯ ಹೆಣ್ಣು ಮಕ್ಕಳನ್ನು ತಯಾರು ಮಾಡುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!