• ಸಿ.ಎಂ ಸುಗಂಧರಾಜು
“ನಮ್ ಮಕ್ಕಳೋ ಕಟ್ಟಿದ ಮನೆ ಬಿಟ್ಟು ಪಟ್ಟಣ ಸೇರಿವೆ… ಯಾವಾಗ ಬರ್ತಾವೋ ಗೊತ್ತಿಲ್ಲ ಕಣಪ್ಪ ಸಾಯ ಮುಂಚೆ ಬಂದು ನಮ್ಮ ನೋಡೋ ಹೋದ್ರೆ ಸಾಕು.. ಬಸ್‌ನಲ್ಲಿ ಪ್ರಯಾಣಿಸುವಾಗ ಅಚಾನಕ್ಕಾಗಿ ಸಿಕ್ಕ ಅಜ್ಜಿಯ ಮನದಾಳದ ಮಾತು ಇದು.
ನನ್ನ ಪಕ್ಕದ ಸೀಟಿಗೆ ಬಂದು ಕುಳಿತ ಅಜ್ಜಿಯೊಬ್ಬಳನ್ನು ಹೀಗೆ ಮಾತಿಗೆಂದು ಕೇಳಿದೆ ‘ಯಾಕಜ್ಜಿ ಒಬ್ಬಳೇ ಹೋಗ್ತಾ ಇದ್ದೀಯಾ ಜತೆಗೆ ಯಾರನ್ನಾದರೂ ಕರ್ಕೊಂಡು ಬರಬೇಕು ತಾನೆ.
ಆಗ ಅಜ್ಜಿಯ ಬಾಯಿಯಿಂದ ಬಂದ ಮಾತಿದು.
ಅಜ್ಜಿ ಮಾತು ಮುಂದುವರಿಸಿದಳು. ‘ನಮ್ಮಂಗೆ ನಮ್ಮ ಮಕ್ಕ ಅನಕ್ಷರಸ್ಥರಾಗಬಾರದೆಂದು ಒಂದೆರಡು ಅಕರ ಕಲೀಲಿ ಅಂತಶಾಲೆ ಸೇರಿಸಿದ್ದಿ, ಅವು ದೊಡ್ಡವಾದ ಮೇಲೆ ಸಾಲ ಸೋಲ ಮಾಡಿ ಮದುವೆ ಮಾಡಿದ್ದೇವೆ. ಈಗ ದುಡಿಯೋಕೆ ಪಟ್ಟಣ ಸೇರ್ಕಂಡವೇ. ಯಾವಾಗ ಬಂತಾವೋ, ಇದ್ದಾಗ ಬರದೆ ಸತ್ತಾಗ ಒಂದು ಎಡೆ ಮಡ್ಡಿದೇ ಏನ್ ಸಾಧನೆನಪ್ಪ ಅವರಪ್ಪ ಸತ್ತಾಗ ಬಂದು ಮುಂದ ನಾ ಸತ್ತಾಗ ಬಂದಾರೇನೋ ಗೊತ್ತಿಲ್ಲ ಎಂದಳು. ಅಜ್ಜಿ.
ಅಜ್ಜಿಯ ಮಾತಿನಲ್ಲಿ ಮಕ್ಕಳು ದೂರಾದರಲ್ಲ ಎಂಬ ಸಂಕಟವೇ ತುಂಬಿತ್ತು. ಹುಟ್ಟಿದ ಮಕ್ಕಳು ಮನೆ ಬೆಳಗಬೇಕು ಎಂಬುದು ಅಜ್ಜಿಯ ಕನಸ್ಸು. ಆದರೆ ಮಕ್ಕಳು ಮನೆ ಬಿಟ್ಟು ಪಟ್ಟಣ ಸೇರಿ ಅಜ್ಜಿ ಒಂಟಿ ಬಾಳು ಬದುಕುತ್ತಿದ್ದಾಳೆ. ವ್ಯವಸಾಯ ಮಾಡಿಕೊಂಡು ಬೆಳೆ ಬೆಳೆದು ತಿನ್ನುತ್ತಿದ್ದ ಮಕ್ಕಳು ದಿಢೀರ್ ಎಂದು ನಗರ ಸೇರಿಬಿಟ್ಟರೆ ವಯಸ್ಸಾದ ತಂದೆ-ತಾಯಿ ಏನು ಮಾಡಬೇಕು ಹೇಳಿ. ಯುವಪೀಳಿಗೆ ಕೃಷಿ ಬಿಟ್ಟು ಉದ್ಯೋಗದ ಬೆನ್ನೇರಿ ಪಟ್ಟಣಗಳಲ್ಲಿ ಅಲೆದಾಡುತ್ತಿವುದು ಏಕೆ?
ಹಬ್ಬ, ಜಾತ್ರೆಗಳಿಗೆ ಊರಿಗೆ ಬರುವ ಮಕ್ಕಳು, ಮೊಮ್ಮಕ್ಕಳು ಬಂದು ಒಂದೆರಡು ದಿನ ಇದ್ದು ಹೋಗಿಬಿಡುತ್ತಾರೆ. ಉಳಿದಂತೆ ಆ ಮನೆಗಳಲ್ಲಿ ಉಳಿಯುವುದು ಬರೀ ವಯಸ್ಸಾದ ಹಿರಿಯ ಜೀವಗಳು ಮಾತ್ರ. ಈಗ ಮನೆಯಲ್ಲಿ ದೂರದಲ್ಲಿರುವ ಮಕ್ಕಳು ಮೊಮ್ಮಕ್ಕಳೊಂದಿಗೆ ಮಾತನಾಡಲು ಮೊಬೈಲ್ ಫೋನ್ ಇದೆ. ಬೇಸರವಾದಾಗ ನೋಡಲು ಟಿವಿ ಇದೆ, ಬಟ್ಟೆ ತೊಳೆಯಲು ವಾಷಿಂಗ್ ಮೆಷಿನ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಮಕ್ಕಳು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಅವುಗಳೆಲ್ಲವೂ ಹಿರಿಯರಿಗೆ ಸಂತೋಷ ತರುವವೇ? ಖಂಡಿತ ಇಲ್ಲ. ಈಗ ಅವುಗಳನ್ನು ಅನುಭವಿಸಲು ಹಿರಿಯರಿಗೆ ಚೈತನ್ಯವಿಲ್ಲ. ಅವರು ಮೊಮ್ಮಕ್ಕಳೊಂದಿಗೆ ಸಮಯ ಕಳೆಯಬೇಕು. ಅವರೊಂದಿಗೆ ಆಡಬೇಕು. ವಸ್ತುಗಳಿಂದ ಅವರ ಭಾವನೆಗಳನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ.
ಎಲ್ಲೋ ಇರುವ ಮಕ್ಕಳಿಗೆ ಅಜ್ಜ-ಅಜ್ಜಿಯ ನೆನಪಾಗೋದು ಅವರ ಆರೋಗ್ಯ ಹಾಳಾಗಿ ಹಾಸಿಗೆ ಹಿಡಿದಾಗ ಜೀವನದ ಕೊನೆಯ ದಿನಗಳನ್ನು ಎಣಿಸು ತ್ತಿರುವ ಅವರಿಗೆ ಇದ್ದಾಗ ಸಂತೃಪ್ತಿಯಾಗಿ ಊಟ ಹಾಕದ ನಾವು ಸತ್ತಾಗ ಬಂದು ವಿವಿಧ ಖಾದ್ಯಗಳನ್ನು ತಯಾರಿಸಿ ಎಡೆ ಇಟ್ಟರೇನೂ ಪ್ರಯೋಜನ?
ಜೀವನದಲ್ಲಿ ದುಡಿಮೆ ಇರಬೇಕು ನಿಜ. ಆದರೆ ಅದು ನಮ್ಮ ತಂದೆ-ತಾಯಿ, ಅಜ್ಜ ಅಜ್ಜಿಯರನ್ನು ದೂರಾಗಿಸುವಂತಿರಬಾರದು. ಉದ್ಯೋಗಕ್ಕಾಗಿ ದೂರದ ನಗರಗಳಲ್ಲಿರುವ ನಾವು ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಹುಟ್ಟೂರಿಗೆ ಬಂದು ಹಿರಿ ಜೀವಗಳೊಂದಿಗೆ ಕೆಲ ಕಾಲ ಕಳೆದು ಹೋಗುವ ಪ್ರಯತ್ನ ಮಾಡಬೇಕು.
ಈಗ ಅಜ್ಜಿಯ ಮಾತಿನ ಒಳಅರ್ಥಗಳನ್ನು ಆಲೋಚಿಸುತ್ತಾ ಕುಳಿತ್ತಿದ್ದ ನನಗೆ ಅಜ್ಜಿಧ್ವನಿ ಮತ್ತೆ ಕೇಳಿಸಿತು. ‘ವಸಿ ಕೈ ಹಿಡಪ್ಪ ನಾ ಇಲ್ಲೆ ಇಳಿತೀನಿ’ ಎಂದ ಅಜ್ಜಿಯನ್ನು ಇಳಿಸಿದೆ. ಅಲ್ಲಿಯೂ ಅಜ್ಜಿಗೆ ಮನೆಗೆ ಕರೆದುಕೊಂಡು ಹೋಗಲು ಯಾರೂ ಬಾರದ ಸ್ಥಿತಿ ಕಂಡು ಬೇಸರವಾಯಿತು.
ವಯಸ್ಸಾದ ಹಿರಿಯರಲ್ಲಿ ಮಗುವಿನ ಮನಸ್ಸನ್ನು ಕಾಣಬೇಕು. ಅವರ ಪಾಲನೆ-ಪೋಷಣೆ ಪ್ರತಿಯೊಬ್ಬ ಮಗನ ಕರ್ತವ್ಯ. ಈ ಕರ್ತವ್ಯವನ್ನು ಅರಿತ ನಾವು ಹಿರಿಯರನ್ನು ಒಂಟಿಯಾಗಿ ಬಿಡದೆ ಕಾಪಾಡಬೇಕಿದೆ.