Mysore
20
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮುಸ್ಲಿಂ ಬರಹಗಾರರ ಅಪ್ಪಿಕೊಂಡ ಕಾಲಘಟ್ಟ

  • ಡಾ.ಕೆ.ಷರೀಫಾ

ಮುಸ್ಲಿಂ ಬರಹಗಳು ಆರಂಭವಾಗುವುದೇ ಕುರಾನ್ ಗ್ರಂಥದಿಂದ. ಮುಸ್ಲಿಂ ಧರ್ಮ ಕೇವಲ ರಾಜಕಾರಣದ ಭಾಗವಾಗಿ ಬೆಳೆಯಲಿಲ್ಲ. ಬದಲಾಗಿ ಅದೊಂದು ಮಹಾ ಮಾನವೀಯ ಮತ್ತು ಸಮಾನತೆಯನ್ನು ಸಾರುವ ಧರ್ಮವಾಗಿ ಬೆಳೆಯಿತು. ಎಲ್ಲ ಬಗೆಯ ಸಾಹಿತ್ಯಗಳಿಗೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ಧರ್ಮಗಳಿಗೂ ಸಾಹಿತ್ಯಕ್ಕೂ ಇರುವ ನಂಟು ತುಂಬಾ ಪ್ರಾಚೀನವಾದುದು. ಒಂದು ವ್ಯವಸ್ಥಿತವಾದ ಬದುಕನ್ನು ಬದುಕಬೇಕಾದರೆ ಸಾವಾಜಿಕ ವ್ಯವಸ್ಥೆ ಮತ್ತು ಧರ್ಮಗಳು ವಹಿಸಿದ ಪಾತ್ರಗಳು ಬಹಳ ಮಹತ್ವದ್ದು. ಮಾನವನ ಆಚಾರ ವಿಚಾರ, ನಂಬಿಕೆ, ಆಚರಣೆಗಳು ಸೇರಿದಂತೆ ಬದುಕುವ ಕ್ರಮಗಳನ್ನು ಧರ್ಮಾಧಾರಿತವಾಗಿ ರೂಪಿಸಿಕೊಂಡು ಅನೇಕ ಧರ್ಮಗಳು ಬದುಕಿರುವ ಇತಿಹಾಸವಿದೆ.

ನಮ್ಮ ಪ್ರಾಚೀನ ಧರ್ಮ ಗ್ರಂಥಗಳಾದ ವೇದ, ಬೈಬಲ್, ಕುರಾನ್‌ಗಳು ಆಯಾ ಕಾಲದ ಜನರ ಬದುಕಿನ ಮತ್ತು ಐತಿಹಾಸಿಕ ಘಟನಾವಳಿಗಳೇ ಆಗಿವೆ. ಅಲ್ಲಿನ ಮಾನವಿಕ ವಿಷಯಗಳನ್ನು ಅಲ್ಲಗಳೆಯಲಾಗದು.
ಮುಸ್ಲಿಂ ಸಮುದಾಯದಿಂದ ಬಂದ ಕನ್ನಡದ ಲೇಖಕರು ತಾವು ಇಂತಹದೇ ಧರ್ಮದಲ್ಲಿ ಹುಟ್ಟಬೇಕೆಂದು ಹುಟ್ಟಿದವರಲ್ಲ. ಲೋಕದ ಯಾವುದೇ ಧರ್ಮದ ವ್ಯಕ್ತಿಯ ಹುಟ್ಟಿನ ಧರ್ಮದ ಆಯ್ಕೆ ಅವರದಲ್ಲ. ಈ ಧರ್ಮದಿಂದ ಬಂದ ಕನ್ನಡದ ಲೇಖಕರು ಇಸ್ಲಾಂ ಸಂಸ್ಕೃತಿಯ ವಾಸ್ತವ ಸತ್ಯಗಳನ್ನು ಕಥೆ, ಕವನ ಮತ್ತು ಕಾದಂಬರಿಗಳಲ್ಲಿ ದಾಖಲಿಸಿದಾಗ ಅವರು ತಮ್ಮದೇ ಜನಾಂಗದ ಮೂಲಭೂತವಾದಿಗಳ ಕಾಕದೃಷ್ಟಿಗೆ ಬಲಿಯಾಗುತ್ತಾರೆ. ಅವರನ್ನು ಅನ್ಯ ಧರ್ಮೀಯರು ತಮ್ಮ ಕಣ್ಮಣಿಗಳಾಗಿ ಎತ್ತಿ ಹಿಡಿದರೆ, ಧರ್ಮದೊಳಗಿನವರು ಇಸ್ಲಾಂ ಧರ್ಮದ ಮರ್ಯಾದೆಯನ್ನು ಹರಾಜು ಹಾಕುತ್ತಿರುವ ಧರ್ಮ ವಿರೋಧಿ ಪಟ್ಟ ಕಟ್ಟಿದ ವಾಸ್ತವ ನಮ್ಮ ಕಣ್ಣೆದುರಿಗಿದೆ.
ಮೊದಲ ತಲೆಮಾರಿನ ಕನ್ನಡದ ಲೇಖಕರಾದ ಎಂ.ಅಕಬರಲಿ, ಎಸ್.ಕೆ.ಕರೀಂಖಾನ್, ಎಂ.ಜೀವನ್, ಬಿ.ಎ.ಸನದಿ, ಅಬ್ದುಲ್ ಮಜೀದ್‌ಖಾನ್, ಎಂ.ದಸ್ತಗೀರ್, ಅಸಫ್ ಅಲಿ, ಕೆ.ಎಸ್.ನಿಸಾರ್ ಅಹ್ಮದ್‌ರಂತಹ ಲೇಖಕರು ಬರೆಯಲು ಆರಂಭಿಸಿದುದರ ಹಿಂದೆಯೇ ಮುಸ್ಲಿಂ ಸಮುದಾಯದ ಸಂವೇದನೆಗಳನ್ನು ಕನ್ನಡದಲ್ಲಿ ಅಲ್ಪಸ್ವಲ್ಪ ದಾಖಲಿಸಲು ಆರಂಭಿಸಿದರು. ಇದಕ್ಕೆ ಲಂಕೇಶ್‌ರಂತಹ ಬರಹಗಾರರು ಬೆಂಬಲವಾಗಿ ನಿಂತರು. ಅದೇ ಕಾಲಕ್ಕೆ, ಬೊಳುವಾರು ಮಹ್ಮದ್ ಕುಂಞಿ, ಫಕೀರ ಮುಹಮ್ಮದ್ ಕಟ್ಪಾಡಿ, ನಾಡೋಜ ಸಾರಾ ಅಬೂಬಕ್ಕರ್, ಬಾನು, ರಹಮತ್ ತರೀಕೆರೆ, ಕೆ.ಷರೀಫಾ, ಅಬ್ಬಾಸ್ ಮೇಲಿನಮನಿ, ಮುವ್ತಾಜ ಬೇಗಂ, ರಂಜಾನ್ ದರ್ಗಾ, ಜಮಿರುಲ್ಲಾ ಷರೀಫ್, ಮುಜಫ್ಪರ್ ಅಸ್ಸಾದಿ, ಅಬ್ದುಲ್ ರಶೀದ್, ಬಿ.ಎಂ.ಹನೀಫ್, ಬಾಬಾಜಾನ್ ಅತ್ತಾರ್, ಹಸನ್ ನಯಿಂ ಸುರಕೊಡ್, ಅದೀಬ್ ಅಖ್ತರ್, ದಸ್ತಗೀರ್‌ಸಾಬ್ ದಿನ್ನಿ, ಪೀರಬಾಷಾ, ಹೊಸ ಪೀಳಿಗೆುಂವರಾದ, ಆರೀಫ್ ರಾಜಾ, ಫೈಜ್ ನಟರಾಜ್, ಮುಮ್ತಾಜ್ ಬೇಗಂ(ಕೊಪ್ಪಳ), ಹಂಝ ಮಲ್ಲಾರ್, ಹಮೀದ್ ಪಕ್ಕಲಡ್ಕ ಇನ್ನೂ ಹಲವಾರು ಬರಹಗಾರರು ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಈ ಧರ್ಮದ ಮಹಿಳೆಯರೇ ಆಗಲಿ, ಪುರುಷರೇ ಆಗಲಿ ಧರ್ಮವನ್ನು ಒಪ್ಪಿಕೊಂಡೇ, ಧರ್ಮದೊಳಗಿನ ಅನುಭವಗಳನ್ನು ದಾಖಲಿಸತೊಡಗಿದರು. ಇವರೆಲ್ಲರೂ ವೈಯಕ್ತಿಕ ನೆಲೆಯಲ್ಲಿ ಜಾತಿಯನ್ನು ವಿರೋಧಿಸಿದವರೇ ಆಗಿದ್ದಾರೆ.
ಈ ಎಲ್ಲ ಬರಹಗಳೂ ವಿಶಾಲ ವ್ಯಾಪ್ತಿಗೆ ಬರುವಂತಹವುಗಳು. ಕನ್ನಡ ಭಾಷೆ ಯಾವುದೇ ಒಂದು ಜಾತಿ, ಧರ್ಮದವರ ಸ್ವತ್ತಲ್ಲ ಅಥವಾ ಅದೊಂದು ಭೌಗೋಳಿಕ ಕ್ಷೇತ್ರದ ಸ್ವತ್ತು ಕೂಡ ಅಲ್ಲ. ಕನ್ನಡದ ಮತ್ತು ಕರ್ನಾಟಕದ ಬೆಳವಣಿಗೆಗಾಗಿ ವಿವಿಧ ಮಾತೃಭಾಷಿಕ ವಲಯದವರ ಕೊಡುಗೆಯಿದೆ. ಕನ್ನಡ ಭಾಷೆಯವರೇ ಅಲ್ಲದ ದ.ರಾ.ಬೇಂದ್ರೆ, ನಿಸಾರ್ ಅಹ್ಮದ್, ಶಿವರಾಮ ಕಾರಂತ, ಮಾಸ್ತಿ, ಜಿ.ಪಿ.ರಾಜರತ್ನಂ, ಕೈಯ್ಯಾರ ಕಿಞಣ್ಣ ರೈ, ಗೋವಿಂದ ಪೈಯವರು ಭಿನ್ನ ಭಿನ್ನ ಮಾತೃಭಾಷಿಕ ಮೂಲದಿಂದ ಬಂದಿದ್ದರೂ ಅವರು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಮರೆಯಲಾದೀತೇ?

ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ದಟ್ಟವಾದ ಮುಸ್ಲಿಂ ಸಂವೇದನೆಗಳನ್ನು ದಾಖಲಿಸಿದವರೆಂದರೆ, ಬೊಳುವಾರು ಮುಹ್ಮದ್ ಕುಂಞಿ ಮತ್ತು ಫಕೀರ್ ಮುಹ್ಮದ್ ಕಟ್ಪಾಡಿಯವರು. ತಾವು ಹುಟ್ಟಿ ಬಂದ ಜನಾಂಗದ ಧಾರ್ಮಿಕ, ಸಾಂಸ್ಕೃತಿಕ ಲೋಕಗಳನ್ನು ತಮ್ಮ ಕೃತಿಗಳಲ್ಲಿ ಅನಾವರಣ ಮಾಡುತ್ತಲೇ ಅಲ್ಲಿಯ ನೋವು, ತಲ್ಲಣ, ಬಡತನ, ಎಲ್ಲಕ್ಕಿಂತ ಹೆಚ್ಚಾಗಿ ಮುಸ್ಲಿಂ ಮಹಿಳೆಯರ ಸಂವೇದನೆಗಳನ್ನು ಕನ್ನಡದ ಕಾದಂಬರಿ ಸಾಹಿತ್ಯದಲ್ಲಿ ದಾಖಲಿಸಿದ ಮೊದಲ ಮುಸ್ಲಿಂ ಮಹಿಳಾ ಕನ್ನಡದ ಕಾದಂಬರಿಕಾರ್ತಿ ಎನಿಸಿಕೊಳ್ಳುತ್ತಾರೆ ಸಾರಾ ಅಬೂಬಕ್ಕರ್. ಇವರು ಚಂದ್ರಗಿರಿ ತೀರದಲ್ಲಿ (1984), ಕನ್ನಡ ಸಾಹಿತ್ಯ ಕಂಡ ಮೊದಲ ಮುಸ್ಲಿಂ ಕಥೆಗಾರ್ತಿ ಎಂದೇ ಹೆಸರು ಮಾಡಿದ ಮುಮ್ತಾಜ್ ಬೇಗಂರವರ “ಅವ್ಯಕ್ತ” (1983), ಅಲ್ಲದೆ, ಇವರ “ಫ್ಯಾಷನ್” ಎನ್ನುವ ಮೊಟ್ಟ ಮೊದಲ ಕವಿತೆ ಗುಲಬರ್ಗಾದ ಕ್ರಾಂತಿ ಪತ್ರಿಕೆಯಲ್ಲಿ 1975ರಲ್ಲಿ ಪ್ರಕಟವಾಯಿತು.
ಕನ್ನಡ ಸಾಹಿತ್ಯದ ವಿಮರ್ಶಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿಶಿಷ್ಟ ಹೆಸರು, ರಹಮತ್ ತರೀಕರೆಯವರದು. ಮರದೊಳಗಣ ಕಿಚ್ಚು (1996) ಸಬೀಹಾ ಭೂಮಿಗೌಡರ ಮೊಟ್ಟ ಮೊದಲ ಕವನ ಸಂಕಲನ “ಚಿತ್ತಾರ” ವನ್ನು 2005 ರಲ್ಲಿ ಪ್ರಕಟವಾದವು. ಬಾನು ಮುಷ್ತಾಖ್‌ರವರು ಹೆಜ್ಜೆ ಮೂಡಿದ ಹಾದಿ,(1990) ಡಿ.ಬಿ.ರಾಜಾರಾಂ ರವರ ಮೊಟ್ಟ ಮೊದಲ ಕವನ “ಕಾಡುಮಲ್ಲಿಗೆ 1981 ರಲ್ಲಿ “ಸುದ್ದಿ ಸಂಗಾತಿ” ಪತ್ರಿಕೆಯಲ್ಲಿ ಪ್ರಕಟವಾಯಿತು. ಬಿ.ಎಂ.ಹನೀಫ್‌ರವರ ಇತಿಹಾಸ ಮತ್ತು ಇಸ್ಲಾಂ (ಅನುವಾದ- 1997).
ಹಮೀದ ಮಂಜೇಶ್ವರರವರು ತಮ್ಮ ಕವನ ಸಂಕಲನ ಆಯಿಷಾ ಮತ್ತು ಬದುಕು ಕವಿತೆyಲ್ಲಿ ಸಂಪ್ರದಾಯದ ಚೌಕಟ್ಟಿನಲ್ಲಿ ನಲುಗಿದ ಅನೇಕ ವಿಷಯಗಳನ್ನು ತಮ್ಮ ಕಾವ್ಯದಲ್ಲಿ ದಾಖಲಿಸುತ್ತಾರೆ. ಈ ಕಾಲದ ಕತೆಗಾರರಾದ ಫಕೀರ ಮುಹ್ಮದ್ ಕಟ್ಪಾಡಿ, ಬೊಳುವಾರರು, ಸಾರಾ ಅಬೂಬಕರ್, ಬಾನು, ಅಬ್ಬಾಸ ಮೇಲಿನಮನಿ, ಕೆ.ಷರೀಫಾ, ಬಿ.ಎಂ.ಹನೀಫ್, ಬಿ.ಎಂ.ರಶೀದ್ ಮತ್ತು ಮುಹಮ್ಮದ್ ಕುಳಾಯಿ, ಫೈಜ್ನಟ್ರಾಜ್‌ರವರು ಮುಸ್ಲಿಂ ಧರ್ಮದೊಳಗಿನ ಮೂಲಭೂತವಾದ ಮತ್ತು ಕೋಮುವಾದಗಳನ್ನು ಪ್ರಶ್ನಿಸುತ್ತಲೇ ಸವಾಜದ ಸೌಹಾರ್ದದ ಆರೋಗ್ಯ ಕಾಪಾಡುತ್ತಾರೆ.

ಒಟ್ಟಿನಲ್ಲಿ ಕನ್ನಡದ ಮುಸ್ಲಿಂ ಲೇಖಕರ ಸಾಹಿತ್ಯ, ಅವರ ಸಂವೇದನೆಗಳನ್ನು ಕನ್ನಡ ಸಾಹಿತ್ಯದಲ್ಲಿ ದಾಖಲಿಸಿದ ಕಾಲ ಇದಾಗಿತ್ತು. ಇದು ಕನ್ನಡ ಸಾಹಿತ್ಯ ಲೋಕವನ್ನು ಅತ್ಯಂತ ಶ್ರೀಮಂತಗೊಳಿಸಿತು. ಮುಸ್ಲಿಮರ ಹೊಸದಾದ ಸಂವೇದನೆಗಳು ಕನ್ನಡದ ಸಾಹಿತ್ಯಕ್ಕೆ ಹರಿದುಬಂದ ಕಾಲವಿದು.

ಮುಸ್ಲಿಂ ಬರಹಗಳನ್ನು ನೀಡಿದ ಕನ್ನಡದ ಲೇಖಕರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅನೇಕ ಸಲ ಪ್ರಗತಿಪರರಿಗೆ ಅವರ ಪ್ರಗತಿಪರತೆಯೇ ಮುಳುವಾದಂತೆ ಕಾಣುತ್ತದೆ. “ಇಂದು ಏನನ್ನು ನಾವು ಹೇಳಲು ಸಾಧ್ಯವಾಗುವುದಿಲ್ಲವೋ ಅದನ್ನು ಇನ್ನೂ ಐವತ್ತು ವರ್ಷಗಳ ಬಳಿಕವಾದರೂ ಹೇಳಲು ಸಾಧ್ಯವಾಗುತ್ತದೆ. ಅಷ್ಟರ ಮಟ್ಟಿಗೆ ತಳಪಾಯವನ್ನು ನಮ್ಮ ಮುಸ್ಲಿಂ ಲೇಖಕರು ಹಾಕಿದ್ದಾರೆ” ಎಂದು ಸಾರಾ ಅಬೂಬಕರ್ ರವರು ಹೇಳುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ