ವರ್ಷಗಳ ಹಿಂದಿನ ಮಾತು. ಕನ್ನಡ ಚಿತ್ರಗಳ ನಿರ್ಮಾಣ ಸಂಖ್ಯೆ ಕಡಿಮೆಯ ದಿನಗಳು. ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರೋದ್ಯಮದ ಮೇಲೆ ನಿಯಂತ್ರಣ ಇದ್ದ ಸಂದರ್ಭ. ನಿರ್ಮಾಪಕ, ವಿತರಕ, ಪ್ರದರ್ಶಕ – ಮೂರೂ ವಲಯಗಳ ಮಂದಿ ಅಲ್ಲಿ ಸರದಿಯಂತೆ ಆಡಳಿತ ನಡೆಸುತ್ತಿದ್ದ ಸಮಯ. ಕಿರುತೆರೆಯ ಆಗಮನ ಮತ್ತು ಅಲ್ಲಿ ಚಿತ್ರಗಳ ಪ್ರಸಾರ ಆರಂಭವಾಗುತ್ತಲೇ, ಮಂಡಳಿ ನಿಯಮ ಒಂದನ್ನು ಜಾರಿಗೆ ತಂದಿತು. ಯಾವುದೇ ಚಿತ್ರದ ಕಿರುತೆರೆ ಪ್ರಸಾರ ಅದು ತೆರೆಕಂಡು ವರ್ಷ ಆಗಿರಬೇಕು ಎನ್ನುವ ನಿರ್ಬಂಧ.
ಇದಕ್ಕೆ ಕಾರಣವೂ ಇತ್ತು. ಆಗಿನ್ನೂ ಸೆಲ್ಯುಲಾಯಿಡ್ ದಿನಗಳು. ನೆಗೆಟಿವ್‌ನಲ್ಲಿ ಚಿತ್ರೀಕರಣ; ಸಂಸ್ಕರಣ, ಚಿತ್ರೀಕರಣೋತ್ತರ ಕೆಲಸಗಳ ನಂತರ ಪಾಸಿಟಿವ್ ಪ್ರಿಂಟ್‌ಗಳು ಎ,ಬಿ,ಸಿ ಕೇಂದ್ರಗಳಲ್ಲಿ ಬಿಡುಗಡೆ. ಸಾಮಾನ್ಯವಾಗಿ ಇಪ್ಪತ್ತೋ ಮೂವತೋ ಪ್ರಿಂಟ್‌ಗಳು. ರಾಜ್ಯಾದ್ಯಂತ ಎಲ್ಲ ಕೇಂದ್ರಗಳಲ್ಲಿ ಒಂದು ಬಾರಿ ಪ್ರದರ್ಶನ ಕಾಣಲು ವರ್ಷಬೇಕಾಗಿತ್ತು. ಹಾಗಾಗಿ ಚಿತ್ರಗಳನ್ನು ಕೊಂಡು ಕೊಂಡ ವಿತರಕರಿಗೆ ತೊಂದರೆ ಆಗದಂತೆ ಇಂತಹದೊಂದು ನಿಯಮ, ನಿರ್ಬಂಧ ಇತ್ತು. ಯಶಸ್ವಿಯಾಗದ ಚಿತ್ರಗಳನ್ನು ವಾಣಿಜ್ಯ ಮಂಡಳಿಯ ಅನುಮತಿ ಪಡೆದು, ಅವಧಿಗೆ ಮೊದಲೇ ಪ್ರಸಾರ ಮಾಡುವ ಅವಕಾಶವೂ ಇತ್ತು.
ಕೆಲವೇ ಲಕ್ಷ ರೂ.ಗಳಲ್ಲಿ ಇದ್ದ ನಿರ್ಮಾಣ ವೆಚ್ಚ ಕನ್ನಡದಲ್ಲೂ ಕೋಟಿ ರೂ. ಗಳಿಗೆ ಹಂತ ಹಂತವಾಗಿ ಏರತೊಡಗಿತು. ಕೇಂದ್ರೀಕೃತ ಹಂಚಿಕಾ ವ್ಯವಸ್ಥೆಯ ವಿಕೇಂದ್ರೀಕರಣ ಅದರ ಮೊದಲ ಹಂತ. ಜಿಲ್ಲಾವಾರು ಹಂಚಿಕೆಯ ವ್ಯವಸ್ಥೆ ಆಗುತ್ತಲೇ, ಚಿತ್ರಗಳ ಗಳಿಕೆಯಲ್ಲಿ ಗಣನೀಯ ಏರುಗತಿ ಕಾಣಿಸಿತು. ಇದಕ್ಕೆ ಅನುಗುಣವಾಗಿ ತಾರೆಯರ ಸಂಭಾವನೆಯೂ ಏರತೊಡಗಿತು. ಮುಂದಿನದು ಟಿವಿ ಪ್ರಸಾರದ ಹಕ್ಕು. ಚಿತ್ರದ ನಾಯಕನಟರ ಮೇಲೆ ಚಿತ್ರಗಳಿಗೆ ದೊರಕುವ ಮೊತ್ತವೂ ಅವಲಂಬಿಸಿತ್ತು. ಅವರಲ್ಲಿ ಕೆಲವರು ಟಿವಿ ಪ್ರಸಾರದ ಹಕ್ಕಿಗೆ ಸಿಗುವ ಮೊತ್ತವನ್ನೇ ತಮ್ಮ ಸಂಭಾವನೆಯಾಗಿ ಪಡೆದರು. ಈ ಬೆಳವಣಿಗೆ ಚಿತ್ರದ ನಿರ್ಮಾಣ ವೆಚ್ಚದ ಮೇಲೂ ಪರಿಣಾಮ ಬೀರಿತು.
ಹಾಗಂತ ಕನ್ನಡ ಚಿತ್ರೋದ್ಯಮದ ಹಾದಿ ಸುಗಮವೇನೂ ಆಗಿರಲಿಲ್ಲ. ಪರಭಾಷಾ ಚಿತ್ರಗಳ ನಡುವೆ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಉದ್ಯಮ ಸಾಕಷ್ಟು ಹೆಣಗಾಡಬೇಕಾಯಿತು. ವಾಣಿಜ್ಯ ಮಂಡಳಿ ಕೇವಲ ಕನ್ನಡ ಚಿತ್ರೋದ್ಯಮದ ಹಿತಕಾಯುವ ಸಂಘಟನೆಯಾಗಿ ಉಳಿಯಲು ಸಾಧ್ಯವಿರಲಿಲ್ಲ. ಅಲ್ಲಿ ನಿರ್ಮಾಪಕ ಸದಸ್ಯರನ್ನು ಹೊರತುಪಡಿಸಿದರೆ, ವಿತರಕರು ಮತ್ತು ಪ್ರದರ್ಶಕರಲ್ಲಿ ಪರಭಾಷೆಗಳ ಚಿತ್ರಗಳ ವ್ಯವಹಾರ ಮಾಡುವವರೂ ಇದ್ದರು. ವಿಶೇಷವಾಗಿ ಪರಭಾಷಾ ಚಿತ್ರಗಳ ಮೋಹದ ಪ್ರದರ್ಶಕ ವರ್ಗ ದೊಡ್ಡದೇ ಆಗಿತ್ತು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೆ ಇದ್ದಾಗ, ಬಾಡಿಗೆ ನಿಷ್ಕರ್ಷೆಯ ವಿಷಯದಲ್ಲಿ, ಪ್ರತಿಭಟನೆಗಳಾದದ್ದಿದೆ; ರಾಜಕುಮಾರ್ ನೇತೃತ್ವದಲ್ಲಿ ಬೀದಿಗಿಳಿದ ಪ್ರಸಂಗಗಳಿವೆ.
ಪರಭಾಷಾ ಚಿತ್ರಗಳು ಇಂತಿಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಬೇಕು, ಇಷ್ಟೇ ಪ್ರಿಂಟ್‌ಗಳು ಇವೇ ಮೊದಲಾದ ನಿಯಮಗಳನ್ನು ವಾಣಿಜ್ಯ ಮಂಡಳಿ ಜಾರಿಗೆ ತಂದು, ಕನ್ನಡ ಚಿತ್ರಗಳಿಗೆ ಒತ್ತಾಸೆಯಾದದ್ದೂ ಇದೆ. ಜೊತೆಗೆ ಸರ್ಕಾರ ಮೊದಲಿನಿಂದಲೂ ಕನ್ನಡ ಚಿತ್ರರಂಗಕ್ಕೆ ಎಲ್ಲ ರೀತಿಯ ನೆರವು, ಉತ್ತೇಜನವನ್ನು ನೀಡುತ್ತಾ ಬಂದಿದೆ. ಮದರಾಸಿನಲ್ಲಿ ಬಹುತೇಕ ಚಿತ್ರಗಳು ತಯಾರಾಗುತ್ತಿದ್ದ ದಿನಗಳಲ್ಲಿ, ಸಹಾಯಧನ, ಪ್ರಶಸ್ತಿಗಳೇ ಮೊದಲಾದ ಉತ್ತೇಜನಗಳೊಂದಿಗೆ ರಾಜ್ಯಕ್ಕೆ ಉದ್ಯಮ ಬರುವಂತೆ ಮಾಡಿದ್ದು ಸರ್ಕಾರ. ಕೊನೆಗೆ ಕನ್ನಡ ಚಿತ್ರಗಳಿಗೆ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ನೀಡುವಲ್ಲಿಯವರೆಗೆ ಅದು ನೆರವಾಯಿತು. ಈಗ ಜಿಎಸ್‌ಟಿ ಬಂದ ಮೇಲೆ ಆ ರಿಯಾಯಿತಿ ಇಲ್ಲ.
ನೆಗೆಟಿವ್‌ನಿಂದ ಡಿಜಿಟಲ್‌ಗೆ ಸಿನಿಮಾ ಮಾಧ್ಯಮ ಹೊರಳಿದ ಮೇಲೆ ಚಿತ್ರೋದ್ಯಮದ ಗತಿಯೇ ಬದಲಾಯಿತು. ವಿಶೇಷವಾಗಿ ಚಿತ್ರಗಳ ನಿರ್ಮಾಣ, ಬಿಡುಗಡೆಗಳ ಕ್ರಾಂತಿಯೇ ಆಗತೊಡಗಿತು. ಒಮ್ಮೆಲೇ ಎಷ್ಟು ಬೇಕಾದರೂ ಕೇಂದ್ರಗಳಲ್ಲಿ ಚಿತ್ರಗಳ ಬಿಡುಗಡೆ ಸಾಧ್ಯವಾಯಿತು. ಹಾಗಾಗಿ ಟಿವಿಯಲ್ಲಿ ಪ್ರಸಾರದ ನಿರ್ಬಂಧದ ಅವಽ ಸಹಜವಾಗಿಯೇ ಕಡಿಮೆ ಆಯಿತು. ಚಿತ್ರಗಳ ಆದಾಯಕ್ಕೆ ಇನ್ನಷ್ಟು ಸೇರ್ಪಡೆಯಾಯಿತು. ಜಾಲತಾಣಗಳು, ಆಡಿಯೋ, ಕರ್ನಾಟಕದ ಹೊರಗಿನ ಮಾರುಕಟ್ಟೆ, ಈಗ ಹೊಸದಾಗಿ ತೆರೆದುಕೊಂಡ ಒಟಿಟಿ ತಾಣಗಳು. . . ಹೀಗೆ.
ಪ್ರಪಂಚವನ್ನು ಅಪ್ಪಿಕೊಂಡ ಕೊರೊನಾ ವೈರಾಣುಗಳು ಮಾಡಿದ ದಾಳಿ, ಅದರ ಪರಿಣಾಮ ಎಲ್ಲರಿಗೂ ವೇದ್ಯ. ಮನೆಯೊಳಗೇ ಇರಬೇಕಾಗಿದ್ದ ಆ ದಿನಗಳಲ್ಲಿ ಮನರಂಜನೆಗಾಗಿ ಒಟಿಟಿಯನ್ನು ಅವಲಂಬಿಸಬೇಕಾಯಿತು. ಆಗ ವಿವಿಧ ಭಾಷೆಗಳ ಚಿತ್ರಗಳ ಸಾರ, ಸತ್ವಗಳ ಪರಿಚಯ ಎಲ್ಲರಿಗೂ ಆಯಿತು. ಅದರ ಲಾಭ ಪಡೆದದ್ದು ಮಾತ್ರವಲ್ಲ, ಮುಂದೆ ಕೂಡ ಅದರ ಅನುಕೂಲ ಆದದ್ದು ಮಲಯಾಳ ಚಿತ್ರರಂಗಕ್ಕೆ. ಒಳ್ಳೆಯ ಮಲಯಾಳ ಚಿತ್ರಗಳು ಕರ್ನಾಟಕದಲ್ಲಿ ಕೋಟಿಗಟ್ಟಲೆ ಹಣ ಗಳಿಸುತ್ತಿವೆ. ‘ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ’ ಎನ್ನುವ ಆರೋಪವೇನೋ ಇದೆ; ಆದರೆ ಮಲಯಾಳ ಚಿತ್ರಗಳ ಗಳಿಕೆ ಅದಕ್ಕೆ ಅಪವಾದ ಇದ್ದಂತಿದೆ.
ಮೇಲಿನ ವಿಷಯಗಳ ಪ್ರಸ್ತಾಪಕ್ಕೆ ಕಾರಣ, ಕನ್ನಡ ಚಿತ್ರೋದ್ಯಮದ ಮಂದಿ ಈ ನಿಟ್ಟಿನಲ್ಲಿ ಯೋಚಿಸಲು ಆರಂಭಿಸಿರುವುದು. ನೆರೆಯ ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಜೂನ್ ೧ರಿಂದ ಪ್ರದರ್ಶನ ಸ್ಥಗಿತಗೊಳಿಸುವ ಯೋಚನೆ ಮತ್ತು ಮುಂದಿನ ಬೆಳವಣಿಗೆಗಳು.
ಕನ್ನಡ ಚಿತ್ರೋದ್ಯಮದ ಸಮಸ್ಯೆಗಳು ಮತ್ತು ಸವಾಲುಗಳ ಕುರಿತಂತೆ ಈಗಾಗಲೇ ಒಂದು ಹಂತದ ಸಮಾಲೋಚನೆಯ ಸಭೆ, ಶಿವರಾಜಕುಮಾರ್ ಅವರ ಮನೆಯಲ್ಲಿ ನಡೆದಿದೆ. ಸಾಕಷ್ಟು ಮಂದಿ ಅಲ್ಲಿ ಪಾಲ್ಗೊಂಡಿರಲಿಲ್ಲವಾದ್ದರಿಂದ ಮತ್ತೊಂದು ಸಭೆಯ ನಂತರ ಮುಖ್ಯ ಮಂತ್ರಿಗಳನ್ನು ಭೇಟಿಯಾಗುವ, ತಮ್ಮ ಬೇಡಿಕೆಯನ್ನು ಮುಂದಿಡುವ ಯೋಚನೆ ಇದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಪ್ರದರ್ಶಕರ ದುಬಾರಿ ಬಾಡಿಗೆಯ ಕುರಿತ ತಕರಾರು. ಏಕಪರದೆಯ ಚಿತ್ರಮಂದಿರಗಳಿಗೆ ಅಲ್ಲಿ ನಿಗದಿತ ಬಾಡಿಗೆ ನೀಡಲಾಗುತ್ತಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಗಳಿಕೆಯ ಆಧಾರದಲ್ಲಿ ಪ್ರದರ್ಶಕರು ಬಾಡಿಗೆ ಪಡೆಯುತ್ತಾರೆ. ತಮಗೂ ಅದೇ ರೀತಿಯ ವ್ಯವಸ್ಥೆ ಕಲ್ಪಿಸಬೇಕು, ಅಲ್ಲಿಯವರೆಗೆ ಹೊಸ ಚಿತ್ರಗಳನ್ನು ಜೂನ್ ೧ರಿಂದ ಬಿಡುಗಡೆ ಮಾಡುವುದಿಲ್ಲ ಎಂದು ಪ್ರದರ್ಶಕರು ಹೇಳಿದ್ದಾರೆ.
ದೊಡ್ಡ ಚಿತ್ರಗಳ ಬಿಡುಗಡೆ ಇಲ್ಲದೆ, ಇತರ ಭಾಷೆಗಳಿಂದ ಡಬ್ ಆಗಿರುವ ಚಿತ್ರಗಳು, ಮರು ಬಿಡುಗಡೆ ಆಗುವ ಚಿತ್ರಗಳಿಂದ ಗಳಿಕೆಯೂ ಕಡಿಮೆ; ಅಲ್ಲದೆ ಕ್ಯೂಬ್‌ಗೆ ನೀಡಬೇಕಾದ ಶುಲ್ಕ, ದುಬಾರಿ ವಿದ್ಯುತ್ ಶುಲ್ಕ ಇತ್ಯಾದಿ ಹೊರೆಯ ಕುರಿತೂ ಪ್ರದರ್ಶಕರು ಹೇಳುತ್ತಿದ್ದಾರೆ. ಇದು ಎಲ್ಲ ರಾಜ್ಯಗಳ ಚಿತ್ರಮಂದಿರಗಳಿಗೂ ಅನ್ವಯಿಸುವ ಮಾತು.
ಒಂದು ವೇಳೆ ಅಲ್ಲಿ ಚಿತ್ರಮಂದಿರಗಳು ಮುಚ್ಚಿದ್ದೇ ಆದರೆ, ಜೂನ್ ತಿಂಗಳಲ್ಲಿ ತೆರೆಗೆ ಬರುವುದಾಗಿ ಪ್ರಕಟವಾಗಿರುವ ಕಮಲಹಾಸನ್ – ಮಣಿರತ್ನಂ ಜೋಡಿಯ ಥಗ್ ಲೈಫ್, ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು, ಧನುಷ್ ಅವರ ಕುಬೇರ, ವಿಷ್ಣುಮಂಚು ಅವರ ಕಣ್ಣಪ್ಪ ಚಿತ್ರಗಳ ಬಿಡುಗಡೆ ಅಲ್ಲಿ ಆಗುವುದಿಲ್ಲ. ಇತ್ತೀಚಿನ ಸುದ್ದಿಯ ಪ್ರಕಾರ, ಅಲ್ಲಿನ ಚಲನ ಚಿತ್ರ ವಾಣಿಜ್ಯ ಮಂಡಳಿ, ಪ್ರದರ್ಶಕರ ಮನವೊಲಿಸಿ, ಪ್ರತಿಭಟನೆಯ ನಿರ್ಧಾರದಿಂದ ಹಿಂದೆ ಬರುವಂತೆ ಮಾಡಿದೆ.
ಕೇರಳದಲ್ಲೂ ಇಂತಹದೇ ಬೆಳವಣಿಗೆ. ಕಳೆದ ಒಂದು ತಿಂಗಳಲ್ಲಿ ಸುಮಾರು ೧೫೦ ಕೋಟಿ ರೂ. ಗಳಷ್ಟು ನಷ್ಟ ತೆರೆಕಂಡ ಚಿತ್ರಗಳಿಂದ ಆಗಿದೆ. ಚಿತ್ರಗಳ ಅದ್ಧೂರಿ ನಿರ್ಮಾಣ ವೆಚ್ಚ ತಗ್ಗಿಸಲು ನಿರ್ಮಾಪಕರಿಗೆ ಕಲಾವಿದರು ಮತ್ತು ತಂತ್ರಜ್ಞರು ಸಹಕರಿಸಬೇಕು; ದುಬಾರಿ ಸಂಭಾವನೆಯನ್ನು ಕಡಿಮೆ ಮಾಡಿ ಚಿತ್ರಗಳ ನಿರ್ಮಾಣಕ್ಕೆ ಸಹಕರಿಸಬೇಕು ಎನ್ನುವುದು ಅಲ್ಲಿನ ಬೇಡಿಕೆ.
ಕಳೆದ ವರ್ಷ ತಮಿಳುನಾಡಿನಲ್ಲೂ ಇಂತಹದೇ ಪ್ರತಿಭಟನೆಯ ಮಾತು ಕೇಳಿಬಂದಿತ್ತು. ನವೆಂಬರ್ ಒಂದರಿಂದ ತಮಿಳು ಚಿತ್ರಗಳ ನಿರ್ಮಾಣ ಸ್ಥಗಿತಗೊಳಿಸುವುದಾಗಿ ಅಲ್ಲಿನ ನಿರ್ಮಾಪಕರ ಸಂಘ ಹೇಳಿತ್ತು. ನಟರು ದುಬಾರಿ ಸಂಭಾವನೆ ಪಡೆಯುವುದು ಮಾತ್ರವಲ್ಲದೆ, ಸಾಕಷ್ಟು ಮೊತ್ತ ಮುಂಗಡ ಪಡೆದು, ಬೇರೆಯವರ ಚಿತ್ರಗಳಲ್ಲಿ ನಟಿಸುವುದರ ಕುರಿತ ಆಕ್ಷೇಪ ಅಲ್ಲಿತ್ತು. ನವೆಂಬರ್‌ನಲ್ಲಿ ಚಿತ್ರೀಕರಣ ಅಲ್ಲಿ ಸ್ಥಗಿತ ಆದಂತಿಲ್ಲ.
ಕನ್ನಡ ಚಿತ್ರೋದ್ಯಮದ ಸಮಸ್ಯೆಯೂ ಇವುಗಳಿಗೆ ಹೊರತಾಗಿಲ್ಲ. ಕಳೆದ ೨೦ ವಾರಗಳಲ್ಲಿ ೧೦೮ ಚಿತ್ರಗಳು ತೆರೆಗೆ ಬಂದಿದ್ದು, ಅವುಗಳಲ್ಲಿ ಲಾಭ ಮಾಡಿದ್ದಾಗಿ ಯಾವ ನಿರ್ಮಾಪಕರೂ ಹೇಳಿಲ್ಲ. ಆದರೆ ಸಂಪ್ರದಾಯದಂತೆ ಬಿಡುಗಡೆಯಾದ ಮೂರನೇ ದಿನ ಯಶಸ್ಸಿನ ಸಂತೋಷ ಹಂಚಿಕೊಂಡದ್ದಿದೆ. ಇತ್ತ ಚಿತ್ರಮಂದಿರಗಳನ್ನು ಮುಚ್ಚುವ ಸ್ಥಿತಿ ಇದೆ, ಜನಪ್ರಿಯ ನಟರ ಚಿತ್ರಗಳು ವರ್ಷಕ್ಕೆ ಎರಡೋ ಮೂರೋ ಇದ್ದರೆ ಮಾತ್ರ ಇವುಗಳನ್ನು ಉಳಿಸಬಹುದು ಎನ್ನುತ್ತಿದ್ದಾರೆ ಪ್ರದರ್ಶಕರು. ನಟರೋ, ಎರಡೋ ಮೂರೋ ವರ್ಷಗಳಿಗೆ ಒಂದು ಚಿತ್ರವನ್ನು ನೀಡುತ್ತಿದ್ದಾರೆ!
ಪ್ರೇಕ್ಷಕರನ್ನು ಚಿತ್ರಮಂದಿರಗಳಿಂದ ದೂರ ಮಾಡುವುದರಲ್ಲಿ ಮೊದಲ ಸ್ಥಾನ ಮಲ್ಟಿಪ್ಲೆಕ್ಸ್‌ಗಳದು. ದುಬಾರಿ ಪ್ರವೇಶ ಶುಲ್ಕ ಪ್ರೇಕ್ಷಕನನ್ನು ದೂರ ಇಟ್ಟಿದೆ. ಮೊಬೈಲ್‌ಗಳಲ್ಲೇ ನೋಡಿ ಖುಷಿಪಡುವ ರೀಲ್ಸ್, ಟ್ರೋಲ್ಸ್, ಮೀಮ್ಸ್‌ಗಳು ಅವರಿಗೀಗ ಮನರಂಜನೆಯ ಸೆಲೆಗಳು. ಇಲ್ಲವೇ ಮನೆಯಲ್ಲೇ ಟಿವಿಯಲ್ಲಿ ವೀಕ್ಷಿಸುವ ಚಿತ್ರಗಳು; ಒಟಿಟಿಯಲ್ಲಿ ಯಾವಾಗಬೇಕೆಂದರೆ ಆಗ, ತಮಗೆ ಬೇಕಾದ ಭಾಷೆಯಲ್ಲಿ ನೋಡಬಹುದಾದ ಚಿತ್ರಗಳು, ಸರಣಿಗಳು, ವೆಬ್ ಸರಣಿಗಳು. ಇವುಗಳನ್ನೆಲ್ಲ ಮೀರಿ ಆಕರ್ಷಿಸಬೇಕಾದ ಸದಭಿರುಚಿಯ ಚಿತ್ರಗಳು ಬರಬೇಕು; ಅವುಗಳ ಮಾಹಿತಿ ಪ್ರೇಕ್ಷಕರಿಗೆ ತಲಪಬೇಕು. ಆ ನಿಟ್ಟಿನಲ್ಲಿ ಕೆಲಸ ಆಗಬೇಕು.
ಮುಂಗಡ ಪತ್ರದಲ್ಲಿ ಸರ್ಕಾರ ಹೇಳಿದಂತೆ ಪ್ರವೇಶ ಶುಲ್ಕ ಗರಿಷ್ಟ ೨೦೦ ರೂ. ಗೆ ಮೀರದಂತೆ ಆದರೆ ಪ್ರೇಕ್ಷಕ ಮಹಾಪ್ರಭು ಚಿತ್ರಮಂದಿರಗಳತ್ತ ಬರಲು ಮನಮಾಡಬಹುದೇನೋ. ಜೊತೆಗೆ ಉತ್ತಮಗುಣ ಮಟ್ಟದ ಚಿತ್ರಗಳೂ ಬೇಕೆನ್ನಿ.





