-
ಪ್ರೊ.ಆರ್.ಎಂ.ಚಿಂತಾಮಣಿ
ಹೌದು, ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ರಿಸರ್ವ್ ಬ್ಯಾಂಕಿನ ಹಣಕಾಸು ಸ್ಥಿರತೆಯ ವರದಿ (financial stability report). ಸಾಮಾನ್ಯವಾಗಿ ಬ್ಯಾಂಕುಗಳು ಉದ್ದಿಮೆಗಳಿಗೆ, ವ್ಯಾಪಾರ ವ್ಯವಹಾರಗಳಿಗೆ, ಕಂಪೆನಿಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಕೊಡುವ ದೊಡ್ಡ ಮೊತ್ತದ ಸಾಲಗಳನ್ನು ಹೊರತುಪಡಿಸಿ ವ್ಯಕ್ತಿಗಳ ಉಪಭೋಗಕ್ಕಾಗಿ, ಉಪಭೋಗದ ಸಲಕರಣೆಗಳನ್ನು ಪಡೆಯಲು ಮತ್ತು ಇತರೆ ಉದ್ದೇಶಗಳಿಗಾಗಿ ಕೊಡುವ ಸಾಲಗಳನ್ನು (ಸಣ್ಣ ಮೊತ್ತದ ದೊಡ್ಡ ಸಂಖ್ಯೆಯ) ರಿಟೇಲ್ ಅಥವಾ ಚಿಲ್ಲರೆ ಸಾಲಗಳೆಂದು ಕರೆಯಲಾಗುವುದು. ವ್ಯಕ್ತಿಗಳು ದೊಡ್ಡ ಬೆಲೆಯ ಗೃಹೋಪಯೋಗಿ ಸಾಧನಗಳನ್ನು ಕೊಳ್ಳಲು ಪಡೆಯುವ ಸಾಲ, ಮನೆಗಾಗಿ ಸಾಲ, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ, ಸ್ಥಿರ ಚರ ಆಸ್ತಿಗಳನ್ನು ಅಡವಿಟ್ಟು ಅಥವಾ ಆಧಾರವಾಗಿಟ್ಟು ಸಾಲ, ವಾಹನಗಳಿಗಾಗಿ ಸಾಲ, ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಪಡೆದ ಸಾಲ ಮತ್ತು ಠೇವಣಿಗಳ ಮೇಲಿನ ಸಾಲ ಮುಂತಾದವುಗಳನ್ನು ಈ ಗುಂಪಿಗೆ ಸೇರಿಸಬಹುದು.
ಇವುಗಳಲ್ಲಿ ಹೆಚ್ಚಿನವು ಅಲ್ಪಾವಧಿ ಮತ್ತು ಮಧ್ಯಮಾವಧಿ (1 ರಿಂದ 3 ವರ್ಷಗಳು) ಸಾಲಗಳಾಗಿದ್ದು, ಮನೆ ಸಾಲ ಮತ್ತು ಶಿಕ್ಷಣ ಸಾಲಗಳಂತಹ ಕೆಲವು ಮಾತ್ರ ದೀರ್ಘಾವಧಿ ಸಾಲಗಳು. ಅದೇ ರೀತಿ ಕ್ರೆಡಿಟ್ ಕಾರ್ಡ್ ಉಪಯೋಗ ಮತ್ತು ಇತರೆ ಉಪಭೋಗದ ವೈಯಕ್ತಿಕ ಸಾಲಗಳಿಗೆ ಭದ್ರತೆ (ಅಡವು) ಇರುವುದಿಲ್ಲ. ಭದ್ರತೆ ರಹಿತ ಸಾಲಗಳೆಂದೇ ಹೇಳುತ್ತಾರೆ. ಇಲ್ಲಿ ಬ್ಯಾಂಕು ಲೆಕ್ಕ ಹಾಕಿರುವ ಸಾಲಗಾರನ ಸಾಲ ತೀರಿಸುವ ಸಾಮರ್ಥ್ಯದ ಸೂಚ್ಯಂಕವೇ (credit worthiness rating) ಭದ್ರತೆ ಇದ್ದಂತೆ.
ವರದಿಯಲ್ಲಿರುವ ಮಾಹಿತಿ
ಕೋವಿಡ್-19 ಅವಧಿಯಲ್ಲಿ ಬ್ಯಾಂಕ್ ಸಾಲಗಳ ಬೆಳವಣಿಗೆ ಕುಂಠಿತವಾದದ್ದು ಈಗ ಇತಿಹಾಸ. 2020ರಿಂದೀಚೆಗೆ ಒಂದು ಮಟ್ಟದಲ್ಲಿ ಬ್ಯಾಂಕ್ ಸಾಲಗಳು ಬೆಳೆಯತೊಡಗಿದವು. 2022-23ರ ಹಣಕಾಸು ವರ್ಷದಲ್ಲಿ ಒಟ್ಟು ಬ್ಯಾಂಕ್ ಸಾಲಗಳು ಶೇ.15.5 ಬೆಳವಣಿಗೆ ಕಂಡಿದ್ದು ವರದಿಯಲ್ಲಿದೆ. ಆದರೆ ರಿಟೇಲ್ ಸಾಲಗಳು ಇದಕ್ಕಿಂತ ವೇಗವಾಗಿ ಬೆಳೆಯುತ್ತಿವೆ. ಅದರಲ್ಲಿಯೂ ಭದ್ರತೆ ರಹಿತ ರಿಟೇಲ್ ಸಾಲಗಳು ಇನ್ನೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿರುವುದು ರಿಸರ್ವ್ ಬ್ಯಾಂಕು ಎಚ್ಚರಿಕೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಲು ಕಾರಣವಾಗಿದೆ. ಆದ್ದರಿಂದ ಎಲ್ಲ ಬ್ಯಾಂಕುಗಳ ರಿಟೇಲ್ ಸಾಲಗಳ ಖಾತೆಗಳ ವಿವರಗಳನ್ನು ಎಳೆ ಎಳೆಯಾಗಿ ಪರಿಶೀಲಿಸುವ (review) ಕೆಲಸವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದೆ.(ಸಂಖ್ಯಾಪಟ್ಟಿಯಲ್ಲಿ ವಿವರಗಳಿವೆ.)
2023 ಏಪ್ರಿಲ್ 21ರಂದು ಇದ್ದಂತೆ ಭಾರತದ ಎಲ್ಲ ಬ್ಯಾಂಕುಗಳ ರಿಟೇಲ್ ಸಾಲಗಳ ವಿವರ, ಬೆಳವಣಿಗೆಯ ದರ ಒಟ್ಟು ರಿಟೇಲ್ ಸಾಲಗಳ ವಾರ್ಷಿಕ ಬೆಳವಣಿಗೆ ದರವನ್ನು ಗಮನಿಸಿದರೆ ಒಟ್ಟು ಬ್ಯಾಂಕ್ ಸಾಲದ ಬೆಳವಣಿಗೆ ದರಕ್ಕಿಂತ ಕೇವಲ ಶೇ.3.9ರಷ್ಟು ಹೆಚ್ಚು ಅನ್ನಿಸುತ್ತದೆ. ಆದರೆ ಒಂದೊಂದನ್ನೇ ನೋಡುತ್ತಾ ಹೋದರೆ ಗಾಬರಿಯಾಗುವಷ್ಟು ಬೆಳವಣಿಗೆ ಕಾಣುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20 ರಿಂದ ೩೦ರವರೆಗೆ ಬೆಳವಣಿಗೆ ಕಂಡಿರುವ ಸಾಲಗಳೇ ಹೆಚ್ಚು. ಕ್ರೆಡಿಟ್ ಕಾರ್ಡ್ ಬಳಸಿ ಪಡೆದ ಸಾಲದ ಬಾಕಿಯನ್ನು ನೋಡಿದರೆ ಏಪ್ರಿಲ್ 21ರಂದು ಇದ್ದ ಬಾಕಿ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿದ್ದರೂ ತಿಂಗಳ ಕೊನೆಯಲ್ಲಿ ಗಣನೀಯವಾಗಿ ಇಳಿದು ಮಾರ್ಚ್ ತಿಂಗಳಿಗಿಂತ ಕಡಿಮೆಯಾದದ್ದು ಕಂಡುಬರುತ್ತದೆ. ಮತ್ತೆ ಮೇ ತಿಂಗಳಲ್ಲಿ ಶೇ.೫ರಷ್ಟು ಹೆಚ್ಚಾಗಿದೆ. ಈ ವರ್ಷದ ಐದು ತಿಂಗಳುಗಳಲ್ಲಿ ಚಲಾವಣೆಯಲ್ಲಿದ್ದ ಕ್ರೆಡಿಟ್ ಕಾರ್ಡುಗಳನ್ನು ನೋಡಿದರೆ ಜನವರಿಯಲ್ಲಿ 8.24 ಕೋಟಿ ಕಾರ್ಡುಗಳು ಇದ್ದವು. ಮೇ ತಿಂಗಳಲ್ಲಿ 8.74ಕೋಟಿಗೆ ಏರಿರುತ್ತವೆ. ನಾಲ್ಕು ತಿಂಗಳಲ್ಲಿ 50 ಲಕ್ಷ ಕಾರ್ಡುಗಳು ಹೆಚ್ಚಾಗಿವೆ.
ವರವೂ ಹೌದು, ಶಾಪವೂ ಆದೀತು
ಹೀಗೆ ರಿಟೇಲ್ ಸಾಲಗಳು ಹೆಚ್ಚಾದರೆ ಜನರ ಕೈಯಲ್ಲಿ ಹೆಚ್ಚು ನಗದು ಓಡಾಡುತ್ತಿದ್ದು ಅವರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಇದು ಸರಕು ಮತ್ತು ಸೇವೆಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ. ಉತ್ಪಾದನೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುವುದು ಸಹಜ. ಇದನ್ನೇ ಆರ್ಥಿಕ ಚಿಂತನೆಗಳಲ್ಲಿ ಗುಣಕಗಳ ಪರಿಣಾಮ (multiplier effect ) ಎನ್ನಲಾಗುತ್ತದೆ. ಈ ಪರಿಣಾಮ ವ್ಯವಸ್ಥೆಯ ಎಲ್ಲ ವಲಯಗಳ ಮೇಲೂ ಸಕಾರಾತ್ಮಕವಾಗಿ ಆದಾಗ ಅಭಿವೃದ್ಧಿ ತಾನೇ ತಾನಾಗಿ ಮುಂದುವರಿಯುತ್ತದೆ. ಆರ್ಥಿಕ ಆಡಳಿತಗಾರರು ಎಲ್ಲ ವಲಯಗಳಿಗೂ ಇದರ ಲಾಭ ಹೆಚ್ಚುವಂತೆ ಉಳಿತಾಯ ಮತ್ತು ಹೂಡಿಕೆಗಳು ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಹಿಂದಿದ್ದವುಗಳಿಗೆ ಉತ್ತೇಜನ ಕೊಡಬೇಕು.
ಇದಕ್ಕೆ ವಿರುದ್ಧವಾಗಿ ಇಂದಿನ ಸ್ಥಿತಿಯಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ಜೀವನ ವೆಚ್ಚವೇ ಹೆಚ್ಚಾಗಿ ಕೈಯಲ್ಲಿ ಹಣ ಉಳಿಯದೆ ರಿಟೇಲ್ ಸಾಲ ಪಡೆದವರು ಸಾಲ, ಬಡ್ಡಿ ಕಟ್ಟದೇ ಬ್ಯಾಂಕುಗಳ ಎನ್‌ಪಿಎ ಭಾರ ತಾಳಲಾರದೆ 2008-09ರ ಹಣಕಾಸು ಸಂಕಷ್ಟಕ್ಕೆ ಸಿಲುಕಿದಂತೆ ಪರಿಸ್ಥಿತಿ ನಿರ್ಮಾಣವಾದರೆ ಇಡೀ ಅರ್ಥವ್ಯವಸ್ಥೆಯೇ ಕಷ್ಟ ಎದುರಿಸಬೇಕಾದೀತು. ಆಗ ರಿಟೇಲ್ ಸಾಲಗಳ ಹೆಚ್ಚಳವೇ ಶಾಪವಾಗಿ ಪರಿಣಮಿಸಬಹುದು. ಇಂಥ ಆತಂಕವನ್ನು ನಿರೀಕ್ಷಿಸಿಯೇ ರಿಸರ್ವ್ ಬ್ಯಾಂಕು ಮಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬ್ಯಾಂಕುಗಳಿಗೆ ಹಣದ ಒಳಹರಿವಿನ ಬಗ್ಗೆಯೂ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕು ಚಿಂತಿಸಬೇಕಾಗುತ್ತದೆ. ಇಲ್ಲಿಯವರೆಗೆ ರಿಟೇಲ್ ಸಾಲಗಳಲ್ಲಿ ಎನ್‌ಪಿಎ ಪ್ರಮಾಣ ಮಿತಿಯಲ್ಲಿಯೇ ಇದ್ದು ಶೇ.0.5 ದಾಟಿಲ್ಲ. ಆದರೆ ತಜ್ಞರ ಪ್ರಕಾರ ಭದ್ರತಾ ರಹಿತ ರಿಟೇಲ್ ಲೋನ್‌ಗಳ ಪೈಕಿ ಕ್ರೆಡಿಟ್ ಕಾರ್ಡುಗಳು ಮತ್ತು ವ್ಯಕ್ತಿಗತ ಸಾಲಗಳಲ್ಲಿ ಮಾರ್ಚ್ ನಂತರ ಎನ್‌ಪಿಎಗಳು ಹೆಚ್ಚುತ್ತಿದ್ದು 1.5 ದಾಟುತ್ತಿವೆ ಎನ್ನಲಾಗಿದೆ. ಆದ್ದರಿಂದ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕು.