ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಮಜ್ಜಿಗೆ ಮೊಸರು, ಲಸ್ಸಿ, ಪನೀರ್ ಮೇಲೆಲ್ಲ ಸರಕು ಸೇವಾ ತೆರಿಗೆ ಹಾಕಿದ್ದೇ ಹಾಕಿದ್ದು, ಹಾಲ್ಸಂಬಂಧಿಕರಿಗೆಲ್ಲ ಸಂಭ್ರಮವೋ ಸಂಭ್ರಮ. ಈ ಸಂಭ್ರಮಾನ ಸಲಬ್ರೇಟ್ ಮಾಡೋಣ ಅಂತಾ ಎಲ್ಲಾ ಡಿಸೈಡ್ ಮಾಡಿದ್ರು.
ತುಪ್ಪ ಮತ್ತು ಬೆಣ್ಣೆಗೆ ಮೊದಲಿನಿಂದಲೂ ದೌಲತ್ತು ಇತ್ತು. ಈ ಕಾರಣಕ್ಕಾಗಿ ತುಪ್ಪ ಮತ್ತು ಬೆಣ್ಣೆ ಎರಡೂ ಸೇರಿ ಪಾರ್ಟಿ ಅರೆಂಜ್ ಮಾಡಿದ್ದವು. ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಪನೀರ್ ಬರೋ ಹೊತ್ತಿಗಾಗಲೇ ತುಪ್ಪ ಮತ್ತು ಬೆಣ್ಣೆ ನಿಧಾನಕ್ಕೆ ಸಿಪ್ ಮಾಡ್ತಾ ಕೂತಿದ್ದವು.
ಮೊಸರಿಗೆ ಸಿಟ್ಟು ಬಂತು. ‘ನಮ್ಮನ್ನಾ ಪಾರ್ಟಿಗೆ ಕರೆದು, ನಾವು ಬರುವ ಮುನ್ನವೇ ಆಲ್ಕೋವಾಲು ಎತ್ತುತ್ತಾಯ್ದೀರಾ’ ಅಂತಾ ಕೋಪದಿಂದ ಕೇಳಿತು.
ಬೆಣ್ಣೆ ಗಹಗಹಿಸಿ ನಕ್ಕಿತು. ‘ಲೇ ಮೊಸ್ರು. ಕುಡಿತಾ ಇರೋದೇನೋ ನಿಜಾ ಆದ್ರೆ, ನೀನ್ ಹೇಳ್ತಾಂಗೆ ನಾವ್ ಆಲ್ಕವಾಲು ಕುಡಿತಾಯಿಲ್ಲ..’ ಅಂತ ಟಾಂಗ್ ಕೊಟ್ಟಿತು.
ಮೊಸರಿಗೆ ತನ್ನಲ್ಲೇ ಕಲ್ಲು ಸಿಕ್ಕಷ್ಟು ಕೋಪ ಬಂತು. ‘ಲೇ ಈಚಲ್ ಮರದಡಿ ಕೂತ್ ಮಜ್ಜಿಗೆ ಕೂಡಿದ್ರೂ ಜನಾ ಹೆಂಡಾನೇ ಅನ್ಕೋತಾರೆ ಕಣ್ರೋ.. ತುಂಬಾ ಹರ್ಕೋ ಬ್ಯಾಡ’ ಅಂತ ಹೇಳಿತು.
‘ಲೇ ಮೊಸ್ರು ಕೋಪ ಮಾಡ್ಕೊಬ್ಯಾಡ ಕಣೋ, ನಂಗೊತ್ತು, ನೀನು ಇನ್ನೂ ನಮ್ ಲೆವೆಲ್ಲಿಗೆ ಏರಿಲ್ಲ. ಏರೋಕೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಗುರುಗಳ ಮೇಲೆ ನಂಬಿಕೆ ಇಡು.. ವಿಶ್ವವನ್ನೇ ಕಾಪಾಡಿದವರು ನಿನ್ನನ್ನು ಕಾಪಾಡೋದಿಲ್ಲವೇ? ಅಷ್ಟಕ್ಕೂ ನಾವು ಕುಡಿತಾ ಇರೋದು ಆಲ್ಕೋವಾಲ್ ಅಲ್ಲಪ್ಪಾ ಹಾಲುಕೋವಾಹಾಲು.. ಗೊತ್ತಾಯ್ತಾ?’ ಅಂತು ಬೆಣ್ಣೆ.
‘ಬೆಣ್ಣೆ ಬಡ್ಡಿಮಗ ನನ್ನಿಂದ ರೂಪುಗೊಂಡಿದ್ರೂ ಮಾತಿನಲ್ಲಿ ಸೋಲದೇ ಜಾರಿ ಕೊಳ್ತಾನೆ’ ಅಂತಾ ಮನಸ್ನಲ್ಲೇ ಅಂದುಕೊಂಡ ಮೊಸರು, ‘ಸರಿ ಬಿಡಪಾ..’ ಅಂದು ಕೂತಿತು.
ಹಾಲು, ಮೊಸರು, ಲಸ್ಸಿ, ಮಜ್ಜಿಗೆ, ಪನೀರ್ ಎಲ್ಲಾ ಕುಳಿತಾದ ಮೇಲೆ, ತುಪ್ಪ ಮಾತಿಗರಾರಂಭಿಸಿತು. ‘ಮಿತ್ರರೇ, ಇವತ್ತುಂದಿನಾ ನಮ್ ಹಾಲು ಕುಟುಂಬಕ್ಕೆ ಸುದಿನ. ನಮ್ಮೆಲ್ಲರಿಗೂ ಈಗ ಒಂದ್ ಐಡೆಂಟಿಟಿ ಸಿಕ್ಕದಿನ. ಈ ದಿನಾನಾ ನಾವು ಒಗ್ಗೂಡಿ ಆಚರಿಸಬೇಕು ಮತ್ತು ಈ ಸಂಭ್ರಮಕ್ಕೆ ಕಾರಣವಾದ ಕೇಂದ್ರ ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸಬೇಕು. ಆ ಕಾರಣಕ್ಕಾಗಿ ಇಲ್ಲಿ ನಾವೆಲ್ಲ ಸೇರಿದ್ದೇವೆ. ಈ ಸಭೆಯಲ್ಲಿ ನಮ್ಮೆಲ್ಲರಿಗೂ ಒಂದು ಐಡೆಂಟಿಟಿ ಕೊಟ್ಟ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಸರ್ವಾನುಮತದ ನಿರ್ಣಯ ಅಂಗೀಕರಿಸೋಣ’ ಎಂದಿತು.ಎಲ್ಲರೂ ಚಪ್ಪಾಳೆ ಹೊಡೆದು ನಿರ್ಣಯಕ್ಕೆ ಒಪ್ಪಿಗೆ ನೀಡಿದವು.
ಮೊಸರು ನಾಲ್ಕು ಮಾತನಾಡಲಿ ಎಂದು ತುಪ್ಪ ಹೇಳಿತು ಮೊಸರು ಎದ್ದು ನಿಂತು, ‘ಮಿತ್ರರೆ, ಇವತ್ತುಂದಿನಾ ಜನರಿಗೆ ಆಧಾರ್ ಕಾರ್ಡ್ ಹೇಗೆ ಮುಖ್ಯವೋ ಹಾಗೆ ನಮ್ಮಂತ ಸರಕುಗಳಿಗೆ ಜಿಎಸ್ಟಿ ಮುಖ್ಯ. ಎಷ್ಟು ಪರ್ಸೆಂಟ್ ಜಿಎಸ್ಟಿ ನಮ್ಮ ಮೇಲಿದೆ ಅನ್ನೋದು ಮುಖ್ಯ ಅಲ್ಲ. ಐಡೆಂಟಿಟಿಗಾಗಿ ಐದ್ ಪರ್ಸೆಂಟಾದ್ರೂ ಬಿದ್ದಿದೆಯಲ್ಲ.. ಅದುಕ್ಕಾಗಿ ನಾನ್ ಕೇಂದ್ರ ಸರ್ಕಾರಕ್ಕೆ ಥ್ಯಾಂಕ್ಸ್ ಹೇಳ್ತೇನೆ..’ ಎಂದು ಕುಳಿತಿತು.
ಈಗ ಪನೀರ್ ಸರದಿ ಎಂದಿತು ತಪ್ಪ.
‘ನೋಡಿ ಜನಾ ಏನಾದ್ರೂ ಬಾಯ್ ಬಡ್ಕೊಳ್ಳಲಿ.. ನಮಗೆ ನಮ್ಮ ಐಡೆಂಟಿಟಿನೇ ಮುಖ್ಯ. ಈಗ ನಮಗೂ ಒಂದು ಮೌಲ್ಯ ಅಂತಿದೆ. ಆಫ್‌ಕೋರ್ಸ್ ನಮ್ ತುಪ್ಪ ಮತ್ತು ಬೆಣ್ಣೆ ಮುಂಚಿನಿಂದ್ಲೂ ಹನ್ನೆರಡ್ ಪರ್ಸೆಂಟ್ ಬ್ರಾಕೆಟ್‌ನಲ್ಲಿದ್ದಾರೆ. ಅದು ಅವರ ಹೆಗ್ಗಳಿಕೆಯೂ ಹೌದು. ಹಾಗಂತ, ಅವ್ರ ಹಾಲು, ಮೊಸ್ರುನಾ ಮರೆಯಂಗಿಲ್ಲಾ..’ ಅಂದು ಮಾತು ಮುಗಿಸಿತು ಪನೀರ್.
ಮಜ್ಜಿಗೆ ಮಾತನಾಡಲಿ ಅಂತ ತುಪ್ಪ ಹೇಳಿತು. ‘ನೋಡಿ ಇವತ್ತುಂದಿನಾ ನಂಗೂ ಶಾನೆ ಖುಷಿಯಾಗಿದೆ. ನಾವು ತಲೆ ಎತ್ಕೊಂಡ್ ತಿರ್ಗಾಡಬಹುದು. ಎಷ್ಟ್ ಪರ್ಸೆಂಟ್ ಬ್ರಾಕೆಟ್ನಲಿ ಇದ್ದೀವಿ ಅನ್ನೋದು ಮುಖ್ಯ ಅಲ್ಲ, ಒಟ್ನಲ್ಲಿ ನಮ್ ಮೇಲೂ ಟ್ಯಾಕ್ಸ್ ಎಂಬೋ ಟ್ಯಾಗು ಇದೆ ಅನ್ನೋದೆ ನಮಗೆಲ್ಲರ ಹೆಗ್ಗಳಿಕೆ.. ಈ ಅವ್ಕಾಶ ಮಾಡ್ಕೊಟ್ಟ ಕೇಂದ್ರ ಸರ್ಕಾರಕ್ಕೆ , ಪ್ರಧಾನಿಗಳಿಗೆ, ಮುಖ್ಯವಾಗಿ ನಮ್ ಫೈನಾನ್ಸ್ ಮಿನಿಸ್ಟ್ರುಗೆ ನಾನ್ ಅಭಿನಂದನೆ ಹೇಳ್ತೀನಿ’ ಅಂದು ಮಜ್ಜಿಗೆ ಮಾತು ಮುಗಿಸಿತು.
ಲಸ್ಸಿ ಮಾತ್ರ ‘ನೀವೆಲ್ಲ ಮಾತಾಡ್ದ ಮೇಲೆ ನಂದೇನೂ ಇಲ್ಲ. ಮಜ್ಜಿಗೆ, ಮೊಸರು, ಪನೀರ್ ಹೇಳ್ದಂಗೆ ನಾನೂ ಕೇಂದ್ರ ಸರ್ಕಾರುಕ್ಕೆ ಥ್ಯಾಂಕ್ಸ್ ಹೇಳ್ತೀನಿ’ ಅಂದಿತು.ಬೆಣ್ಣೆಯವರು ಈಗ ವಂದನಾರ್ಪನೆ ಮಾಡ್ತಾರೆ ಅಂತಾ ತುಪ್ಪ ಹೇಳಿತು.ಬೆಣ್ಣೆ ಷುರುಮಾಡಿತು, ‘ನೋಡಿ, ಕೇಂದ್ರ ಸರ್ಕಾರದವರ ಬಗ್ಗೆ ಮೊಸರು, ಮಜ್ಜಿಗೆ, ಪನೀರ್, ಲಸ್ಸಿಗಳಿಗೆಲ್ಲ ಇದುವರೆಗೂ ಅಸಮಾಧಾನ ಇತ್ತು ಅಂತಾ ನಂಗೆ ಗೊತ್ತಿದೆ. ಕೇಂದ್ರದವರು ಬೆಣ್ಣೆ, ತುಪ್ಪಕ್ಕೆ ಹನ್ನೆರಡ್ ಪರ್ಸೆಂಟ್ ಟ್ಯಾಕ್ಸ್ ಹಾಕಿ ಐಡಂಟಿಟಿ ಕೊಟ್ರು, ನಮಗೆ ಮಾತ್ರ ಏನೂ ಇಲ್ಲ. ಜಿರೋ ಟ್ಯಾಕ್ಸು.. ಅಂತಾ ಬೇಜಾರ್ ಮಾಡ್ಕೊಂಡಿದ್ರಿ. ನಿಮ್ ಸಂಕಟಾನಾ ನಾವು ಕೇಂದ್ರಕ್ಕೆ ತಲುಪಿಸಿದ್ವಿ. ನ್ಯಾಯ ಬೇಕು, ಸಮಾನತೆ ಬೇಕು ಅಂತಾ ಕೇಳಿದ್ವಿ. ನಮ್ಮ ಮನವಿಗೆ ಓಗೊಟ್ಟು ಕೇಂದ್ರ ಸರ್ಕಾರ ಈಗ ಎಲ್ಲರಿಗೂ ನ್ಯಾಯ ಒದಗಿಸಿದೆ. ನನಗೆ ವಿಶ್ವಾಸ ಇದೆ. ಪ್ರಧಾನಿ ನರೇಂದ್ರಮೋದಿ ನಾಯಕತ್ವದ ಕೇಂದ್ರ ಸರ್ಕಾರ ಯಾರಿಗೂ ಅನ್ಯಾಯ ಮಾಡಲ್ಲ … ಮುಂದಿನ ದಿನಗಳಲ್ಲಿ ಹಾಲಿಗೂ ಜಿಎಸ್ಟಿ ಹಾಕಿ, ಹಾಲಿಗೆ ಆಗಿರುವ ಅನ್ಯಾಯಾನ ಸರಿಪಡಿಸುತ್ತೆ, ನನ್ನ ಮಾತನ್ನ ನಂಬಿ…’ ಅಂತಾ ಹೇಳಿತು.
ಅದುವರೆಗೂ ಮಂಕಾಗಿ ಕುಳಿತಿದ್ದ ಹಾಲಿನ ಮುಖದಲ್ಲಿ ನಗೆಯ ನೊರೆ ಉಕ್ಕಿತು!
-‘ಅಷ್ಟಾವಕ್ರಾ’