Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಸಂಪಾದಕೀಯ : ಯಶಸ್ವಿನಿ ವಿಮಾ ಯೋಜನೆ ಮರು ಜಾರಿಗೊಳಿಸಿರುವುದು ಉತ್ತಮ ನಿರ್ಧಾರ

ಸಾರ್ವಜನಿಕರ ಆರೋಗ್ಯ ರಕ್ಷಣೆಯ ಭಾಗವಾಗಿ ರಾಜ್ಯ ಸರ್ಕಾರವು ಯಶಸ್ವಿನಿ ಆರೋಗ್ಯ ರಕ್ಷಾ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿದ್ದು, ಜನರು ನಿರೀಕ್ಷೆಗೆ ಮೀರಿ ಅಽಕ ಸಂಖ್ಯೆಯಲ್ಲಿ ಈ ಯೋಜನೆಗೆ ನೋಂದಣಿಯಾಗುತ್ತಿದ್ದಾರೆ.

ಈ ಹಿಂದೆಯೂ ಕೂಡ ಯಶಸ್ವಿನಿ ಯೋಜನೆ ಜಾರಿಯಲ್ಲಿದ್ದಾಗ ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಸಾಕಷ್ಟು ಉಪಯುಕ್ತವಾಗಿತ್ತು. ಸಹಕಾರ ಸಂಘಗಳಲ್ಲಿ ಸದಸ್ಯರಾದವರು ಈ ಯೋಜನೆಯ ಫಲಾನುಭವಿಗಳಾಗಿದ್ದರು. ಬಡವರು, ರೈತರು ಈ ಯೋಜನೆಯ ಸಹಕಾರದಿಂದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ತಮ್ಮ ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ಪಡೆಯುವುದು ಸಾಧ್ಯವಾಗಿತ್ತು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡಿದ್ದ ಸಾಕಷ್ಟು ಖಾಸಗಿ ಆಸ್ಪತ್ರೆಗಳು, ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯನ್ನು ದುರುಪ ಯೋಗ ಮಾಡಿಕೊಂಡಿದ್ದವೆಂಬ ಆರೋಪ ಕೂಡ ಕೇಳಿಬಂದಿತ್ತು. ಈ ಯೋಜನೆಯಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಫಲಾನುಭವಿಗಳಿಗೆ ಸರ್ಕಾರವೇ ಹಣ ಪಾವತಿ ಮಾಡುತ್ತಿದ್ದುದರಿಂದ, ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಗೂ ಅನಗತ್ಯವಾಗಿ ಹೆಚ್ಚಿನ ಚಿಕಿತ್ಸೆ ಮತ್ತು ತಪಾಸಣೆಗಳನ್ನು ಮಾಡಿ ಅಽಕ ಮೊತ್ತದ ಬಿಲ್ ತಯಾರಿಸಿ, ಸರ್ಕಾರದಿಂದ ಆ ಹಣ ವಸೂಲು ಮಾಡುತ್ತಿದ್ದರು. ಆ ಮೂಲಕ ಯೋಜ ನೆಯ ದುರುಪಯೋಗವಾಗಿ ಸರ್ಕಾರದ ಹಣ ವ್ಯರ್ಥವಾಗುತ್ತಿದೆ ಎನ್ನಲಾಗಿತ್ತು. ಯಶಸ್ವಿನಿ ಯೋಜನೆಯಲ್ಲಿಯೂ ಭ್ರಷ್ಟಾಚಾರದ ಸೋಂಕು ಇದೆ ಎಂಬ ಗಂಭೀರ ಆರೋಪ ಆಗಾಗ ಕೇಳಿ ಬರುತ್ತಿತ್ತು.

ಯಶಸ್ವಿನ ಆರೋಗ್ಯ ರಕ್ಷಾ ಯೋಜನೆ ಗ್ರಾಮಾಂತರ ಭಾಗದ ಜನರಿಗೆ ಹೆಚ್ಚಿನ ಅನುಕೂಲತೆಯನ್ನು ಸೃಷ್ಟಿಸಿದೆ. ಆರೋಗ್ಯದ ಸಮಸ್ಯೆಗಳು ಎದುರಾದಾಗ ಚಿಕಿತ್ಸೆಗೆ ಹಣವಿಲ್ಲದೆ ಸಾಕಷ್ಟು ಜನರು ಆಸ್ಪತ್ರೆ ನೋಡುವ ಮುನ್ನವೆ ಸಾವಿಗೀಡಾಗುವ ಸಾಧ್ಯತೆಗಳಿದ್ದವು. ಇದನ್ನು ಸೂಕ್ಷ ವಾಗಿ ಅರಿತಿದ್ದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ, ಎಚ್.ವಿಶ್ವನಾಥ್ ಅವರು ಸಹಕಾರ ಸಚಿವರಾಗಿದ್ದಾಗ ರೈತರಿಗಾಗಿ ಪ್ರತ್ಯೇಕವಾದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದರು. ಇದು ಸಾಕಷ್ಟು ರೈತರಿಗೆ ಅನುಕೂಲವಾಗಿತ್ತು. ನಂತರ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಿಂದ ಈ ಯೋಜನೆಯ ದುರುಪಯೋಗವಾಗುತ್ತಿದೆ ಎಂಬ ಆರೋಪ ಕೇಳಿಬಂದಾಗ ಹಿಂದಿನ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಅದಕ್ಕೆ ಪರ್ಯಾಯವಾಗಿ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಅದಕ್ಕೆ ಹೆಚ್ಚು ನಿಬಂಧಗಳಿದ್ದವು. ಇದರಿಂದಾಗಿ ರೈತರು ಅನಾರೋಗ್ಯಕ್ಕೆ ತುತ್ತಾದಾಗ ಚಿಕಿತ್ಸೆಗೆ ತೊಂದರೆ ಯಾಗುತ್ತಿತ್ತು. ಸದ್ಯ ಈಗ ಈ ಯೋಜನೆಗೆ ಮರುಚಾಲನೆ ದೊರಕಿದ್ದು, ರೈತರ ಆರೋಗ್ಯದ ಹಿತದೃಷ್ಟಿಯಿಂದ ಈ ಯೋಜನೆ ಸ್ವಾಗತಾರ್ಹವಾಗಿದೆ.

ನ.೧ರಿಂದ ಈಗಿನ ಸರ್ಕಾರ ಈ ಯೋಜನೆಯನ್ನು ಮರು ಆರಂಭಿ ಸಿದ್ದು, ಒಂದು ತಿಂಗಳ ಅಂತರದಲ್ಲಿ ಮೈಸೂರು ಭಾಗದಲ್ಲಿ ಸುಮಾರು ೭೫,೬೩೧ ಮಂದಿನೋಂದಣಿಯಾಗುವ ಮೂಲಕ ಯೋಜನೆಯ ಮರು ಜಾರಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಇದರೊಂದಿಗೆ ಮೈಸೂರು ಜಿಲ್ಲಾ ವ್ಯಾಪ್ತಿಗೆ ನೀಡಿದ್ದ ೧.೫೦ ಲಕ್ಷ ಗುರಿಯಲ್ಲಿ ಈಗಾಗಲೇ ೭೫ ಸಾವಿರಕ್ಕೂ ಅಽಕ ಮಂದಿ ನೋಂದಣಿಯಾಗಿದ್ದಾರೆ. ಇದರಿಂದ ಯಶಸ್ವಿನಿ ಯೋಜನೆ ಯಿಂದ ಇರುವ ಅನುಕೂಲತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಇದೆ ಎಂಬುದು ಮನದಟ್ಟಾಗುತ್ತದೆ.

ಆದರೆ, ಈ ಯೋಜನೆಯನ್ನು ಯಾವುದೇ ಖಾಸಗಿ ಆಸ್ಪತ್ರೆಗಳು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಸರ್ಕಾರದ ಕರ್ತವ್ಯವಾಗಿದೆ. ಹಿಂದೆ ಯೋಜನೆಯ ಲಾಭ ಪಡೆದಿದ್ದ ಕೆಲ ಖಾಸಗಿ ಆಸ್ಪತ್ರೆಗಳು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಹೆಚ್ಚಿನ ಪ್ರಮಾಣದ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಿ ಹಣ ದೋಚುವ ಕಾಯಕ ರೂಪಿಸಿಕೊಂಡಿದ್ದವು ಎಂಬ ಆರೋಪಗಳಿದ್ದವು. ಈ ಯೋಜನೆಯಡಿ ರಾಜ್ಯ ಸರ್ಕಾರವೇ ಫಲಾನುಭವಿಯ ಚಿಕಿತ್ಸಾ ವೆಚ್ಚವನ್ನುಭರಿಸುತ್ತದೆ ನಿಜ. ಆದರೆ, ಅದು ಜನರ ತೆರಿಗೆ ಹಣವೇ ಆಗಿರುತ್ತದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳು ಅನವಶ್ಯಕವಾಗಿ ತಪಾಸಣೆಗಳು, ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಮಾಡದೆ, ಯೋಜನೆ ಫಲಾನುಭವಿಯ ಕಾಯಿಲೆಗೆ ಅನುಗುಣವಾಗಿ ಸೂಕ್ತ ಚಿಕಿತ್ಸೆ ನೀಡಬೇಕು. ಇದರಿಂದ ರಾಜ್ಯಕ್ಕೂ ಒಳಿತು. ಆಸ್ಪತ್ರೆಗಳ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಉತ್ತಮ ಅಭಿಪ್ರಾಯ ಮೂಡುತ್ತದೆ.

ಅಲ್ಲದೆ, ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್‌ಗಳಿಗೆ ಕಡಿವಾಣ ಹಾಕಿ ಅವಶ್ಯವಿದ್ದರೆ ಮಾತ್ರ ಹೆಚ್ಚಿನ ತಪಾಸಣೆ ಮಾಡಬೇಕು ಎಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಸರ್ಕಾರ ನೀಡಬೇಕು. ಜೊತೆಗೆ ಇನ್ನೂ ಗ್ರಾಮಾಂತರ ಭಾಗಗಳ ರೈತರನ್ನು ಸಂಪರ್ಕಿಸಿ ಈ ಯೋಜನೆಯ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೋಡಿ ನೋಂದಣಿಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಗ್ರಾಮಾಂತರ ಭಾಗಕ್ಕೂ ಈ ಯೋಜನೆ ತಲುಪುವಂತೆ ಮಾಡಬೇಕು.

ಇನ್ನು ಕೊಡಗು, ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಯಶಸ್ವಿನಿ ಯೋಜನೆಗೆ ಕಡಿಮೆ ಸಂಖ್ಯೆಯಲ್ಲಿ ಜನರ ನೋಂದಣಿಯಾಗುತ್ತಿದ್ದು, ಸರ್ಕಾರ ಈ ಬಗ್ಗೆ ಕ್ರಮ ವಹಿಸಿ ವ್ಯಾಪಕ ಪ್ರಚಾರ ಮಾಡುವ ಜೊತೆಗೆ ನೋಂದಣಿಯನ್ನು ಮತ್ತಷ್ಟು ಸರಳೀಕರಣ ಮಾಡುವ ಬಗ್ಗೆ ಚಿಂತಿಸಬಹುದು. ಅದರಿಂದ ಇನ್ನಷ್ಟು ಜನರಿಗೆ ಯಶಸ್ವಿನಿ ವಿಮಾ ಯೋಜನೆಯ ಪ್ರಯೋಜನ ದೊರೆತಂತಾಗುತ್ತದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!