Mysore
28
few clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ಸಂಪಾದಕೀಯ : ವನ್ಯ ಸಂರಕ್ಷಣಾ ಕಾಯ್ದೆಯಿಂದ ಅತಂತ್ರರಾದ ಕಾಡಿನ ಮಕ್ಕಳು

ನಾಗರಿಕತೆಯ ನೆರಳಲ್ಲಿದ್ದರೂ ಅರಣ್ಯ ವಾಸಿಗಳಾಗಿದ್ದ ಸೋಲಿಗರು ಅತ್ತ ವನವಾಸಿಗಳೂ ಅಲ್ಲದೆ ಇತ್ತ ಗ್ರಾಮವಾಸಿಗಳೂ ಅಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಪ್ರಗತಿಪರ ಸಮಾಜದ ರೀತಿ ನೀತಿಗಳಿಗೆ ಒಗ್ಗಿಕೊಂಡಂತಿದ್ದರೂ ಸೋಲಿಗರ ಮೂಲ ಸೊಗಡನ್ನು ಉಳಿಸಿಕೊಂಡಿರುವ ಹಲವು ಕುಟುಂಬಗಳು ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ಸಂಕಷ್ಟ ಎದುರಿಸುತ್ತಿವೆ.
ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾವೇರಿ ವನ್ಯಜೀವಿ ವಲಯದಲ್ಲಿ ಬಹಳ ವರ್ಷಗಳಿಂದಲೂ ಸುಮಾರು ೪೫ ಸೋಲಿಗ ಕುಟುಂಬಗಳು ಮೂಲಸೌಕರ್ಯ ಹಾಗೂ ಮೂಲ ದಾಖಲಾತಿಗಳಿಲ್ಲದೆ ಸರ್ಕಾರಿ ಸೇವಾ ಸೌಲಭ್ಯಗಳನ್ನು ಪಡೆಯಲಾಗದೆ ಅನಾಥ ಬದುಕನ್ನು ಸಾಗಿಸುತ್ತಿವೆ.

ಮುತ್ತತ್ತಿ ಅರಣ್ಯದಲ್ಲಿ ಬರುವ ಸೋಲಿಗರ ದೊಡ್ಡಿ ಬಹಳ ಹಿಂದಿನಿಂದಲೂ ಗ್ರಾಪಂ ವ್ಯಾಪ್ತಿಯಲ್ಲಿದ್ದರೂ ಅತ್ತ ಕಾಡಿಗೂ ಸೇರದ ಇತ್ತ ನಾಡಿಗೂ ಸೇರದಂತಹ ಸನ್ನಿವೇಶದಲ್ಲಿಗೆ, ಇಲ್ಲಿನ ೪೫ಕ್ಕೂ ಹೆಚ್ಚು ಕುಟುಂಬಗಳಲ್ಲಿನ ಸದಸ್ಯರ ಬಳಿ ಸರಿಯಾದ ಮೂಲ ದಾಖಲಾತಿಗಳಿಲ್ಲ. ಇವರಿಗೆ ನಿವೇಶನ ನೀಡಲಾಗಿದೆ. ಆದರೂ ಇವರ ಬಳಿ ದಾಖಲಾತಿ ಇಲ್ಲ. ಇದರಿಂದಾಗಿ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಮೂಲ ದಾಖಲಾತಿಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಪಾನ್ಕಾರ್ಡ್, ಆಯುಷ್ಮಾನ್ ಭಾರತ, ಕಾರ್ಮಿಕರ ಕಾರ್ಡ್ ಇತರೆ ಯಾವುದೇ ರೀತಿಯ ದಾಖಲೆಗಳನ್ನು ಹೊಂದಲಾಗಿಲ್ಲ. ಪರಿಣಾಮ ಇವರಿಗೆ ಕುಡಿಯುವ ನೀರಿನ ಸೌಲಭ್ಯವಾಗಲಿ, ಶೌಚಾಲಯವಾಗಲಿ, ಇವರ ಮಕ್ಕಳ ಶೈಕ್ಷಣಿಕ ಸೌಲಭ್ಯವಾಗಲಿ ದಕ್ಕದಂತಾಗಿದೆ.

ಸೋಲಿಗರು ತಲತಲಾಂತರಗಳಿಂದ ಕಾಡಿನ ಉತ್ಪನ್ನಗಳಾದ ಜೇನುತುಪ್ಪ, ಕಳಲೆ, ಮೀನು, ಧೂಪ, ಸಾಂಬ್ರಾಣಿ, ಮಸಾಲೆ ಉತ್ಪನ್ನಗಳನ್ನು ನಂಬಿ ಬದುಕು ಕಂಡುಕೊಂಡವರು. ಆದರೆ ಪ್ರಸ್ತುತ ಅರಣ್ಯ ಸಂರಕ್ಷಣೆ, ವನ್ಯ ಸಂಪತ್ತು ಮತ್ತು ವನ್ಯ ಜೀವಿಗಳ ಹಾಗೂ ವನ್ಯ ಧಾಮಗಳ ಸಂರಕ್ಷಣಾ ಕಾಯ್ದೆಯಿಂದಾಗಿ ಕಾಡಿನೊಳಗೆ ಮನುಷ್ಯರ ಪ್ರವೇಶವನ್ನು ನಿರ್ಬಂಧಿಸಿದೆ. ಅರಣ್ಯವನ್ನು ನಂಬಿ ಬದುಕುವ ಸೋಲಿಗರ ಜೀವನ ಈಗ ಸಂಕಷ್ಟಕ್ಕೆ ಸಿಲುಕಿದೆ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಸಂಸ್ಕರಿಸಿ ಮತ್ತು ಅವುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದವರು ಈಗ ಅತಂತ್ರರಾಗಿದ್ದಾರೆ.
ಯಾವುದೇ ಉದ್ಯೋಗವಿಲ್ಲದೆ, ಕಾಡಂಚಿನ ಗ್ರಾಮಗಳಲ್ಲಿನ ಹೋಟೆಲ್ಗಳಲ್ಲಿ ಕೆಲಸ ಮಾಡುವಂತಾಗಿದೆ. ಇಲ್ಲಿನ ಹೋಟೆಲ್‌ಗಳಿಗೆ ಸೌದೆಗಳನ್ನು ನೀಡಿ ಒಂದಷ್ಟು ಹಣ ಸಂಪಾದಿಸುತ್ತಿದ್ದ ಸೋಲಿಗರು ಈಗ ಕಾಡಿನೊಳಗೆ ಹೋಗುವಂತಿಲ್ಲ.
ಹೋಟೆಲ್‌ಗಳು ಗ್ಯಾಸ್ ಸಿಲಿಂಡರ್ ಬಳಕೆಗೆ ಮುಂದಾದ ಮೇಲೆ ಸೋಲಿಗರು ತರುತ್ತಿದ್ದ ಸೌದೆಗೂ ಬೇಡಿಕೆಯಿಲ್ಲ. ಹಾಗಾಗಿ ಅಡುಗೆ ಮಾಡಲು ಅವಶ್ಯಕತೆ ಇರುವ ಪಾತ್ರೆಗಳನ್ನು ತೊಳೆದುಕೊಡುವುದು ಸೋಲಿಗರ ನಿತ್ಯ ಕಾಯಕವಾಗಿದೆ. ಕೃಷಿ ಮಾಡಲು ಜಮೀನಿಲ್ಲ, ಕೂಲಿ ಮಾಡಲು ಇಲ್ಲಿ ಜಮೀನ್ದಾರರೂ ಇಲ್ಲ. ಬೇರಾವ ವೃತ್ತಿಯೂ ಗೊತ್ತಿಲ್ಲದೆ ಸೋಲಿಗರು ಅಕ್ಷರಶಃ ದಿಕ್ಕುತೋಚದಂತಾಗಿದ್ದಾರೆ. ಇಲ್ಲಿ ಉಳಿದಿರುವುದು ಕೇವಲ ಅಂಗಡಿ, ಹೋಟೆಲ್ ಕೆಲಸಗಳು ಮಾತ್ರ. ಅದು ಕೂಡಾ ವಾರಾಂತ್ಯದ ದಿನಗಳಲ್ಲಿ ಸಿಗುತ್ತದೆ. ಇಲ್ಲವಾದರೆ ವಲಸೆ ಜೀವನ ಖಾಯಂ ಎನ್ನುವ ಸ್ಥಿತಿ.

ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಕಾರ್ಯಕ್ರಮದಡಿ ವನಧನ ಕೇಂದ್ರಗಳನ್ನು ಸ್ಥಾಪಿಸಿ ಮೌಲ್ಯವರ್ಧಿತ ಮಾರುಕಟ್ಟೆ ಸೃಷ್ಟಿಸುವುದರ ಮೂಲಕ ಬುಡಕಟ್ಟು ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ವನಧನ ವಿಕಾಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಸ್ವಸಹಾಯ ಗುಂಪಗಳು, ಗ್ರಾಮ ಅರಣ್ಯ ಸಮಿತಿ, ಲ್ಯಾಂಪ್ಸ್ ಮೂಲಕ ಈ ಮಾರುಕಟ್ಟೆಯನ್ನು ನಿರ್ವಹಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಗ್ರಾಮ ಅರಣ್ಯ ಸಮಿತಿ ಸದಸ್ಯರು ಈ ಮಾರುಕಟ್ಟೆಯ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶವನ್ನು ನೀಡಲಾಗುವುದು ಎಂದು ಸರ್ಕಾರ ಹೇಳುತ್ತದೆ. ಯೋಜನೆ ಅನುಷ್ಠಾನಕ್ಕೆ ಅನೇಕ ತೊಡಕುಗಳಿವೆ. ಅವುಗಳನ್ನು ನಿವಾರಿಸುವ ತಂಟೆಗೆ ಯಾರೂ ಹೋಗಿಲ್ಲ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ವಿಶೇಷ ಕೇಂದ್ರೀಯ ಯೋಜನೆಯ ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಕಾರ್ಯಕ್ರಮಗಳಡಿ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ ಹಾಗೂ ಹೈನುಗಾರಿಕೆ, ಹಸು, ಎಮ್ಮೆ, ಕರು ಘಟಕ, ಕುರಿ, ಮೇಕೆ ಘಟಕ, ಸರಕು ಸಾಗಾಣಿಕೆ ವಾಹನ ಮತ್ತು ಹಂದಿ ಸಾಕಾಣಿಕೆಗಾಗಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದಾಗಿದೆ. ಹಲವಾರು ವರ್ಷಗಳಿಂದಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ವರ್ಗಗಳ ಅಥವಾ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಬಹಳಷ್ಟು ಅನುದಾನ ನೀಡಲಾಗುತ್ತಿದೆ. ಅದು ದಾಖಲೆಯಲ್ಲಿದೆ. ವಿಪರ್ಯಾಸವೆಂದರೆ ಇಂತಹ ಅನುದಾನ ಮತ್ತು ಸೇವಾ ಸೌಲಭ್ಯಗಳು ಈ ಅಮಾಯಕ ಮುಗ್ಧ ಅರ್ಹ ಫಲಾನುಭವಿಗಳಿಗೆ ತಲುಪದಿರುವುದು ದಾಖಲಾತಿಗಳ ಕೊರತೆಯಿಂದ ಎನ್ನುವುದು ಅಷ್ಟೇ ಸತ್ಯ.

ಸರ್ಕಾರ ಕೂಡಲೇ ಈ ಜನರಿಗೆ ಅಗತ್ಯ ದಾಖಲೆ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ. ನಾಗರಿಕ ಸೌಲಭ್ಯದಿಂದ ವಂಚಿತರಾಗಿರುವ ಈ ಜನರು ಮುಖ್ಯವಾಹಿನಿಯೊಂದಿಗೆ ಸೇರಿಕೊಳ್ಳಲು, ನಾಗರಿಕ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡುವುದು ಸರ್ಕಾರದ ನೈತಿಕ ಕರ್ತವ್ಯ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಜನರ ಸಂಕಷ್ಟ ಬಗೆಹರಿಸಲು ಆಸಕ್ತಿ ವಹಿಸಿ ಮಾನವೀಯತೆ ಮೆರೆಯಬೇಕಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ