Mysore
27
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಆಂದೋಲನ ಓದುಗರ ಪತ್ರ : 19 ಶನಿವಾರ 2022

ಓದುಗರ ಪತ್ರ

ದಲಿತ ಸಮುದಾಯದವರು ಮುಖ್ಯಮಂತ್ರಿಯಾಗಲಿ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಬಹುದೊಡ್ಡ ಸಮಸ್ಯೆ ಎಂದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗಾಗಿ ಮುಸುಕಿನ ದುದ್ದಾಟ ನಡೆಸಿರುವುದು. ಇದು ಪಕ್ಷದ ವರಿಷ್ಠರಿಗೆ ಹಾಗೂ ನಿಷ್ಠಾವಂತ ಕಾಂಗ್ರೆಸ್ಸಿಗರಿಗೂ ತಲೆ ನೋವಿನ ಸಂಗತಿ. ಕಾಂಗ್ರೆಸ್ ಪಕ್ಷವು ದಲಿತ ಸಮುದಾಯಕ್ಕೆ ಸೇರಿದವರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಇದು ಸಕಾಲ. ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೂ ಒಳ್ಳೆಯ ಭವಿಷ್ಯ ವಿದೆ. ಸಾಮಾಜಿಕ ನ್ಯಾಯ ಪ್ರತಿಪಾದನೆಯನ್ನು ಅಕ್ಷರಃ ಪಾಲಿಸಿದಂತಾಗುತ್ತದೆ.

– ಕೆ.ಎಸ್.ಚಿಕ್ಕೇಗೌಡ, ಗಂಗೋತ್ರಿ ಬಡಾವಣೆ, ಮೈಸೂರು.


ಪುಣ್ಯಕೋಟಿಗೆ ಒತ್ತಡ ವೇಕೆ ?

ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಆದರೆ ಆ ಯೋಜನೆಗೆ ತಗಲುವ ವೆಚ್ಚಕ್ಕೆ ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡಲು ಮುಂದಾಗಿದೆ. ಆ ಯೋಜನೆಗೆ ಖರ್ಚು ವೆಚ್ಚವನ್ನ ನೌಕರರಿಂದ ವಸೂಲಿ ಮಾಡುವಷ್ಟು ಸರ್ಕಾರದ ಬೊಕ್ಕಸ ಖಾಲಿ ಆಗಿದೆಯೇ? ಆರ್ಥಿಕ ಮುಗ್ಗಟ್ಟು ಉಂಟಾಗಿದೆಯೇ? ಸುಮಾರು ೫ ಲಕ್ಷಕ್ಕೂ ಹೆಚ್ಚು ಸರಕಾರಿ ನೌಕರರನ್ನು ಹೊಂದಿರುವ ರಾಜ್ಯ ಸರ್ಕಾರ, ವಿವಿಧ ಶ್ರೇಣಿ ಅನುಗುಣವಾಗಿ ಅಂದಾಜು ಲೆಕ್ಕ ತಲಾ ೨೦೦೦ ರೂ. ಎಂದು ಪರಿಗಣಿಸಿದರೆ ೧೦೦ ಕೋಟಿ ರೂ.ಗಳಿಗೂ ಅಧಿಕ ಸಂಗ್ರಹವಾಗುತ್ತದೆ. ಇಂತಹ ಯೋಜನೆಗಳನ್ನು ತರಾತುರಿಯಲ್ಲಿ ಜಾರಿ ಮಾಡುವ ಸರ್ಕಾರ ೭ನೇ ವೇತನ ಆಯೋಗದ ಪರಿಷ್ಕರಣೆಗೆ ಮಾತ್ರ ವಿಳಂಬ ನೀತಿ ಅನುಸರಿಸುತ್ತಿದೆ.

-ಸಾಗರ್ ದ್ರಾವಿಡ್, ಹಿರಿಯೂರು.


ವಾಟಾಳ್ ನಾಗರಾಜ್‌ರಂತವರು ಆಯ್ಕೆ ಆಗಲಿ!

ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಕಾರ್ಯತಂತ್ರ ರೂಪಿಸಿರುವ ನಡುವೆಯೇ ಕನ್ನಡದ ಕಟ್ಟಾಳು ರಾಜ್ಯ ವಿಧಾನಸಭೆಗೆ ಪ್ರವೇಶಿಸುವ ಅಗತ್ಯ ಖಂಡಿತ ಇದೆ. ಕನ್ನಡಪರ ಹೋರಾಟಗಾರ, ನಾಡು ನುಡಿಗಾಗಿ ತಮ್ಮ ರಾಜಕೀಯ ಜೀವನವನ್ನೇ ಮುಡಿಪಾಗಿಟ್ಟ, ಚಳುವಳಿ ಎಂದರೆ ತಟ್ಟನೆ ನೆನಪಾಗುವ ವ್ಯಕ್ತಿ ವಾಟಾಳ್ ನಾಗರಾಜ್. ಅವರಂಥ ಕ್ರಿಯಾಶೀಲ ಹೋರಾಟ ಮನೋಭಾವದ ವ್ಯಕ್ತಿತ್ವದವರು ಸದನ ಪ್ರವೇಶಿಸಲಿ.

– ಅನಿಲ್ ಕುಮಾರ್, ನಂಜನಗೂಡು.


ಭಾಷಾ ಪ್ರೇಮ: ಕನ್ನಡಿಗರು ಬಹು ಹಿಂದೆ?

ತಮಿಳರ , ಮರಾಠಿಗರ ಮತ್ತು ಬೆಂಗಾಲಿಗಳ ಭಾಷಾ ಪ್ರೇಮ ಉತ್ಕಟ ಎನ್ನುವುದರಲ್ಲಿ ಸಂಶಯವಿಲ್ಲ. ಆ ರಾಜ್ಯಗಳಿಗೆ ಹೋವವರು ಆರೇ ತಿಂಗಳಿನಲ್ಲಿ ಅಲ್ಲಿನ ಭಾಷೆಗಳನ್ನು ಕಲಿಯುತ್ತಾರೆ ಎನ್ನುವುದಕ್ಕಿಂತ ಅಲ್ಲಿಯವರು ಕಲಿಸುತ್ತಾರೆ ಎನ್ನುವುದು ಸೂಕ್ತ. ಅದರೆ, ಭಾಷಾಪ್ರೇಮದ ನಿಟ್ಟಿನಲ್ಲಿ ಕನ್ನಡಿಗರು ಬಹಳ ಹಿಂದೆ. ಅನ್ಯ ಭಾಷಿಕರ ಎದುರು ತಮ್ಮ ಭಾಷೆಯಲ್ಲಿ ಮಾತನಾಡಲು ಕನ್ನಡಿಗರು ಹಿಂಜರಿಯುತ್ತಾರೆ , ಒಂದು ರೀತಿಯ ಮುಜುಗರ ಮತ್ತು ಕೀಳರಿಮೆಯನ್ನು ಅನುಭವಿಸುತ್ತಾರೆ ಎನ್ನುವುದು ಸಾಮಾನ್ಯ ಆಭಿಪ್ರಾಯ. ಇದರಲ್ಲಿ ಸತ್ಯವಿಲ್ಲದಿಲ್ಲ. ಬೆಂಗಳೂರಿನ ಬೀದಿಯಲ್ಲಿ ಯಾರಾದರೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದರೆ, ಅವರು ಕನ್ನಡಿಗರು ಇರಬೇಕು ಎಂದು ತಮಾಷೆ ಮಾಡುತ್ತಾರೆ. ಕನ್ನಡಿಗರ ಭಾಷಾ ಪ್ರೇಮ ನವೆಂರ್ಬ ತಿಂಗಳಿನಲ್ಲಿ ಒಂದೆರಡು ದಿನಗಳಿಗೆ ಸೀಮಿತವಾಗುವುದು ದುದೈವ.

-ರಮಾನಂದ ಶರ್ಮಾ, ಬೆಂಗಳೂರು .


ಕಾರ್ಪೊರೆಟ್ ಹಿತ

ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳು ಪ್ರಧಾನಿ ಮೋದಿ ಅವರನ್ನು ಕೆಂಪೇಗೌಡರಿಗೆ ಹೋಲಿಸಿ ಹೊಗಳಿದ್ದಾರೆ. ಭಾರತದ ಆಹಾರ ಭದ್ರತೆ ಮತ್ತು ರೈತ ಬದುಕನ್ನು ನಾಶಗೊಳಿಸಿ ಕೃಷಿ ಕಾನೂನು ಮಾಡಿ ,ಪ್ರತಿಭಟಿಸಿದ ರೈತರ ಹೋರಾಟ ಮುರಿಯಲು ಎಲ್ಲಾ ಅನಾಗರಿಕ ಕೃತ್ಯಗಳನ್ನು ಬಳಸಿದವರು ಮೋದಿಯವರು . ಇತ್ತ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಗ್ರಾಮಗಳ ಗೋಮಾಳಗಳನ್ನು ಆರ್‌ಎಸ್‌ಎಸ್ ನಂತಹ ಸಂಘಟನೆಗಳಿಗೆ ಪರಭಾರೆ ಮಾಡಲು ಹೊರಟಿದೆ. ಎಮ್ಮೆ ದನಗಳನ್ನು ಹದಿಮೂರು ವರ್ಷ ತುಂಬುವ ಮೊದಲು ಮಾರದಂತೆ ಅಡ್ಡಿ ಮಾಡುವ ಕಾನೂನು ಮಾಡಿದೆ. ಗ್ರಾಮೀಣ ಸಮುದಾಯಗಳ ಬೇರು ಕಿತ್ತು ಅವರು ನಗರ ಪ್ರದೇಶಗಳತ್ತ ಗುಳೆ ಹೋಗುವಂತಹ ಕಾನೂನುಗಳ ವಿರುದ್ಧ ದ್ವನಿ ಎತ್ತದೆ, ತಮ್ಮ ಒಕ್ಕಳುಗಳ ಭಕ್ತ ಸಮುದಾಯಗಳ ಸಂಸ್ಕೃತಿ ರಕ್ಷಿಸದ ಚುಂಚನಗಿರಿ ಶ್ರೀಗಳು ಕಾರ್ಪೊರೇಟ್ ಸಮುದಾಯದ ಹಿತಕಾಯಲು ನಿಂತಿದ್ದಾರೆಯೇ?

-ಉಗ್ರನರಸಿಂಹೇ ಗೌಡ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!