Light
Dark

ಆಂದೋಲನ ಓದುಗರ ಪತ್ರ: 21 ಮಂಗಳವಾರ 2023

ಮೋದಿ ಜನಸಾಮಾನ್ಯರೊಂದಿಗೂ ಚರ್ಚೆ ನಡೆಸಲಿ

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ಕೆಲವು ಕ್ರಿಕೆಟ್ ಆಟಗಾರರು ಹಾಗೂ ಚಲನಚಿತ್ರ ನಟ-ನಟಿಯರನ್ನು ಮಾತ್ರ ಆಹ್ವಾನಿಸಿ ಚರ್ಚಿಸುತ್ತಾರೆ. ಅವರೊಂದಿಗೆ ಮಾತ್ರ ಔತಣಕೂಟ ಆಯೋಜಿಸಿ, ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಮಾತುಕತೆ ನಡೆಸುತ್ತಾರೆ. ಅಲ್ಲದೆ ಕ್ರಿಕೆಟ್ ಮತ್ತು ಸಿನಿಮಾ ರಂಗದ ಅಭಿವೃದ್ಧಿ ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಿರುವುದೂ ವರದಿ ಯಾಗಿದೆ. ವಿವಿಧ ಕ್ಷೇತ್ರಗಳ ಬಗ್ಗೆ ಅವರಿಗೆ ಆಸಕ್ತಿ ಇರುವುದು ಅಭಿನಂದನಾರ್ಹ ವಾಗಿದೆ. ಆದರೆ, ದೇಶದ ಜನಸಾಮಾನ್ಯರನ್ನೂ ಅವರು ಭೇಟಿ ಮಾಡಿ ಅವರ ಸಮಸ್ಯೆಗಳನ್ನೂ ಆಲಿಸಬೇಕಲ್ಲವೇ? ಮೋದಿಯವರು ಜನಸಾಮಾ ನ್ಯರನ್ನೂ ಆಹ್ವಾನಿಸಿ ಅವರ ದಿನನಿತ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಬೇಡಿಕೆಗಳು ಸಾರ್ವಜನಿಕರ ಬಳಿ ಇದ್ದು, ಅವುಗಳನ್ನೂ ಮೋದಿಯವರು ಆಲಿಸಿ ಪರಿಹಾರ ಸೂಚಿಸಬೇಕಿದೆ. ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ ಆಶ್ವಾಸನೆಗಳೇನು? ಅವುಗಳಲ್ಲಿ ಎಷ್ಟು ಯೋಜನೆಗಳು ಜನರಿಗೆ ತಲುಪಿವೆ? ಕೋವಿಡ್ ಸಂದರ್ಭದಲ್ಲಿ ಜಾರಿಯಾದ ಯೋಜನೆಗಳಲ್ಲಿ ಎಷ್ಟು ಜನರ ಉಪಯೋಗಕ್ಕೆ ಬಂದಿವೆ? ಎಂಬ ವಿಚಾರಗಳ ಕುರಿತು ಮೋದಿಯವರು ಜನಸಾಮಾನ್ಯರೊಂದಿಗೆ ಚರ್ಚಿಸಬೇಕಿದೆ. ಆದ್ದರಿಂದ ಅವರು ಸೆಲೆಬ್ರಿಟಿಗಳನ್ನು ಭೇಟಿ ಮಾಡುವ ಜೊತೆಗೆ ಸಾಮಾನ್ಯ ಜನರ ಅಹವಾಲುಗಳನ್ನೂ ಕೇಳಿದರೆ ಅವರ ಕಾರ್ಯಕ್ರಮಗಳಿಗೂ ಹೆಚ್ಚಿನ ತೂಕ ಬರಲಿದೆ. ಸೆಲೆಬ್ರಿಟಿಗಳಷ್ಟೇ ಸಾರ್ವಜನಿಕರಿಗೂ ಪ್ರಾಮುಖ್ಯತೆಯನ್ನು ನೀಡಲಿ.

ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು


ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಿ

ಮೈಸೂರು ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ನಗರ ಬಸ್ ನಿಲ್ದಾಣವು ಸಾಕಷ್ಟು ಅವ್ಯವಸ್ಥೆಗಳಿಂದ ಕೂಡಿದ್ದು, ಅನೈರ್ಮಲ್ಯ ವಾತಾವರಣದಿಂದಾಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಮೈಸೂರು ದೇಶದ ಸ್ವಚ್ಛ ನಗರಿಗಳಲ್ಲಿ ಒಂದಾಗಿದ್ದು, ನಗರ ಬಸ್ ನಿಲ್ದಾಣದಲ್ಲಿ ಮಾತ್ರ ಈ ಸ್ವಚ್ಛತೆ ಎಂಬುದು ದೂರದ ಮಾತಾಗಿದೆ. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸ ಪ್ರಯಾಣಿಕರನ್ನು ಸ್ವಾಗತಿಸುತ್ತದೆ. ಇದರೊಂದಿಗೆ ಹುಲ್ಲಹಳ್ಳಿ, ಇಲವಾಲ, ಎಚ್.ಡಿ. ಕೋಟೆಯ ಬಸ್ ನಿಲುಗಡೆಯ ಪ್ಲಾಟ್ ಫಾರ್ಮ್‌ಗಳಲ್ಲಿ ಕಸ ಮಾತ್ರವಲ್ಲದೇ ಅಲ್ಲಿನ ರಸ್ತೆಯೂ ಹಳ್ಳಗಳಿಂದ ಕೂಡಿದೆ. ಮಳೆ ಗಾಲದಲ್ಲಿ ಆ ಗುಂಡಿಗಳಲ್ಲಿ ನೀರು ನಿಂತು ಬಸ್ ಬಂದಾಗ ಆ ನೀರು ಪ್ಲಾಟ್ ಫಾರ್ಮ್‌ನಲ್ಲಿನ ಪ್ರಯಾಣಿಕರ ಮೇಲೆ ಹಾರುತ್ತದೆ. ಇನ್ನು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲದ ಪರಿಣಾಮ ಪ್ರಯಾಣಿಕರ ಪೈಕಿ ಬಹುಪಾಲು ಮಂದಿ ನಿಂತೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಂತೂ ಹೇಳ ತೀರದು. ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರು ತ್ತದ್ದು, ಪ್ರಯಾಣಿಕರು ಶೌಚಾಲಯನ್ನು ಬಳಸಲು ಮುಜುಗರಪಡುವ ಸ್ಥಿತಿ ಅಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಿ ಸೂಕ್ತ ನಿರ್ವ ಹಣೆಯೊಂದಿಗೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಪ್ರಯಾಣಿಕರಿಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡ ಬೇಕು. ಆ ಮೂಲಕ ಸ್ವಚ್ಛನಗರ ಎಂಬ ಹೆಗ್ಗಳಿಕೆಯನ್ನು ಉಳಿಸಬೇಕಾಗಿದೆ.

ಪ್ರದೀಪ್ ಸೋಗಳ್ಳಿ , ಪತ್ರಿಕೋದ್ಯಮ ವಿಭಾಗ , ಮಾನಸಗಂಗೋತ್ರಿ, ಮೈಸೂರು 


ದೂರದೃಷ್ಟಿ ಇಲ್ಲದ, ರೈತರ ಪರವಿಲ್ಲದ ಬಜೆಟ್!

ಬಸವರಾಜ ಬೊಮ್ಮಾಯಿಯವರು ಮಂಡಿಸಿದ 2023-24ನೇ ಸಾಲಿನ ರಾಜ್ಯ ಬಜೆಟ್ ಯಾವುದೇ ದೂರದೃಷ್ಟಿಯಿಲ್ಲದ ಹಾಗೂ ರೈತರ ಪರವಾದ ಅಭಿವೃದ್ಧಿ ಶೀಲ ಯೋಜನೆಗಳಿಲ್ಲದ ಬಜೆಟ್ ಆಗಿದೆ. ಆದರೆ ಶೂನ್ಯ ಬಡ್ಡಿದರದ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಏರಿಸಿರುವುದು ಸ್ವಾಗತಾರ್ಹವಾದರೂ ಶೇ.87 ಸಣ್ಣ ಇಡುವಳಿದಾರರಿಗೆ ಉಪಯೋಗವಾ ಗುವುದಿಲ್ಲ. 3.07 ಲಕ್ಷ ಕೋಟಿ ರೂ.ಗಳ ಬಜೆಟ್‌ನಲ್ಲಿ ನೀರಾವರಿಗೆ ಕೇವಲ ಶೇ.6.5ರಷ್ಟನ್ನು ಮೀಸಲಿಡಲಾಗಿದೆ. ಆದರೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶೇ.14 ರಿಂದ ಶೇ.15ರಷ್ಟರವರೆಗೆ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ಅನುದಾನ ಮೀಸಲಿಡ ಲಾಗಿದೆ. ನಮ್ಮಲ್ಲಿ ಕೃಷಿ, ತೋಟಗಾರಿಕೆಗೆ ಕೇವಲ ಶೇ.11ರಷ್ಟನ್ನು ಮೀಸಲಿಡಲಾಗಿದ್ದು, ಇದರಿಂದ ಕೃಷಿಕರ ಪರವಾಗಿಲ್ಲದ ಬಜೆಟ್ ಎಂಬುದು ತಿಳಿಯುತ್ತದೆ. ರೈತರು ಸಾಲದ ಹೊರೆಯಿಂದ ಹೊರಬರಲು ಯಾವುದೇ ಯೋಜನೆಗಳಿಲ್ಲ. ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ, ಹೆಸರು ಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 6650 ಕೋಟಿ ರೂ.ಗಳು, ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ.ಗಳ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ಭದ್ರತೆ, ಕೃಷಿ ಯಾಂತ್ರೀಕರಣ ಉತ್ತೇಜಿಸಲು 2037 ಕೋಟಿ ರೂ., ತೋಟಗಾರಿಕೆ ಹಾಗೂ ರೇಷ್ಮೆ ಕೃಷಿ ಪ್ರೋತ್ಸಾಹಿಸುವ ಉದ್ದೇಶಕ್ಕಾಗಿ 5245 ಕೋಟಿ ರೂ.ನೀಡಲಾಗಿದೆ, ರೈತ ವಿದ್ಯಾನಿದಿ ಯೋಜನೆಯಡಿ 10.32 ಲಕ್ಷ ವಿದ್ಯಾರ್ಥಿಗಳಿಗೆ 125 ಕೋಟಿ ರೂ.ಗಳ ಅನುದಾನ ನೀಡಲಾಗಿದೆ, ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ 2900 ಕೋಟಿ ರೂ.ನೀಡಲಾಗಿದ್ದು, ನೆರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆ ಪ್ರಮಾಣದಲ್ಲಿರುವುದರಿಂದ ದೂರದೃಷ್ಟಿಯಿಲ್ಲದ ಬಜೆಟ್ ಎಂದು ಹೇಳಬೇಕಾಗಿದೆ.

ಮದನ್ ಹಾದನೂರು


ನಜರ್‌ಬಾದ್ ವ್ಯಾಪ್ತಿಯಲ್ಲಿ ಕಸ ತೆರವುಗೊಳಿಸಿ

ಮೈಸೂರಿನ ನಜರ್‌ಬಾದ್ ಮೊಹಲ್ಲಾ ವ್ಯಾಪ್ತಿಯ ಇಟ್ಟಿಗೆಗೂಡಿನಲ್ಲಿರುವ ದೇವಸ್ಥಾನದ ಬಳಿಯ ರಸ್ತೆ ಬದಿಯಲ್ಲಿಯೇ ಸಾಕಷ್ಟು ಕಸ ಸಂಗ್ರಹವಾಗಿದ್ದು, ನಗರ ಪಾಲಿಕೆಯ ವತಿಯಿಂದ ಸರಿಯಾಗಿ ಕಸ ವಿಲೇವಾರಿ ಮಾಡದ ಪರಿಣಾಮ ಕಸದ ರಾಶಿಯ ನಡುವೆಯೇ ಜನರು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಸದ ರಾಶಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್, ಕೊಳೆತ ಆಹಾರ ಪದಾರ್ಥಗಳು ಸಂಗ್ರಹವಾಗಿದ್ದು, ದುರ್ವಾಸನೆ ಬೀರುತ್ತಿದೆ. ಗಾಳಿ ಬೀಸಿದಂತೆಲ್ಲ ಪ್ಲಾಸ್ಟಿಕ್ ರಸ್ತೆಗೆ ಹರಡುತ್ತಿದ್ದು, ಇದನ್ನು ತೆರವು ಮಾಡಿಸಲು ಸೂಕ್ತ ಕ್ರಮವಹಿಸಬೇಕಿದೆ. ಈ ಕಸದ ರಾಶಿಯಲ್ಲಿ ಆಹಾರ ಅರಸಿ ಬರುವ ಹಸು, ಬೀದಿ ನಾಯಿಗಳಿಗೂ ಅಲ್ಲಿರುವ ಪ್ಲಾಸ್ಟಿಕ್ ಮತ್ತು ಕೊಳೆತ ಆಹಾರ ಪದಾರ್ಥಗಳಿಂದ ಅಪಾಯವಾಗುವ ಸಾಧ್ಯತೆಗಳಿವೆ. ಮೈಸೂರು ಸ್ವಚ್ಛನಗರಿ ಎಂಬುದು ಕೆಲ ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ ನಗರ ಪಾಲಿಕೆಯವರು ಕೂಡಲೇ ಈ ಕಸ ತೆರವುಗೊಳಿಸಿ, ನಗರದೆಲ್ಲೆಡೆ ಸ್ವಚ್ಛತೆ ಕಾಪಾಡಬೇಕಿದೆ.

ವಿ.ಪವಿತ್ರ, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ