ಮೈಸೂರು-ಬೆಂಗಳೂರು ದಶಪಥ ಟೋಲ್ ಮೊತ್ತ ಕಡಿಮೆಗೊಳಿಸಿ
ಮೈಸೂರು- ಬೆಂಗಳೂರು ದಶಪಥ ರಸ್ತೆಯು ಮುಂದಿನ ತಿಂಗಳು ಉದ್ಘಾಟನೆಯಾಗುತ್ತಿರುವುದು ಸಂತಸದ ವಿಚಾರವಾಗಿದೆ. ಈ ದಶಪಥ ರಸ್ತೆಯ ತ್ವರಿತ ನಿರ್ಮಾಣಕ್ಕಾಗಿ ಸಂಸದ ಪ್ರತಾಪ್ ಸಿಂಹರವರು ಶ್ರಮವಹಿಸಿದ್ದು, ಅವರನ್ನು ಅಭಿನಂದಿಸಲೇ ಬೇಕು. ಆದರೆ, ಈ ರಸ್ತೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬರಲು ಎರಡೂ ಕಡೆಯಿಂದ ಟೋಲ್‌ನಲ್ಲಿ 250 ರೂ. ಮೊತ್ತ ಪಾವತಿಸಬೇಕು ಎಂದು ತಿಳಿದು ಅಚ್ಚರಿಯಾಯಿತು. ಈಗಾಗಲೇ ಮೈಸೂರಿನಿಂದ ಬೆಂಗಳೂರಿಗೆ ಯಾವುದೇ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರೂ ಕೇವಲ ಎರಡು ಗಂಟೆ ಹದಿನೈದು ನಿಮಿಷಗಳಲ್ಲಿ ಬೆಂಗಳೂರನ್ನು ತಲುಪಬಹುದಾಗಿದೆ. ಆದರೆ ರಸ್ತೆಯ ಮೂಲಕ ಬೆಂಗಳೂರನ್ನು ತಲುಪಲು ಇದಕ್ಕಿಂತಲೂ ಹೆಚ್ಚಿನ ಸಮಯವೇ ಬೇಕಾಗುತ್ತಿದ್ದು, ಸಾರ್ವಜನಿಕರು ರಸ್ತೆಯ ಮೂಲಕ ಬೆಂಗಳೂರಿಗೆ 250 ರೂ. ಟೋಲ್ ಕೊಟ್ಟು ಹೋಗಿ ಬರುವುದರ ಬದಲು ಅದೇ ದರದಲ್ಲಿ ಇಬ್ಬರು ಪ್ರಯಾಣಿಕರು ಆರಾಮವಾಗಿ ರೈಲಿನಲ್ಲಿಯೇ ಪ್ರಯಾಣಿಸಬಹುದಾಗಿದೆ. ದಶಪಥ ರಸ್ತೆಯಲ್ಲಿನ ಟೋಲ್ ದರವನ್ನು ದುಬಾರಿಪಡಿಸಿದರೆ ಅದು ಸಾಮಾನ್ಯ ಜನರ ಉಪಯೋಗಕ್ಕೆ ಬರುವುದು ಹೇಗೆ ಎಂಬುದನ್ನು ಗಮನಿಸಬೇಕಿದೆ. ದುಬಾರಿ ಟೋಲ್ ಕಟ್ಟಿ ಹೋಗುವ ಐಷಾರಾಮಿ ಕಾರುಗಳಿಗೆ ಮಾತ್ರವಲ್ಲದೆ ಈ ರಸ್ತೆ ಪ್ರತಿಯೊಬ್ಬ ಸಾರ್ವಜನಿಕರ ಉಪಯೋಗಕ್ಕೂ ಬರುವಂತಾಗಬೇಕು. ಆದ್ದರಿಂದ ಮೈಸೂರು- ಬೆಂಗಳೂರು ದಶಪಥ ರಸ್ತೆಯ ಟೋಲ್ ದರವನ್ನು 100 ರೂ.ಗಳಿಗೆ ಸಿಮೀತಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
–ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು
ದ್ವಿಚಕ್ರ ವಾಹನದ ಪಾರ್ಕಿಂಗ್ ಸ್ಥಳವಾಗಿರುವ ಡಿಸಿ ಕಚೇರಿ!
ಮೈಸೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದಲ್ಲಿ ಇತ್ತೀಚೆಗೆ ನಿಲುಗಡೆಯಾಗುವ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಚೇರಿಯು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಪರಿವರ್ತನೆಯಾಗಬಹುದು ಎಂದು ಸಾರ್ವಜನಿಕರು ಟೀಕಿಸುವಂತಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಒಳಭಾಗದಲ್ಲಿ ಹಾಗೂ ಸುತ್ತಲೂ ಇರುವ ಕಾರಿಡಾರನ್ನು ಅನೇಕರು ತಮ್ಮ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಬಳಸಿಕೊಳ್ಳುತ್ತಿದ್ದು, ಇದರಿಂದ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಅದರಲ್ಲೂ ಸಾರ್ವಜನಿಕರು ಓಡಾಡುವ ಮಧ್ಯಭಾಗದಲ್ಲಿ ಹಾಗೂ ಕೆಲ ಕಚೇರಿಗಳ ಪ್ರವೇಶ ಬಾಗಿಲುಗಳೆದುರೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದು, ಹೀಗಾದರೆ ಸಾರ್ವಜನಿಕರು ಓಡಾಡುವುದು ಹೇಗೆ? ಕಟ್ಟಡದ ಕೆಲಭಾಗಗಳಲ್ಲಿ ವಾಹನ ನಿಲುಗಡೆಯಿಂದಾಗಿ ನೆಲ, ಗೋಡೆ ಹಾಗೂ ಮೆಟ್ಟಿಲುಗಳು ಸಂಪೂರ್ಣ ಹಾಳಾಗುತ್ತಿದ್ದು, ಕಟ್ಟಡದ ಸೌಂದರ್ಯ ಹಾಳಾಗುತ್ತಿದೆ. ಈ ವಿಚಾರದಲ್ಲಿ ಕಚೇರಿಯ ರಕ್ಷಣಾ ಸಿಬ್ಬಂದಿಗಳೂ ಕಂಡೂ ಕಾಣದಂತಿದ್ದಾರೆ. ಈಗಾಗಲೇ ನಗರದಲ್ಲಿ ಲ್ಯಾಂಡ್ಸ್ ಡೌನ್ ಕಟ್ಟಡ ಸೇರಿದಂತೆ ಅನೇಕ ಪಾರಂಪರಿಕ ಕಟ್ಟಡಗಳು ಅವನತಿ ಕಂಡಿವೆ. ಅವುಗಳ ಸಾಲಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡವೂ ಸೇರುವ ಮೊದಲೇ ಸಂಬಂಧಪಟ್ಟವರು ಎಚ್ಚರವಹಿಸಿ, ಕಟ್ಟಡವನ್ನು ಉಳಿಸಲು ಕ್ರಮ ಕೈಗೊಳ್ಳಬೇಕಿದೆ.
–ನಿಡ್ತ ಉಮಾಪತಿ, ಕುವೆಂಪು ನಗರ, ಮೈಸೂರು.
ಸೂಚನಾ ಫಲಕಗಳು ನಿಯಮಿತ ಎತ್ತರದಲ್ಲಿರಲಿ
ಮೈಸೂರು ನಗರದ ಹೃದಯ ಭಾಗವಾದ ಸಿದ್ದಪ್ಪ ವೃತ್ತದ ಬಳಿಯ ಬಸ್ ನಿಲ್ದಾಣದಲ್ಲಿ ಕಬ್ಬಿಣದ ಸೂಚನಾ ಫಲಕವನ್ನು ಅಳವಡಿಸಿದ್ದು, ಅದು ತೀರಾ ಕೆಳಗಿರುವುದರಿಂದ ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. ಮೊಬೈಲ್ ನೋಡಿಕೊಂಡು ನಡೆದು ಬರುವಾಗ ಅಥವಾ ಆತುರದಲ್ಲಿ ಓಡುವಾಗ ಕಬ್ಬಿಣದಿಂದ ಅಳವಡಿಸಿರುವ ಸೂಚನಾ ಫಲಕವು ತಲೆಗೆ ಬಡಿಯುವ ಸಾಧ್ಯತೆ ಹೆಚ್ಚಾಗಿದೆ. ನಗರದ ಸಾಕಷ್ಟು ಭಾಗಗಳಲ್ಲಿ ಈ ರೀತಿ ತೀರಾ ಕೆಳಭಾಗದಲ್ಲಿ ಅವೈಜ್ಞಾನಿಕವಾಗಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅದನ್ನು ಗಮನಿಸದೆ ಜನರು ಸಾಕಷ್ಟು ಬಾರಿ ತಲೆಗೆ ತಾಗಿಸಿಕೊಂಡು ಗಾಯಗೊಂಡಿದ್ದಾರೆ. ಈ ಬಗ್ಗೆ ನಗರಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಫಲಕಗಳನ್ನು ಅಳವಡಿಸುವಾಗ ಅವು ನಿಯಮಿತ ಎತ್ತರದಲ್ಲಿರುವುದು ಸೂಕ್ತ. ಟಿ.ಕೆ.ಲೇಔಟ್‌ನ ಮಾರುತಿ ಟೆಂಟ್ ಬಳಿ ಇರುವ ತರಳಬಾಳು ಶಾಲೆಯ ಬಳಿಯೂ ಇಂತಹದ್ದೇ ಸೂಚನಾ ಫಲಕವಿದೆ. ಇಲ್ಲಿ ಶಾಲಾ ವಿದ್ಯಾರ್ಥಿಗಳು ಹೆಚ್ಚಾಗಿ ಓಡಾಡುತ್ತಿದ್ದು, ಅವರಿಗೆ ಅಪಾಯವನ್ನು ಉಂಟು ಮಾಡುವ ಸಂಭವ ಇದೆ. ಇಂತಹ ಸೂಕ್ಷ ವಿಚಾರವನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿ ಎಲ್ಲೆಲ್ಲಿ ಈ ರೀತಿಯಾಗಿ ಕೆಳಭಾಗದಲ್ಲಿ ಸೂಚನಾ ಫಲಕಗಳು ಇವೆಯೋ ಅವುಗಳನ್ನು ಕನಿಷ್ಠ 7 ಅಡಿಗಳ ಎತ್ತರದಲ್ಲಿ ಅಳವಡಿಸುವುದು ಅಗತ್ಯ. ಈ ಕಾರ್ಯವನ್ನು ನಗರಪಾಲಿಕೆ ಅಧಿಕಾರಿಗಳು ಕೂಡಲೇ ಕೈಗೊಳ್ಳಬೇಕು.
–ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು
ನ್ಯಾಯಮೂರ್ತಿ ಹುದ್ದೆಗಳ ಭರ್ತಿ ಶ್ಲಾಘನೀಯ
ಅನೇಕ ವರ್ಷಗಳ ನಂತರ ಸುಪ್ರೀಂ ಕೋರ್ಟಿಗೆ ಮಂಜೂರಾಗಿರುವ ಎಲ್ಲ 34 ನ್ಯಾಯಮೂರ್ತಿಗಳ ಹುದ್ದೆಗಳನ್ನೂ ಕೇಂದ್ರ ಸರ್ಕಾರ ಭರ್ತಿ ಮಾಡಿರುವುದು ಶ್ಲಾಘನೀಯ. ನ್ಯಾಯಮೂರ್ತಿಗಳ ಕೊರತೆಯಿಂದಾಗಿ ಸಾಕಷ್ಟು ವರ್ಷಗಳಿಂದ ಸುಪ್ರೀಂ ಕೋರ್ಟಿನಲ್ಲಿದ್ದ ಅನೇಕ ಪ್ರಕರಣಗಳನ್ನು ಇತ್ಯರ್ಥವಾಗದೆ ಮುಂದೂಡಲಾಗುತ್ತಿತ್ತು. ವಿಚಾರಣೆ ವಿಳಂಬವಾಗಿ ಕಕ್ಷಿದಾರರಿಗೆ ಪ್ರತಿಬಾರಿಯೂ ಕೋರ್ಟ್‌ಗೆ ಅಲೆದಾಡುವ ಅನಿವಾರ್ಯತೆ ಎದುರಾಗಿತ್ತು. ಸದ್ಯ ಈಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸಿದ್ದು, ಮುಂದಾದರೂ ಕೋರ್ಟ್‌ನಲ್ಲಿರುವ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಿ ವಿವಿಧ ಪ್ರಕರಣಗಳ ವಿಚಾರಣೆಗಳಲ್ಲಿರುವವರಿಗೆ ಆದಷ್ಟು ಬೇಗ ನ್ಯಾಯ ದೊರಕುವಂತಾಗಲಿ.
–ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು.