ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ
ಫೆ.21ರಿಂದ ಮಾ.4ರವರೆಗೆ ವಿವಿಧ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಮಾ.9ರಿಂದ 29ರವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ದಿನನಿತ್ಯ ಒಂದು ನೀಲಿನಕ್ಷೆ ತಯಾರಿಸಿ ಅದರಂತೆ ಅಭ್ಯಾಸ ಮಾಡಬೇಕು. ಅಂದಿನ ಪಠ್ಯವನ್ನು ಅಂದೇ ಅಧ್ಯಯನ ಮಾಡುವ ಜೊತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಕೀ-ಪಾಯಿಂಟ್ಸ್ ಬರೆದುಕೊಳ್ಳಬೇಕು. ಕಠಿಣ ಎನಿಸುವ ವಿಷಯಗಳನ್ನು ಪದೇ ಪದೇ ಗಮನಿಸುತ್ತಾ ಒಮ್ಮೆ ಗಟ್ಟಿಯಾಗಿ ಓದಿ, ಮತ್ತೊಮ್ಮೆ ಬರೆಯಬೇಕು. ನಿಶ್ಶಬ್ದವಾದ ವಾತಾವರಣದಲ್ಲಿ ಓದುವುದು ಬಹಳ ಮುಖ್ಯ. ಬೆಳಗಿನ ಜಾವ ಓದಲು ಪ್ರಶಾಂತವಾದ ಸಮಯವಾಗಿದ್ದು, ಕಠಿಣ ವಿಷಯಗಳನ್ನು ಬೆಳಗಿನ ಜಾವ ಓದಬೇಕು. ಇದರ ನಡುವೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನವನ್ನು ನೀಡಬೇಕು.
ಪರೀಕ್ಷೆ ವೇಳೆ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಮೊದಲು ಸರಳ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಕಠಿಣ ಪ್ರಶ್ನೆಗಳ ಕಡೆ ಗಮನ ನೀಡಬೇಕು. ಒಟ್ಟಿನಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು. ಧೈರ್ಯದಿಂದ ಧೃತಿಗೆಡದೆ ಪರೀಕ್ಷೆ ಬರೆದರೆ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ.
–ಎ.ಎಸ್.ಗೋವಿಂದೇಗೌಡ, ಕನ್ನಡ ಉಪನ್ಯಾಸಕ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.
ಓಆರ್‌ಎಫ್ ವೈರಾಣುಗಳ ಬಗ್ಗೆ ಎಚ್ಚರವಿರಲಿ
ಇತ್ತೀಚೆಗೆ ಓಆರ್‌ಎಫ್ ಎಂಬ ವೈರಾಣು ಕುರಿ-ಮೇಕೆಗಳಿಗೆ ಕಂಟಕವಾಗಿದೆ. ಈ ವೈರಾಣು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ ಎನ್ನುವುದು ಮತ್ತೊಂದು ಆತಂಕಕಾರಿ ವಿಚಾರ. ಮೂರು ತಿಂಗಳ ಹಿಂದಷ್ಟೇ ಈ ಸೋಂಕು ನಮ್ಮ ರಾಜ್ಯದಲ್ಲಿ ಕುರಿಗಳಲ್ಲಿ ಪತ್ತೆಯಾಗಿದ್ದು, ಎಲ್‌ಎಸ್‌ಡಿ ಎಂಬ ವೈರಾಣುವಿನ ಜೊತೆಗೆ ಈ ಓಆರ್‌ಎಫ್ ಎಂಬ ವೈರಾಣುವು ಪತ್ತೆಯಾಗಿದೆ.
ಇದು ಮಿಶ್ರ ತಳಿ ಕುರಿ-ಮೇಕೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಜೀವ ಹಾನಿಯನ್ನು ಉಂಟು ಮಾಡುವ ಅಪಾಯವಿದೆ. ವೈರಾಣು ತಗುಲಿದ ಕುರಿ-ಮೇಕೆಗಳಿಗೆ ಬಾಯಿ ಊದಿ ಕೊಳ್ಳುತ್ತದೆ. ಆ ಊತ ಒಡೆದ ಬಳಿಕ ಅದರ ಬಾಯಿಯಲ್ಲಿ ದಪ್ಪ ದಪ್ಪ ಹುಳುಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಕುರಿಯ ಬಾಯಿ ಕೊಳೆತಂ ತಾಗಿ ಬಳಿಕ ಅದು ಒಣಗಿ ಗುಣವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಪ್ರತಿನಿತ್ಯ ಅದರ ಬಾಯಿಯನ್ನು ಸ್ವಚ್ಛಗೊಳಿಸಬೇಕು. ಪದೇ ಪದೇ ಔಷಧಿಯನ್ನು ಹಚ್ಚಬೇಕು. ಒಂದು ದಿನ ಔಷಧಿಯನ್ನು ಹಚ್ಚು ವುದು ತಪ್ಪಿದರೂ ನೊಣಗಳು ಮೊಟ್ಟೆ ಇಟ್ಟು ಅಲ್ಲಿ ಹುಳುಗಳಾಗಿ ದೊಡ್ಡ ಗಾಯವನ್ನು ಉಂಟು ಮಾಡುತ್ತವೆ. ಆದ್ದರಿಂದ ಈ ಓಆರ್‌ಎಫ್ ಎಂಬ ವೈರಾಣುಗಳು ಕುರಿ-ಮೇಕೆಗಳಿಗೆ ತಗುಲದಂತೆ ಎಚ್ಚರವಹಿಸುವ ಜೊತೆಗೆ ನಾವು ಕೂಡ ಅದರ ಬಗ್ಗೆ ಜಾಗೃತರಾಗುವುದು ಉತ್ತಮ. ಈ ವೈರಾಣುವಿನ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿ ಸುವುದು ಸೂಕ್ತ.
–ಮಹಾದೇವಸ್ವಾಮಿ, ಮಹಾರಾಜ ಕಾಲೇಜು, ಮೈಸೂರು.
ಆನೆ ಹಾವಳಿ ತಡೆಗೆ ರೈಲ್ವೆಕಂಬಿ ಬ್ಯಾರಿಕೇಡ್ ಬಿಗಿಗೊಳಿಸಿ
ಸರಗೂರು ಭಾಗದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹೆಡಿಯಾಲ, ಮೊಳೆಯೂರು, ನುಗು ವಲಯಗಳಲ್ಲಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ.
ದಶಕಗಳಿಂದಲೂ ಈ ಭಾಗದ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಉಪಟಳ ನಿರಂತರವಾಗಿ ಮುಂದುವರಿದಿದೆ. ಈ ಬಗ್ಗೆ ಕ್ರಮವಹಿಸಿ ಆನೆಗಳು ಕಾಡಿನಿಂದ ಹೊರಬಾರದಂತೆ ಬಿಗಿ ರೈಲ್ವೆಕಂಬಿ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರೈತರು ಹಗಲು ರಾತ್ರಿ ಎನ್ನದೆ ತಮ್ಮ ಬೆಳೆಗಳನ್ನು ಕಾಯಬೇಕು. ಈ ವೇಳೆ ಸಾಕಷ್ಟು ಬಾರಿ ಕಾಡಾನೆಗಳ ದಾಳಿಗಳು ನಡೆದು ರೈತರ ಕೈಗೆ ಬರಬೇಕಾದ ಬೆಳೆಗಳು ಕಾಡಾನೆಗಳ ಕಾಲ್ತುಳಿತಕ್ಕೆ ಸಿಲುಕಿ ನಾಶವಾಗಿವೆ. ಆನೆಗಳ ದಾಳಿಯಿಂದ ರೈತರು ಜೀವ ಕಳೆದುಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ.
ಇನ್ನು ನುಗು ಜಲಾಶಯಕ್ಕೆ ನೀರು ಕುಡಿಯಲು ಬರುವ ಆನೆಗಳು ಒಮ್ಮೊಮ್ಮೆ ಗ್ರಾಮಗಳತ್ತ ಮುಖ ಮಾಡುತ್ತವೆ. ಅಲ್ಲದೇ ರಾತ್ರಿಯ ವೇಳೆಯೂ ಆನೆಗಳು ಬಂದುಬಿಡುತ್ತವೋ ಏನೋ ಎಂಬ ಆತಂಕದೊಂದಿಗೆ ಜನರು ಓಡಾಡ ಬೇಕಿದೆ. ಆದ್ದರಿಂದ ಇಂತಹ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿ ಗಣಿಸಿ ಈ ಭಾಗದ ಕಾಡಂಚಿನ ಗ್ರಾಮಗಳು ಹಾಗೂ ನುಗು ಜಲಾಶಯದ ವ್ಯಾಪ್ತಿಯಲ್ಲಿ ಬಿಗಿಯಾದ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕಿದೆ.
–ಸಂಜಯ್, ಸರಗೂರು
ಜೋಶಿ ಮಠದ ಸ್ಥಿತಿ ಚಾಮುಂಡಿಬೆಟ್ಟಕ್ಕೆ ಬಾರದಿರಲಿ
ಇತ್ತೀಚೆಗೆ ಉತ್ತರಖಂಡದ ಜೋಶಿ ಮಠದಲ್ಲಿ ಭೂಮಿ ಬಿರುಕು ಬಿಟ್ಟ ಪರಿಣಾಮ ಅಲ್ಲಿನ ನೂರಾರು ಕಟ್ಟಡಗಳು ನೆಲಸಮಗೊಂಡವು. ಅಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಯಿತು.
ಅಲ್ಲಿ ಈ ಘಟನೆಗೆ ಅತಿಯಾದ ಅಭಿವೃದ್ಧಿ ಮತ್ತು ಅಧಿಕ ಪ್ರಮಾಣದಲ್ಲಿ ಅರಣ್ಯನಾಶ ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅದೇ ರೀತಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ಕೇಂದ್ರ ವಾದ ಚಾಮುಂಡಿಬೆಟ್ಟದಲ್ಲಿಯೂ ಇಂತಹದ್ದೇ ಸನ್ನಿವೇಶ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದರು. ಕಳೆದ ಬಾರಿ ಬೆಟ್ಟದ ಒಂದು ರಸ್ತೆ ಕುಸಿದು ಆತಂಕ ಸೃಷ್ಟಿಸಿತ್ತು. ಇದಕ್ಕೆ ಪ್ರಮುಖ ಕಾರಣ ಅಲ್ಲಿ ರೂಪುಗೊಳ್ಳು ತ್ತಿರುವ ಅನೇಕ ಅಭಿವೃದ್ಧಿ ಹೆಸರಿನ ಯೋಜನೆಗಳು ಎನ್ನಬಹುದಾಗಿದೆ. ಸದ್ಯ ಬೆಟ್ಟಕ್ಕೆ ರೂಪ್ ವೇ ನಿರ್ಮಿಸಲು ಯೋಜಿಸಲಾಗುತ್ತಿದೆ. ಇದಕ್ಕೂ ಮುನ್ನ ಬೆಟ್ಟದ ಮೇಲ್ಭಾಗದಲ್ಲಿ ಸಂಪೂರ್ಣ ಕಾಂಕ್ರಿಟೀಕರಣಗೊಳಿಸಿ ಬಹು ಅಂತಸ್ತಿನ ಪಾರ್ಕಿಂಗ್ ಕಟ್ಟವನ್ನು ನಿರ್ಮಿಸುವ ಮೂಲಕ ಬೆಟ್ಟಕ್ಕೆ ಪೆಟ್ಟು ನೀಡಲಾಗಿದೆ. ಈಗ ಮತ್ತಷ್ಟು ಅಭಿವೃದ್ಧಿ ಕೆಲಸಕ್ಕೆ ಮುಂದಾಗಿದ್ದು, ಬೆಟ್ಟ ಮತ್ತೊಂದು ಜೋಶಿ ಮಠದಂತಾಗುವ ಆತಂಕ ಮೂಡಿಸಿದೆ. ಪ್ರಸ್ತುತ ಚಾಮುಂಡಿಬೆಟ್ಟದಲ್ಲಿ ಸಾಕಷ್ಟು ಕುಟುಂಬಗಳು ವಾಸಿಸುತ್ತಿದ್ದು, ಅವರು ಸುರಕ್ಷಿತವಾಗಿರಬೇಕಾದರೆ ಬೆಟ್ಟದಲ್ಲಿ ಬೃಹತ್ ಪ್ರಮಾಣದ ಅಭಿ ವೃದ್ಧಿ ಕಾಮಗಾರಿ ಕೈಗೊಳ್ಳುವುದನ್ನು ಕೈಬಿಡಬೇಕು. ಬೆಟ್ಟವನ್ನು ನೈಸರ್ಗಿಕ ವಾಗಿರಿಸಿ ಅಲ್ಲಿನ ನಿವಾಸಿಗಳು ನಿಶ್ಚಿಂತೆಯಿಂದ ಬದುಕಲು ಬಿಡಬೇಕು.
–ಬಿ.ಎಂ.ಜಗದೀಶ್, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು.