ಓದುಗರಪತ್ರ
ಸಂಸದ- ಶಾಸಕರ ಶೀತಲ ಸಮರ
ಕೆಲ ದಿನಗಳಿಂದ ಮೈಸೂರಿನಲ್ಲಿ ಗುಂಬಜ್ ರೀತಿಯಲ್ಲಿ ಬಸ್ ನಿಲ್ದಾಣದ ನಿರ್ಮಾಣ ಮಾಡಿದ ವಿಚಾರದಲ್ಲಿ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಇಬ್ಬರ ನಡುವೆ ಶೀತಲ ಸಮರ ತಾರಕಕ್ಕೇರಿದೆ. ಈ ರೀತಿಯ ಶೀತಲ ಸಮರ ಜನ ಪ್ರತಿನಿಧಿಗಳ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಈ ಬೆಳವಣಿಗೆ ನೋಡಿ ರಾಜ್ಯ ಸರ್ಕಾರ ಮೌನವಾಗಿರುುದೇಕೆ? ತಿಳಿಯುತ್ತಿಲ್ಲ. ಪವಿತ್ರವಾದ ಮತ, ಧರ್ಮದ ಹೆಸರಿನಲ್ಲಿ ವಿವಾದ ಎಬ್ಬಿಸಿ ಗದ್ದಲ ಮಾಡುವ ಜನ ಪ್ರತಿನಿಧಿಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಜಾ ಮಾಡಬೇಕು. ಕೂಡಲೇ ಆದಷ್ಟು ಬೇಗ ಮುಖ್ಯಮಂತ್ರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಈ ರೀತಿಯ ಗದ್ದಲವಾಗದಂತೆ ನೋಡಿಕೊಳ್ಳ ಬೇಕು.
-ಮಣಿಕಂಠ ತ್ರಿಶಂಕರ್, ಮೈಸೂರು.
ಜಲಚರಗಳಿಗೆ ನೀರು ಉಳಿಸಿ
ಮೈವಿವಿ ವ್ಯಾಪ್ತಿಗೆ ಬರುವ ಕುಕ್ಕರಹಳ್ಳಿ ಕೆರೆಯು ಸತತ ಮಳೆಯಿಂದಾಗಿ ಸಂಪೂರ್ಣ ತುಂಬಿ ಕೆರೆಯ ಏರಿಯು ಹೊಡೆಯುವ ಭೀತಿ ಎದುರಾಗಿತ್ತು, ‘ಆಂದೋಲನ’ ಪತ್ರಿಕೆಯಲ್ಲಿ ಸತತವಾಗಿ ಕೆರೆಯ ಸಮಸ್ಯೆಯ ಬಗ್ಗೆ ಸುದ್ದಿಗಳು ಪ್ರಕಟವಾಗಿದ್ದರಿಂದಾಗಿ ವಿವಿಯ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಒಂದಷ್ಟು ನೀರನ್ನು ಹೊರಹಾಕಲು ಕೆಟ್ಟು ನಿಂತಿರುವ ತೂಬನ್ನು ಸರಿಪಡಿಸುವ ಬದಲು ಹೆಚ್ಚಾದ ನೀರನ್ನು ಹೊರಬಿಡಲು ಇರುವ ಮಾರ್ಗದ ಕಾಂಕ್ರೀಟ್ ತಡೆಗೋಡೆಯನ್ನು ಹೊಡೆದು ಹಾಕಿದರು. ಇದರಿಂದಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಕೆರೆಯ ನೀರು ಪೋಲಾಗುತ್ತಿದೆ. ಕೆರೆಯ ನೀರು ಅವಶ್ಯಕತೆಗಿಂತ ಹೆಚ್ಚು ಹರಿದು ಪೋಲಾಗಿ ಜಲಚರಗಳ ಉಳಿವಿಗೆ ತೊಂದರೆಯಾಗದಂತೆ ಪರಿಹಾರ ಹುಡುಕಬೇಕಿದೆ. ಹೆಚ್ಚುವರಿ ನೀರು ಹೋಗಲು ಸಾಧ್ಯವೇ ಇಲ್ಲದ ಕಡೆ ಜೆಸಿಬಿಯಿಂದ ತೋಡಿಸಿರುವುದು ರಾಜಕಾಲುವೆಯೋ ಅಥವಾ ಮತ್ತೇನೋ ತಿಳಿಯದಂತಿದೆ. ಇನ್ನೇನು ಕೆಲವೇ ತಿಂಗಳು ನಂತರ ಬೇಸಿಗೆಕಾಲ ಬರುವುದರಿಂದ ಕೆರೆಯ ನೀರು ಸಂಪೂರ್ಣವಾಗಿ ಖಾಲಿಯಾಗದಂತೆ ತಡೆದು ಜಲಚರಗಳು ಮತ್ತು ವೈವಿಧ್ಯಮಯ ಪಕ್ಷಿಗಳನ್ನು ಕಾಪಾಡಬೇಕಾಗಿದೆ.
– ಮಲ್ಲಿಕಾರ್ಜುನಪ್ಪ ಪಿ, ಮಹಾರಾಜ ಕಾಲೇಜು, ಮೈಸೂರು.
ಚಿತ್ರಮಂದಿರಗಳನ್ನು ಉಳಿಸಿಕೊಳ್ಳೋಣ
ಮೈಸೂರಿನಲ್ಲಿ ಹಿಂದೆ ೧೬ ಚಿತ್ರಮಂದಿರಗಳಿದ್ದವು, ಈಗ ಕೇವಲ ೮ ಚಿತ್ರಮಂದಿರಗಳಿವೆ.
ಕೋವಿಡ್ ಮುಂಚೆ ಅಪೇರಾ, ರಣಜಿತ್, ಶಾಲಿಮಾರ್ ಚಿತ್ರಮಂದಿರಗಳು ಮುಚ್ಚಿದರೆ, ಕೋವಿಡ್ ನಂತರ ಶ್ರೀನಾಗರಾಜ, ಸ್ಟರ್ಲಿಂಗ್, ಶಾಂತಲ, ಲಕ್ಷ್ಮೀ, ಸರಸ್ವತಿ, ಕ್ರಮೇಣ ಮುಚ್ಚಲಾಗಿದೆ. ಒಂದು ಕಾಲದಲ್ಲಿ ಕಡಿಮೆ ಟಿಕೇಟ್ ದರದಲ್ಲಿ ಶ್ರೀಮಂತರು ಮಧ್ಯಮವರ್ಗದ, ಬಡವರು, ಸುಮಾರು ೭೦೦- ೮೦೦-೧೦೦೦ ಪ್ರೇಕ್ಷಕರು ಒಂದು ಚಿತ್ರಮಂದಿರದಲ್ಲಿ ಒಟ್ಟಾಗಿ ಕುಳಿತು ಸಿನಿಮಾ ನೋಡುತ್ತಿದ್ದರು. ಇತ್ತೀಚಿನ ಚಿತ್ರಮಂದಿರ ಕೆಡವಿ ದುಬಾರಿ ವೆಚ್ಟದಲ್ಲಿ ೨೫೦-೩೦೦ ಪ್ರೇಕ್ಷಕರು ಕುಳಿತು ನೋಡುವ ಮಲ್ಟಿಪ್ಲೆಕ್ಸ್ ಗಳನ್ನು ಪ್ರಾರಂಭಿಸಲಾಗುತ್ತಿದೆ. ಬಡವರು, ಮಧ್ಯಮವರ್ಗದವರಿಗೆ ಮನರಂಜನೆ ಇಲ್ಲವಾಗುತ್ತಿದೆ.
-ನಾಗೇಶ್ , ಮಾನಸಗಂಗೋತ್ರಿ, ಮೈಸೂರು.
ಶಾಲೆಯ ಕೇಸರಿಕರಣದೆಡೆಗೆ!
ಈ ಹದಿನೈದು ತಿಂಗಳಲ್ಲಿನ ಬೊಮ್ಮಾಯಿಯವರ ಆಡಳಿತವನ್ನು ನೋಡುತ್ತಿದ್ದರೆ, ಕರ್ನಾಟಕ ರಾಜ್ಯ ಜೂನಿಯರ್ ಉತ್ತರ ಪ್ರದೇಶದಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿಯವರೇ ‘ಉತ್ತರ ಪ್ರದೇಶ’ದ ಮಾದರಿ ಬಗ್ಗೆ ಮಾತನಾಡುತ್ತಿದ್ದರು. ಯುಪಿ ಮಾಡೆಲ್ ಎಂದರೆ ಏನೆಂದು ನೆನೆದರೂ ಆತಂಕವಾಗುತ್ತದೆ. ಬಸವಣ್ಣನವರ ಹಾದಿಯಲ್ಲಿ ಸಾಗಬೇಕಿದ್ದ ನಾಡು, ಯೋಗಿ ಆದಿತ್ಯನಾಥರನ್ನು ಧ್ಯಾನಿಸಲು ಹೊರಟಿದೆ. ಮಕ್ಕಳಲ್ಲಿ ವಿಶಾಲ ದೃಷ್ಟಿಕೋನ, ಜಾತ್ಯತೀತ ಮನೋಭಾವ, ಸಾಂವಿಧಾನಿಕ ಮೌಲ್ಯಗಳನ್ನು ಕಲಿಸಬೇಕಾದ ಸರ್ಕಾರ, ಪಠ್ಯಪುಸ್ತಕಗಳನ್ನು ‘ಪಕ್ಷಪುಸ್ತಕ’ವನ್ನಾಗಿ ಮಾಡಿತು. ಸುಮಾರು ಒಂದು ತಿಂಗಳ ಕಾಲ ರಾಜ್ಯದಲ್ಲಿ ಈ ವಿವಾದ ಚರ್ಚೆಯಾಯಿತು. ಪಠ್ಯದಲ್ಲಿ ಮಾಡಿರುವ ಕೇಸರೀಕರಣದ ಅಧ್ವಾನ ಮುನ್ನೆಲೆಗೆ ಬಂದಿತು. ಈಗ ಶಾಲೆಗಳಿಗೆ ಕೇಸರಿ ಬಣ್ಣ ಬಳಿದರೆ ತಪ್ಪೇನು ಎಂದು ಬೊಮ್ಮಾಯಿಯವರು ಕೇಳುತ್ತಿದ್ದಾರೆ. ಇದರ ಹಿಂದೆ ಚುನಾವಣಾ ರಾಜಕಾರಣವೇ ಮುಖ್ಯವಾಗಿರುವುದನ್ನು ಎಲ್ಲರೂ ಬಲ್ಲರು. ಕೇಂದ್ರ ಶಿಕ್ಷಣ ಸಚಿವಾಲಯದ ‘ಎಜುಕೇಷನ್+’ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯು ಮತ್ತಷ್ಟು ಆತಂಕಗಳನ್ನು ಹುಟ್ಟಿಸಿದೆ. ದೇಶದಲ್ಲಿನ ಶಾಲೆಗಳ ಸ್ಥಿತಿಗತಿ ಕುರಿತ ‘ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ: ೨೦೨೧-೨೨’ ವರದಿಯ ಪ್ರಕಾರ, ಕೋವಿಡ್-೧೯ ಸಾಂಕ್ರಾಮಿಕ ರೋಗದ ಅವಧಿಯ ಎರಡನೇ ವರ್ಷದಲ್ಲಿ (೨೦೨೧-೨೨) ದೇಶಾದ್ಯಂತ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಸೇರಿದಂತೆ ಸುಮಾರು ೨೦,೦೦೦ ಶಾಲೆಗಳನ್ನು ಮುಚ್ಚಲಾಗಿದೆ. ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಚ್ಚಲ್ಪಟ್ಟ ೨೦,೦೨೧ ಶಾಲೆಗಳಲ್ಲಿ ೯,೬೬೩ ಸರ್ಕಾರಿ ಶಾಲೆಗಳಿವೆ. ಇನ್ನುಳಿದಂತೆ ೧,೮೧೫ ಸರ್ಕಾರಿ ಅನುದಾನಿತ, ೪,೯೦೯ ಖಾಸಗಿ ಮತ್ತು ೩,೬೩೪ ಇತರ ಆಡಳಿತ ವರ್ಗದ ಶಾಲೆಗಳು ಬಾಗಿಲು ಹಾಕಿವೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಗಂಭೀರಸ್ಥಿತಿ ತಲುಪಿದೆ.
-ಮದನ್ ಹಾದನೂರು, ಮೈಸೂರು.