Mysore
21
broken clouds

Social Media

ಭಾನುವಾರ, 14 ಜೂನ್ 2026
Light
Dark

ಆಂದೋಲನ ಓದುಗರ ಪತ್ರ : 06 ಮಂಗಳವಾರ 2022

ವನ್ಯಜೀವಿಗಳಿಂದಲೇ ಮನುಷ್ಯ ಪಾಠ ಕಲಿಯುವ ಅನಿವಾರ್ಯತೆ

ಕಾಡಿನಲ್ಲಿ ತಮ್ಮಿಷ್ಟದಂತೆ ಬದುಕಿದ್ದ ಜೀವಿಗಳಿಗೆ ಅಭಿವೃದ್ಧಿ, ಮನೋರಂಜನೆಯ ಪ್ರವಾಸೋದ್ಯಮಗಳೆಂಬ ಹೆಸರಿನ ಹಣಗಳಿಸುವ ಯೋಜನೆಗಳಿಂದಾಗಿ ಅವುಗಳ ನೆಲೆಯನ್ನು ಹಾಳು ಮಾಡಿ, ಈಗ ಅದೇ ಕಾಡುಪ್ರಾಣಿಗಳಿಂದ ತಾನು ಮಾಡಿದ ತಪ್ಪುಗಳಿಗೆ ಬೆಲೆ ತೆರಬೇಕಾದ ಅನಿರ್ವಾತೆ ಎದುರಾಗಿದೆ.
ಕಾಡು ಪ್ರಾಣಿಗಳ ಮುಕ್ತ ಸಂಚಾರಕ್ಕೆ ಧಕ್ಕೆ ತರುವಂತಹ ಸಫಾರಿ ಎಂಬ ಹಣಗಳಿಸುವ ದಂಧೆಗೆ ಕಡಿವಾಣ ಹಾಕಬೇಕಾಗಿದೆ. ಪ್ರಾಣಿಗಳ ಪ್ರತಿಯೊಂದೂ ನೈಸರ್ಗಿಕ ಕ್ರಿಯೆಗಳನ್ನೂ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ ಆನಂದಪಡುವುದು ಮನೋವಿಕೃತಿ ಕಾಣಬಹುದಾಗಿದೆ. ಸಫಾರಿ ವಾಹನಗಳ ಸದ್ದು, ಪ್ರಾವಾಸಿಗರ ಹುಚ್ಚಾಟ, ರೆಸಾರ್ಟ್‌ಗಳ ಕುಡಿತದ ದಾಂದಲೆ, ಡಿಜೆ ಸೌಂಡ್, ಕಾಡಿನಲ್ಲಿ ಪ್ಲಾಸ್ಟಿಕ್ ಬೀಸಾಡುವುದು ಈ ಎಲ್ಲಾ ಮಾನವನ ಚಟುವಟಿಕೆಗಳಿಂದಾಗಿ ಕಾಡಿನ ಜೈವಿಕ ಸರಪಳಿಯ ಕೊಂಡಿ ಒಂದೊಂದಾಗಿ ಕಳಚುತ್ತಿದ್ದು, ಅಸ್ತಿತ್ವ ಮತ್ತು ನೆಲೆಗಾಗಿ ಪ್ರಾಣಿಗಳು ನಾಡಿನತ್ತ ಮುಖ ಮಾಡುವಂತೆ ಮಾಡಿದೆ. ಅಲ್ಲದೆ ಆಹಾರಕ್ಕಾಗಿ ದಾಳಿ ಮಾಡುವುದು ಬಿಟ್ಟರೆ ಅವುಗಳಿಗೆ ಪರ್ಯಾಯ ದಾರಿಯಿಲ್ಲದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡನ್ನು, ಕಾಡು ಪ್ರಾಣಿಗಳನ್ನು ಸಂರಕ್ಷಿಸಬೇಕಿದೆ. ಇಲ್ಲವಾದಲ್ಲಿ ಸಂಘರ್ಷಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
– ಪಿ.ಮಲ್ಲಿಕಾರ್ಜುನಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಹಾರಾಜ ಕಾಲೇಜು, ಮೈಸೂರು.


ಮನುಷ್ಯತ್ವದ ನೆಲೆಯಲ್ಲಿ ಜಾತೀಯತೆ ಬೇಡ

ಬುದ್ಧ, ಬಸವ, ಫುಲೆ ದಂಪತಿ, ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಕನಕದಾಸ, ಸ್ವಾಮಿ ವಿವೇಕಾನಂದ, ಕುವೆಂಪು ಮುಂತಾದ ಮಹನೀಯರು, ಎಲ್ಲ ಮನುಷ್ಯರೂ ಒಂದೇ, ಮೊದಲು ಮಾನವನಾಗು ಎಂಬ ಸಂದೇಶವನ್ನು ನೀಡುತ್ತಾ ಮಾನವೀಯತೆಯ ಮಹಾಸಾಗರದ ಅಲೆಗಳು ಅಪ್ಪಳಿಸುವಾಗೇ ತಮ್ಮ ಜೀವಿತಾವಧಿಯವರೆಗೂ ಈ ನೆಲೆಯಲ್ಲಿ ಮನುಷ್ಯತ್ವ ಮಾರ್ಗಕ್ಕೆ ಬೆಳಕಾಗಿದ್ದಾರೆ. ಈ ಸಮಾಜದಲ್ಲಿ ಜಾತಿ, ಮೇಲು-ಕೀಳು, ಅಸಮಾನತೆ, ಶ್ರೇಷ್ಠ-ಕನಿಷ್ಠ ಎಂಬ ಭಾವನೆಗಳು ತುಂಬಿ ತುಳುಕುತ್ತಿದೆ.

ಮನುಷ್ಯ ಮನುಷ್ಯನ ನಡುವೆ ಹೊಂದಾಣಿಕೆ, ಸಹಬಾಳ್ವೆ ಮತ್ತು ಸಮನ್ವಯದ ಮಮತೆ ಕಾಣೆಯಾಗಿ ಜಾತಿ ಧರ್ಮದ ಅಮಲುಗಳಿಂದ ದೌರ್ಜನ್ಯ, ಕೋಮುಗಲಭೆಗಳಿಂದ ಈ ನಾಡಿನಲ್ಲಿ ರಕ್ತದೋಕುಳಿಯಲ್ಲಿ ಮುಳುಗಿ ತಮ್ಮ ಮೂಲ ಪರಂಪರೆಯನ್ನು ತಿಳಿಯದೇ ಯಾರೋ ಮಾಡಿದ ಪೊಳ್ಳು ಭಾಷಣಗಳನ್ನು ಕೇಳಿ ಮನುಷ್ಯತ್ವವೇ ಇಲ್ಲದಂತೆ ನಡೆದುಕೊಳ್ಳುತ್ತಿರುವುದು ಇಂದಿನ ನಾಗರಿಕ ಪ್ರಜಾಪ್ರಭುತ್ವದ ಸಮಾಜಕ್ಕೆ ಮಾಡುತ್ತಿರುವ ಕಗ್ಗೊಲೆಯಾಗಿದೆ. ಇದನ್ನು ನಿಯಂತ್ರಿಸಲು ಸಂಬಂಧಪಟ್ಟವರು ಆದ್ಯತೆ ನೀಡಬೇಕು.
-ಪವನ್ ಜಯರಾಂ, ಚಾಮರಾಜನಗರ.


ಸ್ನಾತಕೋತ್ತರ ವಿದ್ಯಾರ್ಥಿಗಳ ವೇತನ ಬರುವುದಾದರು ಎಂದು?

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಬಂದವರಲ್ಲಿ ಬಹುಪಾಲು ಬಡತನದ ಕುಟುಂಬದವರಾಗಿದ್ದು, ವಿದ್ಯಾರ್ಥಿ ವೇತನದ ಆಶ್ರಯದಲ್ಲಿ ಓದಲು ಆಗಮಿಸುತ್ತಾರೆ. ಆದರೆ, ಇಂತಹವರಿಗೆ ವಿದ್ಯಾರ್ಥಿ ವೇತನ ಸಮಯಕ್ಕೆ ಸರಿಯಾಗಿ ಬರದೇ ಕಾಲೇಜಿನಲ್ಲಿ ಪ್ರವೇಶ ಶುಲ್ಕ ಕಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಕಾಲೇಜು ಶುಲ್ಕ ಭರಿಸಲು ವಿವಿಧೆಡೆ ಪಾರ್ಟ್ ಟೈಮ್ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ವಿದ್ಯಾರ್ಥಿ ವೇತನ ಏಕೆ ಬರುತ್ತಿಲ್ಲ? ಈ ಬಗ್ಗೆ ಕಾರಣ ಹುಡುಕಿದರೆ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಸಾಮಾನ್ಯವಾಗಿ ಮೂರು ಉತ್ತರಗಳು ಬರುತ್ತವೆ. ಅದರಲ್ಲಿ ಒಂದು ‘ವಿದ್ಯಾರ್ಥಿ ವೇತನ ಬೆಂಗಳೂರಿನಿಂದ ಬರಬೇಕು’ ಅವರು ಇನ್ನು ಹಾಕಿಲ್ಲ ಎಂಬುದು, ಎರಡನೆಯದಾಗಿ ‘ತಾಂತ್ರಿಕ ದೋಷ’ ಎಂಬುದು, ಮತ್ತೊಂದು ‘ನಾಳೆ ಬಾ’ ಎಂಬ ಸಿದ್ಧು ಉತ್ತರಗಳು ಸಿಗುತ್ತವೆ. ಈ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆ ಗಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರಕುವಂತೆ ಮಾಡಬೇಕಿದೆ.
-ಎಂ.ಕೆ.ಭೀಮಸಿ, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು


ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಳಂಬ ಏಕೆ?

ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ರವರು ಕರ್ನಾಟಕದ ಅಪ್ರತಿಮ ನಾಯಕ ನಟ. ಸರಳ ಸಹೃದಯಿಯಾಗಿ, ಒಬ್ಬ ಸಾತ್ವಿಕ ಬದುಕನ್ನು ಕಂಡುವರು. ಅವರು ನಮ್ಮನ್ನಗಲಿ ಸು,ಮಾರು ೧೦ವರ್ಷಗಳೇ ಕಳೆದು ಹೋಗಿವೆ. ಆದರೆ ಈವರೆಗೂ ಅವರ ಸ್ಮಾರಕ ನೋಡುವ ಭಾಗ್ಯ ಮಾತ್ರ ನಮಗೆ ದೊರಕಿಲ್ಲ. ಕನ್ನಡಿಗರಾದ ನಾವು ಅವರ ಜನ್ಮ ದಿನಗಳಲ್ಲಿ ಮತ್ತು ಸ್ಮರಣೆ ಸಂದರ್ಭಗಳಲ್ಲಿ ಮಾತ್ರವೇ ಅವರ ಸ್ಮಾರಕದ ವಿಚಾರ ಮುಂಚೂಣಿಗೆ ಬರುತ್ತದೆ.

ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸುವಲ್ಲಿ ವಿಳಂಬವೇಕೆ? ಏಕೆ ನಮ್ಮ ಜನತೆ ಒಗ್ಗೂಡಿ ಸ್ಮಾರಕ ನಿರ್ಮಿಸಬಾರದು? ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟ ಅವರ ಸ್ಮಾರಕ ನೋಡುವ ಭಾಗ್ಯ ಮಾತ್ರ ನಮಗೆ ಸಿಕ್ಕಿಲ್ಲ. ಆದ್ದರಿಂದ ನಾವೆಲ್ಲ ವಿಷ್ಣು ಮನೆತನದವರೊಂದಿಗೆ ಒಟ್ಟಾಗಿ ಕೈಜೋಡಿಸಿ ಅವರ ಸ್ಮಾರಕ ನಿರ್ಮಿಸಿ ಕಣ್ತುಂಬಿಕೊಳ್ಳೋಣ. ಕನ್ನಡ ಚಿತ್ರರಂಗವು ಇದರ ಬಗ್ಗೆ ಗಂಭೀರವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
-ಅನಿಲ್ ರಾಜ, ಸಿದ್ಧಾರ್ಥನಗರ, ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!