ಗಲ್ಲು ಶಿಕ್ಷೆ ವಿಧಿಸಲಿ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ನವ ದೆಹಲಿಯ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರದ್ಧಾಳ ಪ್ರಿಯಕರ ಆಫ್ತಾಬ್ ಅಮಿನ್ ಪೂನವಾಲ ಎಂಬ ಅಯೋಗ್ಯ ತನ್ನ ಪ್ರೇಯಸಿಯನ್ನು ಕ್ಷುಲಕ ಕಾರಣಕ್ಕೆ ಅತ್ಯಂತ ಬರ್ಬರ ರೀತಿಯಲ್ಲಿ ಕೊಲೆ ಮಾಡಿ ಶವವನ್ನು ೩೫ ಭಾಗಗಳಾಗಿ ಕತ್ತರಿಸಿ ಫ್ರಿ ಜ್ಜನಲ್ಲಿ ಇರಿಸಿ ನಂತರ ಅವುಗಳನ್ನು ಒಂದೊಂದಾಗಿ ದೇಶದ ವಿವಿಧೆಡೆ ಬಿಸಾಡಿದ್ದ ಎಂಬ ಪೋಲಿಸ್ ವರದಿ ಅತ್ಯಂತ ಭಯಾನಕ ಹಾಗೂ ಭರ್ಬರ ಕೃತ್ಯವಾಗಿದೆ. ಆರೋಪಿಯನ್ನು ಈಗಾಗಲೇ ಬಂಧಿಸಿರುವ ಪೋಲಿಸರು ಆತನನ್ನು ವಿಚಾರಣೆಗೆ ಒಳಪಡಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಇಂತಹ ಪಾಶವಿ ಕೃತ್ಯವನ್ನು ಎಸಗಿರುವ ಆರೋಪಿಗೆ ಮರಣ ದಂಡನೇಯೇ ಅತ್ಯಂತ ಕನಿಷ್ಠ ಶಿಕ್ಷೆ ಎನ್ನಬಹುದು. ಇತನ ಪರವಾಗಿ ಯಾವುದೇ ವಕೀಲರು ಪ್ರಕರಣ ನಡೆಸಬಾರದು. ಅತ್ಯಂತ ಕ್ಷಿಪ್ರ ಅವಧಿಯಲ್ಲಿ ತನಿಖೆ ಮುಗಿದು ಆರೋಪಿಯ ವಿರುದ್ದ ಸಕ್ಷಮ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಬೇಕಾಗಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.
ಕ್ರಿಕೆಟ್ ಆಡಳಿತದಲ್ಲಿ ಬದಲಾವಣೆ ಪರ್ವ
ಟಿ-೨೦ ವಿಶ್ವ ಕಪ್ ನಲ್ಲಿ ಹೀನಾಯ ಸೋಲಿನ ನಂತರ ದೇಶದ ಕ್ರಿಕೆಟ್ ಅಡಳಿತದಲ್ಲಿ ಬದಲಾವಣೆ ಪರ್ವ ಕಾಣುತ್ತಿದೆ. ಅವಧಿಪೂರ್ವವಾಗಿ ಆಯ್ಕೆ ಮಂಡಳಿಯನ್ನು ಬರಖಾಸ್ತು ಮಾಡಿದ ನಂತರ , ಟೆಸ್ಟ್, ಏಕದಿನ ಪಂದ್ಯ ಮತ್ತು ಟಿ-೨೦ ಚುಟುಕು ಪಂದ್ಯಗಳಿಗೆ ಪ್ರತ್ಯೇಕ ಪಂಗಡಗಳನ್ನು ಮಾಡುವುದರೊಂದಿಗೆ ನಾಯಕನ ಬದಲಾವಣೆಯ ಮಾತೂ ಕೇಳಿ ಬರುತ್ತಿದೆ. ದಶಕಗಳಿಂದ ಆಳವಾಗಿ ಗೂಟ ಊರಿ ಕುಳಿತಿರುವ ಕೆಲವು ಹಿರಿಯ ಕ್ರಿಕೆಟಿಗರಿಗೆ ನಡುಕ ಆರಂಭವಾಗಿದೆ. ಭಾರತೀಯ ಕ್ರಿಕೆಟ್ ನಲ್ಲಿ ಆಗೊಮ್ಮೆ ಈಗೋಮ್ಮೆ ಮಿಂಚಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವವರಿಗಂತ, ಸ್ಥಿರ ಸಾಧಕರ ಅನಿವಾರ್ಯತೆ ಮತ್ತು ಅವಶ್ಯಕತೆ ಹೆಚ್ಚಾಗಿದೆ. ಸಾಧನೆಯನ್ನು ತೋರಿಸಿ ಇಲ್ಲವೇ ಹೊರಬೀಳಿ ಎನ್ನುವುದು ತಂಡದಲ್ಲಿ ಉಳಿಯುವವರಿಗೆ ಮಾನದಂಡವಾಗಬೇಕು. ಆಟಗಾರರ ವೈಫಲ್ಯಕ್ಕೆ ಅಯ್ಕೆಯ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಾದ ಕ್ರಮವಲ್ಲ. ಕುದುರೆಯನ್ನು ನೀರಿನವರೆಗೆ ಎಳೆಯಬಹುದು, ಅದರೆ ನೀರನ್ನು ಕುಡಿಸಲಾಗದು ಎನ್ನುವುದನ್ನು ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿದಿರಬೇಕು. ವಿಳಂಬವಾಗಿಯಾದರೂ ಕ್ರಿಕೆಟ್ ಮಂಡಳಿಗೆ ಜ್ಞಾನೋದಯವಾಗಿರುವುದು ಶ್ಲಾಘನೀಯ.
-ರಮಾನಂದ ಶರ್ಮಾ, ಬೆಂಗಳೂರು.
ಸಾರಿಗೆ ಸೌಲಭ್ಯ ಒದಗಿಸಿ
ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ಭೈರಸಂದ್ರ ಗ್ರಾಮಕ್ಕೆ ಸಾರಿಗೆ ಸೌಕರ್ಯವಿಲ್ಲದೆ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಬೇಕಾದರೆ ೩ ಕಿ.ಮೀ ನಡೆದುಕೊಂಡು ಹೋಗಬೇಕು. ಜನರು ಆಸ್ಪತ್ರೆ, ಸಂತೆ, ಬ್ಯಾಂಕ್ ಎಲ್ಲಿಗೆ ಹೊಗಬೇಕೆಂದರೂ ಸ್ವಂತ ವಾಹನಗಳಲ್ಲಿ ಅಥವ ಖಾಸಗಿ ವಾಹನದಲ್ಲಿ ಹೋಗಬೇಕು. ಪ್ರಸಿದ್ಧ ಹದ್ಧಿನಕಲ್ಲು ಹನುಮಂತರಾಯಸ್ವಾಮಿಯ ಬೆಟ್ಟವಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಬರುತ್ತಾರೆ. ಸಾರಿಗೆ ಸೌಲಭ್ಯ ಇಲ್ಲದಿರುವ ಕಾರಣ ಅವರಿಗೂ ತೊದರೆಯಾಗುತ್ತಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ತ್ವರಿತ ಕ್ರಮ ಕೈಗೊಂಡು ಸಾರಿಗೆ ಸೌಲಭ್ಯ ಒದಗಿಸಬೇಕು.
-ಅನುಷ ಬಿ.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು.
ರಾಜಕೀಯ ಯಾತ್ರೆಗಳ ಕಾಲವಿದು!?
ಜನಮನದಲ್ಲಿ ಇಂದಿಗೂ ಯಾತ್ರೆ ಎಂದರೆ ಕಾಶಿ ಯಾತ್ರೆ, ಅಮರನಾಥ ಯಾತ್ರೆ ಶಬರಿಮಲೆ ಯಾತ್ರೆ, ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಯಾತ್ರೆ ಎಂಬ ಭಾವನೆ ಇದೆ. ಈಗ ಆಧ್ಯಾತ್ಮಿಕ ಯಾತ್ರೆಗಳನ್ನು ಹಿಂದಿಕ್ಕಿ ಪ್ರಸ್ತುತ ರಾಜಕೀಯ ಯಾತ್ರೆಗಳು ಮುಂದೋಡುತ್ತಿವೆ. ಭಾರತ್ ಜೋಡೋ ಯಾತ್ರೆ, ಸಂಕಲ್ಪ ಯಾತ್ರೆ, ಪಂಚ ರತ್ನ ಯಾತ್ರೆಗಳು ವಿಜೃಂಭಿಸುತ್ತಿವೆ. ಈ ರಾಜಕೀಯ ನಡುವೆ ಆಧ್ಯಾತ್ಮಿಕ ಯಾತ್ರೆಗಳನ್ನು ಜನರು ಮರೆಯದಿದ್ದರೆ ಅದೇ ಪುಣ್ಯ.
-ಕಂಗಾಣಿ ಸೋಮು ಪಿ ಸಿ, ಕ್ಯಾತಮಾರನಹಳ್ಳಿ, ಮೈಸೂರು.