Light
Dark

ಆಂದೋಲನ ಓದುಗರ ಪತ್ರ : 11 ಶುಕ್ರವಾರ 2022

ನಿಷ್ಪಕ್ಷಪಾತ ತನಿಖೆಯಾಗಲಿ

ನಿವೃತ್ತ ಐ. ಬಿ. ಅಧಿಕಾರಿ ದಿ. ಆರ್. ಎನ್. ಕುಲಕರ್ಣಿ ಅವರ ಕೊಲೆಯ ಕಾರಣಗಳು ಪರೋಕ್ಷವಾಗಿ ಹೀಗೂ ಇರಬಹುದೇ?
ಇಲ್ಲಿ ಈ ಕೊಲೆಗೆ ಸಾಕಷ್ಟು ಕಾರಣಗಳ ಹೊರತಾಗಿಯೂ ನಗರ ಪಾಲಿಕೆ ಅಧಿಕಾರಿಗಳದ್ದು ಪರೋಕ್ಷ ಸಹಕಾರ ಇದೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ತನಿಖೆಯ ಅವಶ್ಯಕತೆ ಇದೆ. ದಿ.ಕುಲಕರ್ಣಿಯವರು ಎರಡೆರಡು ಬಾರಿ ದೂರು ನೀಡಿದರೂ ಸ್ಥಳ ಪರಿಶೀಲನೆ ಮಾಡದೇ ನಾಮಕವಸ್ಥೆ ನೋಟೀಸ್ ಜಾರಿ ಮಾಡಿದ್ದಾರಷ್ಟೇ. ಅಲ್ಲದೇ ನಂಬರ್ ಪ್ಲೇಟ್ ಇಲ್ಲದ ವಾಹನ ಅದೂ ಸಂಜೆಯ ವೇಳೆಗೆ ರಾಜಾರೋಷವಾಗಿ ಬೀದಿಗೆ ಬಂದದ್ದು ಹೇಗೆ? ದಿ. ಕುಲಕರ್ಣಿಯವರಂತಹ ಪ್ರಭಾವಿ ವ್ಯಕ್ತಿಗಳದ್ದೆ ಈ ಕಥೆಯಾದರೆ ಶ್ರೀಸಾಮಾನ್ಯನ ಪಾಡೇನು? ಪ್ರಕರಣ ಶೀಘ್ರವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಕ್ಕೆ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ಆದರೂ ನಿಷ್ಪಕ್ಷಪಾತ ತನಿಖೆ ಆಗಲೇಬೇಕು.

-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.


ರಸ್ತೆ ದುರಸ್ತಿ ಯಾವಾಗ?

ಮೈಸೂರು ನಗರದ ಅಪೋಲೋ ಆಸ್ಪತ್ರೆಯ ಮುಂಭಾಗದಿಂದ ಆದಿಚುಂಚನಗಿರಿ ರಸ್ತೆಯ ಕಡೆಯ ತನಕ ಕಳೆದ ನಾಲ್ಕು ತಿಂಗಳ ಹಿಂದೆ ಹೊಸದಾಗಿ ಯುಜಿಡಿ ಪೈಪ್‌ಲೈನ್ ಅಳವಡಿಸಲು ರಸ್ತೆಯನ್ನು ಆಗೆದಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರ ವಿರಲಿ, ಸಾರ್ವಜನಿಕರು ಸಹ ಓಡಾಡದಂದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಓಡಾಡುವ ಜನರು ನಗರಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ದಸರಾ ನಂತರ ಈ ರಸ್ತೆಗೆ ಡಾಂಬರು ಹಾಕಿಸುವುದಾಗಿ ಮೇಯರ್‌ರವರು ಭರವಸೆ ನೀಡಿದ್ದರು. ಮೇಯರ್‌ರವರು ಸುಳ್ಳು ಆಶ್ವಾಸನೆ ನೀಡಿದರೇ? ಈಗಲಾದರೂ ಈ ರಸ್ತೆಯನ್ನು ಡಾಂಬರಿಕರಣ ಮಾಡಿ, ಸಾರ್ವಜನಿಕರು ಓಡಾಡಲು ಅನುಕೂಲ ಮಾಡಿಕೊಡ ಬೇಕಾಗಿ ವಿನಂತಿ.

-ಬೂಕನಕೆರೆ ವಿಜೇಂದ್ರ, ಮೈಸೂರು.


ಮೊದಲು ಮಾನವರಾಗಬೇಕು!

ಸತೀಶ್ ಜಾರಕಿಹೊಳಿ ಅವರ ಒಂದೇ ಒಂದು ಹೇಳಿಕೆಯಿಂದ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಹೋರಾಟಗಾರರು ಬಿದಿಗಿಳಿದು ಬೆಂಕಿ ಹಚ್ಚಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ನೆನಪಿರಲಿ, ಕಳೆದ ತಿಂಗಳು ಮಂಡ್ಯದಲ್ಲಿ ಒಬ್ಬ ಶಿಕ್ಷಕ ಹಿಂದೂ ಧರ್ಮದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ. ನಂತರ ಕಲ್ಬುರ್ಗಿಯಲ್ಲಿ ಸಹ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರವಾಗಿದೆ. ದಿನೇ ದಿನೇ ಮಹಿಳೆಯರು, ಮಕ್ಕಳ ಮೇಲೆ ದೌರ್ಜನಗಳು ಹೆಚ್ಚುತ್ತಲೇ ಇವೆ. ಭ್ರಷ್ಟಾಚಾರ ಅಧಿಕಾರಿಗಳ ದರ್ಪ ಹೆಚ್ಚಿದೆ. ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಹ ತೆರೆಮರೆಯಲ್ಲಿದ್ದ, ನೆನ್ನೆಯಿಂದ ಹೋರಾಟ ಮಾಡುತ್ತಿರುವ ಧರ್ಮರಕ್ಷಕರು, ಹಿಂದೂ ಧರ್ಮದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾದಾಗ ಎಲ್ಲಿ ನಾಪತ್ತೆಯಾಗುತ್ತಾರೋ? ಈ ಹೋರಾಟಗಾರರಿಗೆ ಹೆಣ್ಣು ಮಕ್ಕಳ ರಕ್ಷಣೆಗಿಂತ, ಅವರಿಗೆ ನ್ಯಾಯ ಕೊಡಿಸುವುದಕ್ಕಿಂತ ಒಬ್ಬ ಶಾಸಕರ ಒಂದು ಹೇಳಿಕೆ ಮುಖ್ಯವಾಗಿರುವುದು ವಿಪರ್ಯಾಸ. ಮೊದಲು ಮಾನವರಾಗಬೇಕು ಮಾನವರಿಗೆ ತೊಂದರೆ ಆಗುವಂತಹ ಘಟನೆಗಳು ನಡೆದಾಗ ಬೀದಿಗಿಳಿದು ಹೋರಾಟ ಮಾಡಬೇಕೆ ವಿನಹ ಅನವಶ್ಯಕ ಹೇಳಿಕೆಗಳಿಗಲ್ಲ.

– ಜಿ.ಎನ್.ಕಾರ್ತಿಕ್, ಕಾನೂನು ವಿದ್ಯಾರ್ಥಿ, ಗುಂಡ್ಲುಪೇಟೆ.


ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.೧೦ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಕಾನೂನಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಈ ಮೂಲಕ ಇತರೇ ಮುಂದುವರೆದ ಜಾತಿಗಳಲ್ಲಿ ಇರುವ ಆರ್ಥಿಕ ದುರ್ಬಲರಿಗೆ ನ್ಯಾಯ ಒದಗಿಸಿದಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಈಗ ಅದು ಈಡೇರಿದಂತಾಗಿದೆ. ಸಂವಿಧಾನದ ೧೫ (೬) ಮತ್ತು ೧೬ (೬) ವಿಧಿಗಳಿಗೆ ಮಾಡಲಾದ ೧೦೩ ನೇ ತಿದ್ದುಪಡಿಯ ಅನ್ವಯ ಉದ್ಯೋಗ ಮತ್ತು ಶಿಕ್ಷಣದಲ್ಲಿ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ ೧೦ ರಷ್ಟು ಮೀಸಲಾತಿ ನೀಡಲು ಅನುವು ಮಾಡಿಕೊಡಲಾಗಿದೆ. ಈ ಹೊಸ ಮೀಸಲಾತಿ ನಿಯಮದ ಪ್ರಕಾರ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಪಂಗಡಗಳಿಗೆ ಸೇರದ ವರ್ಗಗಳ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ. ೮ ಲಕ್ಷದ ಒಳಗೆ ಇದ್ದರೆ, ಈ ಮೀಸಲಾತಿ ಅವರಿಗೆ ಅನ್ವಯವಾಗುತ್ತದೆ.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ