Mysore
23
few clouds

Social Media

ಭಾನುವಾರ, 18 ಜನವರಿ 2026
Light
Dark

ಅಮಿತಾಭ್ ಬಚ್ಚನ್ ಹಾಕಿದ ಮಂಗಳಾರತಿ ಕಾಣಿಕೆ !

ಪೊಲೀಸಿನಲ್ಲಿ ಕೆಲವು ಅಧಿಕಾರಿಗಳಿಗೆ ಒಂದೇ ಬಗೆಯ ಡ್ಯೂಟಿಗಳು ಬೀಳುತ್ತಿರುತ್ತವೆ. ನೀಡಿದ್ದ ಕೆಲಸವನ್ನು ಎಡವಟ್ಟಿಲ್ಲದೆ ಮಾಡಿದ್ದರೆ ಮುಂದೆ ಅದೇ ಡ್ಯೂಟಿಗೆ ಫಿಕ್ಸ್. ಪದೆ ಪದೇ ನನಗೆ ಬೀಳುತ್ತಿದ್ದ ಡ್ಯೂಟಿಗಳೆಂದರೆ ಗಣ್ಯವ್ಯಕ್ತಿಗಳ ಭದ್ರತಾ ಡ್ಯೂಟಿ. ಅವರ ಬೆಂಗಾವಲಿನ ಕರ್ತವ್ಯ, ಕ್ಯಾಂಪ್ ಭದ್ರತೆ, ರ್ಟೂ ಮಾಡುವವರಿಗೆ ಗೈಡ್! ಇತ್ಯಾದಿ. ಮೈಸೂರಿಗೆ ಯಾರೇ ಅತಿ ಗಣ್ಯರು ಬರಲಿ ಏಳೆಂಟು ಅಧಿಕಾರಿಗಳಿಗೆ ಅದದೇ ಡ್ಯೂಟಿ ಬೀಳುತ್ತಿತ್ತು. ಇವೆಲ್ಲವೂ  designated duties ನಡೆನುಡಿ , ಸ್ಮಾರ್ಟ್ ನೆಸ್, ಭಾಷೆಗಳಲ್ಲಿ ಪರಿಶ್ರಮ ಇದ್ದು ಅನುಸರಿಸಿಕೊಂಡು ಹೋಗುವವರನ್ನು ಹುಡುಕಿ ಹಾಕುತ್ತಿದ್ದರು. ಆದರೆ ನಮಗದು ಒಂದು ವಾರದ ಶಿಕ್ಷೆ. ಎತ್ತಲೂ ಹೋಗುವಂತಿಲ್ಲ. ರಜೆ ಇರಲಿ, ಪರ್ಮಿಷನ್ ಸಹ ಇಲ್ಲ. ಈ ಬಗೆಯ ಡ್ಯೂಟಿಗಳಿಂದಾಗಿ ಪೆಂಡಿಂಗ್ ಉಳಿದುಬಿಡುತ್ತಿದ್ದ ಠಾಣಾ ಕೆಲಸಗಳು.

ಇಷ್ಟಾದರೂ ಪ್ರಧಾನಿ ಇಂದಿರಾರಿಂದ ಹಿಡಿದು ವಾಜಪೇಯಿ ವರೆಗೆ ಎಲ್ಲ ಪ್ರಧಾನಿಗಳ ಹತ್ತಿರದ ಬಂದೋಬಸ್ತ್ ಮತ್ತು ಡಾ. ರಾಜ್‌ರಿಂದ ಹಿಡಿದು ಮಾಲ್ಟಾ ಅಧ್ಯಕ್ಷರವರೆಗೆ ವ್ಯಕ್ತಿ ಬೆಂಗಾವಲಿನ ಡ್ಯೂಟಿ ಸಿಕ್ಕಿದ್ದು ಅದೃಷ್ಟವೇ ಎನ್ನಬೇಕು.

೧೯೮೪ ರಲ್ಲಿ ಮರ್ದ್ ಚಿತ್ರದ ಷೂಟಿಂಗ್ ನಡೆಯುವಾಗ ಅಮಿತಾಭರ ಜೊತೆಗೆ ೧೨ ದಿನಗಳ ಡ್ಯೂಟಿ ಬಿದ್ದಿತ್ತು. ಅದಾದ ಮೇಲೆ ೧೯೮೯ರಲ್ಲಿ ಆಜ್ ಕಿ ಅರ್ಜುನ್ ಚಿತ್ರದ ಷೂಟಿಂಗ್ ವೇಳೆ ಬರೋಬ್ಬರಿ ೨೮ ದಿನಗಳ ಬೆಂಗಾವಲು ಭದ್ರತಾ ಡ್ಯೂಟಿ.

ಜೀವಕ್ಕೆ ಅಪಾಯವಿದೆಯೆಂದು y ಶ್ರೇಣಿಯ ಭದ್ರತೆ ಒದಗಿಸಿದ್ದರು. ೨೪ ಗಂಟೆಯೂ ಅವರ ಜೊತೆಗೊಬ್ಬ ಸಶಸ್ತ್ರ ಅಧಿಕಾರಿಯೊಬ್ಬ ವ್ಯಕ್ತಿ ಬೆಂಗಾವಲಾಗಿರುತ್ತಿದ್ದ.

ನನಗೆ ಹಗಲು ಬೆಂಗಾವಲು ಡ್ಯೂಟಿ ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ. ಅಮಿತಾಭರ ಜೊತೆಗೇ ಇರುತ್ತಿದ್ದುದರಿಂದ ಅವರೊಟ್ಟಿಗೆ ಸಹ ಪ್ರಯಾಣ, ಸಹ ಭೋಜನಕ್ಕೂ ಅವಕಾಶ.

ಅವರೇನೋ ಉದಾರಿಯಾಗಿದ್ದರು. ನಮ್ಮೆಲ್ಲಾ ಊಟ ತಿಂಡಿಗಳನ್ನು ಗಮನಿಸಿಕೊಳ್ಳುತ್ತಿದ್ದರು. ಹಾಗೆಂದು ಅನುಚಿತ ಸಲಿಗೆಯಿಂದ ವರ್ತಿಸುವಂತಿರಲಿಲ್ಲ. Respectable ಅಂತರ ಇಟ್ಟುಕೊಂಡು ಅಂಟಿಯೂ ಅಂಟದಂತೆ ಜೊತೆಗಿರುತ್ತಿದ್ದೆ.

ಮೈಸೂರಿನಿಂದ ಹತ್ತು ಕಿಮೀ ದೂರದ ಬಲಮುರಿಯಲ್ಲಿ ‘ಗೋರಿ ಹೈ ಕಲಿಯಾ’ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಅದೊಂದು ಸಾಮೂಹಿಕ ನೃತ್ಯದ ಚಿತ್ರೀಕರಣ. ನಡುವೆ ಅಮಿತಾಭ್ ಜಯಪ್ರದಾ ಪ್ರಣಯ ಗೀತೆ. ಎರಡು ದಿನದ ಷೂಟಿಂಗ್ ಮುಗಿದಿತ್ತು.ಇನ್ನೂ ನಾಲ್ಕಾರು ದಿನಗಳು ಮುಂದುವರೆಯಲಿತ್ತು.

ಮೂರನೇ ದಿನ ಅದೇಕೋ ಅಮಿತಾಭರಿಗೆ ಮೂಡ್ ಕೆಟ್ಟಿತ್ತು. ಷೂಟಿಂಗ್ ನಿಲ್ಲಿಸಿ ನೇರ ಕಾರಿಗೆ ಬಂದರು. ಜೊತೆಯಲ್ಲಿ ನಾನು ಮತ್ತವರ ಪಿಎ. ಮೈಸೂರಿಗೆ ಬರುವ ತನಕ ಹೆಪ್ಪುಗಟ್ಟಿದ ಮೌನ. ಮೊದಲಾದರೆ ಅದೂ ಇದೂ ಮಾತಾಡುತ್ತ ಹುರುಪಿನಲ್ಲಿ ಬರುತ್ತಿದ್ದರು. ಈವತ್ತಿನ ಗಂಭೀರತೆ ಕಂಡು ನಾನೂ ತೆಪ್ಪಗೆ ಕೂತಿದ್ದೆ.ಲಲಿತಮಹಲಿನ ಅವರ ರೂಮಿಗೆ ಹೋದ ಮೇಲೆ ಪಿಎ ಬಂದರು.

ಇನ್ನೆರಡು ದಿನ ಸಾಹೇಬರು ಷೂಟಿಂಗಿಗೆ ಬರೋದಿಲ್ಲ. ಯಾಕೋ ತುಂಬಾ ಅಪ್ ಸೆಟ್ ಆಗಿದ್ದಾರೆ ಎಂದರು. ‘
ಯಾಕೆ ಹುಷಾರಿಲ್ವೇ?’

‘ಚೆನ್ನಾಗಿದ್ದಾರೆ. ನಾಡಿದ್ದು ಸ್ವಿಸ್ ಕೇಸಿನ ಜಡ್ಜ್‌ಮೆಂಟ್ ಇದೆ. ಏನಾಗುತ್ತೋ ಅಂತ. ಈವತ್ತು ಮೂಡ್ ಆಫ್ ಆಗಿತ್ತು ಅಂತಾನೇ ಬಂದುಬಿಟ್ರು’

‘ಸಾಬ್‌ಗೇನೋ ಷೂಟಿಂಗ್ ಇರೋದಿಲ್ಲ. ಆದರೆ ನಾವಂತೂ ಡ್ಯೂಟಿಗೆ ಬರೋದು ಬರಲೇ ಬೇಕಲ್ಲಾ?’ ಎನ್ನುತ್ತಾ ಅದೂ ಇದೂ ಮಾತಾಡುತ್ತಾ ಕುಳಿತೆ. ಅವರು ಹೊರಗಿರಲಿ ಒಳಗಾದರೂ ಇರಲಿ ಭದ್ರತೆ ಸಲುವಾಗಿ ನಾನು ಅಲ್ಲಿರಲೇ ಬೇಕಿತ್ತು.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಆಪ್ತ ಜೊತೆಗಾರ ಎಂಬ ಕಾರಣಕ್ಕೆ ಅಮಿತಾಭರ ಮೇಲೂ ಅನೇಕ ಕೇಸುಗಳು ಬಿದ್ದಿದ್ದವು. ಸ್ವಿಜರ್‌ಲ್ಯಾಂಡಿನಲ್ಲಿ ಅವರ ತಮ್ಮ ಅಜಿತಾಬ್ ಬಚ್ಚನ್ ರೊಂದಿಗೆ ಅಕ್ರಮ ಆಸ್ತಿ ಮಾಡಿದ್ದಾರೆಂಬ ಕೇಸಿನ ವಿಚಾರಣೆ ನಡೆಯುತ್ತಿತ್ತು. ಸ್ವಿಸ್ ಬ್ಯಾಂಕಿನಲ್ಲಿ ಯಾರು ಎಷ್ಟಾದರೂ ಹಣವಿಡಬಹುದೇನೋ ಸರಿ. ಆದರೆ ಅಲ್ಲಿಯ ಅರ್ಧ ಇಂಚು ಜಾಗವನ್ನೂ ವಿದೇಶೀಯರಿಗೆ ಮಾರುವುದಿಲ್ಲ. ಇನ್ನು ಅಲ್ಲಿ ಐದಂತಸ್ತಿನ ಕಟ್ಟಡ ಕೊಳ್ಳಲಾದೀತೇ? ಹೀಗೆ ತಲೆಬುಡವಿಲ್ಲದ ಆಪಾದನೆಗಳು. ವಿ.ಪಿ. ಸಿಂಗ್ ಸರ್ಕಾರ ಅದೇಕೋ ರಾಜೀವರ ಎಲ್ಲ ಗೆಳೆಯರ ಮೇಲೂ ಮುಗಿಬಿದ್ದಿತ್ತು. ಅವಮಾನಕರ ಕೇಸುಗಳಲ್ಲಿ ಸಿಲುಕಿಸಿತ್ತು.

ಅದಾಗಲೇ ಸಂಜೆಯಾಗಲು ಬಂದಿತ್ತು.
ಅವರು ಹೊರಗಡೆ ಎಲ್ಲೂ ಹೋಗೋದಿಲ್ಲ ಎಂದರೆ ಮಾತ್ರ ಹೋಗುತ್ತೇನೆ. ಒಮ್ಮೆ ಕೇಳಿನೋಡಿ. ಎಂದೆ.
ಅಮಿತಾಭರ ಕೋಣೆಗೆ ಹೋದವರು ಪುನಃ ಬಂದು ಕರೆದರು. ಒಳಹೋದೆ.
ಅಮಿತಾಭ್ ಏನೋ ಫೈಲುಗಳನ್ನು ನೋಡುತ್ತ ಕುಳಿತಿದ್ದವರು, ನಾಡಿದ್ದರ ತನಕ ಎಲ್ಲೂ ಹೋಗೋದಿಲ್ಲ. ನೀವು ರಿಲಾಕ್ಸ್ ಮಾಡಬಹುದು ಎಂದರು.

ನಾನಿಲ್ಲೇ ಹೊರಗಡೆ ಇರುತ್ತೇನೆ. ಆವಶ್ಯಕತೆ ಇದ್ದಾಗ ಹೇಳಿ ನಾನು ಬರುತ್ತೇನೆ ಎಂದವನೇ, ‘

ಸರ್ ಒಂದು ರಿಕ್ವೆಸ್ಟ್ ಇತ್ತು’ ಎಂದಂದು ಸುಮ್ಮನೇ ನಿಂತೆ. ‘

ಚಾಮುಂಡಿ ಬೆಟ್ಟ ಪಕ್ಕದಲ್ಲೇ ಇದೆ. ಆ ದುರ್ಗಾ ಮಾತಾ ದರ್ಶನ ಮಾಡಿದರೆ ಮನಸ್ಸಿಗೆ ಎಷ್ಟೋ ಸಮಾಧಾನವಾಗುತ್ತೆ. ತಾವು ಬರೋದಾದರೆ ನಾಳೆ ಬೆಳಿಗ್ಗೆ ದರ್ಶನದ ವ್ಯವಸ್ಥೆ ಮಾಡಿಸುತ್ತೇನೆ’ ಎಂದು ಚಾಮುಂಡೇಶ್ವರಿಯ ಇತಿಹಾಸ, ಮಹತ್ವವನ್ನು ಹೇಳಿದೆ.
ಅಮಿತಾಭ್ ಉತ್ತರಿಸಲಿಲ್ಲ.

ಮಾತಾಡಿದ್ದು ಅನುಚಿತವಾಯ್ತೇನೋ ಎಂದು ಚಡಪಡಿಕೆಯಾಯಿತು.

‘ಬೆಳಿಗ್ಗೆ ಎಷ್ಟೊತ್ತಿಗೆ ತಯಾರಿರಲಿ?’ ‘
ಮೊದಲ ದರ್ಶನಕ್ಕೇ ವ್ಯವಸ್ಥೆ ಮಾಡಿಸುತ್ತೇನೆ. ಬೆಳಿಗ್ಗೆ ಆರು ಗಂಟೆಗೆ ರೆಡಿ ಇದ್ದರೆ ಸಾಕು’ ಎಂದೆ.
ಮಾರನೇ ಬೆಳಿಗ್ಗೆ ಲಲಿತಮಹಲ್ ಬಳಿಗೆ ಹೋಗುವಷ್ಟರಲ್ಲಿ ಆರೂಕಾಲು ಆಗಿತ್ತು.
ಪಿಎ ಬಂದು ಐದೂ ಮುಕ್ಕಾಲಿಗೇ ಸಾಬ್ ಬಂದು ರೆಡಿಯಾಗಿ ಕಾಯ್ತಾ ಇದ್ದಾರೆ ಎಂದರು.
ಅವರ ಟೈಮಿಗೆ ಹೋಗದಿದ್ದರೆ ದೊಡ್ಡವರ ಅಸಹನೆ, ಚಡಪಡಿಕೆ ಗೊತ್ತಿದ್ದದ್ದೇ. ಲೇಟಾಗಿ ಬಿಡ್ತಲ್ಲಾ ಎಂದು ಮಿಡುಕುತ್ತಾ ಹೋದೆ.
ಹೋಟೆಲ್ ಕಾರಿಡಾರಿನಲ್ಲಿ ಪೂಜಾ ದಿರಿಸು ಧರಿಸಿ ಅಮಿತಾಭ್ ವಾಕ್ ಮಾಡುತ್ತಿದ್ದರು. ಅವರ ಶಿಸ್ತು , ಸಮಯ ಪ್ರಜ್ಞೆ ಕಂಡು ಆಶ್ಚರ್ಯ, ನಾಚಿಕೆ ಎರಡೂ ಆದವು.

ಕಾರಿನಲ್ಲಿ ಕುಳಿತೆವು. ಚಾಮುಂಡಿ ಬೆಟ್ಟದ ಇತಿಹಾಸ, ಚಾಮುಂಡೇಶ್ವರಿ ನಾಡಿನ ಅಧಿದೇವತೆ ಹೇಗೆ? ಎಂಬುದನ್ನು ವಿವರಿಸುತ್ತಾ ಹೋದೆ.
ಮೊದಲೇ ಹೇಳಿದ್ದರಿಂದ, ಜೋಯಿಸರೆಲ್ಲಾ ರೆಡಿಯಾಗಿ ಕಾಯುತ್ತಿದ್ದರು. ಮಂಗಳವಾರದ ವಿಶೇಷ ಅಲಂಕಾರದಿಂದ ದೇವಿ ಕಂಗೊಳಿಸುತ್ತಿದ್ದಳು.
ಗರ್ಭಗುಡಿಯ ಒಳ ಅಂಗಳಕ್ಕೆ ಅವರನ್ನು ಕರೆದೊಯ್ದೆ. ಆರೇಳು ಅಡಿಗಳ ಅಂತರದಲ್ಲಿ ದೇವಿಯ ನೇರ ದರ್ಶನ!. ನಮ್ಮ ಪಕ್ಕದಲ್ಲೇ ಮುಮ್ಮಡಿ ಕೃಷ್ಣರಾಜರ ಸಪತ್ನೀಕ ಪ್ರತಿಮೆಗಳು.

ನಕ್ಷತ್ರ ಗೋತ್ರಗಳನ್ನು ಜೋಯಿಸರು ಕೇಳಿದರು. ‘ ಶ್ರೀವಾಸ್ತವ . . . .’ಎಂಬ ವಿವರ ಕೊಟ್ಟರು.

ನಾಲ್ಕೈದು ಪೂಜಾರಿಗಳಿಂದ ಮಂಗಳಾರತಿ ನಡೆಯಿತು. ಜೋಯಿಸರು ತಟ್ಟೆ ಹಿಡಿದು ಬಂದರು. ಜೇಬಿನಿಂದ ನೂರರ ಗರಿಗರಿ ನೋಟುಗಳನ್ನು ಅಮಿತಾಭ್ ಜೇಬಿನಿಂದ ಒಟ್ಟಿಗೇ ತೆಗೆದರು.

ಮಂಗಳಾರತಿ ತಟ್ಟೆಗೆ ನೂರರ ನೋಟು ಎಲ್ಲಾದರೂ ಹಾಕುವುದುಂಟೇ?! ತಕ್ಷಣ ನನ್ನ ಜೇಬಿನಿಂದ ‘ಹತ್ತು ರೂಪಾಯಿ’ ನೋಟನ್ನು ತೆಗೆಯಲು ಮುಂದಾದೆ. ನನ್ನ ಕೈಯ್ಯನ್ನು ತಡೆದ ಅಮಿತಾಭ್ ತಟ್ಟೆಗೆ ಒಂದು ಸಾವಿರ ರೂಪಾಯಿ ಹಾಕಿಯೇ ಬಿಟ್ಟರು.

ನೂರೇ ಜಾಸ್ತಿಯಾಯಿತು ಎಂಬುದನ್ನು ಸರಿದೂಗಿಸಲು ನಾನು ಜೇಬಿಂದ ಹತ್ತು ರೂಪಾಯಿ ತೆಗೆಯಲು ಹೊರಟಿದ್ದೆ.
ಲೋಯರ್ ಮಿಡ್ಲ್ ಕ್ಲಾಸ್ ಆದ ನನ್ನ ಲೆವೆಲ್ಲೇ ಅಷ್ಟು!. ನನ್ನ ಜೀವನದಲ್ಲೇ ಐವತ್ತು ಪೈಸೆಗಿಂತ ಹೆಚ್ಚು ದುಡ್ಡನ್ನು ಮಂಗಳಾರತಿ ತಟ್ಟೆ ಹಾಕದ ನಾಸ್ತಿಕ. ನಾನು ಕಂಡಿದ್ದವರೆಲ್ಲಾ ಹತ್ತು ಪೈಸೆ ನಾಲ್ಕಾಣೆ ನಾಣ್ಯಗಳನ್ನು ಹಾಕಿದ್ದವರೇ. ಲಕ್ಷ ಲಕ್ಷಗಳನ್ನು ಭಗವಂತನಿಂದ ಬಯಸುವ ಭಕ್ತರಿಗೆ ತಟ್ಟೆ ಕಾಸಿನ ದಕ್ಷಿಣೆ ಅಂದರೆ ಅಷ್ಟು ತಾತ್ಸಾರ !
ಬರೋಬ್ಬರಿ ಒಂದು ಸಾವಿರ ರೂಪಾಯಿಯ ದಕ್ಷಿಣೆ! ಅದೂ ಮಂಗಳಾರತಿ ತಟ್ಟೆಗೆ. ಮನಸ್ಸು ಚಡಪಡಿಸತೊಡಗಿತು.

ಇದು ದೊಡ್ಡ ಕುದುರೆ ಚ್ಯಾಷ್ಟೆಯಲ್ಲದೇ ಮತ್ತೇನು? ಹತ್ತು ರೂಪಾಯಿಯೇ ಮಂಗಳಾರತಿ ತಟ್ಟೆಗೆ ಹೆಚ್ಚು. ಏನೋ ದೊಡ್ಡ ಸ್ಟಾರು ಐವತ್ತು ರೂಪಾಯಿ ಹಾಕಿದರೂ ಹೋಗ್ಲಿ ಬಿಡು ಎಂದು ಸುಮ್ಮನಾಗಬಹುದು.

ಅದರೆ ಒಂದು ಸಾವಿರ ರೂಪಾಯಿ ದಕ್ಷಿಣೆ! (೧೯೮೯ )
ಪ್ರತಿಯೊಂದಕ್ಕೂ ಇಷ್ಟು ರೇಟು, ಇಷ್ಟೇ ಅಳತೆ ಅಂತಿರುತ್ತೆ. ಅದಕ್ಕಿಂತ ಹೆಚ್ಚಾದರೆ ಅತಿರೇಕ ಅನ್ನಿಸಿಕೊಳ್ಳುತ್ತೆ ಅಂತ ಹೇಳಬೇಕೆನಿಸಿತು. ಧೈರ್ಯ ಸಾಲದೆ ತೆಪ್ಪಗಾದೆ.

ನಂದಿ ವಿಗ್ರಹಕ್ಕೆ ಕಾರಿಂದಲೇ ನಮಸ್ಕರಿಸಿ ಅದೇನೋ ಮಂತ್ರ ಗುಣುಗುಣಿಸಿದರು. ಕಾರುಬೆಟ್ಟ ಇಳಿಯುತ್ತಿತ್ತು.
ಒಮ್ಮೆ ಧೀರ್ಘವಾಗಿ ಕೇಳಿಸುವಂತೆ ನಿಡಿದುಸಿರು ಬಿಟ್ಟರು. He has ( V.P.SINGH ) determinded to destroy our family ಎಂದರು.

ನಮಗೇನೂ ಮಾತಾಡಲು ತೋಚಲಿಲ್ಲ. ‘ಎಲ್ಲವೂ ಸರಿಹೋಗುತ್ತೆ ಸರ್. ವರಿ ಮಾಡಬೇಡಿ.ಅಮ್ಮನ ಆಶೀರ್ವಾದ ತಮ್ಮ ಮೇಲಿದೆ’ ಅಳುಕುತ್ತಲೇ ಹೇಳಿದೆ.
ಅವರೇನೂ ಮಾತಾಡಲಿಲ್ಲ.

ಕಾರಿಂದ ಅವರು ಇಳಿದು ಹೋದ ಮೇಲೆ ನನ್ನ ಸಣ್ಣತನ ನನಗೇ ಅರಿವಾಗಿ ನಾಚಿಕೆಯಾಯಿತು. ತಟ್ಟೆಕಾಸನ್ನು ನಾನೇ ಕೊಡುವವನಂತೆ ಜೇಬಿಗೇನೋ ಕೈ ಹಾಕಿದ್ದೆ. ಸಧ್ಯ ಅಮ್ಮನ ದಯೆ. ಜೇಬಿನಿಂದ ತೆಗೆಯುವ ಮೊದಲೇ ಅಮಿತಾಭ್ ತಡೆದು, ತಾವೇ ಹಾಕಿದ್ದರು. ಅಕಸ್ಮಾತ್ ನಾನು ತೆಗೆಯಲಿದ್ದ ಹತ್ತು ರೂಪಾಯಿ ಕಾಣಿಸಿದ್ದಿದ್ದರೆ?

ಮಾರನೇ ಸಂಜೆ ಲಲಿತಮಹಲ್ ರಿಸೆಪ್ಷನ್ ಹಾಲಿನಲ್ಲಿ ಏನೋ ಓದುತ್ತಾ ಕುಳಿತಿದ್ದೆ. ಅಮಿತಾಭ್ ತಮ್ಮ ರೂಮಿನಲ್ಲೇ ಇದ್ದರು.
ಅವರ ಪಿಎ ಬಂದವರೇ ಸಾಬ್ ಕರೆಯುತ್ತಿದ್ದಾರೆ ಎಂದರು. ಮಾರನೇ ದಿನದ ಡ್ಯೂಟಿಯ ಬಗ್ಗೆ ಹೇಳಬಹುದೆಂದು ಹಿಂಬಾಲಿಸಿದೆ.
ನನ್ನನ್ನು ನೋಡಿದೊಡನೆ ಅಮಿತಾಭರ baritone ಕಂಠ ಮೊಳಗಿತು. we won the case! ಮುಗುಳ್ನಕ್ಕರು.

ಏನು ಹೇಳಲೂ ತೋಚಲಿಲ್ಲ. ಕೈಕುಲುಕುವಷ್ಟು ಸಲಿಗೆಯೂ ಇರಲಿಲ್ಲ.
ತುಂಬಾ ಸಂತೋಷ ಸಾರ್ ಎಂದು ಎರಡೆರಡು ಬಾರಿ ಹೇಳಿ ಹೊರಬಂದೆ.

೧೧-೧೦-೧೯೪೨ ಅಮಿತಾಭರ ಜನ್ಮದಿನ. ಅವರಿಗೀಗ ಎಂಭತ್ತು ವರ್ಷ!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!