Mysore
22
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ದಸರಾ ಪಾಸ್‌ಗಳ ಹಂಚಿಕೆ ಗೊಂದಲ ತಪ್ಪಿಸಲು ಕಟ್ಟುನಿಟ್ಟಿನ ಮಾನದಂಡ ಅಗತ್ಯ

ಕೋವಿಡ್-೧೯ ಕಾರಣಕ್ಕಾಗಿ ಎರಡು ವರ್ಷಗಳಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ರಾಜ್ಯಸರ್ಕಾರ ನಿರ್ಧರಿಸಿ ಅದಕ್ಕೆ ತಕ್ಕಂತೆ ಭರದ ಸಿದ್ಧತೆಗಳನ್ನು ಆರಂಭಿಸಿದೆ. ಮೊಟ್ಟ ಮೊದಲ ಬಾರಿಗೆ ನಾಡಹಬ್ಬಕ್ಕೆ ಚಾಲನೆ ನೀಡಲು ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿರುವುದರಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಹೀಗಾಗಿ, ನಾಡಹಬ್ಬದ ದಿನಗಳು ಹತ್ತಿರಬರುತ್ತಿದ್ದಂತೆ ಪ್ರವಾಸೋದ್ಯಮ ವಲಯದಲ್ಲಿ ಸಂತಸ ಮೂಡಿಸಿದೆ.

ಇದರ ಬೆನ್ನಲ್ಲೇ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಈ ಬಾರಿ ಸಾರ್ವಜನಿಕರಿಗಿಂತ ಗಣ್ಯಾತಿಗಣ್ಯರು ಮೈಸೂರಿನತ್ತ ಹೆಚ್ಚಾಗಿ ದಾಂಗುಡಿ ಇಡುವ ಮುನ್ಸೂಚನೆ ಸಿಕ್ಕಿದೆ. ಜಂಬೂಸವಾರಿ ವೀಕ್ಷಣೆಗೆ ಅರಮನೆಯಲ್ಲಿ ೨೨ರಿಂದ ೨೫ಸಾವಿರ ಸೀಟುಗಳ ವ್ಯವಸ್ಥೆ ಮಾಡುತ್ತೇವೆಂದು ಅಧಿಕೃತವಾಗಿ ಹೇಳಿದರೂ ಪಾಸ್ ಇಲ್ಲದೆಯೇ ಬರುವವರ ಸಂಖ್ಯೆ ಹತ್ತು ಸಾವಿರ ಮೀರಿರುತ್ತದೆ. ಹೀಗಾಗಿ ಗೊಂದಲವಾಗುವುದನ್ನು ತಪ್ಪಿಸಲು ಪಾಸ್‌ಗಳನ್ನು ಸುಸೂತ್ರವಾಗಿ ಹಂಚಿಕೆ ಮಾಡಲು ಮಾನದಂಡ ರೂಪಿಸುವುದು ಅತ್ಯಗತ್ಯ.

ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗುವಂತೆ ಮಾಡಲು ಮತ್ತು ದೇಶ- ಹೊರದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲೆಂದು ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಬೇಕೆಂಬ ಒತ್ತಡಕ್ಕೆ ಮಣಿದಿರುವ ಜಿಲ್ಲಾ ಉಸ್ತುವಾರಿ ಸಚಿವರು ಅದಕ್ಕೆ ತಕ್ಕಂತೆ ಕ್ರಮಕೈಗೊಂಡಿದ್ದಾರೆ. ನಾಲ್ಕರಿಂದ ಐದು ಸಾವಿರ ರೂ. ಮುಖಬೆಲೆಯ ಒಂದು ಸಾವಿರ ಗೋಲ್ಡ್ ಕಾರ್ಡ್ ಮಾಡಿಸಿ ಮಾರಾಟಕ್ಕೆ ಬಿಡುವುದಕ್ಕೆ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಉಳಿದಂತೆ ೫೦೦ ರೂ. ಮತ್ತು ೧೦೦೦ ರೂ. ಟಿಕೆಟ್‌ಗಳ ಜತೆಗೆ ಅಂದಾಜು ೨೦ ರಿಂದ ೨೨ ಸಾವಿರ ಪಾಸ್‌ಗಳನ್ನು ಮುದ್ರಿಸಿ ಹಂಚಿಕೆ ಮಾಡುವುದು ಪ್ರತಿವರ್ಷ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದರೆ, ಈ ಬಾರಿ ಜಂಬೂಸವಾರಿ ವೀಕ್ಷಿಸುವವರ ಪ್ರಮಾಣ ದುಪ್ಪಟ್ಟಾಗುವ ಕಾರಣ ಪಾಸ್‌ಗಳಿಗೆ ಬೇಡಿಕೆ ಹೆಚ್ಚಲಿದೆ.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಸಂಸತ್ ಸದಸ್ಯರ ತನಕ ಒಂದು ಮಾನದಂಡ ರೂಪಿಸಿಕೊಂಡು ಪಾಸ್ ವಿತರಣೆ ಮಾಡಿದರೆ ಉಂಟಾಗುವ ಗೊಂದಲ ತಡೆಯಬಹುದು. ರಾಜ್ಯದಲ್ಲಿ ೨೨೪ ವಿಧಾನಸಭಾ ಸದಸ್ಯರು, ೭೫ ವಿಧಾನ ಪರಿಷತ್ ಸದಸ್ಯರು, ೨೮ ಸಂಸದರು, ರಾಜ್ಯಸಭಾ ಸದಸ್ಯರು ಇದ್ದರೂ ಕೂಡ ಜಂಬೂಸವಾರಿ ವೀಕ್ಷಣೆ ಮಾಡಲು ಎಲ್ಲರೂ ಬರುವುದಿಲ್ಲ. ಪ್ರತಿಯೊಬ್ಬ ಶಾಸಕರು, ಸಂಸದರಿಗೆ ಕನಿಷ್ಠ ೧೦ರಿಂದ ೨೫ ಪಾಸ್‌ಗಳನ್ನು ಹಂಚಿಕೆ ಮಾಡುವ ಬದಲಿಗೆ ಯಾರಿಗೆ ಅಗತ್ಯವಿದೆಯೋ, ಆಸಕ್ತಿಯಿದೆಯೋ ಅವರಿಗೆ ಆದ್ಯತೆ ನೀಡಿ ಹಂಚಿಕೆ ಮಾಡುವುದು ಸೂಕ್ತ.
ಸ್ಥಳೀಯವಾಗಿರುವ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ೧ ಸಾವಿರ ಪಾಸ್‌ಗಳನ್ನು ಹಂಚಿಕೆ ಮಾಡಲಾಗಿದೆ ಎನ್ನುವ ಮಾತನ್ನು ಮೇಲ್ನೋಟಕ್ಕೆ ಹೇಳಿದರೂ ಅವರಿಗೆ ಅರ್ಧಕ್ಕೆ ಅರ್ಧ ತಲುಪದ ಕಾರಣ ಅನೇಕ ಶಾಸಕರು ವಾಪಸ್ ಕಳುಹಿಸಿರುವ ನಿದರ್ಶನಗಳು ಇವೆ. ಆದ್ದರಿಂದ ಸ್ಥಳೀಯ ಶಾಸಕರಿಗೆ ಪಾಸ್‌ಗಳನ್ನು ನೀಡಿದರೆ ಆಯಾಯ ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಗೆ ಹಂಚಿಕೆ ಮಾಡುವ ಮೂಲಕ ಬರುವ ಒತ್ತಡ ತಗ್ಗಿಸಬಹುದು.

ಇನ್ನು ನಗರಪಾಲಿಕೆ ಸದಸ್ಯರಿಗೆ ಐದರಿಂದ ಹತ್ತು ಪಾಸ್‌ಗಳನ್ನಷ್ಟೇ ಕೊಡಲಾಗುತ್ತಿದೆ ಎಂಬ ಅಸಮಾಧಾನದ ಮಾತುಗಳು ಕೇಳಿಬಂದಿವೆ. ನಗರಪಾಲಿಕೆ ಅಧಿಕಾರಿಗಳು, ಮಹಾಪೌರರು, ಉಪ ಮಹಾಪೌರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾಸ್ ವಿತರಿಸಿ ಅಸಮಾಧಾನ ನಿವಾರಿಸಬೇಕಿದೆ.
ದಸರಾ ಮಹೋತ್ಸವದ ಉಪ ಸಮಿತಿಗಳ ಅಧಿಕಾರೇತರ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದಾಗ ಪಾಸ್ ಹೆಚ್ಚಳ ಮಾಡುವಂತೆ ಸಾಕಷ್ಟು ಒತ್ತಡ ಬರುವುದನ್ನು ಜಿಲ್ಲಾಡಳಿತ ಗಮನಿಸಬೇಕು. ಒಂದೊಂದು ಸಮಿತಿಗೆ ೪೦ರಿಂದ ೫೦ ಸದಸ್ಯರನ್ನು ನೇಮಕ ಮಾಡಿದರೆ ತಲಾ ಎರಡೆರಡು ಪಾಸ್‌ಗಳನ್ನು ವಿತರಣೆ ಮಾಡಿದರೂ ಅಂದಾಜು ಒಂದೂವರೆ ಸಾವಿರ ದಾಟಲಿದೆ. ಅದೇ ರೀತಿ ದಸರಾ ಮಹೋತ್ಸವದಲ್ಲಿ ತೊಡಗುವ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಹಂಚಿಕೆ ಮಾಡಬೇಕಿದೆ. ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರಿಗೂ ತಲುಪಿಸಬೇಕಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಸಾಕಷ್ಟು ಹೊಣೆಗಾರಿಕೆಯಿದೆ.

ದಸರಾ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡುವ ಸಂಸ್ಥೆಗಳು, ಮಾಲೀಕರಿಗೂ ಗೌರವದಿಂದ ನಡೆಸಿಕೊಳ್ಳಬೇಕಿರುವ ಕಾರಣ ವಿವಿಐಪಿ ಪಾಸ್‌ಗಳನ್ನು ವಿತರಣೆ ಮಾಡಬೇಕು. ಲಕ್ಷಾಂತರ ರೂಪಾಯಿ ಕೊಡುವ ಸಂಸ್ಥೆಗಳಿಗೆ ೫೦ರಿಂದ ೧೦೦ ವಿವಿಐ ಪಾಸ್‌ಗಳನ್ನು ಕೊಡಬೇಕಿದೆ. ಇದೆಲ್ಲದರ ನಡುವೆ ಇದು ಚುನಾವಣೆಯ ವರ್ಷವಾಗಿರುವ ಕಾರಣ ಆಡಳಿತರೂಢ ಸರ್ಕಾರದ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ಬರಲಿದೆ. ಕಳೆದ ವರ್ಷ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಜನರಿಗೆ ಹೆಚ್ಚಿನ ಅವಕಾಶ ನೀಡಿದರೆಂಬ ಕಾರಣಕ್ಕಾಗಿ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದವರನ್ನು ಜಂಬೂಸವಾರಿ ಬಿಟ್ಟು ಉಳಿದ ದಿನಗಳಲ್ಲಿ ಬರುವಂತೆ ಹೇಳಿ ಅಪವಾದದಿಂದ ದೂರ ಉಳಿಯಲು ನಿರ್ಧರಿಸುವ ಜತೆಗೆ ಜಿಲ್ಲಾಡಳಿತಕ್ಕೆ ಜವಾಬ್ದಾರಿ ಕೊಟ್ಟಿದ್ದಾರೆ. ಹೀಗಾಗಿ, ಅಧಿಕಾರಿಗಳು ಬಹಳ ಹೊಣೆಗಾರಿಕೆಯಿಂದ ಪಾಸ್‌ಗಳ ಹಂಚಿಕೆಗೆ ಅಗತ್ಯ ಮಾನದಂಡ ರೂಪಿಸಿ, ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ದಸರಾ ಹಬ್ಬವನ್ನು ಸುಸೂತ್ರವಾಗಿ ನಡೆಸಿದಷ್ಟೇ ಸುಸೂತ್ರವಾಗಿ ಪಾಸ್ ವಿತರಣೆ ಮಾಡಿ ಗೊಂದಲ ನಿವಾರಿಸುವುದು ಜಿಲ್ಲಾಡಳಿತದ ಜವಾಬ್ದಾರಿಯೂ ಹೌದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!