Mysore
27
light rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮುಂಗಡ ಪತ್ರ : ಚಾತಕಪಕ್ಷಿಯಂತೆ ಕಾದಿದೆ ಚಿತ್ರರಂಗ

ಕನ್ನಡ ಚಿತ್ರೋದ್ಯಮ, ಮುಂದಿನ ಗುರುವಾರ ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಮಂಡಲದಲ್ಲಿ ಮಂಡಿಸಲಿರುವ 2023-24ರ ಮುಂಗಡಪತ್ರಕ್ಕಾಗಿ ಚಾತಕಪಕ್ಷಿಯಂತೆ ಕಾದಿದೆ. ತನ್ನ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ಎಷ್ಟು ಸಿಗಬಹುದು ಎನ್ನುವ ಕುತೂಹಲ, ನಿರೀಕ್ಷೆಯಲ್ಲಿದೆ.

ಚಿತ್ರೋದ್ಯಮದ ಮಂದಿ ಒಂದಾಗಿ, ಅದರ ‘ಬೇಕು’ಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಟ್ಟಿಲ್ಲ. ಬದಲಿಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಗಂಧದಗುಡಿ ಗೃಹನಿರ್ಮಾಣ ಸಹಕಾರ ಸಂಘ ಇವು ಬೇರೆ ಬೇರೆಯಾಗಿ ಹೋಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿವೆ.

ವಾಣಿಜ್ಯ ಮಂಡಳಿಯ ಪ್ರತಿನಿಧಿಗಳು ತಮ್ಮನ್ನು ಭೇಟಿಯಾದ ವೇಳೆ ಮುಖ್ಯಮಂತ್ರಿಗಳು, ಉದ್ಯಮದ ಎಲ್ಲ ಪ್ರತಿನಿಧಿಗಳ ಸಭೆಯನ್ನು ವಿಧಾನಮಂಡಲದ ಅಧಿವೇಶನ ಮುಗಿದ ಮೇಲೆ ಕರೆದು ಸಮಗ್ರವಾಗಿ ಚರ್ಚಿಸುವುದಾಗಿ ಹೇಳಿದ್ದಾಗಿ ವರದಿಯಾಗಿದೆ. ಉದ್ಯಮದ ಸಮಸ್ಯೆಗಳನ್ನು ಅವರು ಮುಂದಿಟ್ಟಿದ್ದರು ಎನ್ನಲಾಗಿದೆ.

ನಂತರ ಭೇಟಿಯಾದವರು ಗಂಧದಗುಡಿ ಗೃಹನಿರ್ಮಾಣ ಸಹಕಾರ ಸಂಘದ ಪ್ರತಿನಿಧಿಗಳು. ಅವರದು ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಹಾಗೂ ಅದರ ಪಕ್ಕದಲ್ಲಿ ಗೃಹನಿರ್ಮಾಣ ಸಂಘಕ್ಕೆ ಜಾಗ ಮಂಜೂರಿನ ಕೋರಿಕೆ ಆಗಿತ್ತು. ಈ ಸಂಬಂಧವಾಗಿ ಮುಖ್ಯಮಂತ್ರಿಗಳು ವಾಣಿಜ್ಯ ಮಂಡಳಿಯ ಪ್ರತಿನಿಧಿಗಳಿಗೆ ಹೇಳಿದ ಮಾತನ್ನೇ ಹೇಳಿ ಕಳುಹಿಸಿದ್ದಾಗಿ ತಿಳಿದುಬಂದಿದೆ.

ಕೊನೆಯದಾಗಿ ಚಿತ್ರೋದ್ಯಮದ ಸಮಸ್ಯೆ ಮತ್ತು ಅದಕ್ಕೆ ಸರ್ಕಾರದಿಂದ ಪರಿಹಾರದ ಕುರಿತಂತೆ ಚಲನಚಿತ್ರ ನಿರ್ಮಾಪಕರ ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಕೋರಿಕೆಗಳು ಬಹುತೇಕ ಒಂದೇ. ಕನ್ನಡ ಚಿತ್ರಗಳಿಗೆ ನೀಡುತ್ತಿರುವ ಸೌಲಭ್ಯಗಳು, ಉತ್ತೇಜನ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದೆ.

ಚಲನಚಿತ್ರ ವಾರ್ಷಿಕ ಪ್ರಶಸ್ತಿ, ಸಹಾಯಧನ 2018ರಿಂದ ನೀಡಿಲ್ಲ. ಚಿತ್ರಮಂದಿರಗಳು ಮುಚ್ಚುತ್ತಿವೆ. ಇದನ್ನು ತಡೆಯಲು ಸರ್ಕಾರವೂ ನೆರವಾಗಬೇಕಾಗಿದೆ, ರಾಜ್ಯದಲ್ಲಿ ಚಿತ್ರನಗರಿಯ ಸ್ಥಾಪನೆಯ ಬೇಡಿಕೆ ಇದ್ದೇ ಇದೆ. ಅದೀಗ ಮೈಸೂರಿನಲ್ಲಿ ಆಗಬೇಕು ಎನ್ನುವ ಒತ್ತಾಯ ಹೆಚ್ಚಿದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲು ಇರುವ ಕಾರಣಗಳಲ್ಲಿ ಪೈರಸಿಗೆ ಅಗ್ರಸ್ಥಾನ. ಹೊಸ ಚಿತ್ರವೊಂದು ಬಿಡುಗಡೆಯಾಗಿ ಮೊದಲ ಪ್ರದರ್ಶನ ಮುಗಿಯುವ ಮೊದಲೇ ಅದರ ಕದ್ದಪ್ರತಿಗಳು ವಿಶ್ವದಾದ್ಯಂತ ಜಾಲತಾಣಗಳಲ್ಲಿ ಲಭ್ಯವಾಗುತ್ತವೆ, ಯಾವುದೇ ಊರಲ್ಲಿ ಬೇಕಾದರೂ ಉಚಿತವಾಗಿ ಚಿತ್ರ ನೋಡಲು ಇದರಿಂದ ಸಾಧ್ಯವಾಗುತ್ತಿದೆ. ಇದು ಕನ್ನಡ ಮಾತ್ರವಲ್ಲ, ಎಲ್ಲ ಭಾಷೆಗಳ ಎಲ್ಲ ಚಿತ್ರಗಳಿಗೂ ಅನ್ವಯಿಸುವ ಮಾತು ಎನ್ನುತ್ತಾರೆ ಉದ್ಯಮದ ಮಂದಿ. ಕಳೆದ ವಾರ ತೆರೆಕಂಡ, ಹೊಂಬಾಳೆ ಸಂಸ್ಥೆಯ ‘ಧೂಮಂ’ ಚಿತ್ರವೂ ಹೀಗಾಗಿದೆ ಎನ್ನುತ್ತಿವೆ ಮೂಲಗಳು. ಇವೆಲ್ಲ ವಿಷಯಗಳ ಕುರಿತಂತೆ ಶೀಘ್ರದಲ್ಲೇ ಚಿತ್ರೋದ್ಯಮದ ಪ್ರತಿನಿಧಿಗಳ ಸಭೆಯೊಂದನ್ನು ಕರೆಯುವುದಾಗಿ ನಿರ್ಮಾಪಕರ ಸಂಘಕ್ಕೂ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ.

ಹಾಗಾದರೆ ಮುಂಗಡಪತ್ರದಲ್ಲಿ ಚಿತ್ರೋದ್ಯಮಕ್ಕೆ ಸಂಬಂಧಪಟ್ಟಂತೆ ಅನು ದಾನ, ನೆರವುಗಳ, ಯೋಜನೆಗಳ ಪ್ರಸ್ತಾಪ ಇರುವುದಿಲ್ಲವೇ? ಸರ್ಕಾರದ ಗ್ಯಾರಂಟಿ ಆಶ್ವಾಸನೆಗಳ ಪೂರೈಕೆಯತ್ತ ಮುಖ್ಯಮಂತ್ರಿಗಳ ಆದ್ಯತೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಹಾಗಂತ ಉಳಿದ ಇಲಾಖೆಗಳ ಬೇಡಿಕೆಗಳನ್ನು ನಿರ್ಲಕ್ಷಿಸುವುದೋ, ನಿರಾಕರಿಸುವುದೋ ಮಾಡಲಾರರು ಎನ್ನುವ ಮಾತೂ ಕೇಳಿಬರುತ್ತಿದೆ.

ಚಿತ್ರರಂಗಕ್ಕೆ ಸಂಬಂದಿಸಿದಂತೆ 2018ರಿಂದ ಪ್ರಶಸ್ತಿಪ್ರದಾನ ಆಗಿಲ್ಲ. ಆ ವರ್ಷದ ಪ್ರಶಸ್ತಿ ಆಯ್ಕೆ ಆಗಿದೆ, ನೀಡಿಲ್ಲ. 2019,20,21ರ ಸಾಲಿಗೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ, ಆಯ್ಕೆ ಆಗಬೇಕಷ್ಟೇ. 2022ರ ಸಾಲಿಗೆ ಅರ್ಜಿ ಕರೆದಿಲ್ಲ. ಸಹಾಯಧನಕ್ಕೆ ಸಂಬಂಧಿಸಿದಂತೆ ಕೂಡ ಡಿಟ್ಟೋ. ಚಲನಚಿತ್ರ ಅಕಾಡೆಮಿಯಲ್ಲಿ ಚಲನಚಿತ್ರ ಭಂಡಾರದ ಕೆಲಸ ಮುಂದುವರಿಯಲು ಆರ್ಥಿಕ ನೆರವು ಬೇಕಾಗಿದೆ. ಹಳೆಯ ಚಿತ್ರಗಳ ಸಂಗ್ರಹ, ರೆಸ್ಟೊರೇಶನ್, ಚಲನಚಿತ್ರಕ್ಕೆ ಸಂಬಂಧಿಸಿದ ಮತ್ತಿತರ ವಸ್ತುಗಳ ಸಂಗ್ರಹವೇ ಮೊದಲಾದ ಕೆಲಸಗಳಾಗಬೇಕು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಪ್ರತಿ ವರ್ಷ ಕೊನೆಯ ಕ್ಷಣದಲ್ಲಿ ಬೇಡಿಕೆ ಇಡುವ ಬದಲು ಮುಂಗಡ ಪತ್ರದಲ್ಲೇ ಅದನ್ನು ಸೇರಿಸುವ ಕೋರಿಕೆ ಹಿಂದಿನಿಂದಲೂ ಇದೆ. ಚಿತ್ರೋತ್ಸವ ನಿರ್ದೇಶನಾಲಯ ಸ್ಥಾಪನೆ ಕೂಡ.

ಚಿತ್ರನಗರಿಯ ಕುರಿತಂತೆ ಈಗಾಗಲೇ ಸಾಕಷ್ಟು ಒತ್ತಾಯ ಒತ್ತಡಗಳಿವೆಯಷ್ಟೇ. ಚಿತ್ರನಗರಿಯ ಮಾತುಗಳ ನಡುವೆ ಎಲ್ಲೂ ಡಿಜಿಟಲ್ ತಂತ್ರಜ್ಞಾನದ ಹೊಸ ವಲಯದ ಕುರಿತು ಚಿತ್ರರಂಗದ ಮಂದಿ ಪ್ರಸ್ತಾಪಿಸಿಲ್ಲ. ಮಾಹಿತಿ ತಂತ್ರಜ್ಞಾನ ನಗರಿ ಎಂದು ಹೆಸರಾಗಿರುವ ಬೆಂಗಳೂರಿನ ಮಹದೇವಪುರದಲ್ಲಿ ಕಳೆದ ವರ್ಷ ಅನಿಮೇಷನ್, ವಿಷುಯಲ್ ಎಫೆಕ್ಟ್ , ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಭಾರತದಲ್ಲಿ ಎವಿಜಿಸಿ ನೀತಿಯನ್ನು ಮೊದಲು ತಂದ ರಾಜ್ಯ ಕರ್ನಾಟಕ. ಮೊದಲ ನೀತಿ 2012-17ರ ಅವಧಿಯದ್ದಾದರೆ, ಎರಡನೆಯದು 2017-22ರ ಅವಧಿಯದು. ಶ್ರೇಷ್ಠತೆಯ ಕೇಂದ್ರ ಆರಂಭವಾಗಿರುವುದು ಮೊದಲು ಕರ್ನಾಟಕದಲ್ಲೇ.

ಕೇಂದ್ರ ಸರ್ಕಾರ ಇದೀಗ ರಾಷ್ಟ್ರೀಯ ಎವಿಜಿಸಿ ನೀತಿಯನ್ನು ಪ್ರಕಟಿಸಲು ಮತ್ತು ಮುಂಬೈಯಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ.

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಗಳಂತೆ ಇದೀಗ ಎವಿಜಿಸಿ ಶಿಕ್ಷಣವನ್ನು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನಕ್ಕಾಗಿ ಶಿಫಾರಸು ಮಾಡಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯಗಳತ್ತಲೂ ನೋಡುತ್ತಿದೆ. ಅನಿಮೇಶನ್, ದೃಶ್ಯಪರಿಣಾಮಗಳು, ಆಟಗಳು ಮತ್ತು ಕಾಮಿಕ್ಸ್ ಮಾತ್ರವಲ್ಲದೆ, ವರ್ಚುವಲ್ ರಿಯಾಲಿಟಿ ಮತ್ತು ಅದರ ಮುಂದುವರಿದ ತಂತ್ರಜ್ಞಾನಗಳ ಕುರಿತ ಅಧ್ಯಯನ ಮತ್ತು ಸಂಶೋಧನೆ ಇದು.

ಯಾವುದೇ ಚಿತ್ರದ ಚಿತ್ರೀಕರಣೋತ್ತರ ಕೆಲಸಗಳ ಈ ತಂತ್ರಜ್ಞಾನದ ಬಳಕೆಯ ಕುರಿತಂತೆ, ಚಿತ್ರೋದ್ಯಮದಲ್ಲಿ ಯಾರೂ ಗಂಭೀರವಾಗಿ ಗಮನಿಸಿದಂತಿಲ್ಲ. ಮುಂದಿನ ದಿನಗಳಲ್ಲಿ ಅನಿಮೇಶನ್, ದೃಶ್ಯಪರಿಣಾಮಗಳು, ಮೊಬೈಲ್ ಆಟಗಳು, ಕಾಮಿಕ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇರಲಿದೆ. ರಾಜ್ಯದಲ್ಲಿ ಇಂತಹ ಕೇಂದ್ರಗಳನ್ನು ಸ್ಥಾಪಿಸಿ, ಶಿಕ್ಷಣ ನೀಡುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗುವುದೇ ಅಲ್ಲದೆ, ಭವಿಷ್ಯದಲ್ಲಿ ಸ್ಥಳೀಯ ಸಂಸ್ಕೃತಿಯ ಅಭಿವ್ಯಕ್ತಿಗೆ ಅವರ ಮೂಲಕ ಅವಕಾಶವೂ ಆಗುತ್ತದೆ.

ಕರ್ನಾಟಕ ಸರ್ಕಾರ ಜಾರಿಗೆ ತಂದ ದಶಕದ ನಂತರ ಕೇಂದ್ರ ಸರ್ಕಾರ ಎವಿಜಿಸಿ ನೀತಿಯನ್ನು ತರಲು ಯೋಜಿಸುತ್ತಿದೆ. ನಮ್ಮಲ್ಲಿನ ನೀತಿ ತರಬೇತಿ ನೀಡುವ ಅಧಿಕೃತ ಸಂಸ್ಥೆಗಳಿಗೆ ಸಹಾಯಧನ ನೀಡುತ್ತದೆ. ಜೊತೆಗೆ ಅನಿಮೇಶನ್ ಚಿತ್ರಗಳ ನಿರ್ಮಾಣಕ್ಕೆ ಅವುಗಳ ನಿರ್ಮಾಣ ವೆಚ್ಚಕ್ಕೆ ಅನುಗುಣವಾಗಿ ಐದು ಕೋಟಿ ರೂ.ಗಳವರೆಗೆ ಸಹಾಯಧನ ನೀಡುವುದಾಗಿಯೂ ನೀತಿಯಲ್ಲಿದೆ. ಅನಿಮೇಶನ್ ಚಿತ್ರದ ನಿರ್ಮಾಣ ವೆಚ್ಚದ ಶೇ.10 ಸಹಾಯಧನವಾಗಿ ನೀಡಲಾಗುವುದು.

ರಾಜ್ಯ ಎವಿಜಿಸಿ ನೀತಿಯ ಅವಧಿ 2022ರ ವರೆಗಿದ್ದು, ಇದೀಗ ಹೊಸ ನೀತಿ ಬರಬೇಕಾಗಿದೆ. ಹೊಸ ನೀತಿ ರಚಿಸುವ ವೇಳೆ ಚಿತ್ರರಂಗಕ್ಕೂ ಪೂರಕವಾಗುವಂತೆ ಸಂಬಂಧಪಟ್ಟವರು ಗಮನಿಸಬೇಕಾಗಿದೆ. ಚಿತ್ರನಗರಿಯಲ್ಲಿ ವರ್ಷ ಪೂರ್ತಿ ಅನಿಮೇಷನ್, ವಿಷುಯಲ್ ಎಫೆಕ್ಟ್ , ಗೇಮಿಂಗ್ ಮತ್ತು ಕಾಮಿಕ್ಸ್‌ಗಳ ಶಿಕ್ಷಣ ತರಬೇತಿಯ ಜೊತೆಗೆ ಅಲ್ಲೇ ಉದ್ಯೋಗಾವಕಾಶಕ್ಕೂ ಅನುಕೂಲ ಮಾಡಿಕೊಡಬಹುದು.

ಸಂಬಂಧಪಟ್ಟವರು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬಹುದು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ, ಚಿತ್ರನಗರಿಯ ಕುರಿತಂತೆ ಪ್ರಸ್ತಾಪಿಸುತ್ತಾ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆಯ ಬಗ್ಗೆ ಹೇಳಿದ್ದರು. ಕರ್ನಾಟಕದಲ್ಲಿ ಚಲನಚಿತ್ರ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಉನ್ನತ ದರ್ಜೆಯ ಶಿಕ್ಷಣಸಂಸ್ಥೆಗಳಿಲ್ಲ. ಪೂನಾ ಮತ್ತು ಕೊಲ್ಕೊತ್ತಾಗಳಲ್ಲಿ ಕೇಂದ್ರ ಸರ್ಕಾರ ನಡೆಸುವ ಸಂಸ್ಥೆಗಳಿವೆ. ಕೇರಳ ರಾಜ್ಯ ಸರಕಾರ, ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಹೆಸರಲ್ಲಿ ಚಲನಚಿತ್ರ ಅಧ್ಯಯನ ಕೇಂದ್ರ ಸ್ಥಾಪಿಸಿದೆ.

ಕರ್ನಾಟಕದಲ್ಲಿ ಎವಿಜಿಸಿ ತಂತ್ರಜ್ಞಾನವೂ ಒಳಗೊಂಡಂತೆ ವಿಶ್ವಮಟ್ಟದ ಚಲನಚಿತ್ರ ತರಬೇತಿ ನೀಡುವ ಕೇಂದ್ರವೊಂದರ ಅಗತ್ಯ ಇದೆ. ಚಿತ್ರನಗರಿ ಸ್ಥಾಪನೆ ಆಗುವುದಾದರೆ ಅಲ್ಲಿ, ಇಲ್ಲದೆ ಹೋದರೆ, ಸರ್ಕಾರ ಬಯಸುವ ಬೇರೆ ಯಾವು ದಾದರೂ ಜಾಗದಲ್ಲಿ ಇಂತಹದೊಂದು ಶಿಕ್ಷಣ ಕೇಂದ್ರದ ಅಗತ್ಯವಂತೂ ಇದೆ.

ಈ ಮುಂಗಡಪತ್ರದಲ್ಲಿ ಚಿತ್ರನಗರಿಯ ಯೋಜನೆಗೆ ಸಂಬಂಧಿಸಿದಂತೆ, ಅಥವಾ ಚಿತ್ರೋದ್ಯಮಕ್ಕೆ ಸಂಬಂಧಿಸಿ ಪ್ರಸ್ತಾಪಗಳು ಇವೆಯೇ, ಅಥವಾ ಮೂಲಗಳು ಹೇಳುವಂತೆ ಗ್ಯಾರಂಟಿ ಆಶ್ವಾಸನೆ ಪೂರೈಸುವತ್ತಲೇ ಗಮನವೋ ನೋಡಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ